
ನವದೆಹಲಿ: ತೆರಿಗೆ ವಿನಾಯ್ತಿ ಬೇಕೆ? ಹಾಗಿದ್ದರೆ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿ! ಈ ಹೊಸ ನಿಯಮ 2018ರ ಏ.1ರಿಂದ ಜಾರಿಗೆ ಬರಲಿದೆ. ಮೊನ್ನೆಯ ಕೇಂದ್ರ ಬಜೆಟ್‌ನಲ್ಲಿ ಹೊಸ ನಿಯಮ ಸೇರಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಜನರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದನ್ನು ಮರೆತರೆ ಅಥವಾ ಕೊನೆಯ ದಿನಾಂಕದ ನಂತರ ರಿಟರ್ನ್ಸ್ ಫೈಲ್ ಮಾಡಿದರೆ ಅವರಿಗೆ ತೆರಿಗೆ ವಿನಾಯ್ತಿಗಳು ಸಿಗದಂತೆ ಮಾಡಿದ್ದಾರೆ.
ಇಷ್ಟು ವರ್ಷ ಯಾರಾದರೂ ತೆರಿಗೆ ರಿಟರ್ನ್ಸ್ ಸಲ್ಲಿಸುವುದನ್ನು ಮರೆತರೆ ಅಥವಾ ಕೊನೆಯ ದಿನಾಂಕ ಮುಗಿದ ಮೇಲೆ ರಿಟರ್ನ್ಸ್ ಫೈಲ್ ಮಾಡಿದರೆ ಅದಕ್ಕೆ ಸಣ್ಣ ಮೊತ್ತದ ದಂಡ ಪಾವತಿಸಿ ಸೆಕ್ಷನ್ 80 ಅಡಿ ಸಿಗುವ ನಾನಾ ತೆರಿಗೆ ವಿನಾಯ್ತಿಗಳನ್ನು ಪಡೆಯಬಹುದಿತ್ತು. ಈ ಸಡಿಲ ನಿಯಮವನ್ನು ಬಿಗಿಗೊಳಿಸಿರುವ ಜೇಟ್ಲಿ, ಹಣಕಾಸು ಮಸೂದೆಯ ಸೆಕ್ಷನ್ 23ಕ್ಕೆ ತಿದ್ದುಪಡಿ ತಂದಿದ್ದಾರೆ.
ಅದರನ್ವಯ, ನಿಗದಿತ ದಿನಾಂಕದೊಳಗೆ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡದೆ ಇದ್ದರೆ ಮಕ್ಕಳ ಶಾಲೆ ಶುಲ್ಕ, ಟ್ಯಾಕ್ಸ್‌ಫ್ರೀ ಹೂಡಿಕೆಗಳು, ಇನ್ಷೂರೆನ್ಸ್ ಪ್ರೀಮಿಯಂ ಮುಂತಾದವುಗಳಿಗೆ ಸಿಗುತ್ತಿದ್ದ ತೆರಿಗೆ ವಿನಾಯ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.
ಈ ನಿಯಮ ವೈಯಕ್ತಿಕ ತೆರಿಗೆದಾರರು ಹಾಗೂ ಕಾರ್ಪೊರೇಟ್ ತೆರಿಗೆದಾರರಿಬ್ಬರಿಗೂ ಅನ್ವಯಿಸುತ್ತದೆ. ಈ ಹಿನ್ನೆಲೆಯಲ್ಲಿ, ಸೆಕ್ಷನ್ 80ಸಿ, 80ಡಿ, 80ಟಿಟಿಎ, 80ಜಿ ಅಡಿ ಸಿಗುವ ತೆರಿಗೆ ವಿನಾಯ್ತಿಗಳನ್ನು ಪಡೆಯಬೇಕೆಂದರೆ ಈ ವರ್ಷದಿಂದ ನಿಗದಿತ ಅವಧಿಯೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.