
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಾಧನೆಯನ್ನು ಹಾಡಿ ಹೊಗಳಿದ್ದಾರೆ. ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವೈಮನಸ್ಸು ತಾರಕಕ್ಕೇರಿರುವಾಗ ದಿನೇಶ್ ಗುಂಡೂರಾವ್ ಹೆಬ್ಬಾಳ್ಕರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರು ಮಹಾನಗರ ಮಹಿಳಾ ಸಂಘಟನೆಯು ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಮಹಿಳಾ ಶಾಸಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ಕಾಂಗ್ರೆಸ್‌ನಿಂದ ಈ ಬಾರಿ ಹೆಬ್ಬಾಳ್ಕರ್, ಸೌಮ್ಯಾರೆಡ್ಡಿ, ಅಂಜಲಿ ನಿಂಬಾಳ್ಕರ್, ರೂಪಾ ಶಶಿಧರ್, ಖನೀಜ್ ಫಾತಿಮಾ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು 20 ವರ್ಷದಿಂದ ಗೆಲ್ಲದ ಗೆಲುವು ಸಾಧಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಕಷ್ಟುಶ್ರಮ ಹಾಕಿದ್ದರು. ಯಾರೂ ನಿರೀಕ್ಷಿಸದ ಮಾದರಿಯಲ್ಲಿ ಅಂತಿಮವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲುವಿನ ಸಾಧನೆ ಮಾಡಿದರು ಎಂದು ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಮಹಿಳೆಯರು ಸಾಧನೆ ಮಾಡುತ್ತಾರೆ ಎಂದು ಗೊತ್ತಿದೆ. ಆದರೆ ಬಹುತೇಕ ಮಹಿಳೆಯರ ಬಗ್ಗೆ ಇನ್ನೂ ಸಮಾಜದಲ್ಲಿ ಸಂಕುಚಿತ ಮನೋಭಾವನೆ ಇದೆ. ಹಾಗಾಗಿ ಮಹಿಳೆಯರಿಗೆ ಸೂಕ್ತ ಸ್ಥಾನ ಮಾನ ನೀಡಿ ಅವರು ಮುಂದೆ ಬರಲು ಅನುವು ಮಾಡಿಕೊಡಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಇದೇ ಕಾರಣಕ್ಕಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತಂದಿದೆ. ಇದೇ ರೀತಿ ವಿಧಾನಸಭಾ ಮತ್ತು ವಿಧಾನಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆಯಲ್ಲೂ ಮೀಸಲಾತಿ ಕಲ್ಪಿಸಬೇಕಾಗಿದೆ ಎಂದರು.
ಗಂಡಸರು ಸೋಲುವುದೇ ಇಲ್ಲವೇ:
ಇದೇ ವೇಳೆ ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡದ ಬಗ್ಗೆ ಮಹಿಳಾ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಶಾಸಕಿ ರಾಣಿ ಸತೀಶ್ ಮಾತನಾಡಿ, ಮಹಿಳೆಯರು ಗೆಲ್ಲಲ್ಲ ಎಂದು ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ. ಹಾಗಾದರೆ ಗಂಡಸರು ನಿಂತರೆ ಸೋಲುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಮಹಿಳೆಯರು ಮೊದಲು ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು. ಬಿಜೆಪಿಯಂತಹ ಪಕ್ಷಗಳು ಮಹಿಳೆಯರಲ್ಲಿ ಹಿಂದುತ್ವದ ವಿಷ ಬೀಜ ಬಿತ್ತುತ್ತಿವೆ. ಇಂತಹ ವಿಷ ಬೀಜ ಬಿತ್ತುವ ಬಿಜೆಪಿ ವಿರುದ್ಧ ಪ್ರಚಾರದ ಮೂಲಕ ಪ್ರತಿಭಟನೆ ಮಾಡಬೇಕಾಗುತ್ತದೆ. ಬಿಜೆಪಿಯ ಹೆಣ್ಣುಮಕ್ಕಳು ಹಬ್ಬದ ನೆಪದಲ್ಲಿ ಅರಿಶಿಣ, ಕುಂಕುಮ ನೀಡಿ ಗಿಮಿಕ್ ಮಾಡುತ್ತಾರೆ. ನಾವೂ ಹಾಗೆ ಮಾಡಬೇಕು ಎಂದು ಕರೆ ನೀಡಿದರು.
ಜಯನಗರ ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ನಮ್ಮ ತಂದೆ ರಾಜಕಾರಣಿ ಆಗಿಲ್ಲದಿದ್ದರೆ ನನಗೂ ಈ ಅವಕಾಶ ಸಿಗುತ್ತಿರಲಿಲ್ಲ ಎನಿಸುತ್ತಿದೆ. ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳೇ ದುಷ್ಮನ್ ಎನ್ನುವಂತಾಗಿದೆ. ಮುಂದಿನ ದಿನಗಳಲ್ಲಿ ನಾವು ಸಹೋದರಿಯರಂತೆ ಇರೋಣ. ಈಗ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ನಾನು ಒಬ್ಬಳೇ ಮಹಿಳಾ ಶಾಸಕಿ. ಈ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಶಾಸಕರು ಆಯ್ಕೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಪಿಎಲ್‌ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಹೆಬ್ಬಾಳ್ಕರ್ ಹಾಗೂ ಅನ್ಯ ಕಾರಣಗಳಿಂದಾಗಿ ಖನೀಜ್ ಫಾತಿಮಾ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.
ಅಶಿಸ್ತು ಮುಂದುವರೆದರೆ ಕ್ರಮ: ದಿನೇಶ್
ಬೆಳಗಾವಿ ವಿಚಾರದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದಲ್ಲಿ ಎಲ್ಲರೂ ಪಕ್ಷದ ಶಿಸ್ತಿಗೆ ಬದ್ಧವಾಗಿರಬೇಕು. ಅಶಿಸ್ತು ಮುಂದುವರೆದರೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಕಳೆದ ವಾರದಿಂದ ಬಹಿರಂಗ ಹೇಳಿಕೆಗಳು ಬರುತ್ತಿವೆ. ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ಸಹಿಸುವುದಿಲ್ಲ. ಪಕ್ಷದಲ್ಲಿ ಆ ಬಣ ಈ ಬಣ ಎನ್ನುವುದು ಸರಿಯಲ್ಲ. ಅವರ ಮೇಲುಗೈ, ಇವರ ಮೇಲುಗೈ ಎಂಬ ಪ್ರಶ್ನೆಯೇ ಬರುವುದಿಲ್ಲ. ಎಲ್ಲರೂ ಸಹ ಪಕ್ಷದ ಶಿಸ್ತಿಗೆ ಬದ್ಧವಾಗಿರಬೇಕು. ಬಹಿರಂಗ ಹೇಳಿಕೆಗಳನ್ನು ಮುಂದುವರೆಸಿ ಶಿಸ್ತು ಉಲ್ಲಂಘಿಸಿದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.