ಮಾಲೀಕನನ್ನು ಸರ್ಪದಿಂದ ಕಾಪಾಡಿ ಜೀವ ಬಿಟ್ಟ 4 ನಾಯಿಗಳು!

By Web DeskFirst Published Apr 19, 2019, 1:49 PM IST
Highlights

ಮಾಲೀಕನಿಗಾಗಿ ನಾಗರ ಹಾವಿನೊಂದಿಗೆ ಸಮರ| ಹಾವು ಕಡಿದರೂ ಚಿಂತಿಸದೆ ದಾಳಿ ಮುಂದುವರೆಸಿದ ನಾಯಿಗಳು| ಅನ್ನ ಕೊಟ್ಟ ಮಾಲಿಕನ ಕುಟುಂಬ ಕಾಪಾಡಲು ತಮ್ಮ ಪ್ರಾಣವನ್ನೇ ಬಲಿ ಕೊಟ್ಟ ನಾಯಿಗಳು| ಪ್ರಾಮಾಣಿಕತೆಗೆ ಉತ್ತಮ ಉದಾಹರಣೆ ಮತ್ತೊಂದಿಲ್ಲ

ಪಾಟ್ನಾ[ಏ.19]: ಒಂದೆಡೆ ಮಾನವರು ಪರಸ್ಪರ ನಂಬಿಕೆ ಇಟ್ಟುಕೊಳ್ಳಲಾಗದೆ, ಹೊಡೆದಾಡಿಕೊಳ್ಳುತ್ತಿದ್ದಾರೆ. ಆದರೆ ಮತ್ತೊಂದೆಡೆ ನಾಯಿಗಳು ಪ್ರಾಮಾಣಿಕತೆ ಮೆರೆಯುವ ನಿದರ್ಶನಗಳು ಕೇಳಿ ಬರುತ್ತವೆ. ಬಿಹಾರದ ಬಾಗಲ್ಪುರದಲ್ಲಿ ಇಂತಹುದೇ ಒಂದು ಮನಕಲುಕುವ ಘಟನೆ ನಡೆದಿದೆ. ಸಾಕು ನಾಯಿಗಳು ತನ್ನ ಮಾಲೀಕ ಹಾಗೂ ಆತನ ಕುಟುಂಬವನ್ನು ಕಾಪಾಡುವ ಯತ್ನದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿವೆ. 

35 ಜನರ ಪ್ರಾಣ ಕಾಪಾಡಿ ಜೀವತೆತ್ತ ಸಾಕುನಾಯಿ!

ಮಾಯಾಗಂಜ್ ಆಸ್ಪತ್ರೆಯ ವೈದ್ಯೆ ಡಾ. ಪೂನಂ ತಮ್ಮ ಮನೆಯಲ್ಲಿ ನಾಲ್ಕು ನಯಿಗಳನ್ನು ಸಾಕಿದ್ದರು. ಈ ವೈದ್ಯೆ ಹಾಗೂ ಅವರ ಕುಟುಂಬವನ್ನು ಕಾಪಾಡಲು ಈ ನಾಯಿಗಳು ತಮ್ಮ ಪ್ರಾಣ ಬಲಿ ನೀಡಿವೆ. ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಡಾ. ಪೂನಂ 'ಮಂಗಳವಾರ ತಡರಾತ್ರಿ ನಮ್ಮ ಮನೆಯಲ್ಲಿದ್ದ ನಾಯಿಗಳು ಒಂದೇ ಸಮನೆ ಬೊಗಳಲಾರಂಭಿಸಿದ್ದವು. ತುಂಬಾ ಸಮಯವಾಗಿದ್ದರೂ ನಾಯಿಗಳ ಬೊಗಳುವಿಕೆ ಕಡಿಮೆಯಾಗಿರಲಿಲ್ಲ. ಹೀಗಾಗಿ ಹೊರಗೆ ಬಂದು ನೋಡಿದಾಗ ನಾಯಿಗಳೆಲ್ಲಾ ನಾಗರ ಹಾವಿನೊಂದಿಗಡೆ ಕಾದಾಟಕ್ಕಿಳಿದಿರುವುದು ಗಮನಕ್ಕೆ ಬಂದಿದೆ. ಈ ಜಗಳದಲ್ಲಿ ನಾಯಿಗಳು ನಾಗರ ಹಾವಿಗೆ ಗಾಯಗಳನ್ನೂ ಮಾಡಿದ್ದವು. ನೋಡ ನೋಡುತ್ತಿದ್ದಂತೆಯೇ ಮೂರು ನಾಯಿಗಳು ಬಿದ್ದವು. ಆದರೆ ನಾಲ್ಕನೇ ನಾಯಿ ಹಾವಿನೊಂದಿಗೆ ಕಾದಾಟ ಮುಂದುವರೆಸಿತ್ತು. ಅಂತಿಮವಾಗಿ ಆ ನಾಯಿ ನಾಗರ ಹಾವನ್ನು ಕೊಲ್ಲಲು ಯಶಸ್ವಿಯಾಗಿತ್ತು' ಎಂದಿದ್ದಾರೆ. 

ರೈಲು ಅಪಘಾತದಲ್ಲಿ ಮಾಲೀಕ ನಿಧನ: ಶವ ಬಿಟ್ಟು ಕದಲದ ನಾಯಿ!: ವಿಡಿಯೋ ವೈರಲ್

ಈ ಕಾದಾಟದಲ್ಲಿ ನಾಗರ ಹಾವು ಈ ನಾಯಿಗಳ ಮೇಲೆ ದಾಳಿ ನಡೆಸಿತ್ತು. ಮೈಗೆ ವಿಷವೇರಿದ ಕಾರಣ ನಾಲ್ಕೂ ನಾಯಿಗಳು ಸಾವನ್ನಪ್ಪಿವೆ. ನಾಯಿ ಹಾಗೂ ನಾಗರ ಹಾವಿನ ನಡುವಿನ ಈ ಕಾದಾಟ ಮನೆಗೆ ಹಾಕಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ನಾಲ್ಕು ನಾಯಿಗಳು ಚಿಕ್ಕಂದಿನಿಂದ ಇದೇ ಮನೆಯಲ್ಲಿ ಬೆಳೆದಿದ್ದವು ಎಂದು ಪೂನಂರವರ ಅಣ್ಣ ಹಾಗೂ ಅತ್ತಿಗೆ ತಿಳಿಸಿದ್ದಾರೆ. ಮಾಲೀಕರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಬಲಿ ನೀಡಿದ ನಾಯಿಗಳ ಪ್ರಾಮಾಣಿಕತೆಗೆ ಕಂಡ ಜನರೆಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

click me!