ಯೋಧರ ಸಾಹಸಕ್ಕೆ ಪ್ರಧಾನಿ, ರಾಜನಾಥ್‌ ಮೆಚ್ಚುಗೆ

First Published Jun 7, 2018, 9:29 AM IST
Highlights

ಜಗತ್ತಿನ ಅತ್ಯಂತ ಎತ್ತರದ ಪರ್ವತ ಎನಿಸಿಕೊಂಡಿರುವ ಮೌಂಟ್‌ ಎವರೆಸ್ಟ್‌ ಅನ್ನು ಏರುವುದೇ ಒಂದು ಸಾಹಸ. ಅಂಥದ್ದರಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರ ತಂಡವೊಂದು ಎರಡು ದಿನದಲ್ಲಿ ನಾಲ್ಕು ಬಾರಿ ಮೌಂಟ್‌ ಎವರೆಸ್ಟ್‌ ಏರಿದ್ದೂ ಅಲ್ಲದೆ, ಶಿಖರದಲ್ಲಿ ಬಿದ್ದಿದ್ದ ಬರೋಬ್ಬರಿ 700 ಕೆ.ಜಿ. ಕಸವನ್ನು ಕೆಳಕ್ಕೆ ತಂದು ಹೊಸ ದಾಖಲೆ ಬರೆದಿದೆ.

ನವದೆಹಲಿ: ಜಗತ್ತಿನ ಅತ್ಯಂತ ಎತ್ತರದ ಪರ್ವತ ಎನಿಸಿಕೊಂಡಿರುವ ಮೌಂಟ್‌ ಎವರೆಸ್ಟ್‌ ಅನ್ನು ಏರುವುದೇ ಒಂದು ಸಾಹಸ. ಅಂಥದ್ದರಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರ ತಂಡವೊಂದು ಎರಡು ದಿನದಲ್ಲಿ ನಾಲ್ಕು ಬಾರಿ ಮೌಂಟ್‌ ಎವರೆಸ್ಟ್‌ ಏರಿದ್ದೂ ಅಲ್ಲದೆ, ಶಿಖರದಲ್ಲಿ ಬಿದ್ದಿದ್ದ ಬರೋಬ್ಬರಿ 700 ಕೆ.ಜಿ. ಕಸವನ್ನು ಕೆಳಕ್ಕೆ ತಂದು ಹೊಸ ದಾಖಲೆ ಬರೆದಿದೆ. ಬಿಎಸ್‌ಎಫ್‌ನ ಸಹಾಯಕ ಕಮಾಂಡೆಂಟ್‌ ಲವರಾಜ್‌ ಸಿಂಗ್‌ ಧರ್ಮಶಕ್ತು ಅವರ ನೇತೃತ್ವದ ತಂಡದ ಸಾಧನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ ಸಿಂಗ್‌ ಅವರ ಮೆಚ್ಚುಗೆಗೂ ಪಾತ್ರವಾಗಿದೆ.

7 ಶೆರ್ಪಾ (ಹಿಮಾಲಯ ಹತ್ತಲು ನೆರವಾಗುವವರು)ಗಳ ಸಹಾಯದೊಂದಿಗೆ 15 ಮಂದಿಯ ಬಿಎಸ್‌ಎಫ್‌ ತಂಡ ಮೇ 20 ಹಾಗೂ 21ರಂದು ನಾಲ್ಕು ಬಾರಿ ಬೇಸ್‌ಕ್ಯಾಂಪ್‌ನಿಂದ ಮೌಂಟ್‌ ಎವರೆಸ್ಟ್‌ ಏರಿದೆ. ಆ ಶಿಖರದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸವನ್ನು ಕೆಳಕ್ಕೆ ತರುವಲ್ಲಿ ಸಫಲವಾಗಿದೆ.

‘ಹರಿದುಹೋದ ಟೆಂಟ್‌ಗಳು, ಆಮ್ಲಜನಕ ಸಿಲಿಂಡರ್‌ಗಳಂತಹ ಕಸವನ್ನು ಸಂಗ್ರಹಿಸಿದ್ದೇವೆ. 1972ರಷ್ಟುಹಳತಾದ ಸಿಲಿಂಡರ್‌ ಕೂಡ ನಮಗೆ ಲಭಿಸಿದೆ. ಸ್ವಚ್ಛತಾ ಅಭಿಯಾನದ ಅಂಗವಾಗಿ ಎವರೆಸ್ಟ್‌ ಅನ್ನು ಸ್ವಚ್ಛಗೊಳಿಸಲು ಅಲ್ಲಿಗೆ ಹೋಗಿದ್ದೆವು. ಬೇಸ್‌ ಕ್ಯಾಂಪ್‌ನಲ್ಲಿ ಕಸ ವಿಂಗಡಣೆ ಮಾಡಿದ್ದೇವೆ. ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದ್ದೇವೆ’ ಎಂದು ಲವರಾಜ್‌ ಸಿಂಗ್‌ ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಬಿಎಸ್‌ಎಫ್‌ನ ತಂಡ ಎರಡು ಗುಂಪುಗಳಾಗಿ ವಿಂಗಡಣೆಯಾಗಿ ಎವರೆಸ್ಟ್‌ ಏರಿದೆ. ಈ ಎರಡೂ ತಂಡಗಳು ತಲಾ 350 ಕೆ.ಜಿ. ಕಸವನ್ನು ಮೇಲಿನಿಂದ ಕೆಳಕ್ಕೆ ತಂದಿವೆ. ಲವರಾಜ್‌ ಅವರು ಮೌಂಟ್‌ ಎವರೆಸ್ಟ್‌ ಏರುತ್ತಿರುವುದು ಇದು ಏಳನೇ ಬಾರಿ ಎಂಬುದು ಗಮನಾರ್ಹ.

click me!