ಬಂಡಾಯಕ್ಕೆ ಬ್ರೇಕ್ ? ಕಾಂಗ್ರೆಸ್ ನಾಯಕರು ದಿಲ್ಲಿಗೆ - ಇಂದು ಹೈಕಮಾಂಡ್ ಸಂಧಾನ

By Web DeskFirst Published Sep 19, 2018, 9:09 AM IST
Highlights

ಅತೃಪ್ತಿ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿದ್ದು, ಬುಧವಾರ ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಯಲಿದೆ. ಇದೇ ವೇಳೆ ಸತೀಶ್ ಜಾರಕಿಹೊಳಿ ಸಹ ದೆಹಲಿಗೆ ತೆರಳಲಿದ್ದಾರೆ. 

ಬೆಂಗಳೂರು[ಸೆ.19]: ಸಮ್ಮಿಶ್ರ ಸರ್ಕಾರಕ್ಕೆ ಅಸ್ತಿತ್ವಕ್ಕೆ ಧಕ್ಕೆ ತರುವ ಮಟ್ಟಕ್ಕೆ ಬೆಳೆದಿದ್ದ ಜಾರಕಿಹೊಳಿ ಸಹೋದರರ ಬಂಡಾಯ ಶಮನಗೊಳಿಸಲು ಮಂಗಳವಾರ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಪ್ರಯತ್ನಿಸಿದ್ದು, ಕೆಲ ಮಟ್ಟಿಗೆ ಯಶಸ್ವಿಯಾಗಿದೆ.

ಇದಾದ ಬಳಿಕ ಸಂಧಾನದ ಸರದಿ ಕಾಂಗ್ರೆಸ್ ಹೈಕಮಾಂಡ್‌ನದ್ದು. ಬುಧವಾರ ನಡೆಯಲಿರುವ ಈ ಸಂಧಾನ ಸಮಾಲೋಚನೆ ಯಶಸ್ವಿಯಾದರೆ ‘ಬ್ರದರ್ಸ್ ಬಂಡಾಯ-ಥಂಡಾಯ’ ಆಗುವ ಸಾಧ್ಯತೆ ಇದೆ. ಅತೃಪ್ತಿ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿದ್ದು, ಬುಧವಾರ ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಯಲಿದೆ. ಇದೇ ವೇಳೆ ಸತೀಶ್ ಜಾರಕಿಹೊಳಿ ಸಹ ದೆಹಲಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಜಾರಕಿಹೊಳಿ ಸಹೋದರರ ಪ್ರಮುಖ ಬೇಡಿಕೆಯೆನಿಸಿದ, ‘ಬೆಳಗಾವಿ ಹಾಗೂ ಬಳ್ಳಾರಿ ರಾಜಕಾರಣದಲ್ಲಿ ಮೂಗು ತೂರಿಸದಂತೆ ಡಿ.ಕೆ. ಶಿವಕುಮಾರ್ ಅವರನ್ನು ನಿಯಂತ್ರಿಸುವ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ವೇಗಕ್ಕೆ ಬ್ರೇಕ್ ಹಾಕಬೇಕು’ ಎಂಬ ಬಗ್ಗೆ ಚರ್ಚೆ ನಡೆಯಲಿದೆ.

ಈ ವಿಚಾರಗಳಿಗೆ ಬಗ್ಗೆ ಹೈಕಮಾಂಡ್‌ನಿಂದ ಸ್ಪಷ್ಟ ಭರವಸೆ ದೊರೆತಲ್ಲಿ ಜಾರಕಿಹೊಳಿ ಬಂಡಾಯ ಸದ್ಯಕ್ಕೆ ಶಮನವಾಗುವ ಲಕ್ಷಣವಿದೆ. ಈ ಮಧ್ಯೆ, ಸುದ್ದಿಗಾರರ ಜೊತೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯಲ್ಲಿ ಹಸ್ತಕ್ಷೇಪ, ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಪಂಗಡದ ನಾಯಕರಿಗೆ ಸಂಪುಟ ಪ್ರಾತಿನಿಧ್ಯ ಕುರಿತು ಸಿಎಂ ಜೊತೆ ಚರ್ಚಿಸಿದ್ದೇನೆ. ಬೆಳಗಾವಿ ಸಮಸ್ಯೆಗಳು ಮುಗಿದ ಅಧ್ಯಾಯ. ನಾನು ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ, ಬೇರೆಯವರ ವಿಚಾರ ನನಗೆ ಗೊತ್ತಿಲ್ಲ ಮತ್ತು ಪಕ್ಷದ ಮುಂದೆ ನಾನು ಯಾವುದೇ ಬೇಡಿಕೆಯನ್ನೂ ಇಟ್ಟಿಲ್ಲ ಎಂದಿದ್ದಾರೆ.

ಸರ್ಕಾರ, ಡಿಕೆಶಿ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದ ಅವರ ಸೋದರ, ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಎಲ್ಲ ಸಮಸ್ಯೆ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇವೆ. ಸತೀಶ್ ಜಾರಕಿಹೊಳಿ ನಿರ್ಧಾರವೇ ಅಂತಿಮ ಎಂದಿದ್ದಾರೆ. ಸಿದ್ದು, ಎಚ್‌ಡಿಕೆ ಪ್ರಯತ್ನ: ಜಾರಕಿಹೊಳಿ ಸಹೋದರರ ಬಂಡಾಯ ಶಮನಗೊಳಿಸಲು ಸೋಮವಾರ ಸಿದ್ದರಾಮಯ್ಯ ಹಾಗೂ ಮಂಗಳವಾರ ಎಚ್.ಡಿ. ಕುಮಾರಸ್ವಾಮಿ ಪ್ರಯತ್ನ ನಡೆಸಿದರು. ಪಕ್ಷಕ್ಕೆ ಸಂಬಂಧಿಸಿದ ವಿಚಾರ ಹಾಗೂ ತಮಗೆ ಬಿಜೆಪಿಯಿಂದ ದೊರಕಿರುವ ‘ಆಹ್ವಾನದ’ ಬಗ್ಗೆ ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಬಳಿ ಪ್ರಸ್ತಾಪಿಸಿದರು.

ಈ ವೇಳೆ ಪ್ರಮುಖವಾಗಿ ಅವರು ಡಿ.ಕೆ. ಶಿವಕುಮಾರ್ ಅವರ ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಯ ವಿಚಾರಗಳಲ್ಲಿ ಮೂಗು ತೂರಿಸುವಿಕೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಪ್ರಮುಖ ದೂರು ನೀಡಿದ್ದರು. ಅದೇ ರೀತಿ ಲಕ್ಷ್ಮೀ ಹೆಬ್ಬಾಳಕರ್ ಅವರ ವೇಗಕ್ಕೆ ಬ್ರೇಕ್ ಹಾಕಬೇಕು ಎಂದು ಪ್ರಸ್ತಾಪಿಸಿದರು. ಜತೆಗೆ, ಬೆಳಗಾವಿ ಜಿಲ್ಲೆಯ ವರ್ಗಾವಣೆ ಹಾಗೂ ಕೆಲಸ ಕಾರ್ಯಗಳಲ್ಲಿ ತಮಗೆ ಆಗುತ್ತಿರುವ ತೊಂದರೆಯನ್ನು ಪ್ರಸ್ತಾಪಿಸಿದರು ಎನ್ನಲಾಗಿದೆ.

ಇನ್ನು ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಸಂದರ್ಭದಲ್ಲಿ ತಮ್ಮ ಬೆಂಬಲಿಗ ಶಾಸಕರೊಬ್ಬರಿಗೆ (ವಿಶೇಷವಾಗಿ ಬಳ್ಳಾರಿ ಜಿಲ್ಲೆಯವರಿಗೆ) ಸಚಿವ ಸ್ಥಾನ ನೀಡಬೇಕು. ವಾಲ್ಮೀಕಿ ಸಮುದಾಯಕ್ಕೆ ಮತ್ತೊಂದು ಸಚಿವ ಸ್ಥಾನ ನೀಡಬೇಕು ಹಾಗೂ ನಿಗಮ ಮಂಡಳಿಗಳಲ್ಲಿ ತಮ್ಮ ಬೆಂಬಲಿಗರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟರು ಎನ್ನಲಾಗಿದೆ. ಅಲ್ಲದೆ, ಬಿಜೆಪಿಯಿಂದ ತಮಗೆ ದೊರಕಿರುವ ಭರವಸೆಗಳನ್ನು ಪ್ರಸ್ತಾಪಿಸಿದ್ದಾರೆ. ವಿಶೇಷವಾಗಿ ಉಪ ಮುಖ್ಯಮಂತ್ರಿ ಮಾಡುವ ಭರವಸೆ ಬಿಜೆಪಿಯಿಂದ ತಮಗೆ ದೊರಕಿದೆ ಎಂಬ ಮಾತನ್ನು ಕೂಡ ಸಿದ್ದರಾಮಯ್ಯ ಮುಂದೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸಿಎಂ ಹೊರತುಪಡಿಸಿ ಉಳಿದ ವಿಚಾರಗಳ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಲಿದ್ದು, ಅಲ್ಲಿಯವರೆಗೂ ಸಮಾಧಾನದಿಂದ ಇರುವಂತೆ ಸಿದ್ದರಾಮಯ್ಯ ರಮೇಶ್ ಜಾರಕಿಹೊಳಿ ಅವರಿಗೆ ನಿರ್ದೇಶನ ನೀಡಿದ್ದರು. ಇದಾದ ನಂತರ ಜಾರಕಿಹೊಳಿ ಸಹೋದರರು ಮಂಗಳವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಶಿವಕುಮಾರ್ ಅವರ ಮಾತು ಕೇಳಿಕೊಂಡು ಬೆಳಗಾವಿ ಜಿಲ್ಲೆಯಲ್ಲಿ ವರ್ಗಾವಣೆಗಳನ್ನು ಮಾಡುತ್ತಿರುವ ಬಗ್ಗೆ ಜಾರಕಿಹೊಳಿ ಸೋದರರು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.

ಅಲ್ಲದೆ, ಸರ್ಕಾರದ ಮಟ್ಟದಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಸಮರ್ಪವಾಗಿ ನಡೆಯುತ್ತಿಲ್ಲ. ನಮಗೆ ಸಹಕರಿಸುವ ಅಧಿಕಾರಿಗಳು ಜಿಲ್ಲೆಯಲ್ಲಿ ಇಲ್ಲದಂತೆ ಆಗಿದೆ ಎಂಬ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಇದಕ್ಕೆ ಕುಮಾರಸ್ವಾಮಿ ಅವರು, ‘ಜಿಲ್ಲೆಗೆ ಸಂಬಂಧಿಸಿದ ಯಾವುದೇ ವಿಚಾರವಿದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಿ. ವರ್ಗಾವಣೆ ವಿಚಾರದಲ್ಲಿ ಇನ್ನು ಮುಂದೆ ನಿಮ್ಮ ಮಾತಿಗೆ ಬೆಲೆ ನೀಡಲಾಗುವುದು’ ಎಂಬ ಸ್ಪಷ್ಟ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಿಎಂ ಅವರಿಂದ ಸ್ಪಷ್ಟ ಭರವಸೆ ದೊರಕಿರುವುದರಿಂದ ಜಾರಕಿಹೊಳಿ ಸಹೋದರರಿಗೆ ಸಮಾಧಾನವಾಗಿದೆ.

ಆದರೆ, ಶಿವಕುಮಾರ್ ಹಾಗೂ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸ್ಥಾನಮಾನ ಕುರಿತಂತೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಬೇಕಿದೆ. ಹೈಕಮಾಂಡ್‌ನಿಂದ ಈ ಬಗ್ಗೆ ಸ್ಪಷ್ಟ ಭರವಸೆ ದೊರೆತರೇ ಜಾರಕಿಹೊಳಿ ಅವರ ಬಂಡಾಯ ಸದ್ಯಕ್ಕೆ ಥಂಡಾಯವಾದಂತೆ ಎಂದು ಮೂಲಗಳು ಹೇಳಿವೆ.
 

click me!