ಜನವರಿ 8 ಮತ್ತು 9 ಭಾರತ್‌ ಬಂದ್‌: ಏನಿರುತ್ತೆ, ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

By Web DeskFirst Published Jan 8, 2019, 6:49 AM IST
Highlights

ಇಂದು, ನಾಳೆ ಭಾರತ್‌ ಬಂದ್‌ ಬಿಸಿ| ಕಾರ್ಮಿಕರ ಹೋರಾಟಕ್ಕೆ ಆಡಳಿತಾರೂಢ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲ| ಬಹುತೇಕ ಶಾಲಾ, ಕಾಲೇಜು ರಜೆ - ಆಟೋ, ಸರ್ಕಾರಿ ಬಸ್‌, ಕೆಲ ಬ್ಯಾಂಕ್‌ಗಳು ಬಂದ್‌ ಸಾಧ್ಯತೆ| ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ತ ನಿರೀಕ್ಷೆ

ಬೆಂಗಳೂರು[ಜ.08]: ಮೋಟಾರು ವಾಹನ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಮಂಗಳವಾರದಿಂದ ಎರಡು ದಿನ ನಡೆಸಲಿರುವ ದೇಶವ್ಯಾಪಿ ಭಾರತ್‌ ಬಂದ್‌ಗೆ ರಾಜ್ಯದ ಹಲವು ಸಂಘಟನೆಗಳು, ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಬೆಂಬಲ ವ್ಯಕ್ತಪಡಿಸಿವೆ. ಜೊತೆಗೆ ಜೆಡಿಎಸ್‌ ಸಹ ಬಂದ್‌ಗೆ ಸಹಮತ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.

ಪ್ರಮುಖವಾಗಿ ರಾಜ್ಯಾದ್ಯಂತ ಸರ್ಕಾರಿ ಬಸ್‌ ಸೇವೆ, ಆಟೋ, ಬ್ಯಾಂಕ್‌, ಅಂಗನವಾಡಿ, ಬಿಸಿಯೂಟ ಸೇವೆಗಳು ಬಹುತೇಕ ವ್ಯತ್ಯಯವಾಗುವ ಸಾಧ್ಯತೆಯಿದೆ. ಆ್ಯಂಬುಲೆನ್ಸ್‌, ಆಸ್ಪತ್ರೆ, ಹಾಲು, ಪತ್ರಿಕೆ, ಹೋಟೆಲ್‌, ತರಕಾರಿ ಸೇರಿದಂತೆ ಅಗತ್ಯ ಹಾಗೂ ತುರ್ತು ಸೇವೆಗಳು ಎಂದಿನಂತೆ ಮುಂದುವರಿಯಲಿವೆ. ಅನೇಕ ಜಿಲ್ಲಾಡಳಿತಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿವೆ. ಜೊತೆಗೆ ಬಹುತೇಕ ಖಾಸಗಿ ಶಾಲಾ-ಕಾಲೇಜುಗಳು ಸಹ ಎರಡು ದಿನಗಳ ಕಾಲ ರಜೆ ಘೋಷಿಸಿವೆ. ಬಂದ್‌ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರ ನಿಗದಿಯಾಗಿದ್ದ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕ​ರ್‍ಸ್ ಫೆಡರೇಶನ್‌, ಸಿಐಟಿಯು ಸಂಯೋಜಿತ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಫೆಡರೇಶನ್‌, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಸಂಘಟನೆಗಳು ಬಂದ್‌ ಬೆಂಬಲಿಸಿವೆ.

ಪ್ರವಾಸಿ ವಾಹನ ಮಾಲಿಕರ ಸಂಘ, ಎಫ್‌ಕೆಸಿಸಿಐ, ಒಲಾ, ಊಬರ್‌, ಏರ್‌ಪೋರ್ಟ್‌ ಟ್ಯಾಕ್ಸಿ ಮಾಲಿಕರು ಹಾಗೂ ಚಾಲಕರ ಸಂಘ, ಹೋಟೆಲ್‌ಗಳ ಸಂಘ, ಐಟಿ ಉದ್ಯೋಗಿಗಳ ಸಂಘಟನೆ, ಎಪಿಎಂಸಿ ವ್ಯಾಪಾರಿಗಳ ಸಂಘಟನೆ, ವಾಟಾಳ್‌ ಕನ್ನಡ ಚಳವಳಿ ಪಕ್ಷ, ಪೆಟ್ರೋಲ್‌ ಬಂಕ್‌ ಮಾಲಿಕರ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ಮಾತ್ರ ಸೂಚಿಸಿವೆ.

ಬಸ್‌ ಸೇವೆ ಅನುಮಾನ:

ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕ​ರ್‍ಸ್ ಫೆಡರೇಶನ್‌ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ, ವಾಯವ್ಯ ಸಾರಿಗೆ ನಿಗಮಗಳ ಬಸ್‌ಗಳು ಎರಡೂ ದಿನ ರಸ್ತೆಗೆ ಇಳಿಯುವುದಿಲ್ಲ ಎಂದು ತಿಳಿಸಿದೆ. ರಾಷ್ಟ್ರಮಟ್ಟದಲ್ಲಿ ಬಂದ್‌ನ ನೇತೃತ್ವ ವಹಿಸಿರುವ ಸಂಘಟನೆಗಳ ಪೈಕಿ ಎಐಟಿಯುಸಿ ಮತ್ತು ಸಿಐಟಿಯು ಸಂಘಟನೆಗಳು ಪ್ರಮುಖವಾಗಿರುವುದರಿಂದ ರಾಜ್ಯದಲ್ಲಿಯೂ ಸಾರಿಗೆ ನೌಕರರನ್ನು ಬಳಸಿಕೊಂಡು ಬಂದ್‌ ಯಶಸ್ವಿಗೊಳಿಸಲು ತೀರ್ಮಾನಿಸಿವೆ. ಆದರೆ, ನಾಲ್ಕು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಎಲ್ಲ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಿದ್ದಾರೆ. ಒಂದು ವೇಳೆ ನಾಲ್ಕು ನಿಗಮಗಳ ಚಾಲಕರು ಮತ್ತು ನಿರ್ವಾಹಕರು ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರುಹಾಜರಾದರೆ, ಬಸ್‌ ಕಾರ್ಯಾಚರಣೆ ಕಷ್ಟವಾಗುತ್ತದೆ. ಎಐಟಿಯುಸಿ, ಸಿಐಟಿಯು ಎರಡೂ ಕಾರ್ಮಿಕ ಸಂಘಟನೆಗಳಿಗೆ ಸೇರಿದ ನೌಕರರು ನಾಲ್ಕು ನಿಗಮಗಳಲ್ಲಿ ಇರುವುದರಿಂದ ಸರ್ಕಾರಿ ಬಸ್‌ ಕಾರ್ಯಾಚರಣೆ ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಬಸ್‌ ಹಾಗೂ ಆಟೋ ಸೇವೆಯಲ್ಲಿ ವ್ಯತ್ಯಯವಾದರೆ ಸಾರ್ವಜನಿಕರಿಗೆ ಬಂದ್‌ ಬಿಸಿ ತಾಕುವುದು ನಿಶ್ಚಿತ. ಕೆಲವು ಆಟೋ ಸಂಘಟನೆಗಳು ಬಂದ್‌ ಬೆಂಬಲಿಸಿದ್ದರೆ, ಇನ್ನು ಕೆಲವು ಸಂಘಟನೆಗಳು ಬಂದ್‌ ಬೆಂಬಲಿಸಲು ನಿರಾಕರಿಸಿವೆ.

ಯಾವಾಗಲೂ ಬಂದ್‌ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಇರುತ್ತದೆ. ಆದರೆ, ಈ ಬಾರಿ ಎರಡು ದಿನ ಬಂದ್‌ ಇರುವುದರಿಂದ ಮೊದಲ ದಿನ ಸಂಜೆ 6ರ ನಂತರ ಬಸ್‌ಗಳು ಕಾರ್ಯಾಚರಿಸುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬಸ್‌ ಕಾರ್ಯಾಚರಣೆ ಸ್ಥಗಿತಗೊಳಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹಾಗಾಗಿ ಎಂದಿನಂತೆ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಲಾಗಿದೆ. ಬಂದ್‌ ಪರಿಸ್ಥಿತಿ ಅವಲೋಕಿಸಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನಿಸಲಾಗುವುದು.

- ಶಿವಯೋಗಿ ಸಿ.ಕಳಸದ, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ

ಪ್ರಯಾಣ ಮುಂದೂಡಿಕೆ ಒಳ್ಳೆಯದು

ವಿಶೇಷವಾಗಿ ಸಾರಿಗೆ ಕ್ಷೇತ್ರದ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ಸೇವೆ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಿರುವುದರಿಂದ ದೂರದ ಊರಿಗೆ ತೆರಳುವುದನ್ನು ಎರಡು ದಿನ ಮುಂದೂಡುವುದು ಒಳ್ಳೆಯದು.

ಏನಿರುತ್ತೆ?

ಖಾಸಗಿ ಬಸ್‌, ಟ್ಯಾಕ್ಸಿ, ಚಿತ್ರಮಂದಿರ, ಮಾಲ್‌, ಮೆಟ್ರೋ ರೈಲು, ರೈಲು, ವಿಮಾನ, ಆ್ಯಪ್‌ ಆಧಾರಿತ ಟ್ಯಾಕ್ಸಿ, ಆಸ್ಪತ್ರೆ, ಹೋಟೆಲ್‌, ಆ್ಯಂಬುಲೆನ್ಸ್‌, ಔಷಧಿ, ಹಾಲು, ತರಕಾರಿ, ದಿನಪತ್ರಿಕೆ, ಪೆಟ್ರೋಲ್‌-ಡೀಸೆಲ್‌,

ಏನಿರಲ್ಲ?

ಸರ್ಕಾರಿ ಬಸ್‌, ಕೆಲ ಆಟೋಗಳು, ಬಹುತೇಕ ಖಾಸಗಿ ಶಾಲೆಗಳು, ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳು

ಯಾವುದು ಡೌಟು?

ಕೆಲವು ಬ್ಯಾಂಕ್‌ಗಳು, ಸ್ಥಳೀಯ ಸರಕು-ಸಾಗಣೆ ವಾಹನ ಸೇವೆ

click me!