ಬಿಎಸ್'ವೈಗೆ ಅಸಂತೋಷ ಉಂಟುಮಾಡುತ್ತಿರುವ ತೆರೆಮರೆಯ ಸಂತೋಷ

Published : Jan 23, 2017, 08:35 AM ISTUpdated : Apr 11, 2018, 12:53 PM IST
ಬಿಎಸ್'ವೈಗೆ ಅಸಂತೋಷ ಉಂಟುಮಾಡುತ್ತಿರುವ ತೆರೆಮರೆಯ ಸಂತೋಷ

ಸಾರಾಂಶ

ಅನಂತಕುಮಾರ್‌ ವಿರುದ್ಧ ರಾಜಕೀಯ ನಡೆಸುತ್ತಿದ್ದ ದಿನಗಳಲ್ಲಿ ಯಡಿಯೂರಪ್ಪರಿಗೆ ಆಪ್ತರಾಗಿದ್ದ ಸಂತೋಷ್‌ ಈಗ ಅವರೊಂದಿಗೆ ಮಾತನಾಡುವುದು ಬಿಟ್ಟು ತಿಂಗಳುಗಳೇ ಕಳೆದಿವೆ...

ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ­ನವರ ನಡುವೆ ನಡೆಯುತ್ತಿರುವ ಬ್ರಿಗೇಡ್‌ ಗದ್ದಲ ದೆಹಲಿಯ ಹೈಕಮಾಂಡ್‌ ಸಮಾಲೋಚನಾ ಕೊಠಡಿ­ಯಲ್ಲಿ ಸದ್ದಿಲ್ಲದೇ ಪ್ರಭಾವ ಬೀರತೊಡಗಿದೆ. ಗದ್ದಲ ಇದೇ ರೀತಿ ಮುಂದುವರಿದರೆ ಹೇಗೆ ಎಂಬ ಚಿಂತೆ ಪಕ್ಷದ ವರಿಷ್ಠರನ್ನು ಕಾಡುತ್ತಿದೆ. ಒಂದೆಡೆ, ಪಕ್ಷದ ಗೆಲುವಿಗೆ ಯಡಿಯೂರಪ್ಪ ಬೇಕೇಬೇಕು. ಇನ್ನೊಂದೆಡೆ ಅವರಿಗೆ ಪಕ್ಷದ ಸಂಪೂರ್ಣ ಚುಕ್ಕಾಣಿ ನೀಡುವುದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಈ ಇಕ್ಕಳದಲ್ಲಿರುವ ಕೇಂದ್ರ ಬಿಜೆಪಿ ನಾಯಕರು ಈಗ ಕ್ಯಾರೆಟ್‌ ಆಂಡ್‌ ಸ್ಟಿಕ್‌ ಸೂತ್ರಕ್ಕೆ ಮೊರೆಹೋದಂತೆ ಕಾಣುತ್ತಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್‌ ಯಡಿಯೂರಪ್ಪನವರಿಗೆ ಮುಂದಿನ ಚುನಾವಣೆಗೆ ಟಿಕೆಟ್‌ ಹಂಚುವಲ್ಲಿ ಫ್ರೀ ಹ್ಯಾಂಡ್‌ ಕೊಡಬಾರದು ಎಂಬ ಒತ್ತಡ ಬಿಜೆಪಿ ಹೈಕಮಾಂಡ್‌ ಮೇಲೆ ಹೆಚ್ಚುತ್ತಿದೆ. ಹಾಗೆ ಯಡಿಯೂರಪ್ಪ­ನವರಿಗೆ ಮುಕ್ತ ಅವಕಾಶ ಸಿಕ್ಕಿದರೆ ಅವರ ಆಪ್ತರಿಗೆ ಮಾತ್ರ ಹೆಚ್ಚು ಅವಕಾಶ ಸಿಕ್ಕಿ ತಮ್ಮವರಿಗೆ ಅನ್ಯಾಯವಾಗುತ್ತದೆ ಎಂಬ ವಾದ ಬಿಜೆಪಿ ಹೈಕಮಾಂಡನ್ನೂ ತಟ್ಟಿದೆ. ಇದೇ ಹಿನ್ನೆಲೆಯಲ್ಲಿ, ಇತ್ತೀಚೆಗೆ ಸಂಘ ಪರಿವಾರದ ಹಿನ್ನೆಲೆಯ ರಾಮ್‌ ಲಾಲ್‌ ಅವರು ಅಮಿತ್‌ ಶಾರನ್ನು ಭೇಟಿ­ಯಾದಾಗ, ‘‘ಚಿಂತೆ ಮಾಡಬೇಡಿ, ಟಿಕೆಟ್‌ ನಿರ್ಧಾರ ದೆಹಲಿಯಲ್ಲಿಯೇ ಫೈನಲ್ ಆಗುತ್ತದೆ. ನೀವು ಸುಮ್ಮನೆ ಕೆಲಸ ಮಾಡಿಕೊಂಡು ಹೋಗಿ, ಹೊರಗಡೆ ಹೇಳಿಕೆ ಕೊಡಬೇಡಿ'' ಎಂಬ ಮಾರ್ಮಿಕ ಭರವಸೆ ಸಿಕ್ಕಿದೆಯಂತೆ.

‘‘ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಾವು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿಲ್ಲ. ಆದರೆ ಯಡಿಯೂರಪ್ಪನವರನ್ನು ಎರಡು ವರ್ಷ ಮೊದಲೇ ಘೋಷಿಸಿದೆವು. ಆದರೆ ರಾಜ್ಯದಲ್ಲಿ ಎದ್ದಿರುವ ಭಿನ್ನಮತದ ಗದ್ದಲ ಪಕ್ಷದ ದೃಷ್ಠಿಯಿಂದ ಖಂಡಿತಾ ಒಳ್ಳೆಯದಲ್ಲ. ಹೀಗಾದಲ್ಲಿ ಮುಂದೆ ತುಂಬಾ ತೊಂದರೆಯಾಗುತ್ತದೆ ನೋಡಿ, ಸುಧಾರಿಸಿಕೊಳ್ಳಿ'' ಎಂದು ಅಮಿತ್‌ ಶಾ ಕರ್ನಾಟಕದ ಬಿಜೆಪಿ ನಾಯಕರಿಗೆ ತಿಳಿಹೇಳಿದ್ದಾರೆ. ‘‘ಮೊದಲು ಯಡಿಯೂರಪ್ಪನವರು ಶೋಭಾ ಮಾತನ್ನು ಕೇಳುವುದು ಕಡಿಮೆ ಮಾಡಲಿ'' ಎಂಬ ರಾಜ್ಯ ಬಿಜೆಪಿ ನಾಯಕರ ಬೇಡಿಕೆಯನ್ನು ಅಮಿತ್‌ ಶಾ ಗಂಭೀರಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ದೆಹಲಿಯಲ್ಲಿ ಯಡಿಯೂರಪ್ಪನವರ ಆಪದ್ಭಾಂಧವ ಅರುಣ್‌ ಜೇಟ್ಲಿ ಪ್ರಭಾವ ಕಡಿಮೆಯಾಗಿರುವುದು ಯಡಿಯೂರಪ್ಪ ಬಣಕ್ಕೆ ಅಂತಹ ಹುರುಪಿನ ಸುದ್ದಿಯೇನೂ ಅಲ್ಲ.

ತೆರೆಮರೆಯ ಸಂತೋಷ್‌ ಸಂಕಟ: ಸದ್ಯಕ್ಕೆ ಯಡಿಯೂರಪ್ಪ­ನವರಿಗೆ ಅತ್ಯಂತ ಸಿಟ್ಟು ಬರಿಸುವ ಹೆಸರುಗಳೆಂದರೆ ಈಶ್ವರಪ್ಪ ಮತ್ತು ಸಂಘ ಪ್ರಚಾರಕ ಸಂತೋಷರದು. ಯಡಿಯೂರಪ್ಪ ಆಪ್ತರು ಹೇಳುವ ಪ್ರಕಾರ ಒಂದು ಕಾಲಕ್ಕೆ ಅನಂತ್‌ ಕುಮಾರ್‌ ವಿರುದ್ಧ ರಾಜ­ಕೀಯ ನಡೆಸುತ್ತಿದ್ದ ದಿನಗಳಲ್ಲಿ ಯಡಿಯೂರಪ್ಪರಿಗೆ ಅತ್ಯಂತ ಆಪ್ತರಾಗಿದ್ದ ಸಂಘ ಪರಿವಾರದ ಪ್ರಚಾರಕ ಸಂತೋಷ್‌ ಈಗ ಬಿಎಸ್‌'ವೈ ಜೊತೆ ಮಾತನಾಡುವುದನ್ನು ಬಿಟ್ಟು ತಿಂಗಳುಗಳೇ ಕಳೆದಿವೆಯಂತೆ. ಸಂತೋಷ್‌ ಹೆಸರೆತ್ತಿ­ದರೆ ಸಾಕು ಬಿಎಸ್‌'ವೈ ಸಿಟ್ಟು ಮಾಡಿಕೊಳ್ಳುತ್ತಾರಂತೆ. ಈಶ್ವರಪ್ಪ ಇಷ್ಟೆಲ್ಲಾ ಮುಂದೆ ಹೋಗಲು ತೆರೆಮರೆಯ­ಲ್ಲಿರುವ ಸಂತೋಷ್‌ ಅವರೇ ಕಾರಣ ಎಂದು ಆಪ್ತರ ಎದುರು ಬಿಎಸ್‌'ವೈ ಹೇಳಿಕೊಂಡಿದ್ದಾರೆ. ಆದರೆ ಯಡಿ­ಯೂರಪ್ಪ ಎಷ್ಟೇ ವಿರೋಧಿಸಿದರು ಕೂಡ ಸಾದಾ ಪಂಚೆ ಜುಬ್ಬಾ ಹಾಕಿಕೊಂಡು ತೆರೆಮರೆಯಿಂದಲೇ ಕೆಲಸ ಮಾಡಿ­ಸುವ ಸಂತೋಷ್‌'ಗೆ ಆರ್‌ಎಸ್‌ಎಸ್‌ ಬಲ ಇದ್ದೇ ಇದೆ ಎನ್ನು­ವುದೇ ಯಡಿಯೂರಪ್ಪನವರಿಗೆ ದೊಡ್ಡ ತೊಡಕು. 

ಕಾತರಕಿ ರಾಜಿನಾಮೆ: ಕಳೆದ 27 ವರ್ಷಗಳಿಂದ ಮಹದಾಯಿ, ಕಾವೇರಿ, ಕೃಷ್ಣಾ ವಿಚಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ಜಲ ತಜ್ಞ ವಕೀಲ ಮೋಹನ್‌ ಕಾತರಕಿ ಅವರು ಸಚಿವ ಎಂಬಿ ಪಾಟೀಲ್ ಮತ್ತು ಅಡ್ವೊಕೇಟ್‌ ಜನರಲ್ ಮಧುಸೂದನ್‌ ನಾಯಕ ಮೇಲೆ ಮುನಿಸಿಕೊಂಡು ರಾಜ್ಯದ ತಂಡಕ್ಕೆ ರಾಜೀನಾಮೆ ನೀಡಿದ್ದಾರೆ. ಸುಪ್ರೀಂ ಕೋರ್ಟ್‌'ನಲ್ಲಿ ಫಾಲಿ ನಾರಿಮನ್‌ ವಾದ ಮಾಡುತ್ತಾರಾದರೂ ಮೊದಲಿಗೆ ಮೋಹನ ಕಾತರಕಿಯೇ ಗ್ರೌಂಡ್‌ ವರ್ಕ್ ಮಾಡುತ್ತಿದ್ದರು. ತಮ್ಮನ್ನು ಹೇಳದೆ ಕೇಳದೆ ಸಚಿವರಾದ ಎಂ ಬಿ ಪಾಟೀಲ್ ಮತ್ತು ಜಯಚಂದ್ರ ಅವರು ಶನಿವಾರ ಫಾಲಿ ನಾರಿಮನ್‌ ಅವರನ್ನು ಭೇಟಿಯಾಗಿರುವುದು ಕಾತರಕಿ ಸಿಟ್ಟಿಗೆ ಕಾರಣ. ಆದರೆ ಇನ್ನೊಬ್ಬ ವಕೀಲ ಬೃಜೇಶ್‌ ಕಾಳಪ್ಪ ವಕೀಲರ ತಂಡಕ್ಕೆ ಮರಳಿದ ನಂತರ ಕಾತರಕಿ ರಾಜಿನಾಮೆ ನೀಡಿರುವುದು ಹೊಸ ಊಹೆಗಳಿಗೂ ಕಾರಣವಾಗಲಿದೆ. 

ಡಿಕೆಶಿ ಹಿಂದಿ ಪಾಠ: ಒಂದು ಕಾಲದಲ್ಲಿ 10 ಜನಪಥ್‌'ನಲ್ಲಿ ಸೋನಿಯಾ ಅವರನ್ನು ಭೇಟಿಯಾಗಲು ಒಂದು ವಾರ ಕಾಯುವಷ್ಟು ಸಂಬಂಧ ಕೆಡಿಸಿಕೊಂಡಿದ್ದ ಡಿಕೆ ಶಿವಕುಮಾರ್ ಈಗ ರಾಹುಲ್‌ ಗಾಂಧಿ ಅವರಿಗೆ ಮಾತ್ರ ಏನೋ ಮೋಡಿ ಮಾಡಿ ಆತ್ಮೀಯರಾಗಿದ್ದು ವಿಶೇಷ. ದೆಹಲಿಯ ಜನವೇದನಾ ಸಮಾವೇಶದಲ್ಲಿ ಹೈಕಮಾಂಡ್‌ ಸಿದ್ದುಗೆ ಮಾಡಿದ ಮುಜುಗರ ಮತ್ತು ಡಿಕೆಶಿಗೆ ನೀಡಿದ ಪ್ರಾತಿನಿಧ್ಯ ಕರ್ನಾಟಕದ ಕಾಂಗ್ರೆಸ್‌ ನಾಯಕರ ಕಣ್ಣು ಕುಕ್ಕಿತ್ತು. ಒಂದು ಕಡೆ ಕೆಪಿಸಿಸಿ ಅಧ್ಯಕ್ಷರಾಗಲು ಅಹಮದ್‌ ಪಟೇಲ್‌'ರಿಂದ ಹಿಡಿದು ಗುಲಾಂ ನಬಿವರೆಗೆ ದೆಹಲಿ ನಾಯಕರ ಮನೆಗಳಿಗೆ ಹಿಂಬಾಲಕರನ್ನು ಕಳುಹಿಸುತ್ತಿರುವ ಡಿಕೆ ಶಿವಕುಮಾರ್‌ ಹಿಂದಿ ಮನೆ ಪಾಠವನ್ನು ಹೇಳಿಸಿಕೊಳ್ಳಲು ತೀರ್ಮಾನಿ­ಸಿದ್ದಾರೆ. ದೆಹಲಿಯಲ್ಲಿ ಬಾಳಿ ಬೆಳೆಯಬೇಕಾದರೆ ಹಿಂದಿ ಬೇಕೇ ಬೇಕು ಎಂದು ಶುದ್ಧ ಹಿಂದಿ ಕಲಿಯಲು ಪರಿಶ್ರಮ ಪಡುತ್ತಿದ್ದೇನೆ ಎಂದು ಸ್ವತಃ ಅವರು ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ.

ರಾಜ್ಯಪಾಲ ಹಂಬಲ: ವಿಧಾನ ಪರಿಷತ್‌ ಸಭಾಪತಿ ಡಿಎಚ್‌ ಶಂಕರಮೂರ್ತಿ ರಾಜ್ಯಪಾಲರಾಗಲು ಸಿದ್ಧರಾಗಿ ಕುಳಿತಿದ್ದಾರೆ. ಆದರೆ ದೆಹಲಿ ನಾಯಕರು ಶಂಕರ ಮೂರ್ತಿ ಹೆಸರಿನ ಬಗ್ಗೆ ಅಷ್ಟೊಂದು ಮನಸ್ಸು ತೋರಿಸುತ್ತಿಲ್ಲ. ಆದರೆ ಹಠ ಬಿಡದ ಶಂಕರ ಮೂರ್ತಿಗಳು ಈ 80ರ ವಯಸ್ಸಿನಲ್ಲಿ ಕೂಡ ತಮ್ಮ ಬಯೋಡೇಟಾ ಹಾಳೆ ಹಿಡಿದುಕೊಂಡು ರಾಜನಾಥ್‌ ಸಿಂಗ್‌, ಅರುಣ್‌ ಜೇಟ್ಲಿ ಮನೆಗಳಿಗೆ ಹೋಗಿ ಜೀವನದಲ್ಲಿ ಒಮ್ಮೆ ರಾಜ್ಯಪಾಲರನ್ನಾಗಿ ಮಾಡಿ ಎಂದು ಗೋಗರೆಯುತ್ತಿದ್ದಾರೆ. ಎಷ್ಟೇ ವಯಸ್ಸಾದರೂ ರಾಜಕಾರಣದಲ್ಲಿ ಹೊಸ ಖುರ್ಚಿಯ ಆಸೆ ಬಿಡೋದಿಲ್ಲ ಬಿಡಿ. 

ಸಂಸದರ ದೋಸ್ತಿ: 2014ರಲ್ಲಿ ಆರಿಸಿ ಬಂದಿರುವ ಸಂಸದರಲ್ಲಿ ಹೆಚ್ಚು ಗಮನ ಸೆಳೆಯುವ ದೋಸ್ತಿ ಎಂದರೆ ಬಿಜೆಪಿಯಲ್ಲಿ ಮೈಸೂರು ಸಂಸದ ಪ್ರತಾಪ್‌ ಸಿಂಹ ಮತ್ತು ಬೀದರ್‌ ಸಂಸದ ಭಗವಂತ್‌ ಖೂಬಾ ಅವರದು. ಬೆಳಗಿನ ವಾಕಿಂಗ್‌ ಸೆಂಟ್ರಲ್‌ ಹಾಲ್‌'ನಲ್ಲಿ, ಟಾಕಿಂಗ್‌ ಸಂಜೆ ಕರ್ನಾಟಕ ಭವನದಲ್ಲಿ, ಜಿಮ್ಮಿಂಗ್‌ನಿಂದ ಹಿಡಿದು ರಾತ್ರಿ ಕನೋಟ್‌ ಪ್ಲೇಸ್‌ನಲ್ಲಿ ಶಾಪಿಂಗ್‌ವರೆಗೆ ಪ್ರತಾಪ್‌ ಸಿಂಹ ಮತ್ತು ಭಗವಂತ್‌ ಖೂಬಾ ಹೆಚ್ಚು ಕಡಿಮೆ ಜೊತೆಯಾಗಿಯೇ ಇರುತ್ತಾರೆ. ಅಂದ ಹಾಗೆ ಪ್ರತಾಪ್‌ ಸಿಂಹ ಮತ್ತು ಭಗವಂತ್‌ ಖೂಬಾ ನಡುವಿನ ಗೆಳೆತನಕ್ಕೆ ಮುಖ್ಯ ಕಾರಣ ಫಿಟ್ನೆಸ್‌ ಪ್ರೇಮವಂತೆ. 

10 ರಾಜಾಜಿ ಮಾರ್ಗ 
ಜುಲೈನಲ್ಲಿ ನಿವೃತ್ತರಾದ ನಂತರ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಅಬ್ದುಲ್‌ ಕಲಾಂ ವಾಸಿಸುತ್ತಿದ್ದ 10 ರಾಜಾಜಿ ಮಾರ್ಗದಲ್ಲಿಯೇ ವಾಸ್ತವ್ಯ ಹೂಡಲು ತೀರ್ಮಾನಿಸಿದ್ದು, ಅಲ್ಲಿ ಸದ್ಯಕ್ಕೆ ಇರುವ ಕೇಂದ್ರ ಸಚಿವ ಮಹೇಶ್‌ ಶರ್ಮಾ ಅವರಿಗೆ ಮನೆ ಖಾಲಿ ಮಾಡಲು ಹೇಳಲಾಗಿದೆ. ಪ್ರಣಬ್‌ ಪುತ್ರಿ ಶರ್ಮಿಷ್ಠಾ ಮುಖರ್ಜಿ ಈಗಾಗಲೇ ಹೋಗಿ ಮನೆ ನೋಡಿಕೊಂಡು ಬಂದಿದ್ದಾರಂತೆ. ಮಾಚ್‌ರ್‍ನಲ್ಲಿ ಮಹೇಶ್‌ ಶರ್ಮಾ ಮನೆ ಬಿಟ್ಟನಂತರ ಪ್ರಣಬ್‌ ಅಭಿರುಚಿಗೆ ತಕ್ಕಂತೆ ಮನೆ ನವೀಕರಣ ಮಾಡಲು ತೀರ್ಮಾನಿಸಲಾಗಿದೆ. ಮೊದಲ ಮಹಡಿಯಲ್ಲಿ ತನಗೆ ಗ್ರಂಥಾಲಯಕ್ಕೆ ದೊಡ್ಡ ಜಾಗ ಬೇಕು ಎಂದು ಪ್ರಣಬ್‌ ದಾ ಹೇಳಿದ್ದಾರಂತೆ. 

ಸೆಲ್ಫ್ ಡ್ರೈವ್‌ ಹರಿ: ದೆಹಲಿಯ ರಸ್ತೆಗಳಲ್ಲಿ ತಮ್ಮ ಕಾರನ್ನು ತಾವೇ ಸೆಲ್ಫ್ ಡ್ರೈವ್‌ ಮಾಡುತ್ತಾ ಓಡಾಡುವ ಕೆಲವೇ ರಾಜಕಾರಣಿಗಳಲ್ಲಿ ರಾಜ್ಯಸಭಾ ಸದಸ್ಯ ಬಿಕೆ ಹರಿಪ್ರಸಾದ್‌ ಕೂಡ ಒಬ್ಬರು. ಕಳೆದ 20 ವರ್ಷಗಳಿಂದ ದೆಹಲಿಯಲ್ಲಿದ್ದರೂ ಹರಿಪ್ರಸಾದ್‌ ತಮ್ಮ ಕಾರನ್ನು ತಾವೇ ಸೆಲ್ಫ್ ಡ್ರೈವ್‌ ಮಾಡುತ್ತಾರೆ. ಜೊತೆಗೆ ಯಾವುದೇ ಆಪ್ತ ಕಾರ್ಯದರ್ಶಿಯನ್ನೂ ಇಟ್ಟುಕೊಳ್ಳದೆ ಎಷ್ಟೇ ಬ್ಯುಸಿ ಇದ್ದರೂ ತಾವೇ ಫೋನ್‌ ರಿಸೀವ್‌ ಮಾಡುತ್ತಾರೆ ಎನ್ನುವುದು ವಿಶೇಷ.

- ಪ್ರಶಾಂತ್ ನಾತು, ಸುವರ್ಣನ್ಯೂಸ್, ದೆಹಲಿ
(epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿರಿಯಾ: ಶುಕ್ರವಾರದ ನಮಾಜ್ ವೇಳೆ ಮಸೀದಿಯಲ್ಲಿ ಸ್ಫೋಟ, 8 ಸಾವು, 18 ಮಂದಿಗೆ ಗಾಯ, ಎಲ್ಲೆಡೆ ಆಂಬ್ಯುಲೆನ್ಸ್ ಸೈರನ್‌ಗಳದ್ದೇ ಸದ್ದು!
ರೋಡಲ್ಲಿ ಹೋಗುತ್ತಿದ್ದ 7 ವರ್ಷದ ಬಾಲಕಿಗೆ ಗುದ್ದಿದ ಕಾರು, 10 ಅಡಿ ದೂರಕ್ಕೆ ಹಾರಿಬಿದ್ದ ಮಗು!