ಮಹತ್ವದ ರಾಜಕೀಯ ಸುಳಿವು ನೀಡಿದ ಸಿದ್ದರಾಮಯ್ಯ

Published : May 18, 2019, 07:39 AM ISTUpdated : May 18, 2019, 12:34 PM IST
ಮಹತ್ವದ ರಾಜಕೀಯ ಸುಳಿವು ನೀಡಿದ ಸಿದ್ದರಾಮಯ್ಯ

ಸಾರಾಂಶ

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುಳಿವೊಂದನ್ನು ನೀಡಿದ್ದಾರೆ. 

ಹುಬ್ಬಳ್ಳಿ :  ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ, ಕಾಂಗ್ರೆಸ್‌ ಶಾಸಕರು ಪಕ್ಷ ತೊರೆಯಲಿದ್ದಾರೆ, ಸಮ್ಮಿಶ್ರ ಸರ್ಕಾರ ಪತನ ಆಗಲಿದೆ ಎಂಬ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. ‘ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮತ್ತೆ ಯತ್ನಿಸಿದರೆ ಹಾಗೂ ಅನಿವಾರ್ಯ ಪರಿಸ್ಥಿತಿ ಎದುರಾದರೆ ನಾವೂ ‘ಆಪರೇಷನ್‌ ಕಾಂಗ್ರೆಸ್‌’ ಮಾಡಲು ಹಿಂದೇಟು ಹಾಕುವುದಿಲ್ಲ’ ಎಂದು ತಿಳಿಸಿದ್ದಾರೆ.

ಕುಂದಗೋಳ ಉಪ ಚುನಾವಣೆಯ ಕೊನೇ ಹಂತದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಸಿದ್ದರಾಮಯ್ಯ ಅವರು ಜತೆ ರಾಜ್ಯ ರಾಜಕೀಯ ಕುರಿತು ಒಂದಿಷ್ಟುವಿಚಾರಗಳನ್ನು ಹಂಚಿಕೊಂಡದ್ದು, ಬಿಜೆಪಿ ವಿರುದ್ಧ ತಮ್ಮ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಜತೆಗಿನ ಮಾತುಕತೆಯ ಪೂರ್ಣ ಪಾಠ ಇಲ್ಲಿದೆ.

ಹಗಲುಗನಸು ಅಷ್ಟೆ: ಯಡಿಯೂರಪ್ಪ ಸೇರಿ ಬಿಜೆಪಿಯ ಹಲವರು ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ರಮೇಶ್‌ ಜಾರಕಿಹೊಳಿ ಸೇರಿ ಹಲವು ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಕಡೆ ಮುಖ ಮಾಡಲಿದ್ದಾರೆ. ಆಗ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಅವರು ಎಷ್ಟೇ ತಿಪ್ಪರಲಾಗ ಹಾಕಿದರೂ ಅವರ ಕನಸು ನನಸಾಗಲ್ಲ. ಹಾಗೊಂದು ವೇಳೆ ಮತ್ತೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ್ದೇ ಆದರೆ ನಾವೂ ಸುಮ್ಮನೆ ಕೈಕಟ್ಟಿಕೂರಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಏಟಿಗೆ ಎದುರೇಟು ಸಂದೇಶ: ನಮ್ಮಲ್ಲಿನ ಎಲ್ಲ ಶಾಸಕರೂ ನಂಬಿಕಸ್ಥರು ಎಂದು ಹೇಳಲಿಕ್ಕಾಗಲ್ಲ. ಹಣದಾಸೆ ಇತ್ಯಾದಿ ಕಾರಣಗಳಿಂದ ಒಬ್ಬಿಬ್ಬರು ಬಿಜೆಪಿ ಕಡೆ ನೋಡುತ್ತಿರಬಹುದು. ಆದರೆ, ಬಿಜೆಪಿಯ ಸಾಕಷ್ಟುಶಾಸಕರು ನನ್ನೊಂದಿಗೂ ಆತ್ಮೀಯರಾಗಿದ್ದಾರೆ. ನಾವು ಮನಸ್ಸು ಮಾಡಿದರೆ ‘ಆಪರೇಷನ್‌ ಕಾಂಗ್ರೆಸ್‌’ ದೊಡ್ಡ ಮಾತಲ್ಲ. ಶಾಸಕರನ್ನು ಸೆಳೆಯುವುದು, ಖರೀದಿಸುವುದು ಪ್ರಜಾಪ್ರಭುತ್ವಕ್ಕೆ ಅವಮಾನ, ಅದೊಂದು ಡರ್ಟಿ ಪಾಲಿಟಿಕ್ಸ್‌. ಯಾರೂ ಆ ಯತ್ನಕ್ಕೆ ಕೈ ಹಾಕಬಾರದು. ನಮಗೂ ಆ ಕೆಲಸಕ್ಕಿಳಿಯುವ ಮನಸ್ಸಿಲ್ಲ. ಆದರೆ, ಬಿಜೆಪಿ ಕುತಂತ್ರದಿಂದ ಒಂದು ವೇಳೆ ಅನಿವಾರ್ಯ ಎನಿಸಿದರೆ, ರಾಜ್ಯದ ಜನತೆ ಹಿತದೃಷ್ಟಿಯಿಂದ ‘ಆಪರೇಷನ್‌ ಕಾಂಗ್ರೆಸ್‌’ ಮಾಡಿಯಾದರೂ ಸರ್ಕಾರ ಉಳಿಸಿಕೊಳ್ಳುತ್ತೇವೆ ಎಂದು ಏಟಿಗೆ ಎದುರೇಟು ಕೊಡುವ ಸಂದೇಶ ರವಾನಿಸಿದರು ಸಿದ್ದರಾಮಯ್ಯ.

ಸಾಧನೆ ಇಲ್ಲ, ಕೇವಲ ಅಪಪ್ರಚಾರ: ಸಮ್ಮಿಶ್ರ ಸರ್ಕಾರಕ್ಕೂ ಅಧಿಕಾರಕ್ಕೆ ಬರೋ ಮೊದಲು ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದಾಗ ಬಹುಮತ ಸಾಬೀತುಪಡಿಸದೆ ಮೂರೇ ದಿನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಅದೇ ಯಡಿಯೂರಪ್ಪ, ಸಮ್ಮಿಶ್ರ ಸರ್ಕಾರ ಈಗ ಬೀಳುತ್ತೆ, ನಾಳೆ ಬೀಳುತ್ತದೆ ಎಂದು ದಿನ ನಿಗದಿ ಮಾಡುತ್ತಿದ್ದಾರೆ. ಉಪ ಚುನಾವಣೆ ಪ್ರಚಾರದ ವೇಳೆಯೂ ಇದೇ ವಿಚಾರ ಹೇಳಿದರೇ ಹೊರತು ಹಿಂದೆ ತಾವು ಯಾವ ಕಾರ್ಯಕ್ರಮ ನೀಡಿದೆವು, ಕೇಂದ್ರ ಸರ್ಕಾರ ಏನು ಮಾಡಿತು ಎಂಬುದನ್ನು ಪ್ರಸ್ತಾಪಿಸಲಿಲ್ಲ. ಇದೇ ರೀತಿ ಅಪಪ್ರಚಾರ ಮಾಡುತ್ತ ಜನತೆ ದಾರಿ ತಪ್ಪಿಸುತ್ತಿರುವ ಬಿಜೆಪಿಗೆ ಪಾಠ ಕಲಿಸಲು ನಾವೂ ಕೆಲವಷ್ಟುಅನಿವಾರ್ಯ ಹೆಜ್ಜೆಗಳನ್ನು ಇಡಲು ಹಿಂದೇಟು ಹಾಕಲ್ಲ ಎಂದು ಸ್ಪಷ್ಟಪಡಿಸಿದರು.

ಭಿನ್ನಾಭಿಪ್ರಾಯ ದೊಡ್ಡದಿಲ್ಲ: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ರಾಜ್ಯದಲ್ಲಿ ಎರಡೂ ಪಕ್ಷಗಳ ಮುಖಂಡರು ಒಮ್ಮತದ ಮೇರೆಗೆ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ರಾಜ್ಯದಲ್ಲಿ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಡಿ ಕೆಲಸಗಳು ಆಗುತ್ತಿವೆ. ಸಾಲ ಮನ್ನಾ, ಅನ್ನಭಾಗ್ಯ, ಶಾದಿಭಾಗ್ಯ, ಇಂದಿರಾ ಕ್ಯಾಂಟೀನ್‌, ಶೂ ಭಾಗ್ಯ ಮೊದಲಾದ ಜನಪರ ಕಾರ್ಯಕ್ರಮಗಳೆಲ್ಲವೂ ಸುರಳೀತವಾಗಿ ನಡೆದಿವೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳೇ ಇಲ್ಲ ಎಂದು ಹೇಳಲ್ಲ, ಎರಡು ಪಕ್ಷಗಳ ಮೈತ್ರಿ ಅಂದಮೇಲೆ ಸಣ್ಣಪುಟ್ಟಭಿನ್ನಾಭಿಪ್ರಾಯಗಳೆಲ್ಲ ಸಹಜ, ಆದರೆ ಅವು ಸರ್ಕಾರಕ್ಕೆ ಕಂಟಕವಾಗುವಷ್ಟುದೊಡ್ಡದಲ್ಲ. ನಾವೆಲ್ಲ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಸರ್ಕಾರ ಸುಭದ್ರವಾಗಿ ಮುನ್ನಡೆಯಲು ಮಾರ್ಗದರ್ಶನ ಮಾಡುತ್ತೇವೆ. ಒಬ್ಬ ಶಾಸಕನಾಗಿ ನಾನೂ ಈ ಮೈತ್ರಿ ಸರ್ಕಾರವನ್ನು ಬೆಂಬಲಿಸುತ್ತೇನೆ. ಎಲ್ಲರ ಆಶಯವೂ ಇದೇ ಆಗಿದೆ ಎಂದರು.

ಕೇಂದ್ರದಲ್ಲಿ ಕರ್ನಾಟಕ ಮಾದರಿ: ಈಗ ಚಿಂಚೋಳಿ, ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ. ಚಿಂಚೊಳಿ ಶಾಸಕರಾಗಿದ್ದ ಡಾ.ಉಮೇಶ್‌ ಜಾಧವ ಹಣದಾಸೆಗೆ ಮತ್ತು ಮಗನನ್ನು ರಾಜಕೀಯಕ್ಕೆ ತರಲು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋಗಿದ್ದಾರೆ. ಜಾಧವ ವಿರುದ್ಧದ ಆಕ್ರೋಶ, ದಿವಂಗತ ಮಾಜಿ ಸಚಿವ ಸಿ.ಎಸ್‌.ಶಿವಳ್ಳಿ ಮೇಲಿನ ಪ್ರೀತಿ ಕಾಂಗ್ರೆಸ್ಸಿಗೆ ನೆರವಾಗಲಿವೆ. ಇದರಿಂದ ಮೈತ್ರಿ ಸರ್ಕಾರ ಇನ್ನಷ್ಟುಗಟ್ಟಿಯಾಗಲಿದೆ. ನಾವು ಏನನ್ನೂ ಮಾಡಲಾಗಲಿಲ್ಲವಲ್ಲಾ ಎನ್ನುವ ಹತಾಶೆಯಿಂದ ಬಿಜೆಪಿಗರು ಸುಳ್ಳುಗಳನ್ನು ಸೃಷ್ಟಿಸುತ್ತಿದ್ದು, ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜನತೆ ಪ್ರಬುದ್ಧರಿದ್ದು ಇದ್ಯಾವುದನ್ನೂ ನಂಬಲ್ಲ ಎಂದರು.

ಇದೇ ವೇಳೆ, ಪಕ್ಷದಿಂದ ಬಹುತೇಕ ಅಂತರ ಕಾಯ್ದುಕೊಂಡಿರುವ ಶಾಸಕ ರಮೇಶ್‌ ಜಾರಕಿಹೊಳಿ ನಡೆ ಕುರಿತೂ ಮಾತನಾಡಿದ ಸಿದ್ದರಾಮಯ್ಯ, ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಮೇಶ್‌ ಈ ನಡೆ ಹಿಂದೆ ರಾಜಕೀಯ ಅಥವಾ ಮಂತ್ರಿಗಿರಿಯ ಕಾರಣ ಇಲ್ಲ. ಅದಕ್ಕಿರೋದು ತೀರಾ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣ. ಹಾಗಾಗಿ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡಲ್ಲ. ರಮೇಶ್‌ ಕಟ್ಟಾಕಾಂಗ್ರೆಸ್ಸಿಗ ಎಂದರು.

ಯುಪಿಎಗೆ ಸಿಗುತ್ತೆ 150 ಸ್ಥಾನ!

ಲೋಕಸಭೆ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಬಿಜೆಪಿಗೆ 100 ಸ್ಥಾನ ಕಡಿಮೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಇದೇ ವೇಳೆ ಭವಿಷ್ಯ ನುಡಿದರು. ಆದರೆ, ಯುಪಿಎಗೆ 150 ಸ್ಥಾನ ಲಭಿಸಲಿದ್ದು, ಫಲಿತಾಂಶದ ಬಳಿಕ ಎಡಪಕ್ಷಗಳು ಸೇರಿದಂತೆ ವಿವಿಧ ಪಕ್ಷಗಳು ಒಂದೇ ವೇದಿಕೆಗೆ ಬಂದು ಕರ್ನಾಟಕ ಮಾದರಿಯಲ್ಲಿ ಕೇಂದ್ರದಲ್ಲೂ ಮೈತ್ರಿ ಸರ್ಕಾರ ರಚಿಸಲಿದ್ದಾರೆ ಎಂದು ವಿಶ್ಲೇಷಿಸಿದರು.

ವರದಿ : ಮಲ್ಲಿಕಾರ್ಜುನ ಸಿದ್ದಣ್ಣವರ

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ