ಬೆಂಗಳೂರಲ್ಲಿ ಇವೆ ಬ್ಲೇಡ್ ಸೊಸೈಟಿಗಳು - ಎಚ್ಚರ..!

Published : Dec 25, 2017, 07:39 AM ISTUpdated : Apr 11, 2018, 12:47 PM IST
ಬೆಂಗಳೂರಲ್ಲಿ ಇವೆ ಬ್ಲೇಡ್ ಸೊಸೈಟಿಗಳು - ಎಚ್ಚರ..!

ಸಾರಾಂಶ

ಉದ್ಯಾನ ನಗರಿ ಬೆಂಗಳೂರಿನಲ್ಲಿ ಸ್ವಂತ ಮನೆಯ ಕನಸು ಹೊತ್ತು ‘ವಸತಿ ನಿರ್ಮಾಣ ಸಹಕಾರ ಸಂಘದ’ ಕದ ತಟ್ಟುತ್ತಿದ್ದೀರಾ. ಎಚ್ಚರ!

ಬೆಂಗಳೂರು (ಡಿ.25): ಉದ್ಯಾನ ನಗರಿ ಬೆಂಗಳೂರಿನಲ್ಲಿ ಸ್ವಂತ ಮನೆಯ ಕನಸು ಹೊತ್ತು ‘ವಸತಿ ನಿರ್ಮಾಣ ಸಹಕಾರ ಸಂಘದ’ ಕದ ತಟ್ಟುತ್ತಿದ್ದೀರಾ. ಎಚ್ಚರ! ನಿಮ್ಮ ಗೃಹ ನಿರ್ಮಾಣದ ಕನಸು ಕನಸಾಗಿಯೇ ಉಳಿಯಬಹುದು. ಜತೆಗೆ ನಿಮ್ಮ ಶ್ರಮದ ಹಣವೂ ಮೌಲ್ಯ ಕಳೆದುಕೊಳ್ಳಬಹುದು. ಏಕೆಂದರೆ, ಸರಳ ಕಂತುಗಳ ಆಸೆ ತೋರಿಸಿ ಹಣ ಪೀಕುವ ಕೆಲವು ಗೃಹ ನಿರ್ಮಾಣ ಸಹಕಾರ ಸೊಸೈಟಿಗಳು ಹಲವಾರು ವರ್ಷಗಳ ಕಾಲ ನಿವೇಶನ ಹಂಚಿಕೆ ಮಾಡದೆ ಅಲೆದಾಡಿಸುತ್ತಿವೆ.

ಕೊನೆಗೆ ಸೊಸೈಟಿಯ ಆಂತರಿಕ ನಿಯಮಗಳ ನೆಪವೊಡ್ಡಿ ನಿವೇಶನ ನೀಡದೆ 8-10 ವರ್ಷಗಳ ಬಳಿಕ ಬಡ್ಡಿರಹಿತವಾಗಿ ಹಣ ವಾಪಸ್ಸು ನೀಡುತ್ತಿವೆ. ಈ ಮೂಲಕ ಜನರ ಗೃಹ ನಿರ್ಮಾಣದ ಕನಸನ್ನು ಮೊಗ್ಗಿನಲ್ಲೇ ಚಿವುಟಿ ಹಾಕುತ್ತಿವೆ.

ಸೊಸೈಟಿಗಳ ಈ ಕೃತ್ಯಗಳಿಗೆ ಗೃಹ ನಿರ್ಮಾಣ ಸಹಕಾರ ಸಂಘಗಳ ಕಾಯ್ದೆ-1959 ಹಾಗೂ 1960 ಕಾಯ್ದೆಯಲ್ಲಿಯೇ ಅವಕಾಶಗಳಿವೆ. ಯಾವುದೇ ಸೊಸೈಟಿ ತನ್ನ ಸದಸ್ಯರಿಗೆ ಇಷ್ಟು ವರ್ಷದೊಳಗಾಗಿ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಬೇಕು ಎಂಬ ಷರತ್ತು ಕಾಯ್ದೆಗಳಲ್ಲಿಲ್ಲ.

ಹೀಗಾಗಿ 1-2 ವರ್ಷದೊಳಗಾಗಿ ನಿವೇಶನ ಹಂಚಿಕೆ ಮಾಡುವ ಆಸೆ ತೋರಿಸಿ ಹಣ ಪಡೆಯುವ ಹಲವು ಸೊಸೈಟಿಗಳು, 8-10 ವರ್ಷವಾದರೂ ನಿವೇಶನ ಹಂಚಿಕೆ ಮಾಡುತ್ತಿಲ್ಲ. ಅಂತಹ ಸಂದರ್ಭ ಇದನ್ನು ಪ್ರಶ್ನಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಹೀಗಾಗಿ ಸೊಸೈಟಿಗಳ ಲೂಟಿಗೆ ಸರ್ಕಾರದ ನಿಯಮಗಳೇ ಅವಕಾಶ ಮಾಡಿಕೊಟ್ಟಂತಾಗಿದೆ.

ಸರ್ಕಾರಿ ನಿಯಮಗಳಲ್ಲಿನ ಲೋಪಗಳ ದುರ್ಬಳಕೆಗಾಗಿ ಉದ್ಯಾನನಗರಿಯಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 120 ಸೊಸೈಟಿಗಳು ನೋಂದಣಿಯಾಗಿವೆ.

ರಾಜ್ಯದಲ್ಲಿ ಒಟ್ಟಾರೆ 2014 ರ ಮಾರ್ಚ್ ವೇಳೆಗೆ 1577  ಗೃಹ ನಿರ್ಮಾಣ ಸೊಸೈಟಿಗಳು ತಲೆ ಎತ್ತಿವೆ. ಇವುಗಳಲ್ಲಿ ಹಲವು ಸೊಸೈಟಿಗಳು ಬೋರ್ಡ್ ತಿರುವಿ

ಹಾಕಿದ್ದು 1577 ಪೈಕಿ 1157 ಮಾತ್ರ ಅಸ್ತಿತ್ವದಲ್ಲಿವೆ. 2014 ರವರೆಗೆ 257 ಸೊಸೈಟಿಗಳು ಬೆಂಗಳೂರು ನಗರದಲ್ಲೇ ಅಸ್ತಿತ್ವಕ್ಕೆ ಬಂದಿದ್ದವು, ಇದೀಗ 120 ಹೊಸದಾಗಿ ನೋಂದಣಿಯಾಗಿವೆ. ಬೆಂಗಳೂರು ನಗರದಲ್ಲಿ 24 ಸಾವಿರ ಎಕರೆಯಷ್ಟು ಜಮೀನು ಸೊಸೈಟಿಗಳ ಮುಷ್ಟಿಯಲ್ಲಿದ್ದು, ಇವುಗಳಲ್ಲಿ ಕೆಲವು ಸೊಸೈಟಿಗಳು ನಿಯಮಗಳ ಪ್ರಕಾರ ಸೂಕ್ತವಾಗಿ ನಿವೇಶನವನ್ನೂ ಹಂಚಿಕೆ ಮಾಡುತ್ತಿವೆ. ಆದರೆ ಬಹುತೇಕ ಸೊಸೈಟಿಗಳು ಹೇಳಿದ ಗಡುವಿಗೆ ನಿವೇಶನ ಹಂಚಿಕೆ ಮಾಡುತ್ತಿಲ್ಲ.

ರೇರಾ-2016 ಕಾಯ್ದೆಯಡಿ, ನಿಗದಿತ ವೇಳೆಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಬೇಕು ಎಂಬ ಷರತ್ತು ಇದೆ. ಇದು ಗೃಹ ನಿರ್ಮಾಣ ಸೊಸೈಟಿಗಳ ಮೇಲೂ ಪರಿಣಾಮ ಬೀರಲಿದೆ. ಆದರೆ ಹಳೆಯ ಯೋಜನೆಗಳಿಗೆ ಕಾಯ್ದೆ ಅನ್ವಯವಾಗದ ಕಾರಣ ಈಗಾಗಲೇ ತೊಂದರೆ ಅನುಭವಿಸುತ್ತಿರುವ ನೂರಾರು ಸಾರ್ವಜನಿಕರಿಗೆ ನ್ಯಾಯ ದೊರೆಯುವ ಲಕ್ಷಣ ಕಾಣುತ್ತಿಲ್ಲ.

ವ್ಯವಸ್ಥಿತ ಮೋಸ ಹೇಗೆ?: ಶೇ.20ರಿಂದ 30ರಷ್ಟು ಸೊಸೈಟಿಗಳು ಈಗಲೂ ನಿಯಮಬದ್ಧವಾಗಿ ನಿವೇಶನ ಹಂಚಿಕೆ ಮಾಡುವ ಮೂಲಕ ಸಾರ್ವಜನಿಕರ ವಿಶ್ವಾಸ ಉಳಿಸಿಕೊಂಡಿವೆ. ಉಳಿದಂತೆ ಬಹುತೇಕ ಸೊಸೈಟಿಗಳು ಸಾರ್ವಜನಿಕರಿಂದ ನಿವೇಶನ ಹಂಚಿಕೆ ನೆಪದಲ್ಲಿ ಹಣ ಸಂಗ್ರಹಿಸಿ ಅನ್ಯ ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡುತ್ತವೆ. ಅದರಿಂದ ಬರುವ ಲಾಭದಲ್ಲಿ ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆ ಮಾಡುತ್ತವೆ ಎಂದು ಸಹಕಾರ ಇಲಾಖೆ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸುತ್ತಾರೆ.

ಉದಾಹರಣೆಗೆ ಸೀಮಿತ ಸರ್ಕಾರಿ ಉದ್ಯೋಗದ ಹೆಸರಿನಲ್ಲಿ ಸಂಬಂಧಪಟ್ಟ ಉದ್ಯೋಗಿಗಳಿಗೆ ನಿವೇಶನ ಹಂಚಿಕೆ ಮಾಡಲು ಹೌಸಿಂಗ್ ಸೊಸೈಟಿ ನೋಂದಣಿ  ಮಾಡಲಾಗುತ್ತದೆ. ನೌಕರರಿಗೆ ವಿತರಿಸಿ ಉಳಿದ ನಿವೇಶನಗಳನ್ನು ನಾಗರಿಕರಿಗೆ ಹಂಚಲಾಗುವುದು ಎಂದು ಹೇಳಲಾಗುತ್ತದೆ. ಆದರೆ ವಾಸ್ತವವಾಗಿ ಶೇ.2-3ರಷ್ಟು ನಿವೇಶನಗಳನ್ನು ಮಾತ್ರ ಸಂಬಂಧಪಟ್ಟ ನೌಕರರಿಗೆ ನೀಡಲಾಗುತ್ತದೆ. ನಾಗರಿಕರನ್ನು ಆಕರ್ಷಿಸಲು ಪ್ರತಿ ಚದರಡಿಗೆ ಕೇವಲ 400 ರು. ಗಳಂತೆ ನಾಲ್ಕು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಲಾಗುವುದು ಎಂದು ಮಾರ್ಕೆಟಿಂಗ್ ಮಾಡಲಾಗುತ್ತದೆ. ಎಲ್ಲಾ ಸದಸ್ಯರೂ ಪೂರ್ಣ ಹಣ ಪಾವತಿಸುವವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಶುರುವಾಗುವುದಿಲ್ಲ. ಕನಿಷ್ಠ 4-5 ವರ್ಷದವರೆಗೆ ಈ ಹಣ ಅನ್ಯ ವ್ಯಾಪಾರಗಳಿಗೆ ಬಳಕೆಯಾಗುತ್ತಿರುತ್ತದೆ.

ಬಳಿಕ ಇದರಿಂದ ಬಂದ ಆದಾಯದಿಂದ ಲೇಔಟ್ ಅಭಿವೃದ್ಧಿ ಮಾಡಲಾಗುತ್ತದೆ. ಹೀಗಾಗಿ 7-8 ವರ್ಷವಾದರೂ ನಾಗರಿಕರಿಗೆ ನಿವೇಶನ ದೊರೆಯುವುದಿಲ್ಲ. ಪ್ರಶ್ನಿಸಿದರೆ ಸರ್ಕಾರದ ನಿಯಮಗಳಿಂದ ಅಭಿವೃದ್ಧಿ ವಿಳಂಬವಾಗುತ್ತದೆ ಎನ್ನುತ್ತಾರೆ ಎಂದು ಸ್ವತಃ ಅಧಿಕಾರಿಗಳೇ ಕನ್ನಡಪ್ರಭಕ್ಕೆ ವಿವರಿಸುತ್ತಾರೆ.

8 ವರ್ಷದ ಬಳಿಕವೂ ಗ್ಯಾರಂಟಿ ಇಲ್ಲ: ಹೌದು, ನಿವೇಶನದ ಪೂರ್ಣ ಪ್ರಮಾಣದ ಹಣ ಪಾವತಿಸಿ 7-8 ವರ್ಷ ಕಾದರೂ ನಿವೇಶನ ಸಿಗುವ ಖಾತ್ರಿ ಇಲ್ಲ.ಏಕೆಂದರೆ, ಸೊಸೈಟಿ ಬೈಲಾದಲ್ಲಿ ಸಂಬಂಧಪಟ್ಟ ಉದ್ಯೋಗಿಗಳಿಗೆ ಮೊದಲ ಆದ್ಯತೆ ಎಂದು ಹೇಳಿರಲಾಗುತ್ತದೆ. ನೀವು ಹಣ ಪಾವತಿಸುವಾಗ ನಿಮ್ಮ ಜೇಷ್ಠತೆ ಸಂಖ್ಯೆ 100 ಎಂದಿದ್ದರೆ ನಿವೇಶನ ಹಂಚಿಕೆ ವೇಳೆಗೆ 400  ಎಂದಾಗಿರಬಹುದು. ಇದನ್ನು ಪ್ರಶ್ನಿಸಿದರೆ ಮಧ್ಯದಲ್ಲಿ ಸಂಬಂಧಪಟ್ಟ ಉದ್ಯೋಗದ ನೌಕರರು ಹೆಚ್ಚಾಗಿ ಸೇರ್ಪಡೆ ಯಾಗಿದ್ದಾರೆ. ನಿಯಮಗಳ ಪ್ರಕಾರ ಅವರಿಗೆ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ. ಆದರೆ ವಾಸ್ತವವಾಗಿ ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಿಕೊಂಡಿರುತ್ತಾರೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!