ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಹಣ ಉಳಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ಐರಾವತ ಬಸ್ ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದರು. 180 ರೂಪಾಯಿ ಉಳಿಸುವ ಭರದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬೆಂಗಳೂರು (ಏ.3): ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಐರಾವತ ಬಸ್ ಢಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಪ್ರಾಣಬಿಟ್ಟ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದೆ. ಟೋಲ್ ಹಣ ಉಳಿಸಲು ಹೋಗಿ ಭಯಾನಕ ಆಕ್ಸಿಡೆಂಟ್ ನಡೆದಿದೆ ಅನ್ನೋ ಮಾಹಿತಿ ಸಿಕ್ಕಿದೆ. 180 ರೂಪಾಯಿ ಉಳಿಸುವ ಯತ್ನದಲ್ಲಿ ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ ಕಂಡಿದ್ದಾರೆ.
ಸಣ್ಣ ಎಡವಟ್ಟಿನಿಂದಾಗಿ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದವರೇ ದುರಂತವಾಗಿ ಅಂತ್ಯವಾಗಿದ್ದಾರೆ. ಸತ್ಯನಂದರಾಜೇ ಅರಸ್, ಪತ್ನಿ ನಿಶ್ಚಿತ, ಚಂದ್ರರಾಜೇ ಅರಸ್, ಪತ್ನಿ ಸುವೇದಿನಿ ರಾಣಿ ಇಂದು ಬೆಳಗ್ಗೆ ನಡೆದ ಅಪಘಾತದಲ್ಲಿ ಸಾವು ಕಂಡಿದ್ದರು. ಮೃತರೆಲ್ಲರು ಬೆಂಗಳೂರು ಜೆಪಿ ನಗರದ ಮೂಲದವರು ಎಂದು ಗೊತ್ತಾಗಿದೆ.
ಮೃತ ಸತ್ಯನಂದರಾಜೇ ಅರಸ್ ಹಾಗೂ ಚಂದ್ರರಾಜೇ ಅರಸ್ ಇಬ್ಬರು ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳು. ಮೃತ ಮಾವನ ಅಂತ್ಯಸಂಸ್ಕಾರಕ್ಕೆ ಪತ್ನಿಯರ ಜೊತೆ ಕುಟುಂಬ ತೆರಳುತ್ತಿತ್ತು. ಬೆಂಗಳೂರಿನಿಂದ ಮೈಸೂರಿನ ಪಿರಿಯಾಪಟ್ಟಣಕ್ಕೆ ಹೋಗುತ್ತಿದ್ದರು. ಗಣಂಗೂರು ಟೋಲ್ ಹಿಂದೆಯೇ ಎಕ್ಸ್‌ಪ್ರೆಸ್ ವೇನಿಂದ ಎಕ್ಸಿಟ್ ಆಗಲು ಯತ್ನ ಮಾಡಿದ್ದಾರೆ.
ಟೋಲ್ ಸುಂಕ 180ರೂ ಉಳಿಸಲು ತೂಬಿನಕೆರೆ ಬಳಿ ಎಕ್ಸಿಟ್ ಆಗಲು ಚಾಲಕ ಚಂದ್ರರಾಜೇ ಅರಸ್ ಕಾರನ್ನು ನಿಧಾನ ಮಾಡಿದ್ದಾರೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು 50 ಮೀಟರ್ ದೂರು ಹೋಗಿ ಬಿದ್ದಿತ್ತಲ್ಲದೆ, ಕಾರ್‌ನಲ್ಲಿದ್ದ ನಾಲ್ವರು ಸಾವು ಕಂಡಿದ್ದರು.
ಹಿಂಬದಿಯಿಂದ ಬಸ್ ಗುದ್ದಿದ ರಭಸಕ್ಕೆ ಎಕ್ಸಿಟ್ ಮಾರ್ಗದಲ್ಲಿ ಇರಿಸಲಾಗಿದ್ದ ಡಿವೈಡರ್‌ಗೆ ಡಿಕ್ಕಿಯಾಗಿ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ. ಹೆದ್ದಾರಿಯಲ್ಲಿ ನಡೆದ ಈ ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ನಂತರ, ಕಾರಿನಲ್ಲಿದ್ದವರ ಮಾಹಿತಿ ಕಲೆ ಹಾಕುವುದಕ್ಕೂ ಯಾರೊಬ್ಬರೂ ಬದುಕಿರಲಿಲ್ಲ. ಇನ್ನು ಕಾರಿನಲ್ಲಿ ಏನಾದರೂ ದಾಖಲೆಗಳು ಸಿಗುತ್ತವೆಯೇ ಎಂದು ಹುಡುಕುವುದಕ್ಕೂ ಕಾರು ಸಂಪೂರ್ಣ ಜಖಂ ಆಗಿದ್ದರಿಂದ ಮೃತ ದೇಹ ಹೊರ ತೆಗೆಯುವುದೇ ಕಷ್ಟವಾಗಿತ್ತು.ನಂತರ ಜೆಸಿಬಿಯಿಂದ ಜಖಂ ಆಗಿದ್ದ ಕಾರನ್ನು ಎಳೆದು, ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಆಗ ದಾಖಲೆ ಪರಿಶೀಲಿಸಿದಾಗ ಮೃತರ ಗುರುತು ಪತ್ತೆ ಮಾಡಲಾಗಿದೆ.
ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾರಿಗೆ ಗುದ್ದಿದ ಐರಾವತ ಬಸ್; ಅಂತ್ಯಕ್ರಿಯೆಗೆ ಹೊರಟ ನಾಲ್ವರು ದುರ್ಮರಣ
ಇವರೆಲ್ಲರೂ KA 09 MG 4263 ನಂಬರ್ ಕಾರಿನಲ್ಲಿ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದರು. ಆದರೆ, ಎಕ್ಸಿಟ್ ಆಗುವ ವೇಳೆ KA 57 F 1721 ನಂಬರ್‌ನ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಇನ್ನು ಅಪಘಾತ ಸ್ಥಳಕ್ಕೆ ಐಜಿಪಿ ಬೋರಲಿಂಗಯ್ಯ ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲನೆ ಮಾಡಿದ್ದಾರೆ.
ನೆಲಮಂಗಲ ಆಕ್ಸಿಡೆಂಟ್‌ನಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಕಳೆದುಕೊಂಡ ಶೋಕ, ಚಂದ್ರಮ್ ತಂದೆ ಈರಗೊಂಡ ಕೂಡ ಸಾವು!
ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ನಿಶ್ಚಿತಾ ಅರಸ್: ಘಟನೆಯಲ್ಲಿ ಸಾವು ಕಂಡ ನಿಶ್ಚಿತಾ ಅರಸ್, ವಿಜಯಕರ್ನಾಟಕ ಪತ್ರಿಕೆಯಲ್ಲಿ ಪೇಜ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. 'ನಮ್ಮ ಬೆಂಗಳೂರು ಕಚೇರಿಯ ಸಂಪಾದಕೀಯ ವಿಭಾಗದ ಸಹೋದ್ಯೋಗಿ ನಿಶ್ಚಿತಾ ಅರಸ್ ಇನ್ನಿಲ್ಲ. ಇಂದು ಮಧ್ಯಾಹ್ನ ಮಂಡ್ಯ ಸಮೀಪದ ತೂಬಿನಕೆರೆಯ ಎಕ್ಸ್‌ಪ್ರೆಸ್ ಹೈ ವೇನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರು. ಮೈಸೂರಿನಲ್ಲಿರುವ ತಮ್ಮ ಹತ್ತಿರದ ಬಂಧುವೊಬ್ಬರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ತಮ್ಮ ಪತಿ ಹಾಗೂ ಇನ್ನಿಬ್ಬರು ಬಂಧುಗಳೊಂದಿಗೆ ಬೆಂಗಳೂರಿನಿಂದ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ನಾಲ್ವರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಮ್ಮ ಮಂಡ್ಯ ಜಿಲ್ಲಾ ವರದಿಗಾರ ನವೀನ್ ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಆಗುಹೋಗುಗಳಿಗೆ ಸಹಕರಿಸುತ್ತಿದ್ದಾರೆ. ಅಂತ್ಯ ಸಂಸ್ಕಾರ ಎಲ್ಲಿ ಏನು- ಮತ್ತಿತರ ವಿವರ ಅಪ್ಡೇಟ್ ಮಾಡಲಾಗುವುದು..ನಿಶ್ಚಿತಾ, ಕ್ಷಮಿಸು ಸೋದರಿ...' ಎಂದು ಪತ್ರಿಕೆ ನಿಶ್ಚಿತಾ ನಿಧನಕ್ಕೆ ಸಂತಾಪ ಸೂಚಿಸಿದೆ.