ಸೆನ್ಸಾರ್‌ ಸರ್ಟಿಫಿಕೇಟ್‌ : ಪ್ರತಿಭಟನೆಗೆ ನಿರ್ಧರಿಸಿದರು ಕನ್ನಡ ನಿರ್ದೇಶಕರು

By Kannadaprabha NewsFirst Published Sep 20, 2020, 9:14 AM IST
Highlights

ಕನ್ನಡ ನಿರ್ದೇಶಕರು ಇದೀಗ ಪ್ರತಿಭಟನೆಗೆ ನಡೆಸಲು ನಿರ್ಧರಿಸಿದ್ದಾರೆ. ಕನ್ನಡದಲ್ಲೇ ಸೆನ್ಸಾರ್ ಸರ್ಟಿಫಿಕೇಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

 ಬೆಂಗಳೂರು (ಸೆ.20): ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ, ಅವುಗಳಿಗೆ ಕನ್ನಡದಲ್ಲೇ ಸೆನ್ಸಾರ್‌ ಸರ್ಟಿಫಿಕೇಟ್‌ ನೀಡುವಂತೆ ಒತ್ತಾಯಿಸುವ ಮೂಲಕ ಹಿಂದಿ ಹೇರಿಕೆ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಲು ಕನ್ನಡದ ನಿರ್ದೇಶಕರು ಮುಂದಾಗಿದ್ದಾರೆ.

ಹಿಂದಿ ಹೇರಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ‘ಹಿಂದಿ ದಿವಸ್‌’ ಆಚರಣೆಯ ದಿನ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಿದ್ದವು. ಈ ಹೋರಾಟಕ್ಕೆ ಕನ್ನಡದ ಹಲವು ನಟರು ಬೆಂಬ​ಲಿ​ಸಿ​ದ​ರು. ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಅಭಿಯಾನ ಮಾಡಿದರು. ಆದರೆ ಈ ಹೋರಾಟಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪವನ್‌ ಕುಮಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್‌ ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿ ಆಗಿ ವಿವಾದವೂ ಆಯ್ತು.ನಂತರ ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿರುವವರ ಜತೆ ಆನ್‌ಲೈನ್‌ನಲ್ಲಿ ಒಂದಿಷ್ಟುಚರ್ಚೆ ಮಾಡಿ ತಮ್ಮ ಕ್ಷೇತ್ರದಲ್ಲಿ ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಿರುವ ಪವನ್‌ ಕುಮಾರ್‌, ಸೆನ್ಸಾರ್‌ ಮಂಡಳಿಯಲ್ಲಿ ಸೆನ್ಸಾರ್‌ ಮಾಡಿಸಿಕೊಳ್ಳುವ ಕನ್ನಡ ಚಿತ್ರಗಳಿಗೆ ಕನ್ನಡದಲ್ಲಿ ಸೆನ್ಸಾರ್‌ ಸರ್ಟಿಫಿಕೇಟ್‌ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ4 ಕಿರು ಚಿತ್ರಗಳನ್ನು ತಯಾರಿಸಿ ಸೆನ್ಸಾರ್‌ಗೆ ಕಳಿಸುವುದು, ಸೆನ್ಸಾರ್‌ ಪ್ರಮಾಣ ಪತ್ರಗಳನ್ನು ಕನ್ನಡದಲ್ಲೇ ನೀಡುವಂತೆ ಒತ್ತಾಯಿಸುವುದು ಇವರ ಉದ್ದೇಶವಾಗಿದೆ.

ಹಿಂದಿ ಹೇರಿಕೆಗೆ ಸುಮಲತಾ ಕಿಡಿ: ಅಧಿವೇಶನದಲ್ಲಿ ಕನ್ನಡ ಪರ ಘರ್ಜಿಸಿದ ರಾಜ್ಯದ ಏಕೈಕ MP .

ಬೆಂಬ​ಲ:

ಪವನ್‌ ಕುಮಾರ್‌ ಅವರ ಈ ಅಹ್ವಾನಕ್ಕೆ ನಿರ್ದೇಶಕರಾದ ಪಿ ಶೇಷಾದ್ರಿ, ಕೆ ಎಂ ಚೈತನ್ಯ, ಸಿಂಪಲ್‌ ಸುನಿ ಮುಂತಾದವರು ಧ್ವನಿ ಗೂಡಿಸಿದ್ದಾರೆ. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಸೆನ್ಸಾರ್‌ ಸೆರ್ಟಿಫಿಕೇಟ್‌ ನೀಡಲಾಗುತ್ತಿದೆ. ಕನ್ನಡ ಚಿತ್ರಗಳಿಗೆ ಬೇರೆ ಭಾಷೆಯಲ್ಲಿ ಸರ್ಟಿಫಿಕೇಟ್‌ ನೀಡುವ ಮೂಲಕ ಕನ್ನಡದ ಮೇಲೆ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯನ್ನು ಹೇರಿಕೆ ಮಾಡಲಾಗುತ್ತಿದೆ. ಹೀಗಾಗಿ ಕನ್ನಡ ಚಿತ್ರಗಳಿಗೆ ಕನ್ನಡದಲ್ಲೇ ಸೆನ್ಸಾರ್‌ ಸರ್ಟಿಫಿಕೇಟ್‌ ನೀಡುವಂತೆ ಪ್ರಾದೇಶಿಕ ಮಂಡಳಿಗೆ ಒತ್ತಡ ಹೇರಲು ಕನ್ನಡ ಚಿತ್ರರಂಗದ ನಿರ್ದೇಶಕರು ಕಿರು ಚಿತ್ರಗಳ ಮೊರೆ ಹೋಗಿದ್ದಾರೆ.

10 ನಿಮಿ​ಷದ ಕಿರು​ಚಿ​ತ್ರ:

ಹಿಂದಿ ಹೇರಿಕೆ ವಿರೋಧಿಸುವವರು 10 ನಿಮಿಷಗಳ ಕಿರುಚಿತ್ರವನ್ನು ಸಿದ್ಧಪಡಿಸಬೇಕು. ಹೀಗೆ ತಯಾರಿಸಿದ ಎಲ್ಲ ಕಿರುಚಿತ್ರಗಳನ್ನು ಸೇರಿಸಿ ಒಂದು ಸಿನಿಮಾ ಆಗಿ ಬದಲಾಯಿಸಿ ಸೆನ್ಸಾರ್‌ ಮಂಡಳಿಗೆ ಸಲ್ಲಿಸಿ, ಈ ಚಿತ್ರಕ್ಕೆ ಕನ್ನಡದಲ್ಲಿ ಸೆನ್ಸಾರ್‌ ಸರ್ಟಿಫಿಕೇಟ್‌ ಪಡೆದುಕೊಳ್ಳುವುದು. ಆ ಮೂಲಕ ಮುಂದೆ ಕನ್ನಡ ಚಿತ್ರಗಳಿಗೆ ಕನ್ನಡದಲ್ಲೇ ಸೆನ್ಸಾರ್‌ ಪ್ರಮಾಣ ಪತ್ರ ಪಡೆಯುವ ಉದ್ದೇಶ ಈ ಹೋರಾಟದ ಹಿಂದಿದೆ.

‘ಹಿಂದಿ ಹೇರಿಕೆ ವಿರುದ್ಧದ ಹೋರಾಟ ಮತ್ತು ಕನ್ನಡಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬ ಕೂಗು ಕೇವಲ ಮಾತು ಮತ್ತು ಲೇಖನಗಳಿಗೆ ಸೀಮಿತ ಆಗಬಾರದು. ಎಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಕನ್ನಡವನ್ನು ಅಳವಡಿಸಲು ಒತ್ತಾಯಿಸಬೇಕಿದೆ. ಈಗ ನಮ್ಮ ಕ್ಷೇತ್ರದಲ್ಲಿ ಕನ್ನಡ ಚಿತ್ರಗಳಿಗೆ ಕನ್ನಡದಲ್ಲೇ ಸರ್ಟಿಫಿಕೇಟ್‌ ಕೊಡಿ ಎನ್ನುವ ಹೋರಾಟದ ಮೂಲಕ ನಾವು ಇದನ್ನೇ ಮಾಡಲು ಹೊರಟಿದ್ದೇವೆ. ಈ ಹೋರಾಟಕ್ಕೆ ಎಲ್ಲ ಕನ್ನಡ ಸಿನಿಮಾ ನಿರ್ದೇಶಕರು ಜತೆಗೂಡಬೇಕು’ ಎಂದು ಪವನ್‌ ಕುಮಾರ್‌ ಮನವಿ ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಹಲವು ನಿರ್ದೇಶಕರು ಸೇರಿ ಆರಂಭಿಸಿರುವ ಫಿಲ್ಮ್‌ ಮೇಕರ್ಸ್‌ ಯುನೈಟೆಡ್‌ ಕ್ಲಬ್‌ (ಎಫ್‌ಯುಸಿ) ಕನ್ನಡ ಸೆನ್ಸಾರ್‌ ಸರ್ಟಿಫಿಕೆಟ್‌ ಪಡೆಯುವ ಹೋರಾಟಕ್ಕೆ ವೇದಿಕೆ ಆಗುತ್ತಿದ್ದು ನಿರ್ದೇಶಕರಾದ ಪಿ ಶೇಷಾದ್ರಿ, ಸಿಂಪಲ್‌ ಸುನಿ, ಕೆ ಎಂ ಚೈತನ್ಯ ಅವರು ಕನ್ನಡ ಸರ್ಟಿಫಿಕೇಟ್‌ಗಾಗಿ ಒತ್ತಾಯಿಸಿ ಕಿರು ಚಿತ್ರಗಳನ್ನು ಮಾಡಲು ಮುಂದಾಗಿದ್ದಾರೆ. ಎಲ್ಲೆಲ್ಲಿ ಯಾವ ರೀತಿ ಹಿಂದಿ ಹೇರಿಕೆಯಾಗುತ್ತಿದೆ ಎಂಬುದರ ಸುತ್ತವೇ ಈ ಕಿರುಚಿತ್ರಗಳನ್ನು ರೂಪಿಸಲಾಗುವುದು.

 ಕನ್ನಡ ಚಿತ್ರಗಳಿಗೆ ಕನ್ನಡದಲ್ಲಿ ಸರ್ಟಿಫಿಕೇಟ್‌ ಕೊಡಬೇಕೆಂಬುದು ನಮ್ಮ ಅಗ್ರಹ. ಕೊಡದಿದ್ದರೆ ಮುಂದೆ ಏನು ಮಾಡಬೇಕು ಎಂಬುದನ್ನು ಎಲ್ಲರೂ ಸೇರಿ ಚರ್ಚೆ ಮಾಡಿ ನಿರ್ಧರಿಸುತ್ತೇವೆ.

-ಪವನ್‌ ಕುಮಾರ್‌, ನಿರ್ದೇಶಕ

ಸೆನ್ಸಾರ್‌ ಬೋರ್ಡ್‌ನಿಂದ ಹಿಂದಿ ಹಾಗೂ ಇಂಗ್ಲಿಷ್‌ನಲ್ಲೆ ಸರ್ಟಿಫಿಕೇಟ್‌ ಪಡೆಯುತ್ತಿದ್ದೇವೆ. ಮುಂದೆಯಾದರೂ ಕನ್ನಡ ಸಿನಿಮಾಗಳಿಗೆ ಕನ್ನಡದಲ್ಲೇ ಸರ್ಟಿಫಿಕೇಟ್‌ ಕೊಡಲಿ. ಸಾಂಕೇತಿಕವಾಗಿ ಎಲ್ಲರೂ ಸೇರಿ ಕಿರುಚಿತ್ರಗಳನ್ನು ಮಾಡಿ ಅದಕ್ಕೆ ಕನ್ನಡದಲ್ಲಿ ಸೇರಿಸಿ ಸರ್ಟಿಫಿಕೇಟ್‌ ಕೇಳುವ ಹೋರಾಟಕ್ಕೆ ಮುಂದಾಗಿದ್ದೇವೆ. ನಮ್ಮ ಈ ಹೋರಾಟ ಕಾನೂನಿನ ವ್ಯಾಪ್ತಿಯಲ್ಲೇ ಇರುತ್ತದೆ.

- ಕೆ ಎಂ ಚೈತನ್ಯ, ನಿರ್ದೇಶಕ

ನಮ್ಮ ಕನ್ನಡ ಭಾಷೆಯನ್ನು ಎಲ್ಲ ಕಡೆ ಹರಡಬೇಕಿದೆ. ಹೀಗಾಗಿ ಸೆನ್ಸಾರ್‌ ಸರ್ಟಿಫಿಕೇಟ್‌ ಕೂಡ ಕನ್ನಡದಲ್ಲೇ ಕೊಡಬೇಕು ಎಂಬುದು ನಮ್ಮ ಒತ್ತಾಯ. ಈಗಾಗಲೇ ಇರುವ ಇಂಗ್ಲಿಷ್‌, ಹಿಂದಿ ಕೂಡ ಇರಲಿ. ಆದರೆ, ಕನ್ನಡ ಭಾಷೆಯ ಚಿತ್ರಗಳಿಗೆ ಮಾತ್ರ ಕನ್ನಡದಲ್ಲೇ ಸರ್ಟಿಫಿಕೇಟ್‌ ಕೊಡಲಿ.

- ಪಿ ಶೇಷಾದ್ರಿ, ನಿರ್ದೇಶಕ

click me!