
ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಅವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಅಭಿಮನ್ಯು ನಾಯಕನಾಗಿ ನಟಿಸಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ 'ಹಚ್ಚೆ' ಚಿತ್ರಕ್ಕಾಗಿ ಯಶೋಧರ ಅವರೆ ಬರೆದಿರುವ 'ವಿಘ್ನೇಶ್ವರಾಯ' ಎಂಬ ಹಾಡು ಇತ್ತೀಚೆಗೆ ಅನಾವರಣವಾಯಿತು. ವಿವೇಕ್ ಚಕ್ರವರ್ತಿ ಸಂಗೀತ ನೀಡಿರುವ ಹಾಗೂ ಶಿವಂ ಅವರು ಹಾಡಿರುವ ಈ ಸುಮಧುರ ಹಾಡನ್ನು ಮಾಧ್ಯಮದ ಮಿತ್ರರೆಲ್ಲ ಸೇರಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಬಿಡುಗಡೆಯಾದ ಕ್ಷಣದಿಂದಲೇ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
'ಹಚ್ಚೆ' ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. ಇನ್ನೂ 'ಹಚ್ಚೆ' ಹೆಸರಿನಲ್ಲೇ ಕುತೂಹಲವಿದೆ. ಆ ಹೆಸರು ಚಿತ್ರಕ್ಕೆ ಇಟ್ಟಿರುವುದು ಏಕೆ ಎನ್ನುವುದರ ಬಗ್ಗೆ ಚಿತ್ರದಲ್ಲಿ ತಿಳಿಸಿದ್ದೇವೆ. ಇದು ಒಂದು ಜಾನರ್ ನ ಚಿತ್ರವಲ್ಲ. ಲವ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಅಭಿಮನ್ಯು ಎಂಬ ನವನಟ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ ಅವರ ಅಭಿನಯ ನೋಡಿದವರು ಮೊದಲ ಚಿತ್ರ ಅಂತ ಹೇಳುವುದಿಲ್ಲ.
ಇನ್ನು ನಾಯಕಿ ಆದ್ಯ ಪ್ರಿಯ, ನಟಿ ಅನುಪ್ರೇಮ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ತುಂಬಾ ಸೊಗಸಾಗಿದೆ. ತಂತ್ರಜ್ಞರ ಸಹಕಾರವಂತೂ ಅಪಾರ. ನಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್ ನಲ್ಲೇ ನಡೆದಿದೆ. ಕಲಾ ನಿರ್ದೇಶಕ ಶಂಕರ್ ಅವರ ನೇತೃತ್ವದಲ್ಲಿ ಏಳು ಅದ್ದೂರಿ ಸೆಟ್ ಗಳನ್ನು ನಿರ್ಮಿಸಲಾಗಿತ್ತು. ಆದರೆ ಶಂಕರ್ ಅವರು ಇಂದು ನಮ್ಮೊಂದಿಗಿಲ್ಲ. ಅದೊಂದು ಬೇಸರದ ಸಂಗತಿ. ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಮುಂದಿನ ಎರಡು ತಿಂಗಳಲ್ಲಿ ನಿಮ್ಮ ಮುಂದೆ ಬರಲಿದೆ ಎಂದು ತಮ್ಮ ಚೊಚ್ಚಲ ನಿರ್ದೇಶನದ "ಹಚ್ಚೆ" ಚಿತ್ರದ ಬಗ್ಗೆ ನಿರ್ದೇಶಕ ಯಶೋಧರ ತಿಳಿಸಿದರು.
ಮೂಲತಃ ಮೈಸೂರಿನವನು. ರಂಗಭೂಮಿ ನಟ. ಸಾಕಷ್ಟು ಜನಪ್ರಿಯ ನಾಟಕಗಳಲ್ಲಿ ಅಭಿನಯಿಸಿದ್ದೇನೆ. 'ಅಂಜನಿ ಪುತ್ರ' ಸೇರಿದಂತೆ ಅನೇಕ ಚಿತ್ರಗಳಲ್ಲೂ ಸಹ ಕಲಾವಿದನಾಗಿ ನಟಿಸಿದ್ದೇನೆ. ನನ್ನ ಪ್ರತಿಭೆ ಗುರುತಿಸಿ ಯಶೋಧರ ಅವರು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ನನ್ನ ಪಾತ್ರವಂತೂ ತುಂಬಾ ಚೆನ್ನಾಗಿದೆ. ಹೊಸತಂಡದ ಹೊಸಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಾಯಕ ಅಭಿಮನ್ಯು.
ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ವಿವೇಕ್ ಚಕ್ರವರ್ತಿ ಮಾಹಿತಿ ನೀಡಿದರು. ನಾಯಕಿ ಆದ್ಯಪ್ರಿಯ, ನಟಿ ಅನುಪ್ರೇಮ ತಮ್ಮ ಪಾತ್ರದ ಬಗ್ಗೆ ಹೇಳಿದರು. ಸಾಹಸ ನಿರ್ದೇಶಕ ಚಂದ್ರು ಬಂಡೆ, ನೃತ್ಯ ನಿರ್ದೇಶಕ ಸ್ಟಾರ್ ನಾಗಿ ಹಾಗೂ ಛಾಯಾಗ್ರಾಹಕ ಯಾಸಿನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.