
ನವದೆಹಲಿ (ನ.01): ರಾಜಕಾರಣದಲ್ಲೂ ಸ್ವಚ್ಚ ಭಾರತದ ಕನಸು ಸಾಕಾರಗೊಳ್ಳುವ ದಿನಗಳು ಹತ್ತಿರವಾಗುತ್ತಿವೆಯಾ..? ಚುನಾವಣಾ ಆಯೋಗ ಇಂದು ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ತೆಗೆದುಕೊಂಡ ನಿಲುವು ಇಂತಹ ನಿರೀಕ್ಷಯನ್ನು ಮತ್ತೆ ಗರಿಗೆದರುವಂತೆ ಮಾಡಿದೆ. ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಅಪರಾಧಿ ರಾಜಕಾರಣಿಗಳಿಗೆ ಚುನಾವಣೆಗೆ ನಿಲ್ಲದಂತೆ ಆಜೀವ ನಿಷೇಧ ಹೇರಬೇಕು ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ಗೆ ಹೇಳಿದೆ. ಆದರೆ ಈ ವಿಚಾರದಲ್ಲಿ ಮೋದಿ ಸರ್ಕಾರ ಭಿನ್ನ ರಾಗ ಹಾಡುತ್ತಿದೆ.
ಶಿಕ್ಷೆಗೊಳಗಾದರೆ ಚುನಾವಣೆಗೆ ನಿಲ್ಲುವಂತಿಲ್ಲ..! ಚುನಾವಣಾ ಆಯೋಗದಿಂದ ಕಳಂಕಿತರಿಗೆ ಚಾಟಿ..!
ದೆಹಲಿಯ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಚುನಾವಣಾ ಆಯೋಗ ಶಿಕ್ಷೆಗೊಳಗಾದ ರಾಜಕಾರಣಿಗಳಿಗೆ ಆಜೀವ ನಿಷೇಧ ಹೇರಬೇಕು ಎಂದು ಹೇಳಿದೆ. ಕ್ರಿಮಿನಲ್ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ಜೀವನ ಪರ್ಯಂತ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂಬ ಒತ್ತಾಯವನ್ನು ಚುನಾವಣಾ ಆಯೋಗ ಮಾಡಿದೆ. ದೇಶಾದ್ಯಂತ ರಾಜಕಾರಣಿಗಳ ಮೇಲಿರುವ ಕ್ರಿಮಿನಲ್ ಕೇಸ್ಗಳ ಅಂಕಿ ಅಂಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ 2014 ರವರೆಗಿನ ರಾಜಕಾರಣಿಗಳು ಎದುರಿಸುತ್ತಿರುವ 1,581 ಪ್ರಕರಣಗಳ ವಿಚಾರಣೆಎಲ್ಲಿಗೆ ಬಂದಿದೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಕೇಳಿದೆ. ಇನ್ನು 2014 ರಿಂದ ಈ ವರೆಗೆ ಎಷ್ಟು ರಾಜಕಾರಣಿಗಳ ವಿರುದ್ಧ ಹೊಸದಾಗಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂಬ ಅಂಕಿ-ಅಂಶಗಳನ್ನೂ ಸಹ ನೀಡುವಂತೆ ಸೂಚಿಸಿದೆ. ರಾಜಕಾರಣಿಗಳು ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಗೊಳಿಸಲು ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಒಂದು ತಿಂಗಳ ಅವಧಿಯಲ್ಲಿ ಈ ಬಗ್ಗೆ ಸುಪ್ರೀಂ ಗೆ ವರದಿ ನೀಡುವಂತೆ ಸೂಚಿಸಿದೆ. ಚುನಾವಣಾ ಆಯೋಗದ ಈ ತೀರ್ಮಾನವನ್ನು ಕಾಂಗ್ರೆಸ್ ಸ್ವಾಗತಿಸಿದೆ.
ಈ ವಿಚಾರದಲ್ಲಿ ಮೋದಿ ನಿಲುವೇನು..?
ಕ್ರಿಮಿನಲ್ ರಾಜಕಾರಣಿಗಳಿಗೆ ಆಜೀವ ನಿಷೇಧ ಹೇರುವ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗ ಮುಂದಾಗಿದ್ದರೆ ಮೋದಿ ನೇತೃತ್ವದ ಸರ್ಕಾರ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಆಜೀವ ಪರ್ಯಂತ ನಿಷೇಧ ಹೇರುವ ನಿರ್ಧಾರಕ್ಕೆ ಬಂದರೆ ಅದನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಕಷ್ಟವಾಗುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಬಾರದು. ಈ ವಿಚಾರ ಸಂಸತ್ತಿನಲ್ಲಿ ನಿರ್ಧಾರವಾಗಬೇಕಿದೆ ಎಂದು ಕೆಂದ್ರ ಸರ್ಕಾರದ ಪರ ವಕೀಲರು ವಾದಿಸಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮಾತನಾಡುವ ಮೋದಿ ಈ ವಿಚಾರದಲ್ಲಿ ಯಾಕೆ ಗಟ್ಟಿ ನಿಲುವು ತೆಗೆದುಕೊಳ್ಳುತ್ತಿಲ್ಲ. ಅಪರಾಧಿ ರಾಜಕಾರಣಿಗಳಿಗೆ ರಕ್ಷಣೆ ನೀಡುವಂತಹ ಮಾತುಗಳನ್ನು ಮೋದಿ ಸರ್ಕಾರ ಆಡುತ್ತಿರುವುದು ಸಾರ್ವಜನಿಕವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.