ಕಾವೇರಿ ವಿವಾದ: ರಾಜ್ಯದ ಮರು ಪರಿಶೀಲನಾ ಅರ್ಜಿ ವಜಾ

By Suvarna Web DeskFirst Published Apr 7, 2017, 12:20 PM IST
Highlights

ತಮಿಳುನಾಡಿಗೆ ಪ್ರತಿದಿನ 6,000 ಕ್ಯೂಸೆಕ್ ನೀರು ಹರಿಸುವಂತೆ ಕಳೆದ ಸೆಪ್ಟೆಂಬರ್ 20ರಂದು ನೀಡಿದ್ದ ಆದೇಶವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನವದೆಹಲಿ (ಏ.07): ತಮಿಳುನಾಡಿಗೆ ಪ್ರತಿದಿನ 6,000 ಕ್ಯೂಸೆಕ್ ನೀರು ಹರಿಸುವಂತೆ ಕಳೆದ ಸೆಪ್ಟೆಂಬರ್ 20ರಂದು ನೀಡಿದ್ದ ಆದೇಶವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಶುಕ್ರವಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ| ದೀಪಕ್ ಮಿಶ್ರಾ ಮತ್ತು ನ್ಯಾ| ಯು ಯು ಲಲಿತ್ ಅವರನ್ನು ಒಳಗೊಂಡ ನ್ಯಾಯಪೀಠ, ಅಂದು ನಾವು ಈ ಆದೇಶ ನೀಡಿದ ಬಳಿಕ ಅನೇಕ ಮಧ್ಯಂತರ ಆದೇಶಗಳನ್ನು ನೀಡಿದ್ದೇವೆ, ಅದ್ದರಿಂದ ಈ ಅರ್ಜಿ ಪ್ರಸ್ತುತತೆ ಉಳಿಸಿಕೊಂಡಿಲ್ಲ ಎಂದು ಅಭಿಪ್ರಾಯ ಪಟ್ಟು ರಾಜ್ಯದ ಅರ್ಜಿಯನ್ನು ವಜಾಗೊಳಿಸಿದರು.

ಆಗಿನ ಪರಿಸ್ಥಿತಿಗೂ ಈಗಿನ ಸ್ಥಿತಿಗತಿಗೂ ಸಾಕಷ್ಟು ವ್ಯತ್ಯಾಸಗಳಿವೆ, ಕಾವೇರಿ ನದಿ ನೀರು ಹಂಚಿಕೆ  ಮತ್ತು ಇನ್ನಿತರ ಅಂಶಗಳ ಬಗ್ಗೆಗಿನ ವಿಚಾರಣೆಯನ್ನು ಮೂಲ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮಾಡಲಾಗುವುದು  ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕರ್ನಾಟಕ ನೀರು ಬಿಡದೆ ಸತಾಯಿಸುತ್ತಿದೆ ಎಂದು ತಮಿಳುನಾಡಿನ ವಕೀಲರು ಕ್ಯಾತೆ ತೆಗೆದರೂ ನ್ಯಾಯಾಲಯ ಅದಕ್ಕೆ ಸೊಪ್ಪು ಹಾಕಲಿಲ್ಲ. ರಾಜ್ಯದ ಪರ ವಾದಿಸಿದ ಅಡ್ವಾಕೇಟ್ ಜನರಲ್ ಮಧುಸೂದನ್ ನಾಯಕ್, ರಾಜ್ಯದ ಕಾವೇರಿ ಜಲಾಶಯಗಳಲ್ಲಿ ನೀರೇ ಇಲ್ಲ, ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ ಎಂದು ವಾದಿಸಿದರು.

ಪ್ರಸಕ್ತ ಪ್ರತಿದಿನ ತಮಿಳುನಾಡಿಗೆ 2,000 ಕ್ಯೂಸೆಕ್ ನೀರು ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ನ ಆದೇಶ ಜಾರಿಯಲ್ಲಿದೆ. ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದ ಮೂಲ ಅರ್ಜಿಗಳ ವಿಚಾರಣೆಯನ್ನು ಜುಲೈ ತಿಂಗಳಿನಲ್ಲಿ ನಡೆಸುವುದಾಗಿ ಸುಪ್ರೀಂ ಕೋರ್ಟ್ ಈ ಮೊದಲೇ ಹೇಳಿತ್ತು.

click me!