ಭಾರತದ ಕಾಲ್‌ಸೆಂಟರ್ ನೌಕರರಿಗೆ ತೀವ್ರ ಬೈಗುಳ!

By Suvarna Web DeskFirst Published Nov 28, 2017, 9:17 AM IST
Highlights
  • ಭಾರತೀಯರು ಎಂದು ಗೊತ್ತಾದರೆ ಭಾರೀ ನಿಂದನೆ
  • ನಿಮ್ಮಿಂದಾಗಿ ನಮ್ಮ ಕೆಲಸಕ್ಕೆ ಕುತ್ತು ಎಂದು ಬೈಗುಳ
  • ವಿದೇಶಿಯರ ಅಸಹನೆ ಬಗ್ಗೆ ಲೇಖಕಿ ಅಧ್ಯಯನ

ನವದೆಹಲಿ: ಭಾರತದಲ್ಲಿ ಹೊರಗುತ್ತಿಗೆ (ಬಿಪಿಒ- ಬಿಸಿನೆಸ್ ಪ್ರೊಸೆಸ್ ಔಟ್‌ಸೋರ್ಸಿಂಗ್ ಅಥವಾ ಕಾಲ್‌ಸೆಂಟರ್) ಸೇವೆ ನೀಡುವ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಉದ್ಯೋಗಿಗಳ ಮೇಲೆ ವಿದೇಶಗಳ ಗ್ರಾಹಕರು ಜನಾಂಗೀಯ ನಿಂದನೆ ಮಾಡುತ್ತಿದ್ದಾರೆ ಎಂಬ ಕಳವಳಕಾರಿ ವಿಚಾರವನ್ನು ವರದಿಯೊಂದು ಬಹಿರಂಗಪಡಿಸಿದೆ.

ವಿದೇಶಿ ಜನತೆಯ ಕುಂದುಕೊರತೆಗಳನ್ನು ಸ್ವೀಕರಿಸುವ ಕಾಲ್‌ಸೆಂಟರ್, ಬಿಪಿಒದ ಉದ್ಯೋಗಿಗಳು ಭಾರತದವರು ಎಂಬುದನ್ನು ಅವರು ಮನಗಂಡರೆ, ‘ನೀವು ನಮ್ಮ ಕೆಲಸಗಳನ್ನು ಕದಿಯುತ್ತಿರುವ ಕಳ್ಳರು’ ಎಂಬಂತೆ ಮನಸೋಇಚ್ಛೆ ನಿಂದಿಸುತ್ತಾರೆ ಎಂದು ಸಂಶೋಧನಾ ವರದಿ ತಿಳಿಸಿದೆ.

ಬ್ರಿಟನ್’ನ ಕೆಂಟ್ ವಿವಿಯ ಲೇಖಕಿ ಶ್ವೇತಾ ರಾಜನ್, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಪಿಒ ಕಂಪನಿಗಳ ಸಿಬ್ಬಂದಿಗಳ ಅನುಭವಗಳನ್ನು ಆಧರಿಸಿ ವರದಿ ತಯಾರಿಸಿದ್ದು, ಅದರಲ್ಲಿ ಭಾರತೀಯ ಉದ್ಯೋಗಿಗಳ ಮೇಲೆ ವಿದೇಶಿಯರು ಹೇಗೆಲ್ಲಾ ಜನಾಂಗೀಯ ನಿಂದನೆ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಗ್ರಾಹಕರ ಸೇವೆಗಳ ಕುರಿತಾದ ಸಮಸ್ಯೆಗಳನ್ನು ನಿಭಾಯಿಸುವ ಕಾಲ್‌ಸೆಂಟರ್ ಸೇವೆ ನೀಡುವಲ್ಲಿ 3.5 ಲಕ್ಷ ಸಿಬ್ಬಂದಿಗಳೊಂದಿಗೆ ಫಿಲಿಪ್ಪೀನ್ಸ್ ಮೊದಲ ಸ್ಥಾನದಲ್ಲಿದ್ದರೆ, 3.3 ಲಕ್ಷ ಸಿಬ್ಬಂದಿಯೊಂದಿಗೆ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ.

ಇಂಥ ಸೇವೆ ನೀಡುವ ಕಂಪನಿಗಳಿಗೆ ಕರೆ ಮಾಡುವ ವಿದೇಶಿ ಗ್ರಾಹಕರು, ಕರೆ ಸ್ವೀಕರಿಸಿದ್ದು ಭಾರತೀಯರೆಂದು ತಿಳಿದರೆ, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನೀವು ಭಾರತೀಯರೆಲ್ಲರೂ ಔಟ್‌ಸೋರ್ಸ್ ಮೂಲಕ ನಮ್ಮೆಲ್ಲ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದ್ದೀರಾ ಎಂದು ದೂರುತ್ತಾರೆ.

ಜೊತೆಗೆ ಜನಾಂಗೀಯವಾಗಿಯೂ ನಿಂದಿಸುತ್ತಾರೆ ಎಂದು ಶ್ವೇತಾ ಹೇಳಿದ್ದಾರೆ. ಬ್ರಿಟನ್‌ನಲ್ಲಿ ಬ್ರೆಕ್ಸಿಟ್ ಮತ್ತು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ನಂತರ ಇಂಥ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂದು ಶ್ವೇತಾ ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ನೌಕರರನ್ನು ನೇಮಿಸಿಕೊಳ್ಳುತ್ತಿದ್ದ ಅಮೆರಿಕದ ಕಂಪನಿಗಳು, ನೌಕರರನ್ನು ಅಮೆರಿಕಕ್ಕೆ ಕರೆಸಿಕೊಂಡು, ಅವರಿಗೆ ಗ್ರಾಹಕರ ಜತೆ ಅಮೆರಿಕದ ಇಂಗ್ಲೀಷ್ ಭಾಷೆ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಜತೆಗೆ ಭಾರತದ ಬಿಪಿಒಗಳ ಮೇಲಿನ ನಿಂದನಾತ್ಮಕ ಘಟನೆಗಳ ತಡೆಗಾಗಿ ಬಿಪಿಒಗಳು ಯಾವ ದೇಶಕ್ಕೆ ಸೇರಿದವರು ಎಂಬ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಏಜೆನ್ಸಿಗಳಿಗೆ ಸೂಚಿಸಲಾಗಿತ್ತು ಎಂದು ಶ್ವೇತಾ ತಿಳಿಸಿದ್ದಾರೆ.

ಉದ್ಯೋಗದ ಅನಿವಾರ್ಯತೆಯಿಂದಾಗಿ ಭಾರತೀಯ ಸಿಬ್ಬಂದಿ, ಇಂಥ ಬೈಗುಳವನ್ನು ಸಹಿಸಿಕೊಂಡು ಕರ್ತವ್ಯ ಮುಂದುವರೆಸಿದ್ದಾರೆ ಎಂದೂ ವರದಿ ಹೇಳಿದೆ.

(ಸಾಂದರ್ಭಿಕ ಚಿತ್ರ)

 

 

click me!