
ಜೂನ್ 15ಕ್ಕೆ ದಳಪತಿ ವಿಜಯ್ ಬಾಳಲ್ಲಿ ದೊಡ್ಡ ತಿರುವು: ಸಿಎಂ ಪಟ್ಟಕ್ಕೇರಿದ ಬೆನ್ನಲ್ಲೇ 'ಸಂಗೀತ' ಮತ್ತೆ ಜೀವನ ಸಂಗಾತಿ ಆಗ್ತಾರಾ ಅಥವಾ ವಿರಹದ ಹಾಡು ಅಂತಿಮವಾಗುತ್ತಾ?
ಬೆಂಗಳೂರು/ಚೆನ್ನೈ: ಸ್ಯಾಂಡಲ್‌ವುಡ್ ಇರಲಿ, ಕಾಲಿವುಡ್ ಇರಲಿ ಅಥವಾ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಇರಲಿ.. ಈಗ ಎಲ್ಲರ ಕಣ್ಣು ಜೂನ್ 15ರ ಮೇಲೆ ನೆಟ್ಟಿದೆ! ತಮಿಳುನಾಡು ರಾಜಕೀಯದ 'ಹೊಸ ಸಾಮ್ರಾಟ್', ಸಿನೆಮಾ ರಂಗದ 'ಅನ್ ಕ್ರೌನ್ಡ್ ಕಿಂಗ್' ದಳಪತಿ ವಿಜಯ್ (Thalapathy Vijay) ಜೀವನದಲ್ಲಿ ಈಗ ಅಗ್ನಿಪರೀಕ್ಷೆಯ ಸಮಯ. ಒಂದು ಕಡೆ ರಾಜಕೀಯದ ಅತ್ಯುನ್ನತ ಶಿಖರ ಏರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇತಿಹಾಸ ಬರೆದಿರುವ ವಿಜಯ್, ಈಗ ವೈಯಕ್ತಿಕ ಜೀವನದ ಸಂಕಷ್ಟದ ಸುಳಿಯಲ್ಲಿದ್ದಾರೆ.
ಹೌದು, ಸಿಎಂ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಜೂನ್ 15 ರಂದು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಹೈಪ್ರೊಫೈಲ್ ಕೇಸ್‌ನ ಅಂತಿಮ ವಿಚಾರಣೆ ನಡೆಯಲಿದೆ. ವಿಜಯ್ ಅವರು ರಾಜಕೀಯದಲ್ಲಿ ಗೆದ್ದು ಬೀಗುತ್ತಿದ್ದರೂ, ಅವರ ವೈಯಕ್ತಿಕ ಬದುಕಿನಲ್ಲಿ ಎದ್ದಿರುವ ಬಿರುಗಾಳಿ ಮಾತ್ರ ಇನ್ನೂ ಶಾಂತವಾಗಿಲ್ಲ. ಈ ದಿನದ ನ್ಯಾಯಾಲಯದ ತೀರ್ಪು ಅಥವಾ ಅಲ್ಲಿ ನಡೆಯುವ ಬೆಳವಣಿಗೆಗಳು ವಿಜಯ್ ಅವರ ಮುಂದಿನ ಜೀವನದ ದಿಕ್ಕನ್ನು ನಿರ್ಧರಿಸಲಿವೆ.
ಒಂದಾಗುತ್ತಾರಾ ವಿಜಯ್-ಸಂಗೀತ? ಅಭಿಮಾನಿಗಳ ಪ್ರಾರ್ಥನೆ ಫಲಿಸುತ್ತಾ?
ಕಳೆದ ಕೆಲವು ಸಮಯದಿಂದ ವಿಜಯ್ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಮತ್ತು ಸುದೀರ್ಘ ಕಾಲದ ದಾಂಪತ್ಯದ ಗೌರವಕ್ಕಾಗಿ ವಿಜಯ್ ಮತ್ತು ಸಂಗೀತ ಅವರು ಮನಸ್ತಾಪ ಮರೆತು ಮತ್ತೆ ಒಂದಾಗಲಿದ್ದಾರೆ ಎಂಬ ಗಾಳಿಸುದ್ದಿ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ವಿಚ್ಛೇದನದ ಅರ್ಜಿಯನ್ನು ಹಿಂಪಡೆದು, 'ದಳಪತಿ' ಕುಟುಂಬದಲ್ಲಿ ಮತ್ತೆ ಪ್ರೀತಿಯ ತಂಗಾಳಿ ಬೀಸಲಿದೆಯಾ ಎಂಬ ಕುತೂಹಲ ಮನೆಮಾಡಿದೆ.
ತ್ರಿಶಾ ಎಂಟ್ರಿ ಮತ್ತು ಕುತೂಹಲದ ನಡೆಗಳು!
ಆದರೆ, ಕಥೆಯಲ್ಲಿ ಟ್ವಿಸ್ಟ್ ಎಂದರೆ ಇತ್ತೀಚಿನ ದಿನಗಳಲ್ಲಿ ನಟಿ ತ್ರಿಶಾ ಕೃಷ್ಣನ್ (Trisha Krishnan) ಹಾಗೂ ಸಿಎಂ ವಿಜಯ್ ನಡುವಿನ ಒಡನಾಟ. ಸಾರ್ವಜನಿಕವಾಗಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬೆಳವಣಿಗೆಗಳು ಸಂಗೀತ ಅವರೊಂದಿಗಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತವೆಯೇ ಅಥವಾ ಇವೆಲ್ಲವೂ ಕೇವಲ ಊಹಾಪೋಹಗಳೇ ಎಂಬುದು ಜೂನ್ 15ರಂದು ಸ್ಪಷ್ಟವಾಗಲಿದೆ.
ಅಂದಹಾಗೆ, ಈ ಎಲ್ಲಾ ಗೊಂದಲಗಳ ನಡುವೆ, ದಳಪತಿ ವಿಜಯ್ ಅವರು ದೈವದ ಮೊರೆ ಹೋಗಿದ್ದಾರೆ. ಶುಕ್ರವಾರ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು, 1.60 ಕೆಜಿ ತೂಕದ ಭವ್ಯ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದಾರೆ. ಶತ್ರು ಸಂಹಾರ ಹಾಗೂ ಕಂಟಕ ನಿವಾರಣೆಗಾಗಿ ವಿಜಯ್ ಈ ಪೂಜೆ ಮಾಡಿಸಿದ್ದಾರಾ? ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ರಾಜಕೀಯದ ಪೀಠದ ಮೇಲೆ ಕುಳಿತಿರುವ ಈ ಶಕ್ತಿಶಾಲಿ ವ್ಯಕ್ತಿಗೆ ವೈಯಕ್ತಿಕ ಬದುಕಿನ ಜೂನ್ 15ರ ದಿನಾಂಕ ಅತಿದೊಡ್ಡ ಸವಾಲಾಗಿದೆ. ಅಂದು ಸುಖಾಂತ್ಯವಾಗುತ್ತಾ ಅಥವಾ ವಿಜಯ್-ಸಂಗೀತ ಹಾದಿ ಬೇರೆ ಬೇರೆಯಾಗುತ್ತಾ? ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.