
ಬೆಂಗಳೂರು(ಸೆ.19): ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆರಿಸುವ 3 ಸ್ಥಾನಗಳಿಗೆ ಅ.3ಕ್ಕೆ ಪ್ರತ್ಯೇಕ ಚುನಾವಣೆ ನಡೆಯಲಿದ್ದು, ಸಂಖ್ಯಾಬಲ ಇಲ್ಲದಿದ್ದರೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ.
ಅಂದು ಗುಪ್ತ ಮತದಾನ ನಡೆಯಲಿದ್ದು, ಕಾಂಗ್ರೆಸ್-ಜೆಡಿಎಸ್‌ನಿಂದ ಅಡ್ಡಮತದಾನ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಹಲವು ಅತೃಪ್ತ ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂಬ ವರದಿಗಳ ಸಂದರ್ಭದಲ್ಲೇ ನಡೆವ ಈ ಚುನಾವಣೆ, ದೋಸ್ತಿ ಪಕ್ಷಗಳಿಗೆ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆಯೇ ಸರಿ. ಸದ್ಯದ ಪರಿಸ್ಥಿತಿಯಲ್ಲಿ ಮೂರು ಸ್ಥಾನಗಳಿಗೂ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿದ್ದರಿಂದ ಸಂಖ್ಯಾ ಬಲದ ಆಧಾರದ ಮೇಲೆ ಬಿಜೆಪಿಗೆ ಒಂದು ಸ್ಥಾನ ಸಿಗುವುದೂ ಸಾಧ್ಯವಿಲ್ಲ.
ಆದರೆ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಲ್ಲಿನ ಅಸಮಾಧಾನ, ಅತೃಪ್ತಿಯ ಲಾಭ ಪಡೆದುಕೊಳ್ಳುವುದಕ್ಕಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ಈ ಸಂಬಂಧ ಅಭ್ಯರ್ಥಿಗಳ ಹೆಸರಿರುವ ಸ್ಥಳವನ್ನು ಖಾಲಿ ಉಳಿಸಿಕೊಂಡು ನಾಮಪತ್ರಗಳಿಗೆ ಶಾಸಕರ ಸಹಿ ಪಡೆದುಕೊಳ್ಳಲಾಗಿದೆ. ಒಬ್ಬ ಅಭ್ಯರ್ಥಿ ನಾಮಪತ್ರಕ್ಕೆ ಹತ್ತು ಶಾಸಕರು ಸೂಚಕರಾಗಿ ಸಹಿ ಹಾಕುವುದು ಕಡ್ಡಾಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.