ಅದೆಷ್ಟು ಮನವಿಗಳು, ಅದೆಷ್ಟು ಹೋರಾಟಗಳು ಆದವು ಅನ್ನೋದಕ್ಕೆ ಲೆಕ್ಕವೇ ಇಲ್ಲ. ಆದರೆ, ಉತ್ತರ ಕನ್ನಡಕ್ಕೆ ಒಂದು ಸುಸಜ್ಜಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಂದಿಗೂ ಕನಸಾಗಿಯೇ ಉಳಿದುಕೊಂಡಿದೆ. ಇದರ ಸಾರವನ್ನು ಹೊಂದಿರುವ 'ವಾಯ್ಸ್ ಆಫ್ ಉತ್ತರ ಕನ್ನಡ..' ಶಾರ್ಟ್ ಫಿಲ್ಮ್ ಬಿಡುಗಡೆಗೆ ಸಿದ್ಧವಾಗಿದೆ.
ಬೆಂಗಳೂರು (ಏ.6): ಅಲ್ಲಿಯ ಜನ ಕೇಳ್ತಿರೋದು ಮಂದಿರವಲ್ಲ, ಮಸೀದಿಯೂ ಅಲ್ಲ. ಕೊನೆಗೆ ನಮ್ಮ ಮನೆಯ ಹುಡುಗರು ಇಲ್ಲಿಯೇ ಕೆಲಸ ಮಾಡಿಕೊಂಡಿರಲಿ ಅದಕ್ಕೊಂದು ಫ್ಯಾಕ್ಟರಿ ಕಟ್ಟಿ ಎನ್ನುವ ಬೇಡಿಕೆಯೂ ಅವರದಲ್ಲ. ಅಲ್ಲಿಯ ಜನರದ್ದು ಒಂದೇ ಬೇಡಿಕೆ ಅದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ಮಲೆನಾಡು, ಬಯಲುಸೀಮೆ ಹಾಗೂ ಕರಾವಳಿ ಈ ಮೂರನ್ನೂ ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ಉತ್ತರ ಕನ್ನಡ. ರಾಜ್ಯ ಅತಿದೊಡ್ಡ ಜಿಲ್ಲೆ ಎನಿಸಿಕೊಂಡಿದ್ದರೂ, ಈ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಅದೆಷ್ಟು ಹೋರಾಟವಾಯಿತು ಅನ್ನೋದಕ್ಕೆ ಲೆಕ್ಕವೇ ಇಲ್ಲ. ಶರಾವತಿ, ಕಾಳಿ ನದಿಗಳಲ್ಲಿ ನೀರು ಹರಿದದ್ದೇ ಬಂತು. ಈ ಜಿಲ್ಲೆಯ ಜನರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಂದಿಗೂ ಕನಸಾಗಿಯೇ ಉಳಿದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಈ ಬಾರಿ ನಾಲ್ಕು ಕಾಂಗ್ರೆಸ್ ಹಾಗೂ ಇಬ್ಬರು ಬಿಜೆಪಿ ಶಾಸಕರಿದ್ದಾರೆ. ಸರ್ಕಾರ ರಚನೆಯಾಗಿ ಇನ್ನೇನು ಒಂದು ವರ್ಷ ಸನಿಹವಾಗುವುದರಲ್ಲಿದೆ. ಆದರೂ ಉತ್ತರ ಕನ್ನಡದ ಮಲ್ಟಿಸ್ಪೆಷಾಲಿಟಿಯ ಬಗ್ಗೆ ಸುದ್ದಿಯಿಲ್ಲ. ಈಗ ಇದೇ ಅಂಶವನ್ನು ಇಟ್ಟುಕೊಂಡು ಆಕರ್ಷಕ ಶಾರ್ಟ್‌ಫಿಲ್ಮ್ ಸಿದ್ಧವಾಗಿದೆ.
ವಾಯ್ಸ್ ಆಫ್ ಉತ್ತರ ಕನ್ನಡ ಹೆಸರಿನ ಶಾರ್ಟ್ ಫಿಲ್ಮ್ ಉತ್ತರ ಕನ್ನಡದ ಎಮರ್ಜೆನ್ಸಿ ಹಾಸ್ಪಿಟಲ್ ಅಗತ್ಯವನ್ನು ಒತ್ತಿ ಹೇಳುವ ಚಿತ್ರ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆಕಾಶ್ ಗುಲಾಬಿ ಮೂಲತಃ ಹೊನ್ನಾವರದವರು. ತಮ್ಮೂರಿಗೆ ಎಮರ್ಜೆನ್ಸಿ ಆಸ್ಪತ್ರೆಯ ಅಗತ್ಯವನ್ನು ಕಂಡ ಇವರು ಕಥೆ, ಸಂಭಾಷಣೆ, ಚಿತ್ರಕಥೆ, ನಿರ್ದೇಶನ ಮಾಡಿ ಈ ಶಾರ್ಟ್‌ಫಿಲ್ಮ್‌ಅನ್ನು ಮಾಡಿದ್ದಾರೆ. ಅದ್ವೈತ ಸ್ಟುಡಡಿಯೋ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ವಾಯ್ಸ್ ಆಫ್ ಉತ್ತರ ಕನ್ನಡ ಶಾರ್ಟ್ ಫಿಲ್ಮ್‌ನ ಟೀಸರ್ ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಉತ್ತರ ಕನ್ನಡದ ಊರು, ಹೊನ್ನಾವರ, ಕರಾವಳಿಯ ಮಳೆ, ನದಿಸಾಲ ತೆಂಗಿನ ಮರಗಳು, ದೋಣಿ ಇವೆಲ್ಲವುಗಳನ್ನು ಉತ್ತಮವಾಗಿ ಚಿತ್ರಿಸಿವೆ. 'ಅಮ್ಮನಿಗೆ ಚೈನ್ ಕೊಡ್ಬೇಕು ಅಂತಾ ತುಂಬಾ ಆಸೆ ಇತ್ತು..' ಎನ್ನುವ ಸಾಲು ಚಿತ್ರದ ಬಗ್ಗೆ ಕುತೂಹಲ ಮೂಡಿಸುವಂತೆ ಮಾಡಿದೆ.
undefined
ಆಕಾಶ್ ಗುಲಾಬಿ, ಪೀಪಲ್ ಸ್ಟಾರ್ ಚಂದ್ರು ಹಾಗೂ ಗುಲಾಬಿ ಮೆಸ್ತಾ ಈ ಚಿತ್ರದಲ್ಲಿ ಪ್ರಮುಖವಾಗಿ ನಟಿಸಿದ್ದು, ಸತೀಶ್ ವಸಂತ್ ಅವರ ಛಾಯಾಗ್ರಹಣ ಗಮನಸೆಳೆಯುವಂತಿದೆ. ಸುಮುಖ ಹೆಗ್ಡೆ ಶಾರ್ಟ್ ಫಿಲ್ಮ್‌ಗೆ ಸಂಗೀತ ನೀಡಿದ್ದು, ಶ್ರೀರಾಮ್ ಹೆಗ್ಡೆ ಸಂಕಲನ ಮಾಡಿದ್ದಾರೆ.
ಉತ್ತರ ಕನ್ನಡ ವಿಚಾರದಲ್ಲಿ ಅದೆಷ್ಟು ರಾಜಕೀಯ ನಡೆದವು ಅನ್ನೋದು ಲೆಕ್ಕಕ್ಕೆ ಇಲ್ಲ. ಆದರೆ, ಇಂದಿಗೂ ಜನರ ಮೂಲ ಸೇವೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಭಾಗ್ಯ ಈ ಜಿಲ್ಲೆಗಿಲ್ಲ. ಆರು ಬಾರಿ ಸಂಸದರಾಗಿದ್ದ ಅನಂತ್ ಕುಮಾರ್ ಹೆಗ್ಡೆಗೆ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್‌ನಿಂದ ಅಂಜಲಿ ನಿಂಬಾಳ್ಕರ್ ಈ ಬಾರಿ ಸ್ಪರ್ಧೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಯಾರೇ ಗೆದ್ದರೂ, ಜಿಲ್ಲೆಯ ಆರು ಶಾಸಕರ ವಿಶ್ವಾಸ ಪಡೆದುಕೊಂಡು ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋರಾಟ ಮಾಡಲಿ ಎನ್ನುವುದು ಇಲ್ಲಿನ ಆಶಯವೂ ಆಗಿದೆ.
Lok sabha election 2024: ಕೈ ತಪ್ಪಿದ ಟಿಕೆಟ್, 'ಈ ಬದುಕಿಗೆ ಅಷ್ಟೇ ಸಾಕು..!' ಅನಂತ ಭಾವನಾತ್ಮಕ ಪತ್ರ
ಕುಮಟಾದ ಬಳಿ ಸುಸಜ್ಜಿತ ಆಸ್ಪತ್ರೆ ಕಟ್ಟಲಾಗುವುದು ಎಂದು ಸರ್ಕಾರ ಹೇಳಿದ್ದರೂ, ಅದು ಮೂಗಿನ ಮೇಲಿನ ತುಪ್ಪವಾಗಿಯೇ ಉಳಿದುಕೊಂಡಿದೆ. ವಾಯ್ಸ್ ಆಫ್ ಕನ್ನಡ ಶಾರ್ಟ್ ಫಿಲ್ಮ್ ಮೂಲಕವಾದರೂ ಇದು ಜನರಿಗೆ ತಲುಪಲಿ ಎನ್ನುವ ಆಶಯ ಇದಾಗಿದೆ.
ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಭಕ್ತಸಾಗರ: ಉಘೇ ಉಘೇ ಎಂದ ಭಕ್ತರು..!