ಬೆಂಗಳೂರಲ್ಲಿ ನಿರ್ಮಾಣವಾಗಲಿದೆ 200 ಕಿ.ಮೀ. ಫುಟ್ಪಾತ್, 9 ಗ್ರೇಡ್ ಸಪರೇಟರ್ಸ್

Published : Mar 26, 2017, 09:05 AM ISTUpdated : Apr 11, 2018, 12:55 PM IST
ಬೆಂಗಳೂರಲ್ಲಿ ನಿರ್ಮಾಣವಾಗಲಿದೆ 200 ಕಿ.ಮೀ. ಫುಟ್ಪಾತ್, 9 ಗ್ರೇಡ್ ಸಪರೇಟರ್ಸ್

ಸಾರಾಂಶ

43 ಪ್ರಮುಖ ರಸ್ತೆ ಶ್ರೇಷ್ಠ ದರ್ಜೆ ಮಟ್ಟದಲ್ಲಿ ಅಭಿವೃದ್ಧಿ | ರುದ್ರಭೂಮಿಗಳ ಸಮಗ್ರ ಸುಧಾರಣೆಗೆ 168 ಕೋಟಿ ಮೀಸಲು | ಬೃಹತ್‌ ಮಳೆನೀರು ಚರಂಡಿ ಅಭಿವೃದ್ಧಿಗೆ 300 ಕೋಟಿ

ಬೆಂಗಳೂರು(ಮಾ. 26): ನಗರದ 43 ಪ್ರಮುಖ ರಸ್ತೆಗಳನ್ನು ಶ್ರೇಷ್ಠ ದರ್ಜೆಗೆ ಅಭಿವೃದ್ಧಿಪಡಿಸುವುದು, 160 ರುದ್ರಭೂಮಿಗಳು ಮತ್ತು ವಿದ್ಯುತ್‌ ಚಿತಾಗಾರಗಳ ನಿರ್ವಹಣೆಗೆ 125 ಕೋಟಿ ರು. ಮೀಸಲು, ತಡೆರಹಿತ ವಾಹನ ಸಂಚಾರಕ್ಕಾಗಿ ಆಯ್ದ 9 ವಾಹನ ದಟ್ಟಣೆ ಜಂಕ್ಷನ್‌ಗಳಲ್ಲಿ ಗ್ರೇಡ್‌ ಸಪರೇಟರ್‌ಗಳ ನಿರ್ಮಾಣ, ವಿವಿಧೆಡೆ ಒಂದು ಸಾವಿರ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ವಿವಿಧ ರಸ್ತೆಗಳ 200 ಕಿ.ಮೀ. ಉದ್ದದ ಪಾದಾಚಾರಿ ಮಾರ್ಗಗಳ ಅಭಿವೃದ್ಧಿ ....
ಇವು, ಬೆಂಗಳೂರಿನ ಬಹುದೊಡ್ಡ ಸಮಸ್ಯೆಯಾದ ಸಂಚಾರ ದಟ್ಟಣೆ, ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಬಿಬಿಎಂಪಿ ಬಜೆಟ್‌ನಲ್ಲಿ ನೀಡಿರುವ ಪ್ರಮುಖ ಕಾರ್ಯಕ್ರಮಗಳು. 

ಈ ಬಾರಿಯ ಬಜೆಟ್‌ನಲ್ಲಿ ಮೂಲಸೌರ್ಕಯಕ್ಕೆ ಹೆಚ್ಚು ನೀಡಲಾಗಿದ್ದು, ನಗರದ ಸುಮಾರು 80 ಕಿ.ಮೀ ಉದ್ದದ ಆಯ್ದ 43 ಪ್ರಮುಖ ರಸ್ತೆಗಳನ್ನು ಶ್ರೇಷ್ಠ ದರ್ಜೆ ಮಟ್ಟದಲ್ಲಿ ಅಭಿವೃದ್ಧಿಪಡಿಲು ಹಾಗೂ ಪಾದಚಾರಿ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು 690 ಕೋಟಿ ರು. ಮೀಸಲಿಡಸಲಾಗಿದೆ. ನಗರದ ಕೇಂದ್ರ ವಾಣಿಜ್ಯ ವಲಯದಲ್ಲಿ 250 ಕೋಟ ರು. ವೆಚ್ಚದಲ್ಲಿ 3ನೇ ಹಂತದ ಟೆಂಡರ್‌ ಶ್ಯೂರ್‌ ಮಾದರಿಯ 25 ಕಿ.ಮೀ. ಉದ್ದದ 25 ಅಂತರ್‌ ಸಂಪರ್ಕರಸ್ತೆಗಳನ್ನು ಸಮಗ್ರ ಮೇಲ್ದರ್ಜೆಗೇರಿಸಲಾಗುವುದು. ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಇರುವ 12 ಕಾರಿಡಾರ್‌ಗಳನ್ನು ಗುರುತಿಸಲಾಗಿದ್ದು, ಇವುಗಳ ಅಭಿವೃದ್ಧಿ ಪಡಿಸಲು ಮತ್ತು ನಿರ್ವಹಣೆ ಮಾಡಲು 150 ಕೋಟಿ ರು. ಮೀಸಲಿರಿಸಲಾಗಿದೆ. 

ವಿದ್ಯುತ್‌ ಚಿತಾಗಾರ: ಬಿಬಿಎಂಪಿ ವ್ಯಾಪ್ತಿಯ 160 ರುದ್ರಭೂಮಿಗಳ ಸಮಗ್ರ ಸುಧಾರಣೆ ಮತ್ತು ನಿರ್ವಹಣೆಗೆ ಒಟ್ಟು 168.50 ಕೋಟ ರು. ಮೀಸಲಿಡಲಾಗಿದೆ. ಇದರಲ್ಲಿ ಚಾಮರಾಜ ಪೇಟೆಯ ರುದ್ರಭೂಮಿಯಲ್ಲಿ ಹೊಸ ವಿದ್ಯುತ್‌ ಚಿತಾಗಾರ ನಿರ್ಮಾಣ, ಹಾಲಿ ಇರುವ ಬನಶಂಕರಿ ಮತ್ತು ಕಲ್ಲಳ್ಳಿ ರುದ್ರಭೂಮಿಯಲ್ಲಿ ಹೆಚ್ಚುವರಿಯಾಗಿ ವಿದ್ಯುತ್‌ ಚಿತಾಗಾರಗಳ ನಿರ್ಮಾಣಕ್ಕೆ 15 ಕೋಟಿ ರು., ರುದ್ರಭೂಮಿಗಳಲ್ಲಿ ಗಿಡಗಳನ್ನು ನೆಟ್ಟು ನಿರ್ವಹಿಸಲು 25 ಕೋಟಿ ರು, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಗೌರವಧನ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಆದರೆ, ಎಷ್ಟುಹೆಚ್ಚಳ ಮಾಡಲಾಗುವುದು ಎಂಬ ವಿವರ ಬಜೆಟ್‌ನಲ್ಲಿ ಇಲ್ಲ. ಪಾದಾಚಾರಿಗಳ ಸುರಕ್ಷತೆಗಾಗಿ 200 ಕಿ.ಮಿ. ಉದ್ದದ ವಿವಿಧ ರಸ್ತೆಗಳ ಪಾದಾಚಾರಿ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲು 200 ಕೋಟಿ ರು.ಗಳನ್ನು ನೀಡಲಾಗಿದೆ. ತಡೆರಹಿತ ವಾಹನ ಸಂಚಾರಕ್ಕಾಗಿ ಆಯ್ದ 9 ವಾಹನ ದಟ್ಟಣೆ ಜಂಕ್ಷನ್‌ಗಳಲ್ಲಿ ಗ್ರೇಡ್‌ ಸಪರೇಟರ್‌ಗಳನ್ನು ನಿರ್ವಹಿಸಲು 421 ಕೋಟಿ ರು., ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕಾಗಿ 150 ಕೋಟಿ ಒದಗಿಸಲಾಗಿದೆ. ಬೃಹತ್‌ ಮಳೆನೀರು ಚರಂಡಿಗಳ ಅಭಿವೃದ್ಧಿಗೆ 300 ಕೋಟಿ ರು. ಅನುದಾನ, ರಸ್ತೆ ಉಬ್ಬುಗಳು, ಲೇನ್‌ ಪಾರ್ಕಿಂಗ್‌ ಸೈನೇಜ್‌, ಮೀಡಿಯನ್‌, ಜಂಕ್ಷನ್‌ ಅಭಿವೃದ್ಧಿ ಕಾಮಗಾರಿಗಳಿಗೆ 200 ಕೋಟಿ ರು. ಅನುದಾನ ಮೀಸಲಿಡಲಾಗಿದೆ. 

ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ವಿವಿಧ ಸ್ಥಳಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸುವುದನ್ನು ಉತ್ತೇಜಿಸಲು 80 ಕೋಟಿ ರೂ. ಹೊಂದಾಣಿಕೆ ಅನುದಾನ ನೀಡುವುದು, ನಗರದ ವಿವಿಧೆಡೆ ಸುಮಾರು ಒಂದು ಸಾವಿರ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣಕ್ಕೆ ಬಜೆಟ್‌ನಲ್ಲಿ 50 ಕೋಟಿ ರು. ಒದಗಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆಗಳ ಮತ್ತು ಪಾರಂಪರಿಕ ಕಟ್ಟಡಗಳ ನವೀಕರಣ ಹಾಗೂ ನಿರ್ವಹಣೆಗೆ 3 ಕೋಟಿ ರು. ನೀಡಲಾಗಿದೆ.

ಕುಡಿಯುವ ನೀರಿಗೆ ತಲಾ 15, 40 ಲಕ್ಷ ಅನುದಾನ
ಕುಡಿಯುವ ನೀರು ನಿರ್ವಹಣೆಗೆ ಹಳೆ ವಾರ್ಡುಗಳಿಗೆ ತಲಾ 15 ಲಕ್ಷ ರು. ಮತ್ತು ಹೊಸ ವಾರ್ಡುಗಳಿಗೆ ತಲಾ 40 ಲಕ್ಷ ರು. ಅನುದಾನ ಮೀಸಲಿಡಲಾಗಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಪಾಲಿಕೆ ವ್ಯಾಪ್ತಿಯ ನಗರಗಳಲ್ಲಿ ಹಾಳಿ ಇರುವ ಐದು ಲಕ್ಷ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳಾಗಿ ಪರಿವರ್ತನೆ, ಕೇಂದ್ರ ಕಚೇರಿಯ ಕೌನ್ಸಿಲ್‌ ಕಟ್ಟಡಗಳಿಗೆ ವಿದ್ಯುತ್‌ ವ್ಯವಸ್ಥೆಯನ್ನು ಸೋಲಾರ್‌ ವ್ಯವಸ್ಥೆಗೆ ಪರಿವರ್ತಿಸಲು 4 ಕೋಟಿ ರು. ಮೀಸಲಿಡಲಾಗಿದೆ. ಹೊಸ ವಲಯಗಳಲ್ಲಿ 12 ವಿವಾಹ ಸಮುದಾಯ ಭವನಗಳ ನಿರ್ಮಿಸಲು ಉದ್ದೇಶಿಸಿ ಇದಕ್ಕೆ 24 ಕೋಟಿ ರು. ಮೀಸಲಿಡಲಾಗಿದೆ. ಹಾಲಿ ಇರುವ ಸಮುದಾಯ ಭವನಗಳ ನಿರ್ವಹಣೆಗೆ 15 ಕೋಟ ರು, ವಾರ್ಡ್‌ಗಳಲ್ಲಿ ಅಗತ್ಯವಿರುವೆಡೆ ವಾರ್ಡ್‌ ಕಚೇರಿಗಳ ನಿರ್ಮಾಣಕ್ಕೆ 10 ಕೋಟಿ ರು, ಸುವರ್ಣ ಪಾಲಿಕೆ ಸೌಧ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 5 ಕೋಟಿ ರು. ಕಾಯ್ದಿರಿಸಲಾಗಿದೆ.

ಬಿಬಿಎಂಪಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಬಹಳಷ್ಟುಯೋಜನೆಗಳನ್ನೇ ಮತ್ತೆ ಘೋಷಿಸಲಾಗಿದೆ. ಇದರ ನಡುವೆ ರುದ್ರಭೂಮಿಗಳು ಮತ್ತು ಚಿತಾಗಾರಗಳ ನಿರ್ವಹಣೆಗೆ ಒಂದೆರಡು ಹೊಸ ಯೋಜನೆಗಳಿವೆ. ಅದೇನೇ ಇರಲಿ ಪ್ರತೀ ವರ್ಷ ಘೋಷಿಸಿದ ಯೋಜನೆಗಳಲ್ಲಿ ಸಾಕಷ್ಟುಅನುಷ್ಠಾನವೇ ಆಗುವುದಿಲ್ಲ. ಘೋಷಿಸಿದ ಎಲ್ಲ ಯೋಜನೆಗಳನ್ನು ಪಾಲಿಕೆ ಚಾಚೂತಪ್ಪದೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು.
- ವಿ. ರವಿಚಂದ್ರ, ನಗರ ಯೋಜನೆ ತಜ್ಞ

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌
ದುಬೈ ಮರುಭೂಮಿಯಲ್ಲಿ ನಿಗೂಢ ಜೀವಿ ಪತ್ತೆ: ಪ್ರವಾಸಿ ಮಹಿಳೆ ಹಂಚಿಕೊಂಡ ವಿಡಿಯೋ ಭಾರೀ ವೈರಲ್!