ಕಾಂಗ್ರೆಸ್ ನೊಗ ಹೊರುವವರಾರು?: ಖರ್ಗೆ ಅಂದಾರು ಕೆಲವರು!

By Web DeskFirst Published Jul 3, 2019, 7:17 PM IST
Highlights

ಕೊನೆಗೂ ರಾಹುಲ್ ಗಾಂಧಿ ರಾಜೀನಾಮೆ ಅಂಗೀಕಾರ| ರಾಹುಲ್ ರಾಜೀನಾಮೆ ಸ್ವೀಕರಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ| ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಮೋತಿಲಾಲ್ ವೋರಾ ನೇಮಕ| ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸಿಗಲಿದೆಯಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ?| ಖರ್ಗೆ ನೇಮಕಕ್ಕೆ ಕಾಂಗ್ರೆಸ್’ನಲ್ಲಿ ಹೆಚ್ಚಿದ ಒಲವು| ಕೈ ಅಧ್ಯಕ್ಷ ಗಾದಿ ರೇಸ್’ನಲ್ಲಿದ್ದಾರೆ ಸುಶೀಲ್ ಕುಮಾರ್ ಶಿಂಧೆ| 

ನವದೆಹಲಿ(ಜು.03): ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನೀಡಿದ್ದ ರಾಜೀನಾಮೆಯನ್ನು ಕಾಂಗ್ರೆಸ್ ಕೊನೆಗೂ ಒಪ್ಪಿಕೊಂಡಿದೆ. ರಾಹುಲ್ ರಾಜೀನಾಮೆ ನೀಡುವುದು ಬೇಡ ಎನ್ನುತ್ತಿದ್ದ ಕೈ ನಾಯಕರು ಇದೀಗ, ಹೊಸ ಅಧ್ಯಕ್ಷರ ನೇಮಕದಲ್ಲಿ ಬ್ಯುಸಿಯಾಗಿದ್ದಾರೆ.

ರಾಹುಲ್ ರಾಜೀನಾಮೆಯನ್ನು ಸ್ವೀಕರಿಸಿರುವ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಈಗಾಗಲೇ ಮೋತಿಲಾಲ್ ವೋರಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಆದರೆ ಸೂಕ್ತ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಜವಾಬ್ದಾರಿ ಇದೀಗ ಕೈ ನಾಯಕರ ಮೇಲಿದೆ.

ರಾಹುಲ್ ರಾಜೀನಾಮೆ ಬಳಿಕ ಗಾಂಧಿ ಕುಟುಂಬಕ್ಕೆ ಸೇರಿಸಲ್ಲದ ವ್ಯಕ್ತಿಯೊಬ್ಬರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅಧ್ಯಕ್ಷ ಗಾದಿಗೆ ಹೊಸ ಮುಖ ಹುಡುಕುತ್ತಿರುವ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರತ್ತ ದೃಷ್ಟಿ ನೆಟ್ಟಿದೆ.

ಹೌದು, ಜೀವಮಾನವೀಡಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದಿರುವ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಕಾಂಗ್ರೆಸ್ ಉತ್ಸುಕವಾಗಿದೆ. ಕಳೆದ ಬಾರಿಯ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದ ಖರ್ಗೆ, ಪಕ್ಷವನ್ನೂ ಅಷ್ಟೇ ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದು ಕೆಲ ಕಾಂಗ್ರೆಸ್ಸಿಗರ ವಾದವಾಗಿದೆ.

ಅಲ್ಲದೇ ದಕ್ಷಿಣ ಭಾರತದ ಮೂಲ ಮತ್ತು ದಲಿತ ನಾಯಕ ಎಂಬುದು ಕೂಡ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗೆ ಇರುವ ಪ್ರಮುಖ ಕಾರಣ ಎನ್ನಲಾಗಿದೆ. ಈ ಮಧ್ಯೆ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ಸಿಗ ಸುಶೀಲ್ ಕುಮಾರ್ ಶಿಂಧೆ ಅವರ ಹೆಸರೂ ಕೂಡ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ.

ಖರ್ಗೆ ಅವರಂತೆ ಶಿಂಧೆ ಕೂಡ ದಲಿತ ನಾಯಕರಾಗಿದ್ದು,  ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರ ಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ ಮಹಾರಾಷ್ಟ್ರದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿಯೂ ಶಿಂಧೆ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ಹೆಚ್ಚಿದೆ.

ಸ್ವಾತಂತ್ರ್ಯಾನಂತರದ ಕಾಂಗ್ರೆಸ್ ಪಕ್ಷದಲ್ಲಿ ಇದುವರೆಗೇ ಕೇವಲ ಇಬ್ಬರು ಮಾತ್ರ ನೆಹರೂ-ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಮಾಜಿ ಪ್ರಧಾನಿ ನರಸಿಂಹ್ ರಾವ್ ಮತ್ತು ಸೀತಾರಾಂ ಕೇಸರಿ ಮಾತ್ರ ಕೈ ಅಧ್ಯಕ್ಷ ಸ್ಥಾನದ ರುಚಿ ಕಂಡಿದ್ದಾರೆ.

ಈ ಬಾರಿ ಮತ್ತೊಮ್ಮೆ ನೆಹರೂ-ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಲಿದ್ದು, ಕರ್ನಾಟಕದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಈ ಸ್ಥಾನ ದೊರೆಯಲಿದೆಯೇ ಎಂಬ ಕುತೂಹಲ ಇದೀಗ ಮನೆ ಮಾಡಿದೆ.

click me!