ತಮ್ಮ ಸ್ನೇಹಿತ ನಿಖಿಲ್ ವಿಜಯೇಂದ್ರ ಸಿಂಹ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಮೆಗಾಸ್ಟಾರ್ ಕುಟುಂಬದ ಕುಡಿ ಹಾಗೂ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ, ವಿಚ್ಛೇದನ ನೋವಿನ ವಿಷಯವಾಗಿತ್ತು ಎಂದು ಹೇಳಿದ್ದಾರೆ. ಇದೇ ಪಾಡ್‌ಕಾಸ್ಟ್‌ನ ವಿಡಿಯೋಗೆ ನಿಹಾರಿಕಾ ಮಾಜಿ ಪತಿ ಚೈತನ್ಯ ಪ್ರತಿಕ್ರಿಯೆ ನೀಡಿದ್ದು, ಏಕಪಕ್ಷೀಯವಾದ ಕಥೆ ಕೇಳಬೇಡಿ ಎಂದಿದ್ದಾರೆ.
ಬೆಂಗಳೂರು (ಜ.26): ನಟಿ ನಿಹಾರಿಕಾ ಕೊನಿಡೆಲಾ ಹಾಗೂ ಟೆಕ್ಕಿ ಚೈತನ್ಯ ಜೆವಿ 2020ರ ಡಿಸೆಂಬರ್ 9 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಮದುವೆಯಾದ ಒಂದೇ ವರ್ಷದಲ್ಲಿ ಇವರಿಬ್ಬರ ನಡುವೆ ಏನೂ ಸರಿಯಿಲ್ಲ. ಬೇರೆಯಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಲಾರಂಭಿಸಿದವು. ಕೊನೆಗೆ 2023ರ ಜುಲೈನಲ್ಲಿ ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ಗಳಲ್ಲಿ ಇಬ್ಬರೂ ಕೂಡ ತಾವು ಬೇರೆ ಬೇರೆ ಆಗಿರುವುದಾಗಿ ತಿಳಿಸಿದ್ದರು. ಅಂದಿನಿಂದ ಈ ವಿಚಾರದ ಬಗ್ಗೆ ನಿಹಾರಿಕಾ ಆಗಲಿ ಚೈತನ್ಯ ಆಗಲಿ ಮಾತನಾಡಿರಲಿಲ್ಲ. ಆದರೆ, ನಿಹಾರಿಕಾ ಕೊನಿಡೇಲಾ ಅಧಿಕೃತ ವಿಚ್ಛೇದನ ಘೋಷಣೆ ಮಾಡಿ ಏಳು ತಿಂಗಳ ಬಳಿಕ ಇದರ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸ್ನೇಹಿತ ನಿಖಿಲ್ ವಿಜಯೇಂದ್ರ ಸಿಂಹ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ನಿಹಾರಿಕಾ, ಮದುವೆ ಹಾಗೂ ವಿಚ್ಛೇದನದ ಬಗ್ಗೆ ತಿಳಿಸಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ಪ್ರೋಮೋಗೆ ನಿಹಾರಿಕಾ ಮಾಜಿ ಪತಿ ಚೈತನ್ಯ ಜೆವಿ ಕೂಡ ದೊಡ್ಡ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಚೈತನ್ಯ ಅವರು ಕಾಮೆಂಟ್‌ಗೆ ನಿಹಾರಿಕಾ ಆಗಲಿ ನಿಖಿಲ್ ವಿಜಯೇಂದ್ರ ಸಿಂಹ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮದುವೆಯಾಗಿದ್ದ ನಾನು ವಿಚ್ಛೇದನ ಘೋಷಣೆ ಮಾಡಿಕೊಂಡ ಬಳಿಕ ಒಂದೇ ಕ್ಷಣಕ್ಕೆ ಎಲ್ಲರ ಮುಂದೆ ಸಣ್ಣವರಾದ ಬಗ್ಗೆ ಮಾತನಾಡಿದ್ದಾರೆ. 'ಜೀವನದಲ್ಲಿ ನನ್ನ ಗಮನವನ್ನು ಕೇಂದ್ರೀಕರಿಸಲು ಬಯಸುವಂತ ಒಂದು ಹಂತದಲ್ಲಿ ಇದ್ದೇನೆ. ನನ್ನ ಹೆತ್ತವರಿಗಾಗಿ ಇರಲು ಬಯಸುತ್ತೇನೆ' ಎಂದು ಹೇಳಿದ್ದಾರೆ. ನಾನು ಮೊದಲಿನಿಂದಲೂ ನನ್ನ ತಂದೆ-ತಾಯಿಯ ಮೇಲೆಯೇ ಅವಲಂಬಿತಳಾಗಿದ್ದೇನೆ. ಅವರಿಲ್ಲದಿದ್ದರೆ ಹೇಗೆ ಬದುಕಬೇಕು ಅನ್ನೋದು ನನಗೆ ತಿಳಿದಿಲ್ಲ ಎಂದಿದ್ದಾರೆ. ಈ ಹಂತದಲ್ಲಿ ನೀವು ತಪ್ಪು ವ್ಯಕ್ತಿಯ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ನಾನು ಸುಮಾರು ಎರಡು ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದಿದ್ದೇನೆ. ಅದು ಎಷ್ಟು ನೋವುಂಟು ಮಾಡಿದೆ ಎನ್ನುವುದು ನನಗೆ ಮಾತ್ರವೇ ತಿಳಿದಿದೆ ಎಂದು ನಿಹಾರಿಕಾ ಹೇಳಿದ್ದಾರೆ.
ಇದೇ ವೇಳೆ ನನ್ನನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದು ಗೊತ್ತಿದೆ ಎಂದು ಹೇಳಿದ್ದಾರೆ. ಆದರೆ, ನಮ್ಮ ಕುಟುಂಬದ ಬಗ್ಗೆ ಮಾತನಾಡಿದಾಗ ತನಗೆ ನೋವುಂಟಾಗುತ್ತದೆ ಎಂದಿದ್ದಾರೆ. ನಾಗಬಾಬು ಅವರಂಥ ತಂದೆಯನ್ನು ಪಡೆಯಲು ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ಯಾರು ಏನು ಯೋಚಿಸ್ತಾರೆ ಅನ್ನೋದಕ್ಕೆ ಅವರೆಂದೂ ಹೆದರಿಲ್ಲ. ಅವರ ಪಾಲಿಗೆ ನಾನೇ ಅವರ ಅತ್ಯುತ್ತಮ ವಿಷಯ. ನಾನು ಖುಷಿಯಾಗಿರಲು ಅರ್ಹಳಾಗಿದ್ದೇನೆ. ನನ್ನ ವಿಚ್ಛೇದನವು ನನಗೆ ಕುಟುಂಬದ ಮೌಲ್ಯವನ್ನು ತೋರಿಸಿದೆ ಎಂದಿದ್ದಾರೆ. ಹಾಗಿದ್ದರೂ ವಿಚ್ಛೇದನದ ಬಳಿಕ ಬಹಳ ಅತ್ತಿದ್ದೆ ಎನ್ನುವ ನಿಹಾರಿಕಾ, ಇದು ಜನರನ್ನು ಸುಖಾಸುಮ್ಮನೆ ನಂಬಬಾರದು ಎನ್ನುವ ಪಾಠವನ್ನು ಕಲಿಸಿದೆ ಎಂದಿದ್ದಾರೆ. ಜೀವಿತಾವಧಿಯಲ್ಲಿ ಒಮ್ಮೆ ಮಾತ್ರವೇ ಮದುವೆ ಎಂದು ನಂಬಿಯೇ ಎಲ್ಲರೂ ಮದುವೆಯಾಗುತ್ತಾರೆ. ಆದರೆ, ಎಲ್ಲವೂ ನಾನು ನಿರೀಕ್ಷಿಸಿದಂತೆ ಇದ್ದಿರಲಿಲ್ಲ. ನನಗೀಗ ಕೇವಲ 30 ವರ್ಷ. ಪ್ರೀತಿಗಾಗಿ ನಾನು ಹೃದಯವನ್ನು ಮುಚ್ಚಿಲ್ಲ. ಮುಂದಿನ ಸಂಬಂಧ ಒಪ್ಪುವ ಮೊದಲು ನಾನು ಸ್ವತಂತ್ರವಾಗಿರಬೇಕು, ಕೆಲವು ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ ಆದರೆ, ಈಗ ನಾನು ಸಿಂಗಲ್' ಎಂದು ನಿಹಾರಿಕಾ ಹೇಳಿದ್ದಾರೆ.
ಡೈವೋರ್ಸ್ ಪಡೆದ ತಿಂಗಳ ಒಳಗೆ 2ನೇ ಮದುವೆಗೆ ರೆಡಿಯಾದ ಮೆಗಾ ಕುಟುಂಬದ ಕುಡಿ ನಿಹಾರಿಕಾ?
ಇನ್ನು ನಿಹಾರಿಕಾ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಚೈತನ್ಯ, ತಮ್ಮ ಕಾಮೆಂಟ್‌ಅನ್ನು ಮಾಜಿ ಪತ್ನಿಯ ಬದಲಾಗಿ ಸಂದರ್ಶನ ಮಾಡಿದ ನಿಖಿಲ್ ವಿಜಯೇಂದ್ರಗೆ ಟ್ಯಾಗ್ ಮಾಡಿ ತಿಳಿಸಿದ್ದಾರೆ. “ನೀವು ಮದುವೆಗೆ ಸಂಬಂಧಿಸಿದಂತೆ ವಿಕ್ಟಿಮ್ ಮತ್ತು ರೀಸನ್‌ಗಳ ಟ್ಯಾಗ್ ಮಾಡೋದನ್ನು ನಿಲ್ಲಿಸಬೇಕು. ಈ ವೇದಿಕೆ ಅದಕ್ಕಾಗಿ ಬಳಕೆ ಆಗಬಾರದು. ಈ ರೀತಿ ಆಗುತ್ತಿರುವುದು 2ನೇ ಬಾರಿ. ಕೆಲಸ ಮಾಡದ ವಿಚಾರ ಬಗ್ಗೆ ನೋವು ಮತ್ತು ಅದನ್ನು ಗುಣ ಮಾಡುವ ಪ್ರಕ್ರಿಯೆ ಎರಡೂ ಕಡೆಗಳಲ್ಲೂ ಇರುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು ಎಂದು ಬರೆದಿದ್ದಾರೆ. ಕೇವಲ ಏಕಪಕ್ಷೀಯ ಕಥೆ ಕೇಳಿಕೊಂಡು ನಿರ್ಧಾರಕ್ಕೆ ಬರುವ ಕೆಲಸ ಮಾಡಬೇಡಿ ಎಂದಿದ್ದಾರೆ.
'ಪಬ್ಬು, ಕ್ಲಬ್ಬು ಅಂತಾ ಸುತ್ತಾಡಿದ್ದು ಬಿಟ್ಟರೆ ಮತ್ತೇನೂ ಮಾಡ್ಲಿಲ್ಲ..' ನಿಹಾರಿಕಾ ವಿರುದ್ಧ ಚೈತನ್ಯ ತಂದೆಯ ಆರೋಪ!