ಸುಶಾಂತ್ ಕಂಪನಿಗೆ ರಿಯಾ ಸೋದರ ನಿರ್ದೇಶಕ!| 15 ಕೋಟಿ ಹಣ ಕಬಳಿಕೆ ಆರೋಪ ಬೆನ್ನಲ್ಲೇ ಹೊಸ ಮಾಹಿತಿ| ಪ್ರಕರಣಕ್ಕೆ ಮಹತ್ತರ ತಿರುವು?
ನವದೆಹಲಿ(ಜು.30): ಆತ್ಮಹತ್ಯೆಗೆ ಶರಣಾದ ನಟ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ 15 ಕೋಟಿ ರು. ಹಣ ಕಬಳಿಸಿದ್ದಾರೆ ಎಂದು ಸುಶಾಂತ್ ಸಿಂಗ್ ತಂದೆ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸುಶಾಂತ್ ಪಾಲುದಾರಿಕೆಯಲ್ಲಿ ಸ್ಥಾಪಿಸಲಾಗಿದ್ದ ವಿವಿಡ್‌ರೇಜ್ ರಿಯಾಲಿಟಿಎಕ್ಸ್ ಪ್ರೈವೇಟ್ ಲಿಮಿಟೆಟ್ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ತಮ್ಮ ಸೋದರ ಶೋವಿಕ್ ಚಕ್ರವರ್ತಿ ಅವರನ್ನು ರಿಯಾ ನೇಮಕ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗೆಳತಿ ರಿಯಾಗೆ ಆತಂಕ!
2019ರ ಸೆಪ್ಟೆಂಬರ್‌ನಲ್ಲಿ ಈ ಕಂಪನಿ ಸ್ಥಾಪನೆಯಾಗಿತ್ತು. ಅದಾದ ನಾಲ್ಕು ತಿಂಗಳಿಗೇ ಸುಶಾಂತ್ ಸಿಂಗ್ ರಜಪೂತ್ ಖಿನ್ನತೆಗೆ ಒಳಗಾಗಿದ್ದರು. ಮುಂಬೈನಲ್ಲಿ ನಾಲ್ಕು ವೈದ್ಯರನ್ನು ಸಂಪರ್ಕಿಸಿದ್ದರು. ಅವರು ಚಿಕಿತ್ಸೆ ಪಡೆಯುತ್ತಿರುವಾಗಲೇ ಸುಶಾಂತ್ ಜತೆಗೂಡಿ ಮತ್ತೊಂದು ಕಂಪನಿಯನ್ನು ಸ್ಥಾಪಿಸಿದ್ದರು. ರಿಯಾ ಹಾಗೂ ಆಕೆಯ ತಂದೆ ಇಂದ್ರಜಿತ್ ಚಕ್ರವರ್ತಿ ಅವರಿಗೆ ಸೇರಿದ್ದ ಮನೆಯ ವಿಳಾಸ ನೀಡಿ ಕಂಪನಿಗಳನ್ನು ನೋಂದಣಿ ಮಾಡಲಾಗಿತ್ತು. ಸುಶಾಂತ್ ಆತ್ಮಹತ್ಯೆಗೆ ಶರಣಾಗುವ ಕೆಲವೇ ದಿನ ಮುನ್ನ ರಿಯಾ ಅವರು ವಿವಿಡ್‌ರೇಜ್ ಕಂಪನಿಯ ನಿರ್ದೇಶಕ ಸ್ಥಾನ ತ್ಯಜಿಸಿದ್ದರು. ಸುಶಾಂತ್ ಸಿಂಗ್‌ರ 15 ಕೋಟಿ ಹಣವನ್ನು ವರ್ಗಾಯಿಸಲೆಂದೇ ಎರಡನೇ ಕಂಪನಿಯನ್ನು ತೆರೆಯಲಾಗಿತ್ತೆ ಎಂಬ ಸಂದೇಹ ಸೃಷ್ಟಿಯಾಗಿದೆ ಎಂದು ವರದಿಯೊಂದು ತಿಳಿಸಿದೆ.
ಇದೇ ವೇಳೆ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ಪಟನಾದಿಂದ ಮುಂಬೈಗೆ ವರ್ಗಾಯಿಸಬೇಕು ಎಂದು ಕೋರಿ ರಿಯಾ ಚಕ್ರವರ್ತಿ ಬುಧವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.