Raita Ratna Award 2022 ಬಂಡೆ ಮೇಲೆ ಬತ್ತ ಬೆಳೆದ ಸಾಧಕ ಅರುಣ್‌ ಕುಮಾರ್‌

ಚಿಕ್ಕನಾಯಕನ ಹಳ್ಳಿ ಎಂಬ ಬಯಲುನಾಡನ್ನು ಮಲೆನಾಡಾಗಿ ಪರಿವರ್ತಿಸಿದ ಛಲಗಾರ. 400 ತೆಂಗು, 1500 ಅಡಕೆ, 700 ಮೆಣಸು, ವೆನಿಲ್ಲಾ, ಕಾಫಿ, ಏಲಕ್ಕಿ, ಜೀರಿಗೆ, ಮಿಡಿಮಾವು, ಅರಿಶಿನ, ನಿಂಬೆ, ಹಲಸು, ನೆಲ್ಲಿರಾಮಫಲ, ಸೀಬೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. 

Arun kumar from Chikkanayakanahalli honored with Raita Ratna award 2022 vcs

ಉಗಮ ಶ್ರೀನಿವಾಸ್‌

ಒಂದು ಕಾಲದಲ್ಲಿ ಭೂಗರ್ಭವನ್ನು ಬಗೆದು ಗಣಿಗಾರಿಕೆ ಮಾಡುತ್ತಿದ್ದ ಕಾರಣದಿಂದ ರಾಜ್ಯದ ಗಮನ ಸೆಳೆದಿದ್ದ ಚಿಕ್ಕನಾಯಕನಹಳ್ಳಿ ಈಗ ಬಂಡೆ ಮೇಲೆ ಭತ್ತ ಬೆಳೆಯುವ ರೈತರೊಬ್ಬರ ಯಶೋಗಾಥೆಯಿಂದ ಮತ್ತೆ ಗಮನ ಸೆಳೆದಿದೆ. ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿರುವ ಅರುಣಕುಮಾರ್‌ ಅವರೇ ಈ ಸಾಧನೆ ಮಾಡಿರುವುದು.

ಮೂಲತಃ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಗ್ರಾಮದ ಅರುಣಕುಮಾರ್‌ ಎಸ್‌.ಆರ್‌ ಬಿಎಸ್‌ಸಿ ಪದವಿ ಪಡೆದು ಕೃಷಿಗೆ ಇಳಿದರು. ಒಟ್ಟು 7 ಎಕರೆ 33 ಗುಂಟೆ ಜಮೀನು ಹೊಂದಿದ್ದು, ಜಮೀನಿನ ಒಂದು ಭಾಗದ 33 ಗುಂಟೆಯಲ್ಲಿ ಬಂಡೆಯಿದ್ದು ಕೃಷಿಗೆ ಯೋಗ್ಯವಾಗಿರಲಿಲ್ಲ. ಡೈನಾಮೆಟ್‌ ಹಾಕಿದರೂ ಅಲ್ಲಾಡದ ಬಂಡೆಯ ಮೇಲೆ 2 ಅಡಿ ಮಣ್ಣು ಹೊಡೆಸಿ (ನೇಗಿಲಿಗೆ ಬಂಡೆ ಸಿಗದಷ್ಟು) ಅದರ ಮೇಲೆ ಭತ್ತ ಬೆಳೆಯುತ್ತಿದ್ದಾರೆ. ಒಂದು ಭಾಗದಲ್ಲಿ ಮನೆಗೆ ಬೇಕಾದ ಆಹಾರ ಧಾನ್ಯಗಳಾದ ರಾಗಿ, ಅವರೆ, ಹೆಸರು, ಉದ್ದು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇನ್ನೊಂದು ಭಾಗದ ಬಯಲಿನಲ್ಲಿ ಮಲೆನಾಡಿನ ಬೆಳೆಗಳಿವೆ. 400 ತೆಂಗು, 1500 ಅಡಕೆ, 700 ಮೆಣಸು, ವೆನಿಲ್ಲಾ, ಕಾಫಿ, ಏಲಕ್ಕಿ, ಜೀರಿಗೆ, ಮಿಡಿಮಾವು, ಅರಿಶಿನ, ನಿಂಬೆ, ಹಲಸು, ನೆಲ್ಲಿರಾಮಫಲ, ಸೀಬೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೋಟದ ಸುತ್ತಲೂ ಗೊಬ್ಬರದ ಗಿಡ (ಗ್ಲಿರಿಸೀಡಿಯಾ) ತೇಗ, ಹೆಬ್ಬೇವು, ಸಿಲ್ವರ್‌ಓಕ್‌, ಹರ್‌ಕ್ಯುಲೆಸ್‌ ಮರಗಳಿವೆ. ಇನ್ನೊಂದು ಭಾಗದಲ್ಲಿ 300 ಶ್ರೀಗಂಧ, 250 ರಕ್ತಚಂದನ, 250 ಹೆಬ್ಬೇವು, 100 ಮಹಾಗನಿ, ದೇಶ ವಿದೇಶಗಳ ಬೆಳೆಗಳಾದ ಕಾಶ್ಮೀರ ಸೇಬು, ಖರ್ಜೂರ, ಅಂಜೂರ, ಸಪೋಟ, ಲಕ್ಷ್ಮಣ ಫಲ, ಡ್ರಾಗನ್‌ ಫä›ಟ್‌, ಚಕ್ಕೋತ, ಕಿತ್ತಳೆ, ಮೋಸಂಬಿ, ಬಾದಾಮಿ ಅನೇಕ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಯುತ್ತಿದ್ದಾರೆ.

Arun kumar from Chikkanayakanahalli honored with Raita Ratna award 2022 vcs

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಎಂಬ ಬರಗಾಲ ಪೀಡಿತ ತಾಲೂಕಿನಲ್ಲಿ ವಾರ್ಷಿಕ 450 ಎಂ.ಎಂ.ಗಳಷ್ಟೇ ಮಳೆ ಆಗುತ್ತದೆ. ಇಂಥಾ ಸವಾಲಿನಲ್ಲೂ ಬಾಟಲ್‌ ಇರಿಗೇಷನ್‌ ಮೂಲಕ ಬೇರಿನ ಆಳಕ್ಕೆ ನೀರು ಕೊಟ್ಟು 500 ಗಿಡಕ್ಕೆ ತಲಾ 2 ಲೀಟರ್‌ ನೀರನ್ನು ಬೇರಿಗೆ ಉಣಿಸಿ ಗಿಡಗಳನ್ನು ಉಳಿಸಿಕೊಂಡಿದ್ದಾರೆ. ತೋಟದಲ್ಲಿ ಸಿಗುವ ತ್ಯಾಜ್ಯವನ್ನು ಬಳಸಿ ಎರೆತೊಟ್ಟಿ, ಬಯೋಡೈಜೆಸ್ಟರ್‌, ಜೀವಾಮೃತ ತೊಟ್ಟಿಬಳಸಿ ರಸಸಾರ ತಯಾರಿಸಿ ಗಿಡಗಳಿಗೆ ಕೊಟ್ಟು ಗೊಬ್ಬರಕ್ಕಾಗಿ ಅಲೆದಾಡದೆ ಸ್ವಾವಲಂಬಿಯಾಗಿದ್ದಾರೆ.

ದಾಸೋಹಕ್ಕೆ ಬೇಕಾದ ದವಸ ತಾವೇ ಉತ್ತು, ಬೆಳೆಯುವ ಸಂತ ರೈತ ರತ್ನ ಪ್ರಶಸ್ತಿಗೆ ಆಯ್ಕೆ

ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ವಾಹಿನಿ ರೈತರನ್ನು ಗುರುತಿಸಿ ರೈತ ರತ್ನ ಪ್ರಶಸ್ತಿ ನೀಡಿರುವುದು ತುಂಬ ಖುಷಿ ತಂದಿದೆ. ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ ಎಲ್ಲಾ ರೈತರ ಪರವಾಗಿ ತುಂಬು ಹೃದಯದ ಧನ್ಯವಾದಗಳು.- ಅರುಣಕುಮಾರ್‌ ಎಸ್‌.ಆರ್‌., ರೈತರತ್ನ ಪ್ರಶಸ್ತಿ ವಿಜೇತರು

ಬೆಳೆಹಾನಿ ಮಾಡುವ ಇಲಿಗಳನ್ನು ನಿಯಂತ್ರಿಸಲು ಇವರೇ ನೂತನ ವಿಧಾನವನ್ನು ಕಂಡು ಹಿಡಿದಿದ್ದಾರೆ. ಆ ವಿಧಾನ ಹೀಗಿದೆ: ಬಿದಿರಿನ ಮಂಕರಿಗೆ ನಾಲ್ಕು ಕಡೆ ತಂತಿಯಿಂದ ಕಟ್ಟಿಕೊಬ್ಬರಿ ಕೌಟನ್ನು ಇಟ್ಟು ಇಲಿ ಕತ್ತರಿಯನ್ನು ಬುಟ್ಟಿಒಳಗಡೆ ಇಟ್ಟು ಮರದ ಎತ್ತರದ ಎರಡರಷ್ಟುಪ್ಲಾಸ್ಟಿಕ್‌ ವೈರನ್ನು ತೆಗೆದುಕೊಂಡು ಒಂದು ತುದಿಯನ್ನು ಬುಟ್ಟಿಯ ತಂತಿಯ ತುದಿಗೆ ಕಟ್ಟಬೇಕು. ಇನ್ನೊಂದು ತುದಿಗೆ ಕಲ್ಲು ಕಟ್ಟಿತೆಂಗಿನ ಮರದ ಗರಿಗಳ ಮಧ್ಯೆ ಬರುವ ರೀತಿ ಎಸೆಯಬೇಕು. ಪ್ಲಾಸ್ಟಿಕ್‌ ವೈರ್‌ನ ಒಂದು ತುದಿಯನ್ನು ಹಿಡಿದು ಎಳೆದಾಗ ಬಾವುಟ ಹಾರಿಸುವ ರೀತಿ ಇಲಿ ಕತ್ತರಿ ಇರುವ ಬುಟ್ಟಿತೆಂಗಿನ ಮರದ ಗರಿಯ ಹತ್ತಿರ ಹೋಗುವಂತೆ ಎಳೆದು ಇನ್ನೊಂದು ತುದಿಯನ್ನು ಮರಕ್ಕೆ ಕಟ್ಟಬೇಕು. ಕತ್ತರಿಯಲ್ಲಿ ಇರುವ ಕೊಬ್ಬರಿ ಕೌಟನ್ನು ತಿನ್ನಲು ಬಂದ ಇಲಿ ಸಾಯುತ್ತದೆ. ಈ ರೀತಿ 7 ಎಕರೆ ತೆಂಗು ಅಡಕೆ ತೋಟದಲ್ಲಿ 25 ಇಲಿ ಕತ್ತರಿ ಇರುವ ಬುಟ್ಟಿಯನ್ನು ಇಟ್ಟು ಇದುವರೆಗೆ 8 ಸಾವಿರ ಇಲಿಯನ್ನು ಸಾಯಿಸಿ ಹೂತು ಗೊಬ್ಬರ ಮಾಡಿದ್ದಾರೆ. ಐಸಿಎಆರ್‌ ಮತ್ತು ಐಎಎಚ್‌ಆರ್‌ ಮತ್ತು ಕೆವಿಎನ್‌ ಕೃಷಿ ಕೇಂದ್ರಗಳು ಈ ವಿಧಾನವನ್ನು ಮಾನ್ಯ ಮಾಡಿ ರೈತರಿಗೆ ಬಳಸಲು ಸಲಹೆ ನೀಡಿವೆ.

Latest Videos
Follow Us:
Download App:
  • android
  • ios