
ಬೆಂಗಳೂರು (ಆ. 07): ರಾಜ್ಯದ ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ವ್ಯಾಪ್ತಿಯಲ್ಲಿ ಆಶ್ಲೇಷ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಪ್ರಮುಖ ಜೀವನದಿಗಳಾದ ಕಾವೇರಿ, ಹೇಮಾವತಿ, ಭದ್ರಾ ಸೇರಿದಂತೆ ಅನೇಕ ನದಿತೊರೆಗಳು ಅಪಾಯ ಮಟ್ಟಮೀರಿ ಹರಿಯುತ್ತಿದ್ದು ಕಾವೇರಿ ಸಂಗಮಕ್ಷೇತ್ರ ಕೊಡಗು ಜಿಲ್ಲೆಯ ಭಾಗಮಂಡಲ ಪ್ರದೇಶ ಈ ಮಳೆಗಾಲದಲ್ಲಿ ಇದೇ ಪ್ರಥಮ ಬಾರಿ ಮುಳುಗಡೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಸೋಮವಾರದಿಂದ ಗುಡುಗು ಸಹಿತ ಭಾರೀ ಗಾಳಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಮರಗಳು ಬುಡ ಸಮೇತ ನೆಲಕ್ಕುರುಳಿದ್ದು ಕಳೆದ ವರ್ಷದ ಪ್ರಕೃತಿ ವಿಕೋಪವನ್ನು ನೆನಪಿಸುವಂತಿದೆ. ಹಲವೆಡೆ ರಸ್ತೆ ಸಂಚಾರ ವ್ಯತ್ಯಯ ಉಂಟಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಭಾಗಮಂಡಲ ಜಲಾವೃತ:
ಸೋಮವಾರದಿಂದಲೇ ಮಡಿಕೇರಿ ತಾಲೂಕಿನ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮಳೆಗಾಲದಲ್ಲಿ ಭಾಗಮಂಡಲ ಪ್ರದೇಶ ಪ್ರಥಮ ಬಾರಿಗೆ ಮುಳುಗಡೆಯಾಗಿದೆ. ಭಾಗಮಂಡಲ- ನಾಪೋಕ್ಲು, ಭಾಗಮಂಡಲ- ತಲಕಾವೇರಿ ರಸ್ತೆ ಕೂಡ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಪ್ರವಾಹದ ಪರಿಸ್ಥಿತಿ ಇರುವುದರಿಂದ ಸ್ಥಳದಲ್ಲೇ ಅಗ್ನಿಶಾಮಕ ಸಿಬ್ಬಂದಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಬೋಟ್, ರಾರಯಫ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗಿದ್ದು, ಈಜುಗಾರರನ್ನು ನಿಯೋಜನೆ ಮಾಡಲಾಗಿದೆ.
ಲಕ್ಷ್ಮಣತೀರ್ಥ ನದಿ ತುಂಬಿ ಹರಿದ ಹಿನ್ನೆಲೆಯಲ್ಲಿ ನಿಟ್ಟೂರು ಬಾಳೆಲೆ ಹಳೆ ಸೇತುವೆ ಮುಳುಗಡೆಗೊಂಡಿದ್ದು ಆಸುಪಾಸಿನ ಬತ್ತದ ಗದ್ದೆಗಳೂ ಜಲಾವೃತವಾಗಿವೆ. ಮಡಿಕೇರಿಯ ಅಪಾಯಕಾರಿ ಸ್ಥಳವೆಂದೇ ಕರೆಯಲಾಗುವ ಇಂದಿರಾ ನಗರದಲ್ಲಿ ಬರೆ ಕುಸಿತ ಉಂಟಾಗಿದ್ದು ಕೆಲವು ಮನೆಗಳಿಗೆ ಹಾನಿ ಸಂಭವಿಸಿದೆ.
ಶಿವಮೊಗ್ಗದಲ್ಲಿ 18 ಮನೆ ಕುಸಿತ:
ಶಿವಮೊಗ್ಗದ ಮಲೆನಾಡು ಮೂರೇ ದಿನದ ಮಳೆಗೆ ತುಂಗಾ, ಭದ್ರಾ, ಶರಾವತಿ, ಮಾಲತಿ, ವರದಾ ನದಿಗಳು ತುಂಬಿ ಹರಿಯುತ್ತಿದೆ. ಅನೇಕ ಗ್ರಾಮ ಮತ್ತು ಬಡಾವಣೆಗಳಿಗೆ ನೀರು ನುಗ್ಗಿದ್ದು ಕೃಷಿ ಭೂಮಿಗೂ ಹಾನಿಯಾಗಿದೆ. ಸಾಗರ ತಾಲೂಕಿನ ಬೀಸನಗದ್ದೆ ವರದಾ ನದಿ ಉಕ್ಕಿ ಹರಿಯುತ್ತಿದೆ. ಹೊಸನಗರ ಸುತ್ತಮುತ್ತ ಉಪನದಿಗಳು ಉಕ್ಕಿ ಹರಿಯುತ್ತಿವೆ.
ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. 18 ಮನೆಗಳು ಕುಸಿದಿದ್ದು, ತೊಗರ್ಸಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ಕುಸಿತಗೊಂಡಿದೆ. ಶಿವಮೊಗ್ಗ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಕೋಳಿ ಫಾರಂಗೆ ನೀರು ನುಗ್ಗಿ ಸುಮಾರು 3,000 ಕೋಳಿಗಳು ಮೃತಪಟ್ಟಿವೆ.
ಲಿಂಗನಮಕ್ಕಿಗೆ 5 ಅಡಿ ನೀರು:
ಶರಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿದುಬರುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಐದು ಅಡಿಯಷ್ಟುಜಲಾಶಯಕ್ಕೆ ನೀರು ಹರಿದು ಬಂದಿದೆ. ವಿಶ್ವವಿಖ್ಯಾತ ಜೋಗ ಜಲಪಾತವೂ ಜೀವಕಳೆಯಿಂದ ಧುಮ್ಮಕ್ಕುತ್ತಿದೆ.
15 ಮಂದಿಯ ರಕ್ಷಣೆ:
ಚಿಕ್ಕಮಗಳೂರು ಜಿಲ್ಲೆಯ ಐದು ಜಿಲ್ಲೆಗಳಲ್ಲಿ ಐದು ತಾಲೂಕುಗಳಲ್ಲಿ ಎಡೆಬಿಡದೆ ಸುರಿಸುತ್ತಿದ್ದು ಹೊರನಾಡು- ಕಳಸ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ. ಶೃಂಗೇರಿಯಲ್ಲಿ ತುಂಗಾನದಿ ಅಪಾಯದ ಮಟ್ಟಮೀರಿ ಹರಿಯುತ್ತಿದೆ. ತರೀಕೆರೆ ತಾಲೂಕಿನ ಕಲ್ಲತ್ತಿಗಿರಿಯ ಶ್ರೀ ವೀರಭದ್ರೇಶ್ವರ ದೇವಾಲಯಲ್ಲಿ ಪೂಜೆಗೆ ಬಂದಿದ್ದ ಕಡೂರಿನ 15 ಮಂದಿ ಪ್ರವಾಹಕ್ಕೆ ಸಿಲುಕಿದ್ದು, ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಅವರನ್ನು ಪಾರು ಮಾಡಲಾಯಿತು.
ಕೊಪ್ಪ ತಾಲೂಕಿನ ಭೈರೆ ದೇವರು- ಕೊಗ್ರೆ ಸೇರುವ ಹುಲ್ಲಿನಗದ್ದೆ ಕಿರು ಸೇತುವೆ ಮುಳುಗಡೆಯಾಗಿದೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿರುವ ಅಣ್ಣಪ್ಪಸ್ವಾಮಿ ದೇವಾಲಯದ ಆಸುಪಾಸಿನಲ್ಲಿ ಮಣ್ಣು ಕುಸಿತ ಉಂಟಾಗಿದೆ. ಕಳಸ-ಹೊರನಾಡು ಮಧ್ಯೆ ಭದ್ರಾನದಿಗೆ ಕಟ್ಟಿರುವ ಹೆಬ್ಬಾಳ್ ಸೇತುವೆ ಮುಳುಗಡೆಗೊಂಡಿದ್ದರಿಂದ ಬೆಳಗ್ಗೆ 10 ಗಂಟೆಯವರೆಗೂ ಸೇತುವೆ ಮೇಲೆ ನೀರು ಹರಿದು ಕಳಸ- ಹೊರನಾಡು ಸಂಪರ್ಕ ಕಡಿತಗೊಂಡಿದೆ. ಹೊರನಾಡು ರಸ್ತೆಯ ಗೂರ್ಲಿಕೆ ಎಂಬಲ್ಲಿ ತಡೆಗೋಡೆ ಕುಸಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಿಸುವಂತಾಗಿದೆ.
ಹಾಸನ ಜಿಲ್ಲೆಯ ಮಲೆನಾಡು ಪ್ರದೇಶವಾದ ಸಕಲೇಶಪುರ, ಬೇಲೂರು, ಹಾಸನ ಮಲೆನಾಡು ಭಾಗದಲ್ಲಿ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕೆರೆಕಟ್ಟೆಗಳೆಲ್ಲ ತುಂಬಿ ಹರಿಯುತ್ತಿದೆ. ಮಂಗಳವಾರ ಹೇಮಾವತಿ ಜಲಾಶಯಕ್ಕೆ 17,623 ಕ್ಯುಸೆಕ್ ನೀರು ಹರಿದು ಬಂದಿದ್ದು ಒಟ್ಟಾರೆ 17.54 ಟಿಎಂಸಿ ನೀರು ಸಂಗ್ರಹವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.