ಬರೋಬ್ಬರಿ ₹62 ಲಕ್ಷಕ್ಕೆ ಹರಾಜಾದ ಸ್ಟಾರ್ ನಟನ ಮೂತ್ರಪಿಂಡದ ಕಲ್ಲು! ಖರೀದಿ ಮಾಡಿದ್ಯಾರು?

Published : Oct 14, 2026, 09:14 AM IST
william shatner

ಸಾರಾಂಶ

ಹಾಲಿವುಡ್ ನಟ ವಿಲಿಯಂ ಶಾಟ್ನರ್ 2006ರಲ್ಲಿ ತಮ್ಮ ಮೂತ್ರಪಿಂಡದ ಕಲ್ಲನ್ನು ₹62 ಲಕ್ಷಕ್ಕೆ ಹರಾಜು ಹಾಕಿದ್ದರು. ಈ ಹಣ ಹಾಗೂ ಸಹನಟರ ನೆರವಿನಿಂದ ಒಟ್ಟು $100,000 ಸಂಗ್ರಹಿಸಿ 'ಹ್ಯಾಬಿಟ್ಯಾಟ್ ಫಾರ್ ಹ್ಯುಮಾನಿಟಿ' ಸಂಸ್ಥೆಗೆ ನೀಡಿದರು. ಇದರಿಂದ ಲೂಸಿಯಾನದ ಬಡ ಕುಟುಂಬವೊಂದಕ್ಕೆ ಸುಸಜ್ಜಿತ ಮನೆ ನಿರ್ಮಿಸಿಕೊಡಲಾಯಿತು.

ಹಾಲಿವುಡ್‌ನ ಖ್ಯಾತ ನಟ ವಿಲಿಯಂ ಶಾಟ್ನರ್ , ತಮ್ಮ ಜೀವನದ ಅತ್ಯಂತ ಅಸಾಮಾನ್ಯ ಮತ್ತು ರೋಚಕ ವೈಯಕ್ತಿಕ ಅನುಭವವೊಂದನ್ನು ಅಗತ್ಯವಿರುವ ಕುಟುಂಬಕ್ಕೆ ಆಸರೆಯಾಗುವಂತೆ ಮಾಡಿದ್ದು ಈಗ ಮತ್ತೆ ಸುದ್ದಿಯಾಗಿದೆ. 2006 ರಲ್ಲಿ ತಮ್ಮ ಮೂತ್ರಪಿಂಡದ ಕಲ್ಲನ್ನು ಬರೋಬ್ಬರಿ ₹62 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಹರಾಜು ಹಾಕುವ ಮೂಲಕ ಬಂದ ಹಣವನ್ನು ದತ್ತಿ ನಿಧಿಗೆ ನೀಡಿದ್ದರು. ಇತ್ತೀಚೆಗೆ 'ಡ್ರಾಪಿಂಗ್ ನೇಮ್ಸ್ ವಿಥ್ ಬ್ರೆಂಟ್ ಮತ್ತು ಜಾನಿ' ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ ವೇಳೆ ಶಾಟ್ನರ್ ಈ ಸ್ವಾರಸ್ಯಕರ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಮೂತ್ರಪಿಂಡದ ಕಲ್ಲು ಹರಾಜಾದ ರೋಚಕ ಕಥೆ

2006 ರಲ್ಲಿ ಪ್ರಸಿದ್ಧ 'ಬೋಸ್ಟನ್ ಲೀಗಲಗ' ಕಾನೂನು ಆಧಾರಿತ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಶಾಟ್ನರ್ ಅವರಿಗೆ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಆ ಕಲ್ಲನ್ನು ಹೊರತೆಗೆದರು.

ಈ ಬಗ್ಗೆ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಶಾಟ್ನರ್, ನನ್ನ ಮೂತ್ರಪಿಂಡದಲ್ಲಿದ್ದ ಕಲ್ಲನ್ನು ವೈದ್ಯರು ಹೊರತೆಗೆದು ತೋರಿಸಿದಾಗ, ಅದು ನೋಡಲು ಸಣ್ಣ ಕಪ್ಪು ಗುಂಡಿನಂತಿತ್ತು. ಆ ಕಿರಿಕಿರಿಯಿಂದ ಮುಕ್ತಿ ಸಿಕ್ಕಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಿದೆ ಎಂದು ನಕ್ಕರು. ಆದರೆ, ಕಲ್ಲು ತೆಗೆದ ಒಂದು ವಾರದ ನಂತರ ಕೆನಡಾದ ಕೆಸಿನೋ ಕಂಪನಿಯೊಂದರಿಂದ ಶಾಟ್ನರ್ ಅವರಿಗೆ ಅನಿರೀಕ್ಷಿತ ಫೋನ್ ಕರೆ ಬಂದಿತು. ಆ ಕಂಪನಿಯು ಈ ಮೂತ್ರಪಿಂಡದ ಕಲ್ಲನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿತು! ಕಾನೂನು ನಿರ್ಬಂಧಗಳ ಕಾರಣದಿಂದ ಕಂಪನಿಗೆ ಸಾಮಾನ್ಯ ರೀತಿಯಲ್ಲಿ ಜಾಹೀರಾತು ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪ್ರಚಾರ ಪಡೆಯಲು ಈ ವಿಚಿತ್ರ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತ್ತು.

ಆರಂಭದಲ್ಲಿ ಈ ವಿಚಾರ ತಿಳಿದು ಶಾಟ್ನರ್ ಆಶ್ಚರ್ಯಚಕಿತರಾದರು. ಕಲ್ಲನ್ನು ಈಗಾಗಲೇ ಎಸೆದುಬಿಡಲಾಗಿದೆ ಎಂದು ಅವರು ಭಾವಿಸಿದ್ದರು. ಆದರೆ ತಕ್ಷಣವೇ ತಮ್ಮ ವೈದ್ಯರನ್ನು ಸಂಪರ್ಕಿಸಿ, ಆ ಕಲ್ಲನ್ನು ಮರಳಿ ಪಡೆದು ಕಂಪನಿಗೆ ಹಸ್ತಾಂತರಿಸಿದರು. ಅಂತಿಮವಾಗಿ ಆ ಕಲ್ಲು ₹62 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ( $75,000) ಹರಾಜಾಯಿತು.

ಲೂಸಿಯಾನದ ಕುಟುಂಬಕ್ಕೆ ನೆರವಾದ ದತ್ತಿ ನಿಧಿ

ಈ ಅಸಾಮಾನ್ಯ ಹರಾಜಿನಿಂದ ಸಂಗ್ರಹವಾದ ಹಣವು ಉತ್ತಮ ಕಾರ್ಯಕ್ಕೆ ಬಳಕೆಯಾಯಿತು. ಶಾಟ್ನರ್ ಅವರ ಈ ವಿಶಿಷ್ಟ ಪ್ರಯತ್ನಕ್ಕೆ ಬೆಂಬಲವಾಗಿ, ಬೋಸ್ಟನ್ ಲೀಗಲ್ ಧಾರವಾಹಿ ಸರಣಿಯ ಅವರ ಸಹನಟರು ಹೆಚ್ಚುವರಿಯಾಗಿ $25,000 ಸಂಗ್ರಹಿಸಿದರು. ಇದರಿಂದ ಒಟ್ಟು ದತ್ತಿ ನಿಧಿ $100,000 ಗೆ ತಲುಪಿತು.

ಈ ಸಂಪೂರ್ಣ ಮೊತ್ತವನ್ನು ವಸತಿ ರಹಿತರಿಗೆ ಮತ್ತು ಅಗತ್ಯವಿರುವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಪ್ರಸಿದ್ಧ 'ಹ್ಯಾಬಿಟ್ಯಾಟ್ ಫಾರ್ ಹ್ಯುಮಾನಿಟಿ' ಸಂಸ್ಥೆಗೆ ನೀಡಲಾಯಿತು. ಈ ಹಣದ ನೆರವಿನಿಂದ ಅಮೆರಿಕದ ಲೂಸಿಯಾನದಲ್ಲಿ ಐದು ಜನರಿದ್ದ ಬಡ ಕುಟುಂಬವೊಂದಕ್ಕೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡಲಾಯಿತು.

ನಾನು ಕೊನೆಯ ಬಾರಿಗೆ ವಿಚಾರಿಸಿದಾಗಲೂ ಆ ಐದು ಜನರ ಕುಟುಂಬವು ಲೂಸಿಯಾನದಲ್ಲಿ ನಿರ್ಮಿಸಲಾದ ಆ ಮನೆಯಲ್ಲೇ ಸಂತೋಷದಿಂದ ವಾಸಿಸುತ್ತಿತ್ತು ಎಂದು ಶಾಟ್ನರ್ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿ ನಿಧಿಸಂಗ್ರಹಣೆಯಲ್ಲಿ ಹೊಸ ಇತಿಹಾಸ

ಸಾಮಾನ್ಯವಾಗಿ ಅನುಪಯುಕ್ತವೆಂದು ಬಿಸಾಡುವ ವಸ್ತುವೊಂದನ್ನು ಬಳಸಿಕೊಂಡು ಬಡ ಕುಟುಂಬಕ್ಕೆ ಆಸರೆಯಾದ ಈ ಘಟನೆಯು ಹಾಲಿವುಡ್ ಸೆಲೆಬ್ರಿಟಿಗಳ ನಿಧಿಸಂಗ್ರಹಣೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಸ್ಫೂರ್ತಿದಾಯಕ ಉದಾಹರಣೆಯಾಗಿ ಉಳಿದುಕೊಂಡಿದೆ.

2004 ರಿಂದ 2008 ರವರೆಗೆ ಪ್ರಸಾರವಾದ 'ಬೋಸ್ಟನ್ ಲೀಗಲ್' ಸರಣಿಯಲ್ಲಿ ಶಾಟ್ನರ್ ಅವರು 'ಡೆನ್ನಿ ಕ್ರೇನ್' ಎಂಬ ಪ್ರಸಿದ್ಧ ವಕೀಲನ ಪಾತ್ರದಲ್ಲಿ ಜೇಮ್ಸ್ ಸ್ಪೇಡರ್ (ಅಲನ್ ಶೋರ್ ಪಾತ್ರಧಾರಿ), ಲೇಕ್ ಬೆಲ್ ಹಾಗೂ ಜೂಲಿ ಬೋವೆನ್ ಅವರೊಂದಿಗೆ ನಟಿಸಿದ್ದರು. ಆ ದಿನಗಳಲ್ಲಿ ನಡೆದ ಈ ಕಲ್ಲಿನ ಹರಾಜು ಮತ್ತು ಸಹನಟರ ಉದಾತ್ತ ಬೆಂಬಲವು ಅವರ ವೃತ್ತಿಜೀವನದ ಸ್ಮರಣೀಯ ಅಧ್ಯಾಯಗಳಲ್ಲಿ ಒಂದಾಗಿದೆ.

ಪ್ರಸ್ತುತ, 90ರ ಹರೆಯದ ಶಾಟ್ನರ್ ಅವರು ತಮ್ಮ ಆತ್ಮಚರಿತ್ರೆ 'ವಿಲಿಯಂ ಶಾಟ್ನರ್... ಅಂಡ್ ಯು' ಮೂಲಕ ತಮ್ಮ ಸುದೀರ್ಘ ವೈಯಕ್ತಿಕ ಹಾಗೂ ವೃತ್ತಿಜೀವನದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಡ್ವಾನ್ಸ್ ಬುಕಿಂಗ್‌ನಲ್ಲಿ ಜೈಲರ್‍‌ 2 ದಾಖಲೆ, ತಮಿಳುನಾಡು ಒಂದರಲ್ಲೇ 10 ಕೋಟಿ ಕಲೆಕ್ಷನ್, ಕರ್ನಾಟಕದಲ್ಲಿ ಎಷ್ಟು?
ರಾಮ್ ಚರಣ್-ಸುಕುಮಾರ್ ಕಾಂಬಿನೇಷನ್‌ಗೆ ಅನಿರುದ್ಧ್ ಟಚ್? ಅಭಿಮಾನಿಗಳಲ್ಲಿ ಭಾರೀ ಕುತೂಹಲ