ಹೈಕ ಬಗ್ಗೆ ದೂರದೃಷ್ಟಿ ಇಲ್ಲದ ರಾಜಕಾರಣಿ ನಾಲಾಯಕ್: ಖರ್ಗೆ'ಗೆ ಹೆಗಡೆ ಪರೋಕ್ಷ ಟಾಂಗ್

By Suvarna Web DeskFirst Published Jan 18, 2018, 8:49 AM IST
Highlights

. ಹೈದ್ರಾಬಾದ್ ಕರ್ನಾಟಕ ಪ್ರದೇಶ ಒಣ ಪ್ರದೇಶ. ವ್ಯವಸಾಯ ಮಾಡುವುದು ತುಂಬ ಕಷ್ಟ, ಅಭಿವೃದ್ಧಿಗೆ ಅವಕಾಶವಿಲ್ಲ, ಇಲ್ಲಿನ ಜನ ಕಷ್ಟಪಟ್ಟು ದುಡಿಯುತ್ತಾರೆ ಎಂಬುದನ್ನು ಕೇಳಿದ್ದೇನೆ. ಇಲ್ಲಿನ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಪ್ರದೇಶ ಅಭಿವೃದ್ಧಿಯಾಗಿಲ್ಲ

ಕಲಬುರಗಿ/ಯಾದಗಿರಿ(ಜ.18): ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಭವಿಷ್ಯದ ಅಭಿವೃದ್ಧಿ ಕುರಿತಂತೆ ದೂರದೃಷ್ಟಿ, ಯೋಜನೆಗಳನ್ನು ತರುವಲ್ಲಿ ಇಲ್ಲಿನ ರಾಜಕೀಯ ನಾಯಕರು ವಿಫಲರಾಗುವ ಜೊತೆಗೆ ಭವಿಷ್ಯದ ಕಲ್ಪನೆ ಯಿಲ್ಲದವರು, ರಾಜಕಾರಣಿ ಆಗಲಿಕ್ಕೆ ನಾಲಾಯಕ್ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿ ರುವ ಡಾ. ಮಲ್ಲಿಕಾರ್ಜುನ ಖರ್ಗೆ, ಪ್ರತಿಯೊಂದಕ್ಕೂ ಕೆಟ್ಟದಾಗಿ ಮಾತನಾಡುವ ಹೆಗಡೆ ಅವರು ವಾಸ್ತವ ಸ್ಥಿತಿ ತಿಳಿದುಕೊಂಡು ಮಾತನಾಡಬೇಕು ತಿರುಗೇಟು ನೀಡಿದ್ದಾರೆ. ಕಲಬುರಗಿಯಲ್ಲಿ ಸ್ಕಿಲ್ ಆನ್ ವ್ಹೀಲ್ಸ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅನಂತ್‌ಕುಮಾರ್ ಹೆಗಡೆ, ನಂಬಿರುವ ಲಕ್ಷಾಂತರ ಜನರ ಬದುಕಿಗಾಗಿ ಕಾಯಕಲ್ಪ ಕೊಡುವ ದೂರದೃಷ್ಟಿ ಜನನಾಯಕ ಹೊಂದಿರಲೇಬೇಕು.

ಮುಂದೆ ಅವರ ಬದುಕಿನಲ್ಲಿ ಬೆಳಕು ಮೂಡಲಿ ಎಂದು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅವರಲ್ಲಿ ಹೊಸ ಚೈತನ್ಯ ತುಂಬಿ ಭವಿಷ್ಯ ನಿರ್ಮಾಪಕರಾಗಿ ರಾಜಕಾರಣಿಗಳು ಕೆಲಸ ಮಾಡಬೇಕು. ಆದರೆ ಹೈದರಬಾದ್ ಕರ್ನಾಟಕದ ಭಾಗದಲ್ಲಿ ಹಾಗೂ ಕಲಬುರಗಿಯಲ್ಲಿ ಈ ಕೆಲಸ ನಡೆದಿಲ್ಲ ಎಂದು ಬೇಸರ ಹೊರಹಾಕಿದರು.

ರಾಜಕೀಯ ಕುರ್ಚಿ ತಮಾಷೆ, ಮಜಾ ಮಾಡಕ್ಕೆ ಅಲ್ಲ, ಅದೊಂದು ಜವಾಬ್ದಾರಿಯ ಕುರ್ಚಿಯಾಗಿದೆ. ನಮ್ಮನ್ನು ನಂಬಿ ಮತ ಹಾಕಿದ ಜನಕ್ಕೆ ಬದುಕು ಕಟ್ಟಿಸಿಕೊಡದ ರಾಜಕಾರಣಕ್ಕೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೈದ್ರಾಬಾದ್ ಕರ್ನಾಟಕ ಪ್ರದೇಶ ಒಣ ಪ್ರದೇಶ. ವ್ಯವಸಾಯ ಮಾಡುವುದು ತುಂಬ ಕಷ್ಟ, ಅಭಿವೃದ್ಧಿಗೆ ಅವಕಾಶವಿಲ್ಲ, ಇಲ್ಲಿನ ಜನ ಕಷ್ಟಪಟ್ಟು ದುಡಿಯುತ್ತಾರೆ ಎಂಬುದನ್ನು ಕೇಳಿದ್ದೇನೆ. ಇಲ್ಲಿನ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಪ್ರದೇಶ ಅಭಿವೃದ್ಧಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಹೈಕ ಪ್ರದೇಶ ಇಷ್ಟೊಂದು ಹಿಂದುಳಿದಿದೆ ಎಂಬುದು ಗೊತ್ತಿದ್ದರೆ ನೂರಾರು ಕಂಪನಿಗಳನ್ನು ಕರೆದುಕೊಂಡು ಬರುತ್ತಿದ್ದೆ ಎಂದರು.

ಖರ್ಗೆ ತಿರುಗೇಟು

ಇನ್ನು ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಮಲ್ಲಿಕಾರ್ಜುನ ಖರ್ಗೆ, ಪ್ರತಿಯೊಂದಕ್ಕೂ ಕೆಟ್ಟದಾಗಿ ಮಾತನಾಡುವ ಹೆಗಡೆ ಅವರು ವಾಸ್ತವ ಸ್ಥಿತಿ ತಿಳಿದುಕೊಂಡು ಮಾತನಾಡಬೇಕು ಎಂದು ಹೇಳಿದರು. ನಿಜಾಮರ ಆಡಳಿತದ ಹೈದರಾಬಾದ್ ಕರ್ನಾಟಕ ಭಾಗವನ್ನು ಸಾಂವಿಧಾನಿಕವಾಗಿ 371 (ಜೆ) ಜಾರಿಗೆ ತಂದು ಈ ಭಾಗದಲ್ಲಿ ಶಿಕ್ಷಣ, ಉದ್ಯೋಗಕ್ಕೆ ಆದ್ಯತೆ ನೀಡುವುದರ ಜೊತೆಗೆ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಹೆದ್ದಾರಿ, ಆಲಮಟ್ಟಿ ಡ್ಯಾಂ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಸಂದರ್ಭ ಬಂದಾಗ ಹೆಗಡೆಗೆ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.

click me!