ತಿವಾರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಹೋಟೆಲ್'ನಲ್ಲಿ 25 ಸಿಗರೇಟ್ ತುಂಡುಗಳು ಪತ್ತೆ

By Suvarna Web DeskFirst Published May 30, 2017, 11:15 AM IST
Highlights

ಅನುರಾಗ್ ತಿವಾರಿ ಮಾನಸಿಕವಾಗಿ ನೊಂದಿದ್ದು ಹೆಚ್ಚು ಧೂಮಪಾನ ಮಾಡಿರುವುದು ಸಾವಿಗೆ ಕಾರಣವಿರಬಹುದು. ಮಾನಸಿಕ ಖಿನ್ನತೆಗೆ ಒಳಗಾಗಿ ಒತ್ತಡಕ್ಕೆ ಮಣಿದು ಹೆಚ್ಚು ಧೂಮಪಾನ ಮಾಡಿ ಸಾವನ್ನಪ್ಪಿರಬಹುದು ಅಂತಲೂ ಹೇಳಲಾಗ್ತಿದೆ. ಸಿಗರೇಟ್​ ತುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು(ಮೇ 30): ಕರ್ನಾಟಕದ ಆಹಾರ ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ತಿವಾರಿ ತಂಗಿದ್ದ ಹೋಟೆಲ್'​ನಲ್ಲಿ 25 ಸುಟ್ಟ ಸಿಗರೇಟ್ ತುಂಡುಗಳು ಪತ್ತೆಯಾಗಿವೆ.

ಉತ್ತರ ಪ್ರದೇಶ ಪೊಲೀಸರು ತಿವಾರಿ ಸಾವಿನ ಕುರಿತು ತನಿಖೆ ಕೈಗೊಂಡ ಸಂದರ್ಭದಲ್ಲಿ ಸಿಗರೇಟ್ ತುಂಡುಗಳು ಪತ್ತೆಯಾಗಿದ್ದು, ಇವು ತನಿಖೆಗೆ ಸುಳಿವು ನೀಡಲಿವೆ ಎನ್ನುವುದು ಪೊಲೀಸರ ಅಭಿಪ್ರಾಯವಾಗಿದೆ.

ಅನುರಾಗ್ ತಿವಾರಿ ಮಾನಸಿಕವಾಗಿ ನೊಂದಿದ್ದು ಹೆಚ್ಚು ಧೂಮಪಾನ ಮಾಡಿರುವುದು ಸಾವಿಗೆ ಕಾರಣವಿರಬಹುದು. ಮಾನಸಿಕ ಖಿನ್ನತೆಗೆ ಒಳಗಾಗಿ ಒತ್ತಡಕ್ಕೆ ಮಣಿದು ಹೆಚ್ಚು ಧೂಮಪಾನ ಮಾಡಿ ಸಾವನ್ನಪ್ಪಿರಬಹುದು ಅಂತಲೂ ಹೇಳಲಾಗ್ತಿದೆ. ಸಿಗರೇಟ್​ ತುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮೇ 17ರಂದು ತಮ್ಮ ಜನ್ಮದಿನದಂದೇ ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅವರು ತಂಗಿದ್ದ ಸರ್ಕಾರಿ ಗೆಸ್ಟ್​ ಹೌಸ್'​ನಿಂದ 50 ಕೀ.ಮೀ.ದೂರದಲ್ಲಿ ಅವರ ಶವ ಪತ್ತೆಯಾಗಿತ್ತು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತಾದರೂ, ಅವರ ಸಾವಿನ ಕುರಿತಾಗಿ ಅನುಮಾನ ವ್ಯಕ್ತವಾಗಿದೆ.

ಉತ್ತರಪ್ರದೇಶ ಪೊಲೀಸರು ಅನುರಾಗ್ ತಿವಾರಿ ಸಾವನ್ನು ಒಂದು ಕೊಲೆ ಎಂದು ಎಫ್'ಐಆರ್ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರ್ನಾಟಕದ ಆಹಾರ ಇಲಾಖೆಯಲ್ಲಿ ಅನುರಾಗ್ ತಿವಾರಿ ಕೆಲ ಪ್ರಮುಖ ಹಗರಣಗಳನ್ನು ಬಯಲು ಮಾಡುವವರಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಿವಾರಿ ನಿಗೂಢ ಸಾವು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.

click me!