ಒಂದೇ ದಿನ 13 ಗಣಿ ಲೈಸೆನ್ಸ್‌ ನೀಡಿದ್ದ ಸಿಎಂ ಅಖಿಲೇಶ್‌!

By Web DeskFirst Published Jan 8, 2019, 6:19 AM IST
Highlights

ಒಂದೇ ದಿನ 13 ಗಣಿ ಲೈಸೆನ್ಸ್‌ ನೀಡಿದ್ದ ಸಿಎಂ ಅಖಿಲೇಶ್‌!| ಟೀಕೆಗಳ ಬೆನ್ನಲ್ಲೇ ಸಿಬಿಐನಿಂದ ಮಾಹಿತಿ ಬಿಡುಗಡೆ

ನವದೆಹಲಿ[ಜ.08]: ಅಕ್ರಮ ಮರಳು ಗಣಿಕಾರಿಕೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರನ್ನು ವಿಚಾರಣೆಗೆ ಗುರಿಪಡಿಸುವ ತನ್ನ ನಿರ್ಧಾರಕ್ಕೆ ರಾಜಕೀಯ ಬಣ್ಣ ಮೆತ್ತಿಕೊಂಡಿರುವ ಬೆನ್ನಲ್ಲೇ, ಯಾದವ್‌ ವಿರುದ್ಧ ಕ್ರಮ ಕೈಗೊಳ್ಳಲು ಕಾರಣವಾಗಿರುವ ಅಂಶಗಳನ್ನು ಸಿಬಿಐ ಸೋಮವಾರ ಬಿಡುಗಡೆ ಮಾಡಿದೆ.

ಅಖಿಲೇಶ್‌ ಯಾದವ್‌ ಸಿಎಂ ಆಗಿದ್ದ ವೇಳೆ, ಗಣಿಗಾರಿಕೆ ಖಾತೆಯನ್ನೂ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆ ಅವಧಿಯಲ್ಲಿ ಅವರು ಒಟ್ಟು 14 ಗಣಿ ಲೈಸೆನ್ಸ್‌ಗಳನ್ನು ಅನುಮೋದಿಸಿದ್ದರು. ಈ ಪೈಕಿ 13 ಲೈಸೆನ್ಸ್‌ಗಳನ್ನು 2013ರ ಫೆ.17ರಂದು ಒಂದೇ ದಿನ ವಿತರಿಸಿದ್ದರು. ಇದು ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ ಎಂದು ಸಿಬಿಐ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಎರಡು ದಿನಗಳ ಹಿಂದಷ್ಟೇ ಸಿಬಿಐ ಅಧಿಕಾರಿಗಳು, ಅಕ್ರಮ ಮರಳು ಗಣಿಗಾರಿಕೆ ಪ್ರಕರಣ ಸಂಬಂಧ 14 ಸ್ಥಳಗಳ ಮೇಲೆ ದಾಳಿ ನಡೆಸಿ 11 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಈ ಪೈಕಿ ಸಮಾಜವಾದಿ ಪಕ್ಷದ ನಾಯಕರು, ಐಎಎಸ್‌ ಅಧಿಕಾರಿ ಚಂದ್ರಕಲಾ ಹೆಸರು ಕೂಡಾ ಇತ್ತು. ಆದರೆ ಇದು ರಾಜಕೀಯ ಉದ್ದೇಶದಿಂದ ನಡೆಸಿದ ದಾಳಿ ಎಂದು ಎಸ್‌ಪಿ, ಬಿಎಸ್ಪಿ, ಆಮ್‌ಆದ್ಮಿ ಪಕ್ಷಗಳು ಆರೋಪಿಸಿದ್ದವು.

click me!