ಪ್ರೇಕ್ಷಕರ ಕೆಲವು ತಪ್ಪು ಕಲ್ಪನೆಗಳಿಂದ ಹೊಸ ಅಲೆಯ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಜನರನ್ನು ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ವಿಷಾದಿಸಿದರು.
ಮೈಸೂರು (ಫೆ.05): ಪ್ರೇಕ್ಷಕರ ಕೆಲವು ತಪ್ಪು ಕಲ್ಪನೆಗಳಿಂದ ಹೊಸ ಅಲೆಯ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಜನರನ್ನು ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ವಿಷಾದಿಸಿದರು. ನಗರದ ರಾಜ್ಯ ಮುಕ್ತ ವಿವಿ ಕಾವೇರಿ ಸಭಾಂಗಣದಲ್ಲಿ ಮೈಸೂರು ಸಿನಿಮಾ ಸೊಸೈಟಿಯು ಆಯೋಜಿಸಿರುವ 'ಪರಿದೃಶ್ಯ'- ಎರಡು ದಿನಗಳ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಉತ್ಸವದಲ್ಲಿ ನಡೆದ ಕನ್ನಡದ ಹೊಸ ಅಲೆಯ ಚಿತ್ರಗಳು ಕುರಿತು ಸಂವಾದದಲ್ಲಿ ಮಾತನಾಡಿದ ಅವರು, ಸಮಾಜವಾದಿ ಚಿಂತನೆಯ ಮುಖಾಂತರ ಹೊಸ ಅಲೆಯ ಚಿತ್ರಗಳು ಹುಟ್ಟಿಕೊಂಡವು.
ಆದರೆ, ಹೊಸ ಅಲೆಯ ಚಿತ್ರಗಳನ್ನು ಅದರ ಮೇಲ್ನೋಟಕ್ಕಷ್ಟೇ ಸೀಮಿತವಾಗಿಸಿ ವಿಶ್ಲೇಷಿಸುವ ಮುಖಾಂತರ ತಪ್ಪು ವ್ಯಾಖ್ಯಾನ ಮಾಡಲಾಗಿದೆ ಎಂದರು. ಸಂಸ್ಕಾರ ಹೊಸ ಅಲೆಯ ಮೊದಲ ಕನ್ನಡ ಚಿತ್ರ. ಸಂಸ್ಕಾರ ಚಿತ್ರದ ಮುಂಚಿನ ಸಿನಿಮಾಗಳಲ್ಲಿ ಭಾವುಕ ನೆಲೆಯಲ್ಲಿ ಅಥವಾ ಭಾವನಾತ್ಮಕವಾಗಿ ಉದ್ರೇಕಿಸುವ ಕಥೆಯನ್ನು ಮಾತ್ರ ಕಟ್ಟಲಾಗುತ್ತಿತ್ತು. ಭಾವನಾತ್ಮಕವಾಗಿ ಉದ್ರೇಕಿಸದೇ ವೈಚಾರಿಕವಾಗಿ ಉದ್ರೇಕಿಸುವ ಕಥೆಯನ್ನು ಕಟ್ಟುವ ಟ್ರೆಂಡ್ ಹುಟ್ಟುಹಾಕಿದ್ದು ಸಂಸ್ಕಾರ. ಆದ್ದರಿಂದ 'ಸಂಸ್ಕಾರ' ಚಿತ್ರವನ್ನು ಕನ್ನಡದ ಮೊದಲ ಹೊಸ ಅಲೆಯ ಸಿನಿಮಾ ಎಂದು ಗುರುತಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ತೆರಿಗೆ ಹಣ ಬಂದಿದೆ: ಸಿಎಂ ಸಿದ್ದುಗೆ ಪ್ರಶ್ನೆ ಮಾಡಿದ ಸಿ.ಟಿ.ರವಿ!
ಹೊಸ ಅಲೆಯ ಚಿತ್ರಗಳು ಮೊದಲು ಪ್ರಾರಂಭವಾಗಿದ್ದು ಕನ್ನಡದಲ್ಲಿ. ಆದರೆ ಹೊಸ ಅಲೆಯ ಸಿನಿಮಾಗಳ ಸ್ವರ್ಣ ಮಹೋತ್ಸವ ಆಚರಿಸಿದ್ದು ಕೇರಳದಲ್ಲಿ. ಕನ್ನಡ ಚಿತ್ರರಂಗದ ನಿರಾಸಕ್ತಿಯೇ ಇದಕ್ಕೆ ಕಾರಣ. ಜಾಗತಿಕ ಸಿನಿಮಾ ರಂಗಕ್ಕೆ ಕನ್ನಡ ಚಿತ್ರರಂಗದ್ದು ದೊಡ್ಡ ಕೊಡುಗೆಯಿದೆ. ಅದನ್ನು ಯಾರೂ ಗುರುತಿಸುತ್ತಿಲ್ಲ ಎನ್ನುವ ಕೊರಗು ನನ್ನಲ್ಲಿತ್ತು. ಆ ಕೊರಗನ್ನು ಪರಿದೃಶ್ಯ ಚಿತ್ರೋತ್ಸವ ನೀಗಿಸಿದೆ ಎಂದರು. ಇವತ್ತಿನ ಕನ್ನಡ ಸಿನಿಮಾಗಳು ಕನ್ನಡತನವನ್ನು ಎತ್ತಿ ಹಿಡಿಯುತ್ತಿವೆ.
ಆದರೂ ತಮಿಳು ಮತ್ತು ತೆಲುಗು ಚಿತ್ರಗಳ ಪ್ರಭಾವ ಕನ್ನಡ ಚಿತ್ರಗಳ ಮೇಲೆ ಸಾಕಷ್ಟು ಉಂಟಾಗಿದೆ ಎನ್ನುವುದನ್ನೂ ಒಪ್ಪಿಕೊಳ್ಳಲೇಬೇಕಾಗಿದೆ. ಕೇವಲ ನಗಿಸುವ ಅಥವಾ ಅಳಿಸುವ ಮಾಧ್ಯಮವಾಗಿ ಅಲ್ಲದೆ ವೈಚಾರಿಕವಾಗಿ ಚಿಂತನೆಗೆ ಹಚ್ಚುವ, ವೈಚಾರಿಕವಾಗಿ ಪ್ರಚೋದಿಸುವ ಕೆಲಸವನ್ನು ಯಾವ ಚಿತ್ರಗಳು ಮಾಡುತ್ತವೆಯೋ ಅವುಗಳನ್ನು ಹೊಸ ಅಲೆಯ ಚಿತ್ರಗಳು ಎಂದು ಕರೆಯಬಹುದು. ಅಂತಹ ಚಿತ್ರಗಳು ಸಾರ್ವಕಾಲಿಕವಾಗಿ ಸಲ್ಲುತ್ತವೆ ಎಂದು ಅವರು ವ್ಯಾಖ್ಯಾನಿಸಿದರು. ನಿರ್ದೇಶಕ ಶ್ರೀನಿವಾಸ್ ಕೌಶಿಕ್ ಅವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಹಲವಾರು ನಿರ್ದೇಶಕರು, ತಂತ್ರಜ್ಞರು ಹಾಗೂ ಸಿನಿಮಾಸಕ್ತರು ಭಾಗವಹಿಸಿದ್ದರು.
ಪೊಲೀಸ್‌ಗೆ ಕ್ರೀಡಾಕೋಟಾ ಹೆಚ್ಚಳಕ್ಕೆ ಚಿಂತನೆ: ಸಿಎಂ ಸಿದ್ದರಾಮಯ್ಯ
ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ವ್ಯಾಮೋಹಕ್ಕೆ ಬಲಿಯಾದರೆ, ಹಿಂದಿ ಸಿನಿಮಾಗಳು ಯಾವ ಸಮಸ್ಯೆ ಎದುರಿಸಿತ್ತೋ ಅದೆಲ್ಲವನ್ನೂ ಎದುರಿಸಬೇಕಾಗುತ್ತದೆ. ಸ್ಥಳೀಯತೆಯ ಆಧಾರದಲ್ಲಿ ಕಟ್ಟಿಕೊಡಬಹುದಾದ ಯಾವುದೇ ಕಥೆಗಳನ್ನು ಕಳೆದುಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
- ಗಿರೀಶ್ ಕಾಸರವಳ್ಳಿ, ಖ್ಯಾತ ನಿರ್ದೇಶಕ