ರಾಜೀನಾಮೆ ಪರ್ವ: ಗೌಪ್ಯ ಸ್ಥಳದಲ್ಲಿ ರಮೇಶ್ ಜಾರಕಿಹೊಳಿ!

By Web DeskFirst Published Jul 1, 2019, 11:06 AM IST
Highlights

ಅತ್ತ ವಿಜಯನಗರ ಕಾಂಗ್ರೆಸ್ ಶಾಸಕ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸುತ್ತಲೇ ಇತ್ತ ಬಂಡಾಯ ಶಾಸಕರ ಚಟುವಟಿಕೆಗಳು ಜೋರಾಗಿದೆ. ಆದರೆ, ಬಂಡಾಯದ ರೂವಾರಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಡೆ ಏನಾಗಬಹುದೆಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು (ಜು.1): ಕಾಂಗ್ರೆಸ್ ನಿಲುವುಗಳಿಂದ ಬೇಸತ್ತು ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ರಾಜೀನಾಮೆ ಪರ್ವ ಆರಂಭವಾಗುವ ಸುಳಿವು ಸಿಕ್ಕಿದ್ದು, ಹಲವು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ, ಎಂಬುವುದು ಸ್ಪಷ್ಟವಾಗಿದೆ. ಆದರೆ, ಮೊದಲೇ ಮೈತ್ರಿ ಸರಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ, ಅನುಮಾನಸ್ಪದ ಹೆಜ್ಜೆ ಇಡುತ್ತಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಿಲುವು ಏನು? 

ಯಾರಿದ್ದಾರೆ ಅತೃಪ್ತ ಶಾಸಕರ ಲಿಸ್ಟ್‌ನಲ್ಲಿ?

ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾಟರ್ಸ್‌ನಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಆದರೆ, ಮಧ್ಯಾಹ್ನವೇ ಅವರು ರಾಜೀನಾಮೆ ಸಲ್ಲಿಸಬಹುದು, ಎನ್ನಲಾಗುತ್ತಿದ್ದರೂ, ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಅವರು ಗೌಪ್ಯ ಸ್ಥಳಕ್ಕೆ ತೆರಳಿದ್ದು, ಎಲ್ಲಿದ್ದಾರೆಂಬುವುದು ಮಿಲಿಯನ್ ಡಾಲರ್ ಪ್ರಶ್ನೆ.

ಬಂಡಾಯ ಶಾಸಕರು ರಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದು, ರಾಜೀನಾಮೆಗೆ ಮಹೂರ್ತ ಫಿಕ್ಸ್ ಮಾಡಿ, ನಾಪತ್ತೆಯಾಗಿದ್ದಾರೆ, ಎನ್ನಲಾಗುತ್ತಿದೆ. ಬೆಳಗಾವಿ, ಗೋಕಾಕ್ ಹಾಗೂ ಬೆಂಗಳೂರಿನ ಮನೆಯಲ್ಲಿಯೂ ರಮೇಶ್ ಸುಳಿವು ಸಿಕ್ಕಿಲ್ಲ. ಇತ್ತೀಚೆಗೆ ಹಲವು ದಿನಗಳಿಂದ ಅವರು ಮಾಧ್ಯಮ ಸಂಪರ್ಕಕ್ಕೂ ಸಿಗುತ್ತಿಲ್ಲ.

ಒಟ್ಟಿನಲ್ಲಿ ರಾಜೀನಾಮೆ ಪರ್ವ ಆರಂಭವಾದ ಬೆನ್ನಲ್ಲೇ ಆಪರೇಷನ್ ಕಮಲ ಅಂತಿಮ ಘಟ್ಟಕ್ಕೆ ಬಂದಂತೆ ಭಾಸವಾಗುತ್ತಿದ್ದು, ಮುಂದಿನ ಸರಕಾರದ ಬಗ್ಗೆ ಹತ್ತು ಹಲವು ಕುತೂಹಲಗಳಿವೆ. ಸರಕಾರ ರಚಿಸಲು ಬಿಜೆಪಿ ಮುಂದಾಗುತ್ತಾ? ಅಥವಾ ಕರ್ನಾಟಕದಲ್ಲಿ ಮತ್ತೆ ಚುನಾವಣೆ ನಡೆಯುತ್ತಾ ಕಾದು ನೋಡಬೇಕು. 

"

click me!