IIFA 2026: 'ಧುರಂಧರ್'ಗೆ ಪ್ರಶಸ್ತಿಗಳ ಸುರಿಮಳೆ; ಬೆಸ್ಟ್ ಆಕ್ಟರ್ ರಣವೀರ್ ಸಿಂಗ್, ಅತ್ಯುತ್ತಮ ನಿರ್ದೇಶಕ ಯಾರು? ಯಾರಿಗೆಲ್ಲಾ ಅವಾರ್ಡ್..!?

Published : Oct 31, 2026, 09:53 AM IST
Dhurandhar Movie

ಸಾರಾಂಶ

26ನೇ ಆವೃತ್ತಿಯ ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅವಾರ್ಡ್ಸ್ (IIFA) 2026ರ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಬಾರಿ ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಪ್ರಶಸ್ತಿಗಳ ಬೇಟೆಯಲ್ಲಿ ಭರ್ಜರಿ ಸಾಧನೆ ಮಾಡಿದೆ. ಬೇರೆ ಯಾರಿಗೆಲ್ಲಾ ಅವಾರ್ಡ್ ಸಿಕ್ಕಿದೆ ನೋಡಿ ನೋಡಿ..

IIFA Awards 2026: Dhurandhar movie received many awards: ಐಫಾ (IIFA) ಅವಾರ್ಡ್ಸ್ 2026: ಪ್ರಶಸ್ತಿಗಳ ಬೇಟೆಯಲ್ಲಿ ‘ಧುರಂಧರ್’ ಅಬ್ಬರ; ರಣವೀರ್ ಸಿಂಗ್‌ಗೆ ಬೆಸ್ಟ್ ಆಕ್ಟರ್ ಪಟ್ಟ!

ಬಾಲಿವುಡ್ ಚಿತ್ರರಂಗದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳ ಸಂಭ್ರಮ ಮನೆಮಾಡಿದೆ. 26ನೇ ಆವೃತ್ತಿಯ ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅವಾರ್ಡ್ಸ್ (IIFA) 2026ರ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಬಾರಿ ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಪ್ರಶಸ್ತಿಗಳ ಬೇಟೆಯಲ್ಲಿ ಭರ್ಜರಿ ಸಾಧನೆ ಮಾಡಿದೆ. ಪ್ರಮುಖ ವಿಭಾಗಗಳಿಂದ ಹಿಡಿದು ತಾಂತ್ರಿಕ ವಿಭಾಗಗಳವರೆಗೂ ತನ್ನ ಪ್ರಾಬಲ್ಯ ಮೆರೆದಿರುವ ಈ ಚಿತ್ರ ಬಹುತೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದರ ಜೊತೆಗೆ ‘ಸೈಯಾರಾ’, ‘ಛಾವಾ’ ಸೇರಿದಂತೆ ಹಲವು ಸಿನಿಮಾಗಳು ಕೂಡ ಪ್ರಶಸ್ತಿ ಗೆದ್ದು ಸಂಭ್ರಮಿಸಿವೆ.

2000ರಲ್ಲಿ ಆರಂಭವಾದ ಐಫಾ ಪ್ರಶಸ್ತಿಗಳು ಭಾರತೀಯ ಚಿತ್ರರಂಗದ ಪ್ರಮುಖ ಗೌರವಗಳಲ್ಲಿ ಒಂದಾಗಿವೆ. ಬಾಲಿವುಡ್ ಸಿನಿಮಾಗಳ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಒಟಿಟಿ ಸಿನಿಮಾಗಳು ಮತ್ತು ವೆಬ್ ಸರಣಿಗಳಿಗೂ ಈ ವೇದಿಕೆಯಲ್ಲಿ ಮನ್ನಣೆ ನೀಡಲಾಗುತ್ತಿದೆ. ಅಕ್ಟೋಬರ್ 30ರಂದು 26ನೇ ಐಫಾ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಈ ಬಾರಿ ಸಿನಿಮಾ ವಿಭಾಗದ ಜೊತೆಗೆ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲೂ ಹಲವು ಕಲಾವಿದರು ತಮ್ಮ ಪ್ರತಿಭೆಗೆ ತಕ್ಕ ಗೌರವ ಪಡೆದುಕೊಂಡಿದ್ದಾರೆ.

‘ಧುರಂಧರ್’ಗೆ ಪ್ರಶಸ್ತಿಗಳ ಸುರಿಮಳೆ

ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಧುರಂಧರ್’ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಚಿತ್ರದ ನಿರ್ದೇಶಕ ಆದಿತ್ಯ ಧರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಷ್ಟೇ ಅಲ್ಲ, ಅತ್ಯುತ್ತಮ ನಟ ಪ್ರಶಸ್ತಿಯೂ ರಣವೀರ್ ಸಿಂಗ್ ಪಾಲಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಸಂಜಯ್ ದತ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರೆ, ಅಕ್ಷಯ್ ಖನ್ನಾ ಖಳನಾಯಕ ಪಾತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಪ್ರಶಸ್ತಿ ಗೆದ್ದಿದ್ದಾರೆ.

ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿರುವ ತಾಂತ್ರಿಕ ವಿಭಾಗಗಳಲ್ಲೂ ‘ಧುರಂಧರ್’ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಅತ್ಯುತ್ತಮ ಮೂಲ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ವಿಭಾಗಗಳಲ್ಲಿ ಆದಿತ್ಯ ಧರ್ ಪ್ರಶಸ್ತಿ ಪಡೆದಿದ್ದಾರೆ. ವಿಕಾಸ್ ನೌಲಾಖಾ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ, ಶಿವಕುಮಾರ್ ವಿ. ಪಾಲಿಕರ್ ಅತ್ಯುತ್ತಮ ಸಂಕಲನಕ್ಕಾಗಿ ಪ್ರಶಸ್ತಿ ಗೆದ್ದಿದ್ದಾರೆ. ಶಾಶ್ವತ್ ಸಚ್‌ದೇವ್ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಹಾಗೂ ವಿಶ್ವದೀಪ್ ಚಟರ್ಜಿ ಅತ್ಯುತ್ತಮ ಧ್ವನಿ ವಿನ್ಯಾಸಕ್ಕಾಗಿ ಗೌರವಿಸಲ್ಪಟ್ಟಿದ್ದಾರೆ.

‘ಸೈಯಾರಾ’, ‘ಛಾವಾ’ ಚಿತ್ರಗಳಿಗೂ ಮನ್ನಣೆ

‘ಧುರಂಧರ್’ ಅಬ್ಬರದ ನಡುವೆಯೂ ಇತರ ಸಿನಿಮಾಗಳು ಪ್ರಶಸ್ತಿ ಪಟ್ಟಿಯಲ್ಲಿ ಗಮನ ಸೆಳೆದಿವೆ. ‘ಸೈಯಾರಾ’ ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ಅನೀತ್ ಪಡ್ಡಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದೇ ಚಿತ್ರದ ಹಾಡುಗಳಿಗೂ ಉತ್ತಮ ಮನ್ನಣೆ ಸಿಕ್ಕಿದೆ. ಇರ್ಷಾದ್ ಕಾಮಿಲ್ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ಪಡೆದರೆ, ಫಹೀಮ್ ಅಬ್ದುಲ್ಲಾ ಅತ್ಯುತ್ತಮ ಹಿನ್ನೆಲೆ ಗಾಯಕ ಮತ್ತು ಶ್ರೇಯಾ ಘೋಷಾಲ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಹಾನ್ ಪಾಂಡೆ ಅತ್ಯುತ್ತಮ ನಟನಾಗಿ ಪದಾರ್ಪಣೆ ಮಾಡಿದ ಕಲಾವಿದ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ‘ಛಾವಾ’ ಚಿತ್ರವೂ ತಾಂತ್ರಿಕ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅಲೋಕ್ ಡೇ ಅತ್ಯುತ್ತಮ ಧ್ವನಿ ಮಿಶ್ರಣಕ್ಕಾಗಿ ಪ್ರಶಸ್ತಿ ಪಡೆದರೆ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಗೌರವಿಸಲ್ಪಟ್ಟಿದ್ದಾರೆ. ಅತ್ಯುತ್ತಮ ವಿಎಫ್‌ಎಕ್ಸ್ ಪ್ರಶಸ್ತಿಯೂ ‘ಛಾವಾ’ ಚಿತ್ರಕ್ಕೆ ಲಭಿಸಿದೆ. ಮತ್ತೊಂದೆಡೆ, ‘ಆಜಾದ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಶಾ ಥಡಾನಿ ಅತ್ಯುತ್ತಮ ನಟಿ ಪದಾರ್ಪಣೆ ಪ್ರಶಸ್ತಿ ಗೆದ್ದಿದ್ದಾರೆ. ‘ಜಾಲಿ ಎಲ್‌ಎಲ್‌ಬಿ 3’ ಚಿತ್ರಕ್ಕಾಗಿ ಹುಮಾ ಖುರೇಷಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.

ಒಟಿಟಿ ವಿಭಾಗದಲ್ಲೂ ಪ್ರಶಸ್ತಿಗಳ ಸಂಭ್ರಮ

ಸಿನಿಮಾ ವಿಭಾಗದಂತೆಯೇ ಒಟಿಟಿ ವಿಭಾಗದಲ್ಲೂ ಹಲವು ಪ್ರತಿಭಾವಂತ ಕಲಾವಿದರು ಪ್ರಶಸ್ತಿ ಪಡೆದಿದ್ದಾರೆ. ಒಟಿಟಿ ಚಲನಚಿತ್ರ ವಿಭಾಗದಲ್ಲಿ ‘ಬಾರಾಮುಲ್ಲಾ’ ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ಮೂಲ ಕಥೆ ಪ್ರಶಸ್ತಿಗಳನ್ನು ಗೆದ್ದಿದೆ. ‘ಸ್ಟೋಲೆನ್’ ಚಿತ್ರಕ್ಕಾಗಿ ಕರಣ್ ತೇಜ್‌ಪಾಲ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ, ಇದೇ ಚಿತ್ರದ ಅಭಿನಯಕ್ಕಾಗಿ ಅಭಿಷೇಕ್ ಬ್ಯಾನರ್ಜಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಮಿಸೆಸ್’ ಚಿತ್ರದ ಸನ್ಯಾ ಮಲ್ಹೋತ್ರಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ನಿಶಾಂಚಿ 2’ ಚಿತ್ರಕ್ಕಾಗಿ ಮೋನಿಕಾ ಪನ್ವಾರ್ ಅತ್ಯುತ್ತಮ ಪೋಷಕ ನಟಿ ಮತ್ತು ‘ದಿ ಮೆಹ್ತಾ ಬಾಯ್ಸ್’ ಚಿತ್ರಕ್ಕಾಗಿ ಅವಿನಾಶ್ ತಿವಾರಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಆರ್ಯನ್ ಖಾನ್ ನಿರ್ದೇಶನದ ಸರಣಿಗೆ ಭರ್ಜರಿ ಯಶಸ್ಸು

ಒಟಿಟಿ ವೆಬ್ ಸರಣಿ ವಿಭಾಗದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ ‘ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್’ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದೆ. ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಯ ಜೊತೆಗೆ ಆರ್ಯನ್ ಖಾನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಈ ಸರಣಿಯಲ್ಲಿ ಅಭಿನಯಿಸಿದ ಅನ್ಯಾ ಸಿಂಗ್ ಅತ್ಯುತ್ತಮ ಪೋಷಕ ನಟಿ ಹಾಗೂ ರಾಘವ್ ಜುಯಲ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉಜ್ವಲ್ ಗುಪ್ತಾ ಅತ್ಯುತ್ತಮ ಶೀರ್ಷಿಕೆ ಗೀತೆಯ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ‘ಪಾತಾಲ್ ಲೋಕ್ 2’ ಸರಣಿಯೂ ಪ್ರಶಸ್ತಿ ಪಟ್ಟಿಯಲ್ಲಿ ತನ್ನದೇ ಛಾಪು ಮೂಡಿಸಿದೆ. ಜೈದೀಪ್ ಅಹ್ಲಾವತ್ ಅತ್ಯುತ್ತಮ ನಾಯಕ ನಟ ಹಾಗೂ ತಿಲೋತಮಾ ಶೋಮ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ಸರಣಿಗೆ ಅತ್ಯುತ್ತಮ ಮೂಲ ಕಥೆಯ ಗೌರವವೂ ಸಿಕ್ಕಿದೆ. ‘ದಿ ರೋಷನ್ಸ್’ ಅತ್ಯುತ್ತಮ ಡಾಕ್ಯುಸೀರಿಸ್ ಅಥವಾ ಡಾಕ್ಯುಫಿಲ್ಮ್ ಪ್ರಶಸ್ತಿ ಪಡೆದರೆ, ‘ದಿ ಟ್ರೇಟರ್ಸ್’ ಅತ್ಯುತ್ತಮ ರಿಯಾಲಿಟಿ ಶೋ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಒಟ್ಟಿನಲ್ಲಿ, 2026ರ ಐಫಾ ಪ್ರಶಸ್ತಿಗಳಲ್ಲಿ ‘ಧುರಂಧರ್’ ಚಿತ್ರ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದು, ‘ಸೈಯಾರಾ’, ‘ಛಾವಾ’ ಹಾಗೂ ಒಟಿಟಿ ಸರಣಿಗಳು ಕೂಡ ತಮ್ಮದೇ ಆದ ಛಾಪು ಮೂಡಿಸಿವೆ. ಚಿತ್ರರಂಗದ ಹಿರಿಯ ಕಲಾವಿದರಿಂದ ಹಿಡಿದು ಹೊಸ ಪ್ರತಿಭೆಗಳವರೆಗೆ ಅನೇಕರು ಪ್ರಶಸ್ತಿ ಗೆದ್ದು ಸಂಭ್ರಮಿಸಿರುವುದು ಈ ಬಾರಿಯ ಐಫಾ ಪ್ರಶಸ್ತಿ ಪಟ್ಟಿಯ ವಿಶೇಷವಾಗಿದೆ.

ಪ್ರಶಸ್ತಿ ಪಟ್ಟಿ:-

ಜನಪ್ರಿಯ ವಿಭಾಗಗಳು

ಅತ್ಯುತ್ತಮ ಚಿತ್ರ: – ಧುರಂಧರ್

ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ: ಅವತಾರ್: ಫೈರ್ & ಆಶ್

ಅತ್ಯುತ್ತಮ ನಿರ್ದೇಶಕರು: ಆದಿತ್ಯ ಧರ್ – ಧುರಂಧರ್

ಅತ್ಯುತ್ತಮ ನಟಿ : ಅನೀತ್ ಪಡ್ಡಾ- ಸೈಯಾರಾ

ಅತ್ಯುತ್ತಮ ನಟ : ರಣ್ವೀರ್ ಸಿಂಗ್ – ಧುರಂಧರ್

ಅತ್ಯುತ್ತಮ ನಟಿ ಪೋಷಕ ಪಾತ್ರ: ಹುಮಾ ಖುರೇಷಿ – ಜಾಲಿ ಎಲ್​​ಎಲ್​​ಬಿ 3

ಅತ್ಯುತ್ತಮ ನಟ ಪೋಷಕ ಪಾತ್ರ: ಸಂಜಯ್ ದತ್ – ಧುರಂಧರ್

ಖಳನಾಯಕ ಪಾತ್ರದಲ್ಲಿ ಅತ್ಯುತ್ತಮ ನಟ: ಅಕ್ಷಯ್ ಖನ್ನಾ – ಧುರಂಧರ್

ಅತ್ಯುತ್ತಮ ಸಂಗೀತ ನಿರ್ದೇಶನ: ಶಾಶ್ವತ್ ಸಚ್‌ದೇವ್ – ಧುರಂಧರ್

ಅತ್ಯುತ್ತಮ ಮೂಲ ಕಥೆ: ಆದಿತ್ಯ ಧರ್ – ಧುರಂಧರ್

ಅತ್ಯುತ್ತಮ ಅಡಾಪ್ಡೆಡ್ ಕಥೆ: ಬಷಾರತ್ ಪೀರ್, ಸುಮಿತ್ ರಾಯ್, ನೀರಜ್ ಘೈವಾನ್ – ಹೋಮ್‌ಬೌಂಡ್

ಅತ್ಯುತ್ತಮ ಗೀತರಚನೆ: ಇರ್ಷಾದ್ ಕಾಮಿಲ್ – ಸೈಯಾರಾ

ಅತ್ಯುತ್ತಮ ಹಿನ್ನೆಲೆ ಗಾಯಕ : ಫಹೀಮ್ ಅಬ್ದುಲ್ಲಾ – ಸೈಯಾರಾ

ಅತ್ಯುತ್ತಮ ಹಿನ್ನೆಲೆ ಗಾಯಕಿ : ಶ್ರೇಯಾ ಘೋಶಾಲ್ – ಸೈಯಾರಾ

ಅತ್ಯುತ್ತಮ ನಟಿ ಪಾದಾರ್ಪಣೆ: ರಾಶಾ ಥಡಾನಿ – ಆಜಾದ್

ಅತ್ಯುತ್ತಮ ನಟ ಪಾದಾರ್ಪಣೆ: ಅಹಾನ್ ಪಾಂಡೆ – ಸೈಯಾರಾ

ತಾಂತ್ರಿಕ ವಿಭಾಗಗಳು

ಅತ್ಯುತ್ತಮ ಛಾಯಾಗ್ರಹಣ: ವಿಕಾಸ್ ನೌಲಾಖಾ – ಧುರಂಧರ್

ಅತ್ಯುತ್ತಮ ಚಿತ್ರಕಥೆ: ಆದಿತ್ಯ ಧರ್ – ಧುರಂಧರ್

ಅತ್ಯುತ್ತಮ ಸಂಭಾಷಣೆ: ಆದಿತ್ಯ ಧರ್ – ಧುರಂಧರ್

ಅತ್ಯುತ್ತಮ ಸಂಕಲನ (ಎಡಿಟಿಂಗ್): ಶಿವಕುಮಾರ್ ವಿ. ಪಾಲಿಕರ್ – ಧುರಂಧರ್

ಅತ್ಯುತ್ತಮ ನೃತ್ಯ ಸಂಯೋಜನೆ: ಬೋಸ್ಕೋ ಲೆಸ್ಲಿ ಮಾರ್ಟಿಸ್ – ಆವಾನ್ ಜಾವಾನ್, ವಾರ್ 2

ಅತ್ಯುತ್ತಮ ಧ್ವನಿ ವಿನ್ಯಾಸ : ವಿಶ್ವದೀಪ್ ಚಟರ್ಜಿ – ಧುರಂಧರ್

ಅತ್ಯುತ್ತಮ ಧ್ವನಿ ಮಿಶ್ರಣ : ಅಲೋಕ್ ಡೇ – ಛಾವಾ

ಅತ್ಯುತ್ತಮ ಹಿನ್ನೆಲೆ ಸಂಗೀತ: ಎ.ಆರ್. ರೆಹಮಾನ್ – ಛಾವಾ

ಅತ್ಯುತ್ತಮ VFX: ಅಸೆಂಬ್ಲೇಜ್ ಎಂಟರ್‌ಟೈನ್‌ಮೆಂಟ್, ರೆಡಫೈನ್ – ಛಾವಾ

ಒಟಿಟಿ ಚಲನಚಿತ್ರ ವಿಭಾಗ

ಅತ್ಯುತ್ತಮ ಚಿತ್ರ – ಬಾರಾಮುಲ್ಲಾ

ಅತ್ಯುತ್ತಮ ಮೂಲ ಕಥೆ – ಬಾರಾಮುಲ್ಲಾ

ಅತ್ಯುತ್ತಮ ನಿರ್ದೇಶನ – ಸ್ಟೋಲೆನ್ ಚಿತ್ರಕ್ಕಾಗಿ ಕರಣ್ ತೇಜ್‌ಪಾಲ್

ಅತ್ಯುತ್ತಮ ನಾಯಕ ನಟ – ಅಭಿಷೇಕ್ ಬ್ಯಾನರ್ಜಿ (ಸ್ಟೋಲೆನ್)

ಅತ್ಯುತ್ತಮ ನಟಿ – ಸನ್ಯಾ ಮಲ್ಹೋತ್ರಾ (ಮಿಸೆಸ್)

ಅತ್ಯುತ್ತಮ ಪೋಷಕ ನಟಿ – ಮೋನಿಕಾ ಪನ್ವಾರ್ (ನಿಶಾಂಚಿ 2)

ಅತ್ಯುತ್ತಮ ಪೋಷಕ ನಟ– ಅವಿನಾಶ್ ತಿವಾರಿ (ದಿ ಮೆಹ್ತಾ ಬಾಯ್ಸ್)

ಒಟಿಟಿ ವೆಬ್ ಸರಣಿ ವಿಭಾಗ

ಅತ್ಯುತ್ತಮ ಸರಣಿ – ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್

ಅತ್ಯುತ್ತಮ ನಿರ್ದೇಶನ – ಆರ್ಯನ್ ಖಾನ್ (ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್)

ಅತ್ಯುತ್ತಮ ಪೋಷಕ ನಟಿ– ಅನ್ಯಾ ಸಿಂಗ್ (ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್)

ಅತ್ಯುತ್ತಮ ಪೋಷಕ ನಟ – ರಾಘವ್ ಜುಯಲ್ (ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್)

ಅತ್ಯುತ್ತಮ ನಾಯಕ ನಟ – ಜೈದೀಪ್ ಅಹ್ಲಾವತ್ (ಪಾತಾಲ್ ಲೋಕ್ 2)

ಅತ್ಯುತ್ತಮ ನಟಿ – ತಿಲೋತಮಾ ಶೋಮ್ (ಪಾತಾಲ್ ಲೋಕ್ 2)

ಅತ್ಯುತ್ತಮ ಮೂಲ ಕಥೆ – ಪಾತಾಲ್ ಲೋಕ್ 2

ಅತ್ಯುತ್ತಮ ಡಾಕ್ಯುಸೀರಿಸ್ / ಡಾಕ್ಯುಫಿಲ್ಮ್: ರಾಕೇಶ್ ರೋಷನ್ & ಶಶಿ ರಂಜನ್ – ದಿ ರೋಷನ್ಸ್

ಅತ್ಯುತ್ತಮ ರಿಯಾಲಿಟಿ ಶೋ– ದಿ ಟ್ರೇಟರ್ಸ್

ಅತ್ಯುತ್ತಮ ಶೀರ್ಷಿಕೆ ಗೀತೆ: ಉಜ್ವಲ್ ಗುಪ್ತಾ – ದಿ ಬಸ್ಟರ್ಡ್ಸ್ ಆಫ್ ಬಾಲಿವುಡ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಿನಿರಂಗದಲ್ಲೇ ಹೊಸ ದಾಖಲೆ ಬರೆದ ಶಾರುಖ್ ಖಾನ್ 'ಕಿಂಗ್.. ಡಿಸ್ಟ್ರಿಬ್ಯೂಷನ್ ರೈಟ್ಸ್‌ ಭಾರೀ ಮೊತ್ತಕ್ಕೆ ಡೀಲ್!
Vineesh Birthday : ದರ್ಶನ್ ಪುತ್ರ ವಿನೀಶ್​ಹುಟ್ಟುಹಬ್ಬ; ವಿಜಯಲಕ್ಷ್ಮೀ 'ಸ್ಪೆಷಲ್ ಬುದ್ದಿಮಾತು' ಸಖತ್ ವೈರಲ್ ಆಯ್ತು!