
ನವದೆಹಲಿ(ಫೆ.06): ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ತನ್ನ ಪ್ರಧಾನ ಕಚೇರಿಯನ್ನು ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ನಿರ್ಮಿಸಲು ಬಿಸಿಸಿಐ ಇತ್ತೀಚೆಗೆ 40 ಎಕರೆ ಜಮೀನು ಖರೀದಿಸಿತ್ತು. ಅಲ್ಲೇ ತನ್ನ ಪ್ರಧಾನ ಕಚೇರಿಯನ್ನು ತೆರೆಯಲು ಬಿಸಿಸಿಐ ಗಂಭೀರ ಆಲೋಚನೆ ನಡೆಸಿದ್ದು, ಮಂಡಳಿಯ ಹಿರಿಯ ಅಧಿಕಾರಿಗಳು ಈ ಪ್ರಸ್ತಾಪಕ್ಕೆ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.
ಎನ್‌ಸಿಎನಲ್ಲೇ ಪಂಚತಾರಾ ಹೋಟೆಲ್!:
ಸದ್ಯ ಮುಂಬೈನ ಕ್ರಿಕೆಟ್ ಸೆಂಟರ್ ಆವರಣದಲ್ಲಿ ಬಾಡಿಗೆಗೆ ಕಚೇರಿ ಪಡೆದಿರುವ ಬಿಸಿಸಿಐ, ತನ್ನದೇ ಸ್ವಂತ ಜಾಗದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಎನ್‌ಸಿಎನಲ್ಲೇ ಕಚೇರಿ ಆರಂಭಿಸಲು ಮುಂದಾಗುತ್ತಿದೆ. ಸದ್ಯ ಬಿಸಿಸಿಐಗೆ ಹೋಟೆಲ್ ಬಿಲ್‌ಗಳದ್ದೇ ಹೊರೆಯಾಗಿದೆ. ಪ್ರತಿ ಬಾರಿ ಮುಂಬೈ, ನವದೆಹಲಿ, ಬೆಂಗಳೂರು ಎಲ್ಲೇ ಸಭೆ ನಡೆಸಿದರೂ, ಅಧಿಕಾರಿಗಳ ಹಾಗೂ ಸದಸ್ಯರಿಗೆ ಉಳಿದುಕೊಳ್ಳಲು ಪಂಚತಾರಾ ಹೋಟೆಲ್‌ಗಳಲ್ಲಿ ಕೊಠಡಿ ಕಾಯ್ದಿರಿಸಬೇಕಿದೆ. ಜತೆಗೆ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಂಗಳಲ್ಲಿ ಕನಿಷ್ಠ 25 ದಿನ ಪ್ರವಾಸದಲ್ಲಿರುತ್ತಾರೆ. ಹೀಗಾಗಿ ಅವರ ಹೋಟೆಲ್ ಬಿಲ್ ವರ್ಷಕ್ಕೆಒಂದು ಕೋಟಿ ದಾಟುತ್ತಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೂತನವಾಗಿ ನಿರ್ಮಾಣ ಮಾಡಲಿರುವ ಎನ್‌ಸಿಎ ಸಂಕೀರ್ಣದಲ್ಲೇ ಪಂಚತಾರಾ ಹೋಟೆಲ್‌ವೊಂದನ್ನು ತೆರೆದು, ಬೆಂಗಳೂರಲ್ಲೇ ಎಲ್ಲಾ ಸಭೆಗಳನ್ನು ನಡೆಸುವುದರೊಂದಿಗೆ ವೆಚ್ಚ ಕಡಿತಗೊಳಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
ಕಚೇರಿ ಸ್ಥಳಾಂತರಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಬಿಸಿಸಿಐ ಅಧ್ಯಕ್ಷ ಸಿ.ಕೆ.ಖನ್ನಾ, ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ. ‘ಸದ್ಯದ ಕಚೇರಿಯಲ್ಲಿ ಬೇಕಿರುವಷ್ಟು ಜಾಗವಿಲ್ಲ ಹಾಗೂ ಇದನ್ನು ವಿಸ್ತರಿಸಲು ಸಾಧ್ಯವಿಲ್ಲ. ನಮ್ಮದೇ ಸ್ವಂತ ಜಾಗ ಖರೀದಿ ಮಾಡಿರುವಾಗ, ಅಲ್ಲೇ ಕಚೇರಿ ಆರಂಭಿಸಬಹುದು’ ಎಂದು ಖನ್ನಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.