
ಬೆಂಗಳೂರು (ಡಿ.25): ಗುಜರಾತ್ ಚುನಾವಣಾ ಫಲಿತಾಂಶ ಬೆನ್ನಲ್ಲೇ ರಾಜ್ಯದಲ್ಲಿ ಶಾಸಕರ ‘ಮಹಾ ವಲಸೆ’ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಅನ್ಯಪಕ್ಷಗಳಿಂದ ಬಿಜೆಪಿಗೆ ವಲಸೆ ಬರಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದವರು ಗುಜರಾತ್ ಫಲಿತಾಂಶದ ಬಳಿಕ ಇದೀಗ ಆ ಬಗ್ಗೆ ಮೀನಮೇಷ ಎಣಿಸುತ್ತಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಜೆಡಿಎಸ್‌ನಿಂದ ಅನೇಕ ಶಾಸಕರು ಹಾಗೂ ಮುಖಂಡರು ಬಿಜೆಪಿಯ ಬಾಗಿಲು ತಟ್ಟಿದ್ದರು. ಜತೆಗೆ ಬಿಜೆಪಿ ನಾಯಕರು ಕೂಡ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಇತರ ಪಕ್ಷಗಳ ಶಾಸಕರು, ಪ್ರಭಾವಿ ಮುಖಂಡರಿಗೆ ಗಾಳ ಹಾಕಿ ವಿಶೇಷ ಪ್ರಯತ್ನ ನಡೆಸಿದ್ದರು.
ಮಾತುಕತೆ ನಡೆದಿದ್ದರೂ, ಗುಜರಾತ್ ಫಲಿತಾಂಶದ ಬಳಿಕ ವಲಸೆ ಬರುವುದಾಗಿ ಇವರೆಲ್ಲ ಭರವಸೆ ನೀಡಿದ್ದರು ಎನ್ನಲಾಗಿತ್ತು. ಅಂದರೆ, ಗುಜರಾತ್‌ನಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸಿದರೆ ಪಕ್ಷಾಂತರ ಮಾಡುವ ಉದ್ದೇಶವನ್ನು ಇವರು ಹೊಂದಿದ್ದರು ಎಂದು ತಿಳಿದು ಬಂದಿತ್ತು.
ಆದರೆ, ಇದೀಗ ಫಲಿತಾಂಶ ಹೊರಬಿದ್ದು ಒಂದು ವಾರವಾಗಿದೆ. ಬಿಜೆಪಿ ಜಯಭೇರಿ ಬಾರಿಸಿದರೂ ಆ ಪಕ್ಷದತ್ತ ಒಲವು ತೋರಿದ್ದವರು ಮೀನಮೇಷ ಎಣಿಸುತ್ತಿದ್ದಾರೆ. ಅನೇಕರು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ, ಬಿಜೆಪಿ ನಾಯಕರ ಸಂಪರ್ಕಕ್ಕೂ ಸಿಗದೆ ನುಣುಚಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಗುಜರಾತ್‌ನಲ್ಲಿ ಬಿಜೆಪಿ ಸರಳ ಬಹುಮತ ಗಳಿಸಿ ಸರ್ಕಾರ ರಚಿಸಲು ಸಜ್ಜಾಗಿದ್ದರೂ ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರಲ್ಲಿ ಬಿಜೆಪಿ ಬಗ್ಗೆ ಫಲಿತಾಂಶಕ್ಕೂ ಮೊದಲು ಇದ್ದ ಒಲವು ಕಡಿಮೆಯಾಗಿದೆ. ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದವರಿಗೆ ಇದೀಗ ಆ ಬಗ್ಗೆ ಮರುಚಿಂತನೆ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾತ್ರೆ ಹಮ್ಮಿಕೊಂಡು ರಾಜ್ಯ ಸುತ್ತುತ್ತಿರುವುದರಿಂದ ದಿನೇ ದಿನೇ ರಾಜ್ಯದಲ್ಲಿ ಪಕ್ಷ ಬಲಗೊಳ್ಳುತ್ತಿರುವ, ಸಿದ್ದರಾಮಯ್ಯ ಅವರ ವರ್ಚಸ್ಸು ಹೆಚ್ಚತೊಡಗಿದ ಭಾವನೆ ವ್ಯಕ್ತವಾಗುತ್ತಿದೆ. ಹೀಗಿರುವಾಗ ಬಿಜೆಪಿಗೆ ಹೋಗಬೇಕೆ, ಬೇಡವೆ ಎಂಬ ಗೊಂದಲದಲ್ಲಿ ಕೆಲವರು ಸಿಲುಕಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇನ್ನು ರಾಜ್ಯದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಹೆಚ್ಚು ಎಂಬ ಪರಿಸ್ಥಿತಿ ಕಂಡುಬರತೊಡಗಿದ್ದರಿಂದ ಬಿಜೆಪಿಗೆ ಹೋಗುವ ಬಗ್ಗೆ ಕೆಲ ಜೆಡಿಎಸ್ ಶಾಸಕರು ಕೂಡ ಗೊಂದಲದಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.