
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ (RR Nagar) ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಯಾಂಡಲ್ ವುಡ್ ನಟಿ ಕ್ರಿಷಿ ತಾಪಂಡ ಆಪ್ತ ಗೆಳೆಯ ನಟಿಯ ಅಪಾರ್ಟ್‌ಮೆಂಟ್ ನಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೃತನನ್ನು ವೈಶಾಕ್ ಎಂದು ಗುರುತಿಸಲಾಗಿದ್ದು, ಈ ಘಟನೆ ಈಗ ಸಂಚಲನ ಮೂಡಿಸಿದೆ.
ಆರ್.ಆರ್. ನಗರದ ಪ್ರತಿಷ್ಠಿತ 'ಎಲಿಗಂಟ್ಸ್ ಅಪಾರ್ಟ್‌ಮೆಂಟ್' (Elegants Apartment) ನಲ್ಲಿ ಈ ದುರಂತ ಸಂಭವಿಸಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ನಟಿ ಕ್ರಿಷಿ ತಾಪಂಡ ಫ್ಲಾಟ್‌ಗೆ ಬಂದಿದ್ದ ವೈಶಾಕ್, ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ನಟಿ ಕ್ರಿಷಿ ತಾಪಂಡ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವೈಶಾಕ್ ಸಾವಿನ ವಿಷಯ ತಿಳಿಯುತ್ತಿದ್ದಂತೆ ಅಪಾರ್ಟ್‌ಮೆಂಟ್‌ಗೆ ಧಾವಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಸದ್ಯ ವೈಶಾಕ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿಗೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲವಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಮೃತ ವೈಶಾಕ್ ಹಿಂದೆ ವಿವಾದಾತ್ಮಕ ಹಿನ್ನೆಲೆ ಹೊಂದಿದ್ದರು ಎನ್ನಲಾಗಿದೆ. ಪತ್ನಿ ಜತೆಗೆ ಗಲಾಟೆ ಮಾಡಿಕೊಂಡಿದ್ದ ವೈಶಾಕ್ ಆ ವೈಮನಸ್ಸಿನಿಂದ ಗೆಳತಿ ಕೃಷಿ ತಾಪಂಡ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಈ ಹಿಂದೆ ಇದೇ ವೈಶಾಕ್ ಪ್ರಖ್ಯಾತ ಉದ್ಯಮಿ ಅರವಿಂದ್ ರೆಡ್ಡಿ ಅವರಿಗೆ ಜೀವಬೆದರಿಕೆ ಹಾಕಿದ ಗಂಭೀರ ಪ್ರಕರಣದಲ್ಲಿ ಬಂಧಿತನಾಗಿದ್ದ. ಈ ಕುರಿತು ನಗರದ ಹೆಚ್.ಎ.ಎಲ್ (HAL) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಾವಿನ ಹಿಂದೆ ಕಾರಣವೇನು ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಟಿಯ ಫ್ಲಾಟ್‌ನಲ್ಲೇ ಗೆಳೆಯ ಸಾವಿಗೆ ಶರಣಾಗಿರುವುದರಿಂದ ಈ ಪ್ರಕರಣ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರ್.ಆರ್. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಟಿ ಮತ್ತು ಮೃತನ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.