
ಬೆಂಗಳೂರು(ಜ.18): ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶೀನಾಥ್(67) ಆನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅನುಭವ, ಅಜಗಜಾಂತರ, ಅನಂತನ ಅವಾಂತರ, ಅಪರಿಚಿತ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿದ್ದ ನಟ ಕಾಶೀನಾಥ್ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇತ್ತೀಚಿಗೆ ತರುಣ್ ಸುಧೀರ್ ನಿರ್ದೆಶನದ ಚೌಕಾ ಚಿತ್ರದಲ್ಲೂ ನಟಿಸಿದ್ದರು. ಅನಾರೋಗ್ಯದ ಕಾರಣ ಕಳೆದ 2 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಟ ಉಪೇಂದ್ರ, ಸಂಗೀತ ನಿರ್ದೇಶಕ ವಿ. ಮನೋಹರ್, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು.
ವಿಜ್ಞಾನಿ ಆಗಬೇಕೆಂದಿದ್ದವರು ನಟರಾದರು
ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರಾದರೂ ಓದಿದ್ದು ಬೆಳದಿದ್ದಲ್ಲ ಬೆಂಗಳೂರಿನಲ್ಲಿ. ಬಾಲ್ಯದಿಂದಲೂ ವಿಜ್ಞಾನಿಯಾಗಬೇಕೆಂಬ ಗುರಿಯಿತ್ತು. ಆದರೆ ಸೆಳೆದು ಪೋಷಿಸಿದ್ದು ಮಾತ್ರ ಕನ್ನಡ ಚಿತ್ರರಂಗ.
ತಮ್ಮದೆ ಹೊಸ ಅಲೆಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇವರ ನಿರ್ದೇಶನದ ಅನುಭವ, ಅವನೆ ನನ್ನ ಗಂಡ, ಅಜಗಜಾಂತರ,ಅಪರಿಚಿತ ಚಿತ್ರಗಳು ಸ್ಯಾಂಡಲ್'ವುಡ್'ನಲ್ಲಿ ನೂತನ ಮೈಲಿಗಲ್ಲನ್ನು ಸ್ಥಾಪಿಸಿದವು. ಸುಧಾರಾಣಿ ಜೊತೆ ನಟಿಸಿದ ಅವನೇ ನನ್ನ ಗಂಡ 1989ರಲ್ಲಿ ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷ ಮೀರಿದ ಪ್ರದರ್ಶನ ಕಂಡಿತ್ತು. ಕಡಿಮೆ ಬಜೆಟ್'ನಲ್ಲಿ ನಿರ್ಮಿಸಿ, ನಿರ್ದೇಶಿಸುತ್ತಿದ್ದ ಕಾಶಿನಾಥ್ ಅವರ ಚಿತ್ರಗಳು ಗಲ್ಲಪೆಟ್ಟಿಗೆಯಲ್ಲಿ ಸೂರೆಯೊಡೆದಿದ್ದವು. ಇತ್ತೀಚಿಗೆ ದ್ವಾರಕೀಶ್ ನಿರ್ಮಾಣದ ತರುಣ್ ಸುಧೀರ್ ನಿರ್ದೇಶನದ ಚೌಕ ಚಿತ್ರ ಇವರ ಕೊನೆಯ ಅಭಿನಯದ ಚಿತ್ರ.
ಹಲವು ಕಲಾವಿದರ ಪರಿಚಯ
ಕಾಶಿನಾಥ್ ಚಿತ್ರರಂಗದ ಪಯಣದಲ್ಲಿ 43 ಚಿತ್ರಗಳಲ್ಲಿ ಅಭಿನಯ, 15 ನಿರ್ದೇಶನ, 11 ಚಿತ್ರಗಳನ್ನು ನಿರ್ಮಿಸಿದ್ದಾರೆ. ನಟ ಉಪೇಂದ್ರ, ಸಂಗೀತ ನಿರ್ದೇಶಕ ವಿ. ಮನೋಹರ್, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಟಿ ಅಭಿನಯ, ಉಮಾಶ್ರೀ ಸೇರಿದಂತೆ ಹಲವು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.