ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಹೊಸ ತಲೆನೋವು!

By Web DeskFirst Published Sep 23, 2019, 8:12 AM IST
Highlights

ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಹೊಸ ತಲೆನೋವು| ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೆ ನಮಗೆ ಟಿಕೆಟ್‌ ಕೊಡಿ| ಕುಟುಂಬದವರಿಗೆ ಬೇಡ: ಬಿಜೆಪಿ ಮೂಲನಿವಾಸಿಗಳ ಪಟ್ಟು

ಬೆಂಗಳೂರು[ಸೆ.23]: ಉಪಚುನಾವಣೆ ಘೋಷಣೆಯಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಟಿಕೆಟ್‌ ನೀಡಲು ಸಾಧ್ಯವಾಗದಿದ್ದರೆ ಅವರ ಕುಟುಂಬದವರ ಬದಲು ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ನೀಡುವಂತೆ ಬಿಜೆಪಿಯಲ್ಲಿ ಒತ್ತಾಯ ಕೇಳಿಬರುತ್ತಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ರಾಜಕೀಯ ಭವಿಷ್ಯ ಏನಾಗುತ್ತದೆ ಎಂಬುದರ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

ಒಂದು ವೇಳೆ ಅನರ್ಹ ಶಾಸಕರು ಸ್ಪರ್ಧಿಸಲು ಸಾಧ್ಯವಾಗದಿದ್ದರೆ ಅವರ ಕುಟುಂಬದ ಸದಸ್ಯರು ಅಥವಾ ಅವರು ಸೂಚಿಸುವವರಿಗೆ ಟಿಕೆಟ್‌ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭರವಸೆ ನೀಡಿರುವುದರ ಬಗ್ಗೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ. ಅವರು ‘ತ್ಯಾಗ’ ಮಾಡಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಟಿಕೆಟ್‌ ನೀಡುವುದರ ಬಗ್ಗೆ ತಕರಾರು ಇಲ್ಲ. ಆದರೆ, ಅವರ ಬದಲು ಅವರ ಕುಟುಂಬದವರಿಗೆ ಅಥವಾ ಬೆಂಬಲಿಗರಿಗೆ ಟಿಕೆಟ್‌ ನೀಡುವುದು ಸರಿಯಲ್ಲ. ಜೊತೆಗೆ ಅಂಥ ಸಂದರ್ಭದಲ್ಲಿ ಗೆಲ್ಲುವ ಸಾಧ್ಯತೆಯೂ ಕಡಮೆ ಎಂಬ ವಾದವನ್ನು ಮಂಡಿಸಲಾಗುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಪಕ್ಷದ ಪ್ರಮುಖರು ಸೋಮವಾರದ ಸುಪ್ರೀಂಕೋರ್ಟ್‌ ತೀರ್ಪು ನೋಡಿಕೊಂಡು ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿ ಕಡಿಮೆ ಮತಗಳಿಂತ ಸೋತವರು, ಪ್ರಬಲ ಪೈಪೋಟಿ ಒಡ್ಡಿದವರು ತಮ್ಮ ಭವಿಷ್ಯ ಏನು ಎಂಬ ಚಿಂತೆಯಲ್ಲಿ ಬೇಡಿಕೆ ಮಂಡಿಸುತ್ತಿದ್ದಾರೆ. ಈ ಪೈಕಿ ಕೆಲವರು ಬಹಿರಂಗವಾಗಿಯೂ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಕೆ.ಆರ್‌.ಪುರ ಕ್ಷೇತ್ರದಲ್ಲಿ ಮಾಜಿ ಶಾಸಕ ನಂದೀಶ್‌ ರೆಡ್ಡಿ, ಯಶವಂತಪುರದಲ್ಲಿ ಜಗ್ಗೇಶ್‌, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಹರೀಶ್‌, ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡ, ಗೋಕಾಕ್‌ನಲ್ಲಿ ಅಶೋಕ್‌ ಪೂಜಾರಿ ಹೀಗೆ ಹಲವು ಕ್ಷೇತ್ರಗಳಲ್ಲಿ ತಮಗೆ ಟಿಕೆಟ್‌ ನೀಡುವಂತೆ ಅಲ್ಲಿನ ಆಕಾಂಕ್ಷಿಗಳು ಒತ್ತಡ ಹೇರುತ್ತಿದ್ದಾರೆ. ಇದು ಪಕ್ಷದ ನಾಯಕರಿಗೂ ತುಸು ಇರಿಸುಮುರುಸು ಉಂಟುಮಾಡಿದೆ ಎನ್ನಲಾಗಿದೆ.

ಆಕಾಂಕ್ಷಿಗಳ ಸಮಾಧಾನಕ್ಕೆ ಯತ್ನ?

ತಮ್ಮದೇ ಸರ್ಕಾರ ಇರುವುದರಿಂದ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಪ್ರಾತಿನಿಧ್ಯ ನೀಡುವುದಾಗಿ ಭರವಸೆ ನೀಡುವ ಮೂಲಕ ಆಕಾಂಕ್ಷಿಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆÜ ಎಂಬುದು ಕುತೂಹಲಕರವಾಗಿದೆ. ಈ ನಡುವೆ ಬಿಜೆಪಿಯಲ್ಲಿನ ಪ್ರಮುಖ ಆಕಾಂಕ್ಷಿಗಳು ಅಥವಾ ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಸೋಲುಂಡವರನ್ನು ಸೆಳೆಯಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಪ್ರಯತ್ನ ನಡೆಸಲು ಮುಂದಾಗಿವೆ. ಅದರಲ್ಲೂ ಕಾಂಗ್ರೆಸ್‌ ಪಕ್ಷ ತೀವ್ರವಾಗಿಯೇ ಪ್ರಯತ್ನ ನಡೆಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

click me!