
Vijay Deverakonda talked about iPhone craze, buying iPhone or expensive phone on loan-ನನ್ನ ಫೋನ್ ಚೆನ್ನಾಗೇ ಕೆಲಸ ಮಾಡ್ತಿದೆ, ಹೊಸದೇಕೆ?’; ಐಫೋನ್ ಕ್ರೇಜ್ ಬಗ್ಗೆ ವಿಜಯ್ ದೇವರಕೊಂಡ ಖಡಕ್ ಮಾತು!
ಇತ್ತೀಚಿನ ದಿನಗಳಲ್ಲಿ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ಅದರಲ್ಲೂ ಐಫೋನ್ ಹೊಂದಿರುವುದು ಕೆಲವರಿಗೆ ಸ್ಟೇಟಸ್ ಸಿಂಬಲ್ ಆಗಿ ಬದಲಾಗಿದೆ. ಹೊಸ ಮಾಡೆಲ್ ಮಾರುಕಟ್ಟೆಗೆ ಬಂದ ತಕ್ಷಣ ಅದನ್ನು ಖರೀದಿಸಿ ಸೋಷಿಯಲ್ ಮೀಡಿಯಾದಲ್ಲಿ ಪ್ರದರ್ಶಿಸುವ ಕ್ರೇಜ್ ಕೂಡ ಹೆಚ್ಚಾಗಿದೆ. ಆರ್ಥಿಕವಾಗಿ ಕಷ್ಟವಿದ್ದರೂ ಸಾಲ ಮಾಡಿ ದುಬಾರಿ ಫೋನ್ ಖರೀದಿಸುವವರೂ ಇದ್ದಾರೆ. ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ವಿಜಯ್ ದೇವರಕೊಂಡ ನೀಡಿರುವ ಸರಳ ಉತ್ತರ ಇದೀಗ ಗಮನ ಸೆಳೆಯುತ್ತಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ಅವರ ಫೋನ್ ಬಳಕೆಯ ಬಗ್ಗೆ ಕುತೂಹಲಕಾರಿ ಪ್ರಶ್ನೆ ಕೇಳಲಾಗಿದೆ. ವಿರಾಟ್ ಕೊಹ್ಲಿ ಸೇರಿದಂತೆ ಹಲವು ದೊಡ್ಡ ಸೆಲೆಬ್ರಿಟಿಗಳು ಹೊಸ ಮಾಡೆಲ್‌ಗಳ ಹಿಂದೆ ಓಡದೆ ಹಳೆಯ ಐಫೋನ್‌ಗಳನ್ನೇ ಬಳಸುತ್ತಿರುವ ವಿಚಾರವನ್ನು ಸಂದರ್ಶಕರು ಪ್ರಸ್ತಾಪಿಸಿದ್ದಾರೆ. ‘ನಿಮ್ಮ ಬಳಿ ಸಾಕಷ್ಟು ಹಣವಿದ್ದರೂ ಈಗಿರುವ ಫೋನ್ ಸರಿಯಾಗಿ ಕೆಲಸ ಮಾಡುತ್ತಿದೆ ಎಂಬ ಕಾರಣಕ್ಕೆ ಹೊಸ ಫೋನ್ ಖರೀದಿಸುತ್ತಿಲ್ಲ ಅಲ್ಲವೇ?’ ಎಂದು ವಿಜಯ್‌ಗೆ ಪ್ರಶ್ನಿಸಲಾಗಿದೆ.
ಇದಕ್ಕೆ ವಿಜಯ್ ದೇವರಕೊಂಡ ನೀಡಿದ ಉತ್ತರ ಮಾತ್ರ ಸಖತ್ ಸಿಂಪಲ್. ‘ನನ್ನ ಬಳಿ ಇರುವ ಫೋನ್ ಇನ್ನೂ ಚೆನ್ನಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಹೊಸದನ್ನು ಖರೀದಿಸುವ ಅಗತ್ಯವೇನಿದೆ?’ ಎಂಬರ್ಥದಲ್ಲಿ ಅವರು ಉತ್ತರಿಸಿದ್ದಾರೆ. ದುಡ್ಡಿದೆ ಎಂಬ ಕಾರಣಕ್ಕೆ ಅಗತ್ಯವಿಲ್ಲದ ವಸ್ತುವನ್ನು ಖರೀದಿಸುವ ಬದಲು, ಇರುವ ವಸ್ತು ಉಪಯೋಗಕ್ಕೆ ಬರುತ್ತಿದ್ದರೆ ಅದನ್ನೇ ಬಳಸುವುದು ಉತ್ತಮ ಎಂಬ ಮನಸ್ಥಿತಿ ಅವರ ಮಾತಿನಲ್ಲಿ ಕಾಣಿಸಿಕೊಂಡಿದೆ.
ಇದೇ ವೇಳೆ ಸೆಲೆಬ್ರಿಟಿಗಳ ಜೀವನಶೈಲಿಯ ಮತ್ತೊಂದು ಮುಖವನ್ನೂ ವಿಜಯ್ ಬಹಿರಂಗಪಡಿಸಿದ್ದಾರೆ. ನಟರು ಹಾಗೂ ದೊಡ್ಡ ತಾರೆಯರಿಗೆ ಹಲವು ಬ್ರ್ಯಾಂಡ್‌ಗಳಿಂದ ಫೋನ್‌ಗಳು, ಗ್ಯಾಜೆಟ್‌ಗಳು ಸೇರಿದಂತೆ ವಿವಿಧ ವಸ್ತುಗಳು ಉಡುಗೊರೆಯಾಗಿ ಬರುತ್ತವೆ. ಹೀಗಾಗಿ ಸೆಲೆಬ್ರಿಟಿಗಳು ಬಳಸುವ ಪ್ರತಿಯೊಂದು ವಸ್ತುವನ್ನೂ ಅವರು ತಮ್ಮ ಸ್ವಂತ ಹಣದಿಂದ ಖರೀದಿಸಿರುತ್ತಾರೆ ಎಂದು ಭಾವಿಸುವುದು ಸರಿಯಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಕೇವಲ ಇತರರಿಗೆ ತೋರಿಸಿಕೊಳ್ಳಲು ದುಬಾರಿ ಐಫೋನ್ ಖರೀದಿಸುವ ಮನಸ್ಥಿತಿಯ ಬಗ್ಗೆಯೂ ವಿಜಯ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮನೆಯ ಅಗತ್ಯಗಳನ್ನು ನಿಭಾಯಿಸಲು ಕಷ್ಟವಾಗುತ್ತಿದ್ದರೂ, ಕೇವಲ ಸ್ಟೇಟಸ್‌ಗಾಗಿ ಸಾಲ ಮಾಡಿ ದುಬಾರಿ ಫೋನ್ ಖರೀದಿಸುವುದು ಸರಿಯಾದ ನಿರ್ಧಾರವಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಜೀವನದಲ್ಲಿ ನಾವು ಏನು ತೋರಿಸುತ್ತೇವೆ ಎನ್ನುವುದಕ್ಕಿಂತ, ನಮಗೆ ನಿಜವಾಗಿ ಏನು ಬೇಕು ಎಂಬುದೇ ಮುಖ್ಯ. ವಿಜಯ್ ದೇವರಕೊಂಡ ಅವರ ಸರಳ ಮಾತು ಇದೀಗ ಐಫೋನ್ ಕ್ರೇಜ್‌ನ ನಡುವೆ ಸಾಕಷ್ಟು ಜನರಿಗೆ ಯೋಚಿಸುವಂತೆ ಮಾಡಿದೆ. ಹೊಸ ಫೋನ್ ಖರೀದಿಸುವ ಮುನ್ನ ‘ನಿಜವಾಗಿಯೂ ಇದು ಅಗತ್ಯವೇ?’ ಎಂದು ಒಮ್ಮೆ ನಮ್ಮನ್ನೇ ಕೇಳಿಕೊಳ್ಳಬೇಕು ಎಂಬ ಸಂದೇಶವನ್ನು ನಟನ ಮಾತು ಸಾರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.