ಭಾರತದಲ್ಲಿ ಎಲ್ಲ ಉತ್ತಮವಾಗಿದೆ| ಭಾರತದ ಅಭಿವೃದ್ಧಿ ಕುರಿತು ಹೂಸ್ಟನ್‌ನಲ್ಲಿ ಮೋದಿ ಕಹಳೆ/ 50000 ಭಾರತೀಯರ ಸಮ್ಮುಖ ಪ್ರಧಾನಿ ಅಭಿವೃದ್ಧಿ ಕನಸು| ಹೌಡಿ ಮೋದಿ ಎಂಬ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಮೋದಿ/ ಟ್ರಂಪ್ ಸಮ್ಮುಖದಲ್ಲೇ ಮೋದಿಗೆ ಭಾರೀ ಕರತಾಡನ
ಹೂಸ್ಟನ್[ಸೆ.23]: ಇಲ್ಲಿನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ಆಯೋಜಿತವಾಗಿದ್ದ ಬಹುನಿರೀಕ್ಷಿತ ಹೌಡಿ ಮೋದಿ ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿದೆ. ಭಾನುವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಹಲವು ಸಂಸದರು, ಜನಪ್ರತಿನಿಧಿಗಳು ಮತ್ತು 50000ಕ್ಕೂ ಹೆಚ್ಚು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರದ ಹಲವು ಸಾಧನೆಗಳನ್ನು ಅನಿವಾಸಿ ಭಾರತೀಯರ ಮುಂದಿಡುವ ಮೂಲಕ ವಿಕಾಸದ ಹಾದಿಯಲ್ಲಿ ಭಾರತ ಹಾಕಿರುವ ಹಾಕಿರುವ ಹೆಜ್ಜೆ ಮತ್ತು ಸಾಗುತ್ತಿರುವ ಹಾದಿಯನ್ನು ಪರಿಚಯಿಸುವ ಯತ್ನದಲ್ಲಿ ಸಫಲರಾದರು.
‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ..ಇನ್ನೊಂದಷ್ಟನ್ನು ಬೀಳ್ಕೊಡಬೇಕಿದೆ’
undefined
ಹೌಡಿ ಫ್ರೆಂಡ್ಸ್ (ಹೇಗಿದ್ದೀರಿ ಸ್ನೇಹಿತರೇ) ಎನ್ನುತ್ತಲೇ ಭಾಷಣ ಆರಂಭಿಸಿದ ಮೋದಿ, ‘ಈ ಕಾರ್ಯಕ್ರಮದ ಹೆಸರು ಹೌಡಿ ಮೋದಿ. ಆದರೆ ಇಲ್ಲಿ ಮೋದಿ ಒಬ್ಬನೇ ಏನೂ ಅಲ್ಲ. ನಾನಿಲ್ಲಿ 130 ಕೋಟಿ ಭಾರತೀಯರ ಪ್ರತಿನಿಧಿಯಾಗಿಯಾಗಿ ಓರ್ವ ಸಾಮಾನ್ಯ ವ್ಯಕ್ತಿ ಅಷ್ಟೇ. ನೀವು ನನ್ನನ್ನು ಹೌಡಿ ಮೋದಿ ಎಂದು ಕೇಳುವಿರಾದರೆ ಅದಕ್ಕೆ ನನ್ನ ಉತ್ತರ, ಭಾರತ್ ಮೇ ಸಬ್ ಕುಚ್ ಅಚ್ಚಾ ಹೈ, ಭಾರತದಲ್ಲಿ ಎಲ್ಲವೂ ಉತ್ತಮವಾಗಿದೆ ಎಂದು ಹೇಳಬಯಸುತ್ತೇನೆ ಎನ್ನುವ ಮೂಲಕ ಭಾರತದಲ್ಲಿನ ಇತ್ತೀಚಿನ ಕೆಲ ಬೆಳವಣಿಗೆಗಳ ಬಗ್ಗೆ ಕೇಳಿಬರುತ್ತಿರುವ ಟೀಕೆ ಟಿಪ್ಪಣಿಗಳಿಗೆ ಸೂಕ್ಷ್ಮವಾಗಿಯೇ ಮೋದಿ ಉತ್ತರ ನೀಡಿದರು. ಅದರಲ್ಲೂ ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಮೋದಿ ನೀಡಿದ ಉತ್ತರ ಗಮನ ಸೆಳೆಯಿತು.
ವಿವಿಧತೆಯಲ್ಲಿ ಏಕತೆ:
ನಮ್ಮ ದೇಶದಲ್ಲಿ ನೂರಾರು ಭಾಷೆಗಳಿದ್ದರೂ, ಸಹಸ್ರಾರು ವರ್ಷಗಳಿಂದ ಸಹ ಅಸ್ತಿತ್ವದ ಭಾವನೆಯೊಂದಿಗೆ ಮುನ್ನಡೆಯುತ್ತಿದೆ. ಅವು ನಮ್ಮ ಉದಾರವಾದಿ ಪ್ರಜಾಸತಾತ್ಮಕ ಸಮಾಜಕ್ಕೆ ಉದಾಹರಣೆ. ಕೇವಲ ಭಾಷೆ ಮಾತ್ರವಲ್ಲ, ನಮ್ಮ ದೇಶದಲ್ಲಿ ಹಲವು ಸಂಪ್ರದಾಯ, ಪೂಜೆ, ಆಚಾರ, ಆಹಾರ, ವೇಷ ಭೂಷಣ, ಇದೆ. ಈ ವಿಷಯಗಳೇ ಭಾರತವನ್ನು ಅಭೂತಪೂರ್ವ ಮಾಡಿದೆ. ವಿವಿಧತೆಯಲ್ಲಿ ಏಕತೆ ನಮ್ಮ ಧರ್ಮವಾಗಿದೆ. ಇದೇ ನಮ್ಮ ವಿಶೇಷತೆ. ನಾವು ಎಲ್ಲೇ ಹೋದರು ವಿವಿಧತೆಯಲ್ಲಿ ಏಕತೆಯನ್ನು ನಮ್ಮೊಂದಿಗೆ ಕೊಂಡೊಯ್ಯುತ್ತೇವೆ. ಇಲ್ಲಿ 50000ಕ್ಕೂ ಹೆಚ್ಚು ಭಾರತೀಯ ಮಹಾನ್ ಪರಂಪರೆಯ ಪ್ರತೀಕವಾಗಿ ಆಗಮಿಸಿದ್ದಾರೆ. ಇವರಲ್ಲಿ ಹಲವಾರು ಪ್ರಜಾಪ್ರಭುತ್ವದ ಅತಿದೊಡ್ಡ ಉತ್ಸವ 2019ರ ಚುನಾವಣೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ. ಅದು ಎಂಥ ಚುನಾವಣೆಯಾಗಿತ್ತೆಂದರೆ, ಅದು ಭಾರತದ ಪ್ರಜಾಪ್ರಭುತ್ವದ ಶಕ್ತಿಯನ್ನು ಇಡೀ ವಿಶ್ವಕ್ಕೆ ಹಬ್ಬಿಸಿತು.
ಈ ಚುನಾವಣೆಯಲ್ಲಿ 61 ಕೋಟಿಗೂ ಹೆಚ್ಚು ಜನ ಭಾಗಿಯಾಗಿದ್ದರು. ಇದು ಅಮೆರಿಕದ ಒಟ್ಟು ಜನಸಂಖ್ಯೆಯ 2 ಪಟ್ಟು. ಈ ಬಾರಿ ಮತ ಚಲಾಯಿಸಿದವರ ಪೈಕಿ 8 ಕೋಟಿ ಜನ ಮೊದಲ ಬಾರಿಯ ಮತದಾರರಾಗಿದ್ದರು. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಮಹಿಳೆಯರು ಮತ ಚಲಾಯಿಸಿದರು. ಅತಿ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. 2019ರ ಚುನಾವಣೆಯ ಮತ್ತೊಂದು ದಾಖಲೆಯನ್ನೂ ಸೃಷ್ಟಿಸಿದೆ. ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸಿದ ಸರ್ಕಾರವೊಂದು, ಮತ್ತೊಮ್ಮೆ ಹಿಂದಿಗಿಂತ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, 6 ದಶಕಗಳಲ್ಲೇ ಮೊದಲ ಬಾರಿ. ಇದೆಲ್ಲಾ ಏಕೆ ಆಯಿತು? ಯಾರಿಂದ ಆಯಿತು? ಮೋದಿಯಿಂದಾಗಿ ಆಗಿಲ್ಲ. ಇದು ಹಿಂದುಸ್ತಾನಿಗಳಿಂದಾಗಿ ಆಗಿದೆ.
ಸ್ನೇಹಕ್ಕೆ ಸ್ನೇಹ..ಪ್ರೀತಿಗೆ ಪ್ರೀತಿ... ಮೋದಿ-ಟ್ರಂಪ್ ಜುಗಲ್‌ಬಂದಿ, ಪಾಕ್‌ಗೆ ಫಜೀತಿ
ದೊಡ್ಡ ಕನಸು:
ಮಿತ್ರರೇ, ಧೈರ್ಯ ನಮ್ಮ ಭಾರತೀಯರ ಗುರುತಾಗಿದೆ. 21ನೇ ಶತಮಾನದಲ್ಲಿ ದೇಶವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯಬೇಕಾಗಿದೆ. ಇಂದು ಭಾರತದಲ್ಲಿ ಅತಿ ಹೆಚ್ಚು ಚರ್ಚೆಯ ವಿಷಯವೆಂದರೆ ಅಭಿವೃದ್ಧಿ. ಅತಿದೊಡ್ಡ ಮಂತ್ರವೆಂದರೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಅತಿದೊಡ್ಡ ನೀತಿಯೆಂದರೆ ಸಾರ್ವಜನಿಕ ಪಾಲುದಾರಿಕೆ. ಅತಿದೊಡ್ಡ ಪ್ರಚಲಿತ ಘೋಷಣೆಯೆಂದರೆ ಸಂಕಲ್ಪದಿಂದ ಸಿದ್ಧಿ. ಅತ್ಯಂತ ದೊಡ್ಡ ಸಂಕಲ್ಪವೆಂದರೆ ಹೊಸ ಭಾರತ.
ಭಾರತವಿಂದು, ಹೊಸ ಬಾರತದ ಕಲ್ಪನೆಯನ್ನು ಈಡೇರಿಸಲು ದಿನ ರಾತ್ರಿಯನ್ನು ಒಂದು ಮಾಡಿ ಶ್ರಮಿಸುತ್ತಿದೆ. ಇದರಲ್ಲಿ ಪ್ರಮುಖ ವಿಷಯವೆಂದರೆ, ನಾವು ಇತರರೊಂದಿಗೆ ಅಲ್ಲ, ಬದಲಾಗಿ ನಮ್ಮೊಂದಿಗೆ ನಾವೇ ಸ್ಪರ್ಧೆಗೆ ಇಳಿಸಿದ್ದೇವೆ. ನಮಗೆ ನಾವೇ ಸ್ಪರ್ಧೆ ಒಡ್ಡಿಕೊಳ್ಳುತ್ತಿದ್ದೇವೆ. ಮೊದಲಿಗೆ ಹೋಲಿಸಿದರೆ ನಾವು ಅತಿ ವೇಗವಾಗಿ ಬದಲಾವಣೆ ಹೊಂದಲು ಬಯಸುತ್ತಿದ್ದೇವೆ. ಕೆಲವರ ಆಲೋಚನೆಗಳನ್ನೇ ನಾವು ಪ್ರಶ್ನಿಸುತ್ತಿದ್ದೇವೆ. ಬದಲಾವಣೆ ಸಾಧ್ಯವಿಲ್ಲ ಎಂಬ ವಾದವನ್ನು ನಾವು ಬದಲಾಯಿಸಿದ್ದೇವೆ.
130 ಕೋಟಿ ಬಾರತೀಯ ಬೇರೆ ಬೇರೆ ಕ್ಷೇತ್ರದಲ್ಲಿ ಹೊಸ ಹೊಸ ಸಾಧನೆ ಮಾಡಿದ್ದಾರೆ. ಇದನ್ನು ಮೊದಲು ಯಾರೂ ಕಲ್ಪನೆ ಮಾಡುವುದೂ ಸಾಧ್ಯವಿರಲಿಲ್ಲ.. ನಾವು ದೊಡ್ಡ ಕನಸು ಕಂಡು, ದೊಡ್ಡದನ್ನು ಸಾಧಿಸುತ್ತಿದ್ದೇವೆ. 6 ದಶಕಗಳಲ್ಲಿ ದೇಶದ ಗ್ರಾಮೀಣ ಭಾಗದ ಸ್ಚಚ್ಛತೆ ಪ್ರಮಾಣ ಶೇ.38ರಷ್ಟಿತ್ತು. ಅದನ್ನು 5 ವರ್ಷಗಳಲ್ಲಿ ಶೇ.98ಕ್ಕೆ ತಲುಪಿಸಿದ್ದೇವೆ. ಅಡುಗೆ ಅನಿಲ ಸಂಪರ್ಕವನ್ನು ಶೇ.55ರಿಂದ ಶೇ.95ಕ್ಕೆ ಹೆಚ್ಚಿಸಿದ್ದೇವೆ. 5 ವರ್ಷದಲ್ಲಿ 2 ಲಕ್ಷ ಕಿ.ಮೀ ರಸ್ತೆ ಮಾಡಿದ್ದೇವೆ. ಭಾರತದಲ್ಲಿ ಬ್ಯಾಂಕ್ ಖಾತೆ ಹೊಂದಿವರ ಸಂಖ್ಯೆಯನ್ನು ಶೆ.50ರಿಂದ ಶೇ.100ಕ್ಕೆ ತಲುಪಿಸಿದ್ದೇವೆ.
ಮಿತ್ರರೇ, ಡೇಟಾ ಹೊಸ ಇಂಧನ ಎಂದು ಹೇಳಲಾಗುತ್ತಿದೆ. ಆದರೆ ನಾನು ಹೇಳುತ್ತೇನೆ, ಡೇಟಾ ಈಸ್ ನ್ಯೂ ಗೋಲ್ಡ್. ಇಂದು ಇಡೀ ವಿಶ್ವದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಡೇಟಾ ನೀಡುವ ಭಾರತವಾಗಿದೆ. ಇಂದು ಭಾರತದಲ್ಲಿ 1 ಜಿಜಿಗೆ ಕೇವಲ 25 ಸೆಂಟ್. ಅಂದರೆ ಕೇವಲ 1 ಡಾಲರ್‌ನಲ್ಲಿ ನಾಲ್ಕನೇ ಒಂದು ಭಾಗ. ಡಿಜಿಟಲ್ ಇಂಡಿಯಾದ ಹೊಸ ಹೆಗ್ಗುರತಾಗಿದೆ. ಕೇಂದ್ರ ಮತ್ತು ರಾಜ್ಯ ಸಕಆರ್‍ರಗಳು 10000 ಸೇವೆಗಳು ಆನ್‌ಲೈನ್ ಆಗಿವೆ.
ವಿಶೇಷ ಚೇತನ ಬಾಲಕನಿಂದ ಜನಗಣಮನ: ಹೌಡಿ ಮೋದಿಯಲ್ಲಿ ಈತನದ್ದೇ ಗುಣಗಾನ!
ಕಾಲವೊಂದಿತ್ತು. ಪಾಸ್‌ಪಾರ್ಟ್‌ಗೆ 3 ತಿಂಗಳು ಬೇಕಾಗಿತ್ತು. ಈಗ ಒಂದು ವಾರದಲ್ಲಿ ಪಾಸ್‌ಪೋರ್ಟ್ ಮನೆಗೆ ಬರುತ್ತದೆ. ಹೊಸ ಕಂಪನಿಗಳ ನೋಂದಣಿಗೆ 2-3 ವಾರ ಬೇಕಿತ್ತು. ಈಗ 24 ಗಂಟೆಯಲ್ಲಿ ಹೊಸ ಕಂಪನಿ ನೋಂದಣಿ ಸಾಧ್ಯವಿದೆ. ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ಸುಲಭಗೊಳಿಸಿದ್ದೇವೆ. ರೀಫಂಡ್ ಹಣ ಈಗ ಕೇವಲ 10 ದಿನದಲ್ಲಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ.
ಭ್ರಷ್ಟಾಚಾರಕ್ಕೆ ವಿದಾಯ
ತ್ವರಿತ ಪ್ರಗತಿಯ ಯಾವುದೇ ದೇಶವು ತನ್ನ ನಾಗರಿಕರಿಗೆ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸುವುದು ಅನಿವಾರ್ಯ. ಅಗತ್ಯವಿರುವವರಿಗೆ ಕಲ್ಯಾಣ ಕಾರ್ಯಕ್ರಮಗಳ ಜೊತೆ ಹೊಸ ಭಾರತದ ನಿರ್ಮಾಣಕ್ಕಾಗಿ ನಾವು ಕೆಲವೊಂದು ವಿಷಯಗಳಿಗೂ ಫೇರ್‌ವೆಲ್ (ವಿದಾಯ) ನೀಡುತ್ತಿದ್ದೇವೆ. ಅ.2ರಂದು ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯಂದು ನಾವು ಬಯಲು ಶೌಚ ವ್ಯವಸ್ಥೆಗೆ ವಿದಾಯ ಹೇಳುತ್ತಿದ್ದೇವೆ. ಈಗಾಗಲೇ ಉಪಯೋಗಕ್ಕೆ ಬಾರದ 1500 ಹಳೆಯ ಕಾನೂನಿಗಳಿಗೆ, ಹಲವು ಕಠಿಣ ಕಾಯ್ದೆಗಳಿಗೆ ವಿದಾಯ ಹೇಳಿದ್ದೇವೆ. ಒಂದು ದೇಶ ಒಂದು ತೆರಿಗೆ ಪದ್ಧತಿಯಡಿ ಜಿಎಸ್‌ಟಿ ಜಾರಿ ಮಾಡಿದ್ದೇವೆ. ಭ್ರಷ್ಟಾಚಾರಕ್ಕೂ ನಾವು ಸವಾಲು ಹಾಕಿದ್ದೇವೆ. ಪ್ರತಿ ಹಂತದಲ್ಲೂ ಅದಕ್ಕೆ ವಿದಾಯ ಹೇಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಒಂದಾದ ನಂತರ ಒಂದು ಕ್ರಮ ಕೈಗೊಂಡಿದ್ದೇವೆ. 2-3 ವರ್ಷಗಳಲ್ಲಿ 3.5 ಲಕ್ಷ ಕಂಪನಿಗಳನ್ನು ವಿದಾಯ ಹೇಳಿದ್ದೇವೆ. 8 ಕೋಟಿ ನಕಲಿ ಹೆಸರುಗಳಿಗೆ ವಿದಾಯ ಹೇಳಿದ್ದೇವೆ. ಈ ನಕಲಿ ಹೆಸರು ತೆಗೆದುಹಾಕಿ ನಾವು 1.50 ಲಕ್ಷ ಕೋಟಿ ರು ಉಳಿಸಿದ್ದೇವೆ.
370ನೇ ವಿಧಿ ರದ್ದು:
ದೇಶದ ಮುಂದೆ 60 ವರ್ಷದಿಂದ ಇನ್ನೊಂದು ದೊಡ್ಡ ಸವಾಲಿತ್ತು. ಅದನ್ನು ನಾವು ಕೆಲ ದಿನಗಳ ಹಿಂದೆ ವಿದಾಯ ನೀಡಿದೆ. ಅದು 370ನೇ ವಿಧಿಯದ್ದು. ಜಮ್ಮು ಮತ್ತು ಕಾಶ್ಮೀರ ಈ ಉಗ್ರರು ಪಡೆಯುತ್ತಿದ್ದಾರೆ. ಇಂದು ಭಾರತದ ಸಂವಿಧಾನವು, ದೇಶದ ಉಳಿದ ರಾಜ್ಯಗಳ ಜನರಿಗೆ ನೀಡಿದ ಅಧಿಕಾರವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ನ ಜನರಿಗೂ ನೀಡಿದೆ ಎಂದರು.
ಪಾಕ್ ಉಗ್ರವಾದ
ಇದೇ ವೇಳೆ ಪಾಕಿಸ್ತಾನದ ಹೆಸರೇಳದೇ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ, ಕೆಲವರು ಭಾರತದ ವಿರುದ್ದ ದ್ವೇಷ ಕಾರುತ್ತಿದ್ದಾರೆ. ಉಗ್ರಗಾಮಿಗಳನ್ನು ಛೂ ಬಿಟ್ಟು ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಉಗ್ರಗಾಮಿಗಳನ್ನು ಬೆಳೆಸಿ, ಅವರಿಗೆ ಪೋಷಣೆ ನೀಡುತ್ತಿರುವವರು ಯಾರೆಂದು ಇಡೀ ಜಗತ್ತಿಗೆ ಗೊತ್ತು. ಅಮೆರಿಕದ 9/11ರ ಪೆಂಟಗಾನ್ ದಾಳಿ ಹಾಗೂ 26/11ರ ಮುಂಬೈ ದಾಳಿಯ ಮೂಲವನ್ನು ಕೆದಕಿದರೆ ಅವರು ಯಾರೆಂದು ತಿಳಿಯುತ್ತದೆ ಎಂದು ಚಾಟಿ ಬೀಸಿದ್ದಾರೆ.
ಅಲ್ಲದೇ ಉಗ್ರವಾದ ವಿರುದ್ಧ ಸಮರಕ್ಕೆ ಸಮಯ ಕೂಡಿ ಬಂದಿದ್ದು, ಅಮೆರಿಕ ಹಾಗೂ ಭಾರತ ಒಟ್ಟು ಸೇರಿ ನಿರ್ಣಾಯಕ ಹೋರಾಟ ನಡೆಸಲಿದೆ. ಅಧ್ಯಕ್ಷ ಟ್ರಂಪ್ ಕೂಡ ಉಗ್ರವಾದದ ಹೋರಾಟಕ್ಕೆ ಪಣ ತೊಟ್ಟಿದ್ದಾರೆ. ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಅವರಿಗೆ ಎದ್ದು ನಿಂತು ಗೌರವ ಸಲ್ಲಿಸೋಣ ಎಂದು ಹೇಳಿದಾಗ, ಸ್ಟೇಡಿಯಂನಲ್ಲಿದ್ದ ಅಷ್ಟೂಮಂದಿ ಎದ್ದು ಚಪ್ಪಾಳೆ ಹೊಡೆದು ಅಭಿನಂದಿಸಿದರು.
ಕೈಯಲ್ಲಿದೆ 370ನೆ ವಿಧಿ ರದ್ದತಿಯ ಲಾಠಿ: ಕಾಶ್ಮೀರಿ ಪಂಡಿತರಿಂದ ಮೋದಿ ಭೇಟಿ!
ಕಳೆದ 5 ವರ್ಷಗಳಲ್ಲಿ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಸಾಗಿದರೂ, ಭಾರತ 7.5 ರಷ್ಟುಅಭಿವೃದ್ದಿ ಸಾಧಿಸಿದೆ. ಕಡಿಮೆ ಹಣದುಬ್ಬರ, ಕಡಿಮೆ ಹಣಕಾಸಿನ ಕೊರತೆ ಮೂಲಕ ಉತ್ತಮ ಅಭಿವೃದ್ದಿ ನೀಡಿದ್ದೇವೆ 70 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ ನೀತಿಗಳಿಂದ ಅತೀ ಹೆಚ್ಚು ವಿದೇಶಿ ಬಂಡವಾಳ ಆಕರ್ಷಿಸುವ ರಾಷ್ಟ್ರಗಳ ಪೈಕಿ ಭಾರತದ ಉನ್ನತ ಸ್ಥಾನದಲ್ಲಿದೆ. 2014-19 ಎಫ್‌ಡಿಐ 2 ಪಟ್ಟು ಹೆಚ್ಚಾಗಿದೆ. ಏಕ ಬ್ರಾಂಡ್ ಉದ್ದಿಮೆಗಳಿಗೆ ಎಫ್‌ಡಿಐ ಹೆಚ್ಚಿಸಿದ್ದು, ಕಲ್ಲಿದ್ದಲು ಸೇರಿ ಹಲವು ಕ್ಷೇತ್ರಗಳಲ್ಲಿ ಶೇ. 100 ರಷ್ಟುಎಫ್‌ಡಿಐ ಕಲ್ಪಿಸಲಾಗಿದೆ. ಅಲ್ಲದೇ ಇತ್ತೀಚೆಗೆ ಕಾರ್ಪೋರೇಟ್ ತೆರಿಗೆ ಇಳಿಕೆ ಧನಾತ್ಮಕವಾಗಿ ಪರಿಣಮಿಸಿದ್ದು, ದೇಶ ಮಾತ್ರವಲ್ಲದೇ ವಿದೇಶಿ ಉದ್ಯಮಿಗಳು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರಿದ್ದಾರೆ. ನನ್ನನ್ನು ಮೋದಿ ಕಠಿಣ ವಾದಗಾರ ಎಂದು ಕರೆಯುತ್ತಾರೆ. ಆದರೆ ಅವರು ಒಪ್ಪಂದಲ್ಲಿ ನಿಪುಣರು. ಒಬ್ಬರೂ ಕೈ ಜೋಡಿಸಿದರೆ ಅಭಿವೃದ್ಧಿ ಮತ್ತಷ್ಟುವೇಗ ಪಡೆದುಕೊಳ್ಳಲಿದೆ ಎಂದರು.
ಅಲ್ಲದೇ ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಕರೆ ಕೊಟ್ಟಮೋದಿ, ತಾಯ್ನಾಡಿನಿಂದ ನೀವು ದೂರವಾಗಿದ್ದರೂ ತಾಯ್ನಾಡಿನ ಸರ್ಕಾರ ನಿಮ್ಮಿಂದ ದೂರವಾಗಿಲ್ಲ. ರಾಜ ತಾಂತ್ರಿಕ ಕಚೇರಿಗಳ ಮೂಲಕ ಅನಿವಾಸಿಗಳ ಬೆನ್ನಿಗೆ ಭಾರತ ನಿಂತಿದೆ ಎಂದು ಭರವಸೆ ಮೂಡಿಸಿದರು. ಎರಡೂ ದೇಶಗಳಲ್ಲಿ ನವ ನಿರ್ಮಾಣದ ಸಂಕಲ್ಪ ವಿದೆ. ಇಬ್ಬರೂ ಅಭಿವೃದ್ದಿಯಲ್ಲಿ ಒಟ್ಟಾಗಿ ಹೋಗೋಣ. ಕನಸು ನನಸಿಗೆ ಹಾಗೂ ಉತ್ತಮ ಭವಿಷ್ಯಕ್ಕೆ ಜತೆಯಾಗೋಣ. ಎಲ್ಲರಿಗೂ ಭಾರತಕ್ಕೆ ಸ್ವಾಗತ ಎಂದು ಉದ್ಯಮಿಗಳಿಗೆ ಕೆಂಪು ಹಾಸಿನ ಸ್ವಾಗತ ಕೋರಿ, ಥ್ಯಾಂಕ್ಯೂ ಅಮೆರಿಕಾ, ಥ್ಯಾಂಕ್ಯೂ ಹೂಸ್ಟನ್, ಗಾಡ್ ಬ್ಲೆಸ್ ಯೂ ಆಲ್ ಎಂದು ಭಾಷಣ ಮುಗಿಸಿದರು.