
ನವದೆಹಲಿ (ಸೆ.19): ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಬಂದ ಕೆಲವೇ ದಿನಗಳಲ್ಲಿ, ಭಾರತೀಯ ಐಟಿ ಕಂಪನಿಗಳಿಗೆ ಬೃಹತ್ ಶಾಕ್ ನೀಡಿದ್ದರು. ಹೆಚ್-1ಬಿ ವೃತ್ತಿ ವೀಸಾ ನೀಡುವ ಪ್ರಕ್ರಿಯೆಗೆ ಹೊಸ ತಿದ್ದುಪಡಿಯನ್ನು ತಂದು, H1B ವೀಸಾ ವಿತರಣೆ ಮಾಡದಂತೆ ತಡೆಹಿಡಿದಿದ್ದರು. ಆದರೆ ಇದೀಗ ಟ್ರಂಪ್ ತಮ್ಮ ತಡೆಯಾಜ್ಞೆಯನ್ನ ಹಿಂಪಡೆದು, ಭಾರತೀಯ ಟೆಕ್ಕಿಗಳಿಗೆ ಬಿಗ್ ರಿಲೀಫ್ ನೀಡಿದ್ದಾರೆ.
ಇವತ್ತು ಭಾರತೀಯ ಐಟಿ ಕಂಪನಿಗಳು ಮತ್ತು ಟೆಕ್ಕಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಯಾಕಂದ್ರೆ ಹೆಚ್-1 ಬಿ ವೃತ್ತಿ ವೀಸಾ ವಿತರಣೆಯನ್ನು ತಡೆ ಹಿಡಿದಿದ್ದ ಟ್ರಂಪ್ ಇಂದು ವೀಸಾ ವಿತರಣೆಗೆ ಅಸ್ತು ಎಂದಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ಅದರಲ್ಲೂ ಐಟಿ ವೃತ್ತಿಪರರು ನಿಟ್ಟುಸಿರು ಬಿಡುವಂತಾಗಿದೆ. ಜೊತೆಗೆ ಉದ್ಯೋಗ ಆಕಾಂಕ್ಷಿಗಳಿಗೂ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಏನಿದು H1B ವೀಸಾ?
ವಿದೇಶಿಗರಿಗೆ ಅದರಲ್ಲೂ ಭಾರತೀಯ ಐಟಿ ಟೆಕ್ಕಿಗಳಿಗೆ ನೀಡುವ ವೀಸಾ ಇದಾಗಿದೆ. ತಾಂತ್ರಿಕ ನೈಪುಣ್ಯತೆ ಹೊಂದಿರುವ ಐಟಿ ವೃತ್ತಿಪರರಿಗೆ ಅಮೆರಿಕಾದ ಕಂಪೆನಿಗಳಲ್ಲಿ ಕೆಲಸ ಮಾಡಲು, ನೀಡುವ ವಲಸೆರಹಿತ ವೀಸಾ ಇದಾಗಿದೆ.
ಟ್ರಂಪ್ ಕಳೆದ ಜನವರಿ 20ರಂದು ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರಕ್ಕೆ ಬಂದ ಕೇವಲ ಹತ್ತೇ ದಿನದಲ್ಲಿ, H1B ವೀಸಾ ತಿದ್ದುಪಡಿ ಬಿಲ್ ಮಂಡಿಸಿದ್ದರು. ನಂತರ ಏಪ್ರಿಲ್ ನಲ್ಲಿ ಈ ವೀಸಾವನ್ನ ಸಂಪೂರ್ಣ ತಡೆಹಿಡಿದಿದ್ದರು. ಈ ನೂತನ ತಿದ್ದುಪಡಿ ಪ್ರಕಾರ ಅಮೆರಿಕ ವೀಸಾ ಪಡೆಯಲು 1 ಲಕ್ಷ 30 ಸಾವಿರ ಡಾಲರ್ ವೇತನ ಕಡ್ಡಾಯವಾಗಿ ಪಡೆಯಬೇಕಿತ್ತು. ವರ್ಷಕ್ಕೆ 88 ಲಕ್ಷ ವೇತನ ಇದ್ದವರಿಗಷ್ಟೇ ಅಮೆರಿಕ ವೀಸಾ ಕೈ ಸೇರುವುದು ಎಂದು ಟ್ರಂಪ್ ಆದೇಶ ಹೊರಡಿಸಿದ್ದರು. ಈ ವೀಸಾದ ಹೊಸ ನೀತಿಯಿಂದಾಗಿ ಭಾರತೀಯ ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋಗೆ ಭಾರೀ ಹೊಡೆತ ಬಿದ್ದಿತ್ತು.
ಇದಾದ ನಂತರ ಕಳೆದ ಏಪ್ರಿಲ್ ನಿಂದ US ಸಿಟಿಜನ್ ಷಿಪ್ ಮತ್ತು ಇಮಿಗ್ರೇಷನ್ ಸರ್ವೀಸ್ ಗೆ, H1B ವೀಸಾ ತಿದ್ದುಪಡಿ ಹಿಂಪಡೆಯುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಿಟಿಷನ್ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆ. ಟ್ರಂಪ್ H1B ವೀಸಾ ವಿತರಣೆಗೆ ವಿಧಿಸಿದ್ದ ತಡೆಯಾಜ್ಞೆಯನ್ನ ಹಿಂಪಡೆದಿದ್ದಾರೆ. 2018ನೇ ಆರ್ಥಿಕ ವರ್ಷಕ್ಕೆ ಹೆಚ್-1 ಬಿ ವೀಸಾ ನೀಡಲು ಅನುಮತಿ ಸೂಚಿಸಿದ್ದು, 65,000 ವೀಸಾಗಳನ್ನು ನೀಡಲು ಗುರಿ ನಿಗದಿಪಡಿಸಲಾಗಿದೆ. ಒಟ್ಟಿನಲ್ಲಿ ಅಮೆರಿಕಾದಲ್ಲಿ ವಾಸವಿರುವ ಭಾರತೀಯ ಟೆಕ್ಕಿಗಳು ಮತ್ತು ಭಾರತದ ಐಟಿ ಕಂಪನಿಗಳು ನಿಟ್ಟುಸಿರು ಬಿಡುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.