Raita Ratna Award 2022 ಸುಸ್ಥಿರ ಕೃಷಿಯಲ್ಲಿ ಯಶಸ್ಸು ಸಾಧಿಸಿದ ಅಬ್ದುಲ್‌ ಖಾದರ್‌

By Vaishnavi ChandrashekarFirst Published Mar 24, 2022, 11:47 AM IST
Highlights

ಸುವರ್ಣನ್ಯೂಸ್‌- ಕನ್ನಡಪ್ರಭ 2022ನೇ ಸಾಲಿನ ರೈತ ರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಅಬ್ದುಲ್‌ ಖಾದರ್‌ ಆಯ್ಕೆಯಾಗಿದ್ದಾರೆ. ಸಾಧಕ ರೈತನಿಗೆ ಗೌರವ ಸಮರ್ಪಣೆ.
 

ಧೀರಜ್‌ ಪೊಯ್ಯೆಕಂಡ ಮಂಗಳೂರು

ಪಾರಂಪರಿಕವಾಗಿ ಭತ್ತ ಕೃಷಿಯನ್ನು ಮಾಡುತ್ತಾ, ವಾಣಿಜ್ಯ ಬೆಳೆಗಳಾದ ಅಡಕೆ, ತೆಂಗು, ಕಾಳು ಮೆಣಸು ಹಾಗೂ ಬಾಳೆ ಕೃಷಿಯತ್ತ ಹೊರಳಿದ ರೈತರು, ಏಕ ಬೆಳೆಯನ್ನು ನೆಚ್ಚಿಕೊಂಡಿದ್ದರೆ ನಷ್ಟವನ್ನು ಅನುಭವಿಸಬೇಕಾದೀತು ಅನ್ನುವ ಮುನ್ನೆಚ್ಚರಿಕೆ ಹಾಗೂ ಕೃಷಿಯ ಅನುಭವದಿಂದ ಸಮಗ್ರ ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸು ಸಂಪಾದಿಸಿದವರು. ತನ್ನ ಅನುಭವದ ಜ್ಞಾನವನ್ನು ಇತರ ರೈತರಿಗೂ ಧಾರೆ ಎರೆಯುವ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ಕೊಡುತ್ತಿರುವವರು.

ಇವರ ಹೆಸರು ಅಬ್ದುಲ್‌ ಖಾದರ್‌. ವಯಸ್ಸು 55. ರೈತ ಕುಟುಂಬದಿಂದ ಬಂದಿರುವ ಇವರು, ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಸಣ್ಣಬಯಲಿನವರು. ಕಲಿತಿದ್ದು ಐದನೇ ತರಗತಿ. ಕೃಷಿ ಕುಟುಂಬವಾಗಿದ್ದರಿಂದ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿಕೊಂಡ ಅಬ್ದುಲ್‌ ಖಾದರ್‌, ವಾಣಿಜ್ಯ ಬೆಳೆಗಳಿಂದ ಹಿಡಿದು, ಹಣ್ಣು ತರಕಾರಿ ಸೇರಿದಂತೆ ಜೇನು ಸಾಕಣೆಯನ್ನೂ ಮಾಡಿದರು.

ಮೊದಲು ರೆಡ್‌ ಲೇಡಿ ತೈವಾನ್‌ ಪಪ್ಪಾಯ ಬೆಳೆದ ಅವರು, ಸದ್ಯ ಎರಡು ವರ್ಷದಿಂದ ಡ್ರ್ಯಾಗನ್‌ ಫä್ರಟ್‌ ಬೆಳೆದು ಲಾಭ ಗಳಿಸುತ್ತಿದ್ದಾರೆ. ತಮ್ಮ ಡ್ರ್ಯಾಗನ್‌ ಫä್ರಟ್‌ ಬೆಳೆಗೆ ಒಂದು ವರ್ಷ ಮೊದಲೇ ಗ್ರಾಹಕರಿಂದ ಬೇಡಿಕೆ ಗಳಿಸುತ್ತಿರುವುದು ಇವರ ಸಾಧನೆ. ಡ್ರ್ಯಾಗನ್‌ ಫä್ರಟ್‌ ಮರುಭೂಮಿ ಸಸ್ಯದ ಪ್ರಭೇದವಾಗಿರುವುದರಿಂದ ಕಡಿಮೆ ನೀರು ಹಾಗೂ ಕಡಿಮೆ ನಿರ್ವಹಣೆ ಸಾಕಾಗುತ್ತದೆ. ಇದರಿಂದ ಕೂಲಿ ಕೆಲಸವೂ ಉಳಿತಾಯವಾಗುತ್ತದೆ. ಕರಾವಳಿ ಪ್ರದೇಶದಲ್ಲಿ ಡ್ರ್ಯಾಗನ್‌ ಫä್ರಟ್‌ ಅನ್ನು ಯಶಸ್ವಿಯಾಗಿ ಬೆಳೆದು ಲಾಭ ಗಳಿಸಬಹುದು ಅನ್ನುವುದು ಖಾದರ್‌ ಅವರ ಅನುಭವದ ಮಾತು. ಏಪ್ರಿಲ್‌ನಲ್ಲಿ ಹೂವು ಬಿಟ್ಟರೆ ನವೆಂಬರ್‌ ತನಕ ನಿರಂತರವಾಗಿ ಹಣ್ಣು ಲಭ್ಯವಾಗುವುದರಿಂದ ವರ್ಷಕ್ಕೆ ಆರು ತಿಂಗಳು ಇದರಿಂದ ಆದಾಯ ಗಳಿಸಬಹುದಾಗಿದೆ.

ವೈವಿಧ್ಯತೆ ಇದ್ದರೆ ಮಾತ್ರ ಬದುಕಲು ಸಾಧ್ಯ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದರೆ ಲಾಭ ಗಳಿಸಬಹುದು. ಇಲ್ಲದಿದ್ದರೆ ಕೃಷಿ ಉತ್ಪನ್ನಗಳ ಆದಾಯದ ಬಹುಪಾಲು ಮಧ್ಯವರ್ತಿಗಳ ಪಾಲಾಗುತ್ತದೆ. ಕೃಷಿ ಈಗ ಮೊದಲಿನ ಹಾಗೆ ಕಷ್ಟಇಲ್ಲ. ಬೇಕಾದಷ್ಟುಮಾಹಿತಿಗಳು ಅಂತರ್ಜಾಲದಲ್ಲಿ ಲಭಿಸುತ್ತದೆ. ಅದನ್ನು ಬಳಸಿಕೊಂಡು ಸುಧಾರಣೆ ಸಾಧ್ಯ.- ಅಬ್ದುಲ್‌ ಖಾದರ್‌

ಗಿಡ ನೆಟ್ಟು ಒಂದೇ ವರ್ಷದಲ್ಲಿ ಫಸಲು ನೀಡುವ ವಿಯೆಟ್ನಾಂ ಸೂಪರ್‌ ಹಲಸು, ಖಾದರ್‌ ಅವರ ತೋಟದಲ್ಲಿದೆ. ಈ ಹಲಸು ಒಂದೇ ವರ್ಷದಲ್ಲಿ ಫಸಲು ಆರಂಭವಾಗುತ್ತದೆ. ಮೂರು ವರ್ಷದಲ್ಲಿ ನೂರಕ್ಕೂ ಅಧಿಕ ಹಣ್ಣುಗಳೊಂದಿಗೆ ಮರದ ತುಂಬೆಲ್ಲ ತುಂಬಿಕೊಳ್ಳುತ್ತದೆ. ಇದರ ಜೊತೆಗೆ ಗಮ್‌ಲೆಸ್‌, ಸಿದ್ದು ಹಾಗೂ ಚಂದ್ರ ಹಲಸು ಗಿಡ ನೆಟ್ಟಿದ್ದು ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಮೂರು ಎಕರೆಯಲ್ಲಿ ಅಡಕೆ, ತೆಂಗು ಮುಖ್ಯ ಆದಾಯ ಮೂಲವಾಗಿದ್ದರೂ, ಬಾಳೆ, ಕರಿಮೆಣಸು ಹಾಗೂ ಕೋಕೋ, ವಿದೇಶಿ ಹಣ್ಣುಗಳಾದ ಡ್ರ್ಯಾಗನ್‌ ಫä್ರಟ್‌, ವಿಲ್ಲಾ ಫä್ರಟ್‌, ರಂಬುಟಾನ್‌, ಮ್ಯಾಂಗೋಸ್ಟೀನ್‌, ತೈವಾನ್‌ ಪಪ್ಪಾಯ ಸೇರಿದಂತೆ ಹನುಮಾನ್‌ ಫä್ರಟ್‌, ಹಲಸು, ಚೆರ್ರಿ, ಚಂಪಡಕ್‌ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ತಮ್ಮ ಜಾಗದಲ್ಲಿ ಕೊಂಚ ಭಾಗದಲ್ಲಿ ಸ್ವಾಭಾವಿಕ ಕಾಡನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

Raita Ratna Award 2022 ಬಂಡೆ ಮೇಲೆ ಬತ್ತ ಬೆಳೆದ ಸಾಧಕ ಅರುಣ್‌ ಕುಮಾರ್‌

ತಾವೇ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆದು ರೈತರಿಗೆ ನೀಡುವ ಅಬ್ದುಲ್‌ ಖಾದರ್‌ ಅವರ ಕಸಿಕಟ್ಟುವ ಕೌಶಲ್ಯ ಅದ್ವಿತೀಯವಾದದ್ದು. ಬದನೆ ಗಿಡಕ್ಕೆ ವಿವಿಧ ತಳಿಯ ಬದನೆ ಗಿಡಗಳನ್ನು ಕಸಿ ಮಾಡಿ, ಒಂದೇ ಗಿಡದಲ್ಲಿ ಸುಮಾರು ಹದಿನಾಲ್ಕು ಬಗೆಯ, ವಿವಿಧ ಬಣ್ಣಗಳ ಬದನೆ ಬೆಳೆದಿದ್ದು ಇವರ ಸಾಧನೆಯಾಗಿದೆ. ಗುದನೆ ಗಿಡವನ್ನು ಬದನೆಗೆ ಕಸಿ ಮಾಡಿ ಸುಮಾರು ಹತ್ತು ವರ್ಷಗಳವರೆಗೆ ನಿರಂತರವಾಗಿ ಫಸಲು ಪಡೆದಿದ್ದಾರೆ. ಈ ಗಿಡವು ರೋಗನಿರೋಧಕವಾಗಿದ್ದು, ರೋಗಬಾಧೆಗೆ ಒಳಗಾಗುವ ಅಪಾಯವೂ ಕಡಿಮೆ. ಕಾಡು ಹಿಪ್ಪಲಿ(ಬ್ರಝಿಲ್‌ ಹಿಪ್ಪಲಿ)ಗೆ ಕರಿಮೆಣಸನ್ನು ಕಸಿ ಮಾಡಿ ಸೊರಗು ರೋಗದಿಂದ ಮುಕ್ತಿ ಪಡೆದಿದ್ದಾರೆ. ಈ ಗಿಡ ಜವುಗು ಪ್ರದೇಶದಲ್ಲೂ ಬೆಳೆಯಲು ಸಾಧ್ಯವಿದ್ದು, ರೋಗ ಭೀತಿ ಇಲ್ಲ. ಇದರ ಜೊತೆಗೆ ಚಿಕ್ಕು, ಮಾವಿನ ಸಸಿಗಳ ಕಸಿಯನ್ನೂ ಮಾಡುತ್ತಾರೆ.

click me!