ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಕಾರ್ನರ್ ಸೈಟ್ ಹರಾಜಿನಲ್ಲಿ ಭರ್ಜರಿ ಲಾಭ ಗಳಿಸಿದೆ. ಬಿಡಿಎ ಮೂಲೆ ನಿವೇಶನದ ಹರಾಜಿನಲ್ಲಿ ಶೇ.50% ಹೆಚ್ಚುವರಿ ಲಾಭ ಗಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಡಿ.17): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಡೆಸುತ್ತಿರುವ ಮೂಲೆ ನಿವೇಶನಗಳ 5ನೇ ಹಂತದ ಇ-ಹರಾಜು ಪ್ರಕ್ರಿಯೆಯಲ್ಲಿ 451 ನಿವೇಶನಗಳ ಪೈಕಿ 317 ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಬೆಲೆಗಿಂತ 94 ಕೋಟಿ ರು.(ಶೇ.50) ಹೆಚ್ಚುವರಿ ಆದಾಯ ಗಳಿಸಿದೆ.
ಬಿಡಿಎ ಐದನೇ ಹಂತದ ಇ-ಹರಾಜು ಪ್ರಕ್ರಿಯೆಯಲ್ಲಿ 1496 ಬಿಡ್ಡುದಾರರು ಪಾಲ್ಗೊಂಡಿದ್ದರು. ವಿವಿಧ ಬಡಾವಣೆಗಳ ಒಟ್ಟು 451 ಮೂಲೆ ನಿವೇಶನಗಳನ್ನು ಹರಾಜಿಗೆ ಇಡಲಾಗಿತ್ತು. ಅದರಲ್ಲಿ 317 ನಿವೇಶನಗಳ ಹರಾಜಾಗಿದ್ದು, 109 ನಿವೇಶನಗಳಿಗೆ ಸಾರ್ವಜನಿಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಉಳಿದ 25 ನಿವೇಶನಗಳು ನಿರೀಕ್ಷಿತ ದರದ ಗುರಿ ತಲುಪದ ಕಾರಣ ಹರಾಜಿನಿಂದ ರದ್ದುಗೊಂಡಿದ್ದವು. ಹರಾಜಾದ 317 ನಿವೇಶನಗಳ ಮೂಲ ಬೆಲೆ 184.57 ಕೋಟಿ ರು.ಗಳಾಗಿದ್ದು, 278.58 ಕೋಟಿ ರು.ಗಳಿಗೆ ಹರಾಜಾಗಿವೆ. ಇದರಿಂದ ಬಿಡಿಎ ಶೇ.50.95 ಅಂದರೆ 94.01 ಕೋಟಿ ರು.ಗಳಷ್ಟು ಹೆಚ್ಚುವರಿ ಆದಾಯ ಗಳಿಸಿದಂತಾಗಿದೆ.
undefined
ನಿರೀಕ್ಷೆಗೂ ಮೀರಿ ಲಾಭ:
ಐದನೇ ಹಂತದ ಇ-ಹರಾಜಿನಲ್ಲಿ ಬನಶಂಕರಿ 6ನೇ ಹಂತ 2ನೇ ಬ್ಲಾಕಿನ ನಿವೇಶನವೊಂದು 1.89 ಕೋಟಿ ರು.ಗಳಿಗೆ ಮಾರಾಟವಾಗಿದೆ. ಈ ನಿವೇಶನದಲ್ಲಿ ಪ್ರತಿ ಚದರ ಮೀಟರ್‌ಗೆ 45 ಸಾವಿರ ರು.ನಂತೆ 54.33 ಲಕ್ಷ ರು.ಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಪ್ರತಿ ಚದರ ಮೀಟರ್ 1.57 ಲಕ್ಷ ರು.ನಂತೆ ಹರಾಜಾಗಿದ್ದು ಅಂತಿಮವಾಗಿ 1.89 ಕೋಟಿ ರು.ಗಳಿಗೆ ಮಾರಾಟವಾಗಿದೆ.
ಜೇಬಿಗೆ ಕತ್ತರಿ: ಬಿಬಿಎಂಪಿಯಿಂದ ಜನವರಿಯಿಂದಲೇ ಕಸ ಶುಲ್ಕ ವಸೂಲಿ..?
ಹಾಗೆಯೇ ಬನಶಂಕರಿ 6ನೇ ಹಂತ 2ನೇ ಬ್ಲಾಕಿನ ಮತ್ತೊಂದು ನಿವೇಶನ ಪ್ರತಿ ಚದರ ಮೀಟರ್‌ಗೆ 45 ಸಾವಿರ ರು. ನಿಗದಿಪಡಿಸಲಾಗಿತ್ತು. ಆದರೆ ಪ್ರತಿ ಚದರ ಮೀಟರ್‌ಗೆ 1.18 ಲಕ್ಷದಂತೆ ಹರಾಜಾಗಿದ್ದು ಅಂತಿಮವಾಗಿ ಈ ನಿವೇಶನ 4.90 ಕೋಟಿ ರು.ಗಳಿಗೆ ಮಾರಾಟವಾಗಿದೆ. ಈ ನಿವೇಶನದಿಂದ ಬಿಡಿಎ 1.86 ಕೋಟಿ ರು.ಗಳನ್ನು ನಿರೀಕ್ಷಿಸಿತ್ತು. ಎಚ್‌ಎಸ್‌ಆರ್ ಲೇಔಟ್ 2ನೇ ಹಂತದಲ್ಲಿ 1.7 ಚ.ಮೀ ವಿಸ್ತೀರ್ಣದ ನಿವೇಶನವು 3.49 ಕೋಟಿ ರು.ಗಳಿಗೆ ಹರಾಜಾಗಿದ್ದು, ಬಿಡಿಎ ಈ ನಿವೇಶನದಿಂದ 1.60 ಕೋಟಿ ರು. ನಿರೀಕ್ಷೆ ಮಾಡಿತ್ತು. ಹೀಗೆ ಹಲವು ನಿವೇಶನಗಳು ಮೂಲ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟವಾಗಿದ್ದರಿಂದ 5ನೇ ಹಂತದಲ್ಲಿ 94 ಕೋಟಿ ರು. ಹೆಚ್ಚುವರಿ ಆದಾಯ ಬಂದಿದೆ ಎಂದು ಬಿಡಿಎ ಅಧಿಕಾರಿಗಳು ‘ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.