ದಕ್ಷಿಣ ಭಾರತದ ಚಿತ್ರವನ್ನು ಫಸ್ಟ್‌ ಟೈಂ ಜಗತ್ತಿಗೆ ತೋರಿಸಿ 1000 ಕೋಟಿಗೂ ಮೀರಿ ಗಳಿಕೆ ದಾಖಲಿಸಿದ್ದು ಈ ನಿರ್ದೇಶಕ!

Published : Nov 28, 2026, 12:07 PM IST
SS Rajamouli

ಸಾರಾಂಶ

ಈ ಚಿತ್ರದ ಯಶಸ್ಸು ತೆಲುಗು ಸಿನಿಮಾಗಳ ಮಾರುಕಟ್ಟೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಗಡಿಗಳನ್ನು ಮೀರಿ ವಿಸ್ತರಿಸಿತು. ನೂರು ಕೋಟಿ ರೂಪಾಯಿಗಳ ಗಳಿಕೆಯ ಮೈಲಿಗಲ್ಲನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸಿದ ಸಿನಿಮಾಗಳಲ್ಲಿ ಇದು ಪ್ರಮುಖ ಸ್ಥಾನ ಪಡೆದುಕೊಂಡಿತು. ಅಲ್ಲಿಂದ ಮುಂದೆ ಈ ನಿರ್ದೇಶಕರ ನಿಜವಾದ ಬಾಕ್ಸ್ ಆಫೀಸ್ ಆಟ ಶುರುವಾಯ್ತು!

ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಾವಿರಾರು ಕೋಟಿ ಗಳಿಕೆಯ ಹಾದಿ ತೋರಿಸಿದ ರಾಜಮೌಳಿ! 'ಬಾಹುಬಲಿ 2' ಮತ್ತು 'ಆರ್‌ಆರ್‌ಆರ್' ಸೃಷ್ಟಿಸಿದ ಬಾಕ್ಸ್ ಆಫೀಸ್ ಸುನಾಮಿ ಎಷ್ಟು ಗೊತ್ತಾ?

ಭಾರತೀಯ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ದಾಖಲೆಗಳ ಮಾತು ಬಂದಾಗ ಎಸ್.ಎಸ್. ರಾಜಮೌಳಿ (SS Rajamouli) ಅವರ ಹೆಸರನ್ನು ಮರೆಯುವಂತಿಲ್ಲ. ಒಂದು ಕಾಲದಲ್ಲಿ ನೂರು ಕೋಟಿ ರೂಪಾಯಿ ಗಳಿಸುವುದೇ ದೊಡ್ಡ ಸಾಧನೆ ಎಂದು ಪರಿಗಣಿಸಲಾಗುತ್ತಿದ್ದ ತೆಲುಗು ಚಿತ್ರರಂಗವನ್ನು, ಈ ಮೂಲಕ ಸೌತ್ ಇಂಡಿಯನ್ ಸಿನಿಮಾಗಳಿಗೆ ಇಂದು ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಮಾರುಕಟ್ಟೆಯಾಗಿ ಬೆಳೆಸುವಲ್ಲಿ ರಾಜಮೌಳಿ ಅವರ ಪಾತ್ರ ಬಹಳ ದೊಡ್ಡದು. ಅದರಲ್ಲೂ 'ಬಾಹುಬಲಿ 2' ಮತ್ತು 'ಆರ್‌ಆರ್‌ಆರ್' ಸಿನಿಮಾಗಳು ಮಾಡಿದ ಕಮಾಲ್ ಭಾರತೀಯ ಸಿನಿಮಾಗಳ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನೇ ಬದಲಿಸಿವೆ. ಈ ಎರಡು ಚಿತ್ರಗಳ ಮೂಲಕ ರಾಜಮೌಳಿ ವಿಶ್ವಾದ್ಯಂತ ಗಳಿಸಿದ ಮೊತ್ತ ಬರೋಬ್ಬರಿ 3,100 ಕೋಟಿ ರೂಪಾಯಿಗೂ ಅಧಿಕ!

'ಬಾಹುಬಲಿ' ಮೂಲಕ ಶುರುವಾದ ಬಾಕ್ಸ್ ಆಫೀಸ್ ಕ್ರಾಂತಿ!

ರಾಜಮೌಳಿ ಅವರ ನಿರ್ದೇಶನದಲ್ಲಿ 2015ರಲ್ಲಿ ತೆರೆಕಂಡ 'ಬಾಹುಬಲಿ: ದಿ ಬಿಗಿನಿಂಗ್' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡ ಈ ಚಿತ್ರದಲ್ಲಿ ಅದ್ಧೂರಿ ಸೆಟ್‌ಗಳು, ಅದ್ಭುತ ದೃಶ್ಯಗಳು, ಭರ್ಜರಿ ಯುದ್ಧದ ಸನ್ನಿವೇಶಗಳು ಮತ್ತು ವಿಭಿನ್ನ ಕಥಾಹಂದರ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದವು. ಕೇವಲ ತೆಲುಗು ಪ್ರೇಕ್ಷಕರಷ್ಟೇ ಅಲ್ಲದೆ, ದೇಶದ ವಿವಿಧ ಭಾಷೆಗಳ ಸಿನಿಪ್ರಿಯರೂ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದರು.

ಈ ಚಿತ್ರದ ಯಶಸ್ಸು ತೆಲುಗು ಸಿನಿಮಾಗಳ ಮಾರುಕಟ್ಟೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಗಡಿಗಳನ್ನು ಮೀರಿ ವಿಸ್ತರಿಸಿತು. ನೂರು ಕೋಟಿ ರೂಪಾಯಿಗಳ ಗಳಿಕೆಯ ಮೈಲಿಗಲ್ಲನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸಿದ ಸಿನಿಮಾಗಳಲ್ಲಿ 'ಬಾಹುಬಲಿ' ಪ್ರಮುಖ ಸ್ಥಾನ ಪಡೆದುಕೊಂಡಿತು. ಆದರೆ ರಾಜಮೌಳಿ ಅವರ ನಿಜವಾದ ಬಾಕ್ಸ್ ಆಫೀಸ್ ಆಟ ಶುರುವಾಗಿದ್ದು ಎರಡನೇ ಭಾಗದಿಂದ!

1,810 ಕೋಟಿ ಗಳಿಸಿ ಇತಿಹಾಸ ಬರೆದ 'ಬಾಹುಬಲಿ 2'!

2017ರಲ್ಲಿ ಬಿಡುಗಡೆಯಾದ 'ಬಾಹುಬಲಿ 2: ದಿ ಕನ್‌ಕ್ಲೂಷನ್' ಸಿನಿಮಾ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದಿತ್ತು. ಮೊದಲ ಭಾಗದಲ್ಲಿ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ ಈ ಸಿನಿಮಾ ಬಿಡುಗಡೆಯಾದ ಕ್ಷಣದಿಂದಲೇ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿತ್ತು.

ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಮತ್ತು ರಮ್ಯಾ ಕೃಷ್ಣ ಅವರ ಅಭಿನಯ ಚಿತ್ರದ ಯಶಸ್ಸಿಗೆ ಮತ್ತಷ್ಟು ಬಲ ನೀಡಿತ್ತು. ವಿಶ್ವಾದ್ಯಂತ ಸುಮಾರು 1,810 ಕೋಟಿ ರೂಪಾಯಿ ಗಳಿಸಿದ ಈ ಸಿನಿಮಾ, ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ ಮೊದಲ ತೆಲುಗು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಸಾಧನೆಯ ಮೂಲಕ ಭಾರತೀಯ ಸಿನಿಮಾಗಳಿಗೂ ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಸಬಹುದು ಎಂಬುದನ್ನು ರಾಜಮೌಳಿ ಸಾಬೀತುಪಡಿಸಿದರು.

'ಆರ್‌ಆರ್‌ಆರ್' ಮೂಲಕ ಮತ್ತೊಮ್ಮೆ ವಿಶ್ವದ ಗಮನ ಸೆಳೆದ ರಾಜಮೌಳಿ!

'ಬಾಹುಬಲಿ 2' ಯಶಸ್ಸಿನ ಬಳಿಕ ರಾಜಮೌಳಿ ಅವರ ಮುಂದಿನ ಸಿನಿಮಾ ಯಾವಾಗ ಬರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿತ್ತು. ಈ ನಿರೀಕ್ಷೆಗೆ ಉತ್ತರವಾಗಿ 2022ರಲ್ಲಿ ತೆರೆಕಂಡಿದ್ದು 'ಆರ್‌ಆರ್‌ಆರ್'. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಬಿಡುಗಡೆಯಾದ ಬಳಿಕ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಭಾರಿ ಮೆಚ್ಚುಗೆ ಗಳಿಸಿತು.

ಸ್ವಾತಂತ್ರ್ಯ ಪೂರ್ವದ ಕಾಲಘಟ್ಟದ ಹಿನ್ನೆಲೆಯಲ್ಲಿರುವ ಕಥೆ, ಅದ್ಧೂರಿ ಆ್ಯಕ್ಷನ್ ದೃಶ್ಯಗಳು, ಇಬ್ಬರು ನಾಯಕ ನಟರ ಅದ್ಭುತ ಅಭಿನಯ ಮತ್ತು ರಾಜಮೌಳಿ ಅವರ ವಿಭಿನ್ನ ನಿರೂಪಣೆ ಚಿತ್ರಕ್ಕೆ ವಿಶೇಷ ಮೆರುಗು ನೀಡಿದ್ದವು. ವಿಶ್ವಾದ್ಯಂತ ಸುಮಾರು 1,300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಈ ಸಿನಿಮಾ ಕೂಡ ಸಾವಿರ ಕೋಟಿ ಕ್ಲಬ್ ಸೇರಿತು.

ಇದರ ಜೊತೆಗೆ ಚಿತ್ರದ 'ನಾಟು ನಾಟು' ಹಾಡು ಆಸ್ಕರ್ ಪ್ರಶಸ್ತಿ ಗೆದ್ದು ಭಾರತೀಯ ಚಿತ್ರರಂಗದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿತು. ಹೀಗೆ ಬಾಕ್ಸ್ ಆಫೀಸ್ ಯಶಸ್ಸಿನ ಜೊತೆಗೆ ಅಂತರರಾಷ್ಟ್ರೀಯ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ 'ಆರ್‌ಆರ್‌ಆರ್' ರಾಜಮೌಳಿ ಅವರ ಪ್ರತಿಭೆಗೆ ಮತ್ತೊಂದು ಸಾಕ್ಷಿಯಾಯಿತು.

ಎರಡು ಸಿನಿಮಾಗಳಿಂದ 3,100 ಕೋಟಿ ರೂಪಾಯಿಗೂ ಅಧಿಕ ಗಳಿಕೆ!

ರಾಜಮೌಳಿ ಅವರ ಸಾಧನೆಯನ್ನು ಗಮನಿಸಿದರೆ, ಅವರು ಕೇವಲ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡುವ ನಿರ್ದೇಶಕರಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಕಥೆ, ಅದ್ಭುತ ದೃಶ್ಯ ವೈಭವ ಮತ್ತು ಜಾಗತಿಕ ಮಟ್ಟದಲ್ಲಿ ಸಿನಿಮಾವನ್ನು ಪ್ರಚಾರ ಮಾಡುವ ಸಾಮರ್ಥ್ಯ ಅವರ ಯಶಸ್ಸಿನ ಪ್ರಮುಖ ಅಸ್ತ್ರಗಳಾಗಿವೆ.

'ಬಾಹುಬಲಿ 2' ಸುಮಾರು 1,810 ಕೋಟಿ ರೂಪಾಯಿ ಹಾಗೂ 'ಆರ್‌ಆರ್‌ಆರ್' ಸುಮಾರು 1,300 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದ್ದು, ಈ ಎರಡು ಸಿನಿಮಾಗಳ ಒಟ್ಟು ವಿಶ್ವಾದ್ಯಂತ ಕಲೆಕ್ಷನ್ 3,100 ಕೋಟಿ ರೂಪಾಯಿಗಳನ್ನು ಮೀರಿದೆ. ಒಂದೇ ಸಿನಿಮಾದಿಂದ 2,000 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟುವ ತೆಲುಗು ಚಿತ್ರ ಇನ್ನೂ ದಾಖಲಾಗದಿದ್ದರೂ, ಎರಡು ಸಿನಿಮಾಗಳ ಮೂಲಕ ರಾಜಮೌಳಿ ಈ ಬೃಹತ್ ಗಳಿಕೆಯ ಮೈಲಿಗಲ್ಲು ತಲುಪಿದ್ದಾರೆ.

ರಮೇಶ್ ಭಟ್‌ರನ್ನು ಅಂಗಡಿಯಿಂದ ಬಿಡಿಸಿದ್ದೇಕೆ ಶಂಕರ್‌ ನಾಗ್? ಆಮೇಲೆ ಮಾಡಿದ-ಮಾಡಲಾಗದ ಕೆಲಸಗಳು ಏನು?

ಒಟ್ಟಿನಲ್ಲಿ, ತೆಲುಗು ಚಿತ್ರರಂಗದ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವಲ್ಲಿ ರಾಜಮೌಳಿ ಅವರ ಕೊಡುಗೆ ಅಪಾರ. ಈ ಮೂಲಕ, ಕನ್ನಡ ಸೇರಿದಂತೆ ಸೌತ್ ಇಂಡಿಯನ್ ಸಿನಿಮಾರಂಗವನ್ನೂ ಎನ್ನಬಹುದು. ಆ ಬಳಿಕ ಕನ್ನಡ ಚಿತ್ರರಂಗಕ್ಕೆ ಈ ದಾರಿ ತೋರಿಸಿರುವ ಜೋಡಿ ಯಶ್-ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿ ಎನ್ನಬಹುದು. ಪ್ರಭಾಸ್‌ನಿಂದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್‌ವರೆಗೆ ಹಲವು ಸ್ಟಾರ್‌ಗಳ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡಿರುವ ರಾಜಮೌಳಿ ಸಿನಿಮಾಗಳು ಭಾರತೀಯ ಚಿತ್ರರಂಗದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿವೆ. ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ದಾಖಲೆ ಬರೆಯುವ ಮೂಲಕ ರಾಜಮೌಳಿ ಸೃಷ್ಟಿಸಿರುವ ಈ ಸೌತ್ ಇಂಡಿಯನ್ ಸಿನಿಮಾಗಳ ಯಶಸ್ಸಿನ ಪಯಣ ಮುಂದಿನ ದಿನಗಳಲ್ಲಿ ಯಾವ ಹೊಸ ಮೈಲಿಗಲ್ಲು ತಲುಪಲಿದೆ ಎಂಬುದೇ ಈಗ ಸಿನಿಪ್ರಿಯರ ಕುತೂಹಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿಚ್ಚ ಸುದೀಪ್‌ಗೆ 'ಕಿಂಗ್ ಕಿಚ್ಚ' ಎಂಬ ಹೊಸ ಬಿರುದು ನೀಡಿದ ಜೋಗಿ ಪ್ರೇಮ್! ಈ ಹೆಸರಿನ ಹಿಂದಿದೆ ಸ್ಪೆಷಲ್ ಕಾರಣ!
ಬಾಕ್ಸ್‌ ಆಫೀಸ್‌ನಲ್ಲಿ 5 ಸಿನಿಮಗಳ ಮಧ್ಯೆ ಭರ್ಜರಿ ಫೈಟ್‌, ವೀಕೆಂಡ್‌ ಮಸ್ತಿಗೆ ಯಾವ ಸಿನಿಮಾ ಬೆಸ್ಟ್‌?