ಬೆಂಗಳೂರಿನಲ್ಲಿ ಧಾರಾಕಾರ ಮಳೆ : ಸೋರಿದ ವಿಧಾನಸೌಧ

By Web DeskFirst Published Aug 24, 2018, 8:15 PM IST
Highlights

ಸಂಜೆ ಸುರಿದ ಭಾರಿ ಮಳೆ ಶಕ್ತಿಸೌಧ ವಿಧಾನಸೌಧಕ್ಕೂ ತಟ್ಟಿತು. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣ ಮಳೆಯಿಂದಾಗಿ ಸೋರುವ ಸ್ಥಿತಿ ನಿರ್ಮಾಣವಾಯಿತು.

ಬೆಂಗಳೂರು[ಆ.24]: ಕೊಡಗು, ಕರಾವಳಿ ಮಲೆನಾಡು ಭಾಗಕ್ಕೆ ಬಿಡುವು ಕೊಟ್ಟಿರುವ ಮಳೆರಾಯ ಸಿಲಿಕಾನ್ ಸಿಟಿಯ ಕೆಲವೆಡೆ ಇಂದು ಅಬ್ಬರಿಸಿದ್ದಾನೆ. 

ಸಂಜೆ 6 ಗಂಟೆ ಸುಮಾರಿನಲ್ಲಿ ಆರಂಭವಾದ ಮಳೆ  ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ಕೆ.ಆರ್. ಸರ್ಕಲ್, ವಿಧಾನಸೌಧ, ಶಿವಾಜಿನಗರ, ಶಾಂತಿನಗರ, ಕಾರ್ಪೊರೇಷನ್ ಸರ್ಕಲ್, ಕೆ.ಆರ್. ಮಾರ್ಕೆಟ್, ಚಾಮರಾಜಪೇಟೆ, ಬಸವನಗುಡಿ, ಹನುಮಂತನಗರ, ತ್ಯಾಗರಾಜನಗರ, ಶ್ರೀನಗರ, ಬನಶಂಕರಿ, ಜಯನಗರ, ಜೆಪಿ ನಗರ ಸುತ್ತಮುತ್ತ ಧಾರಾಕಾರವಾಗಿ ಸುರಿಯಿತು.

ವಿಜಯನಗರ, ಮೈಸೂರು ರಸ್ತೆ, ಬಾಪೂಜಿನಗರ, ನಾಯಂಡಹಳ್ಳಿ,ಕೆಂಗೇರಿ, ಮಾಗಡಿ ರಸ್ತೆ, ಯಶವಂತಪುರ,ತುಮಕೂರು ರಸ್ತೆ, ಹೊಸೂರು ರಸ್ತೆ, ಕೆಆರ್ ಪುರಂ ಪ್ರದೇಶಗಳಲ್ಲಿ ಸಾರ್ವಜನಿಕರು ಪರದಾಡುವ ಸ್ಥತಿ ನಿರ್ಮಾಣವಾಯಿತು.  

ಸೋರಿದ ವಿಧಾನಸೌಧ
ಸಂಜೆ ಸುರಿದ ಭಾರಿ ಮಳೆ ಶಕ್ತಿಸೌಧ ವಿಧಾನಸೌಧಕ್ಕೂ ತಟ್ಟಿತು. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣ ಮಳೆಯಿಂದಾಗಿ ಸೋರುವ ಸ್ಥಿತಿ ನಿರ್ಮಾಣವಾಯಿತು. ಸಭಾಂಗಣಕ್ಕೆ ಕಳೆದ ವರ್ಷವಷ್ಟೆ ಕೋಟ್ಯಂತರ  ರೂ. ಖರ್ಚು ಮಾಡಿ ನವೀಕರಣಗೊಳಿಸಲಾಗಿತ್ತು. ಕೇವಲ ಒಂದು ವರ್ಷವಾಗುವಷ್ಟರಲ್ಲಿಯೇ ಸಭಾಂಗಣ ಸೋರುತ್ತಿರುವುದಕ್ಕೆ ಕಳಪೆ ಕಾಮಗಾರಿ ಕಾರಣ ಎನ್ನಲಾಗುತ್ತಿದೆ.

ಆತಂಕ ಪಡಬೇಡಿ : ಶ್ರೀನಿವಾಸ್ ರೆಡ್ಡಿ
ಮೋಡಗಳ ಚದುರುವಿಕೆಯಿಂದಾಗಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮಾತ್ರ ಇಂದು ಮಳೆಯಾಗಿದ್ದು, ನಾಳೆಯಿಂದ ಸಂಪೂರ್ಣವಾಗಿ ಕಡಿಮೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರಾದ ಡಾ.ಜಿ.ಎಸ್. ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಸುವರ್ಣ ನ್ಯೂಸ್.ಕಾಂನೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಕೇಂದ್ರ ಭಾಗ, ಚಿತ್ರದುರ್ಗದಲ್ಲಿ ನಾಳೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಇನ್ನೆರೆಡು ದಿನಗಳ ಕಾಲ ಮಳೆಯಾಗುವುದಿಲ್ಲ. ಆ.27 ರಿಂದ 2 ದಿನಗಳ ಕಾಲ ಕೊಡಗು, ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

click me!