‘ಗುಲ್ಝಾರ್’- ಎಂಬುದು ಬರಿ ಪದವಲ್ಲ, ಹೆಸರಲ್ಲ, ವಿಶೇಷಣವೂ ಅಲ್ಲ. ಅದು ಕಳೆದ ಐದು ದಶಕಗಳಿಂದ ನಮ್ಮ ಮನಸ್ಸನ್ನು, ಸಂವೇದನೆಯನ್ನು ಲಾಲಿಸುತ್ತ, ಪಾಲಿಸುತ್ತಾ ಬಂದ ಒಂದು ಆವರಣ.
- ಜಯಂತ ಕಾಯ್ಕಿಣಿ.
‘ಗುಲ್ಝಾರ್’- ಎಂಬುದು ಬರಿ ಪದವಲ್ಲ, ಹೆಸರಲ್ಲ, ವಿಶೇಷಣವೂ ಅಲ್ಲ. ಅದು ಕಳೆದ ಐದು ದಶಕಗಳಿಂದ ನಮ್ಮ ಮನಸ್ಸನ್ನು, ಸಂವೇದನೆಯನ್ನು ಲಾಲಿಸುತ್ತ, ಪಾಲಿಸುತ್ತಾ ಬಂದ ಒಂದು ಆವರಣ. ಅದು ಬಿಮಲ್ ರಾಯ್ ಅವರ ಚಿತ್ರಗಳಿಂದ ಹಿಡಿದು ಈಚಿನ ‘ಕಜರಾ...ರೆ’, ‘ಬೀಡಿ ಜಲೈಲೆ’ಗಳ ತನಕ, ಸಿನಿಮಾ ಬಿಂಬಗಳಿಗೊಂದು ಧ್ವನಿ ರಮ್ಯತೆಯನ್ನು, ಅಪ್ಪಟ ಕಲ್ಪನಾಶೀಲತೆಯೊಂದಿಗೆ ದಯಪಾಲಿಸಿದ, ಹಿಂದೀ ಕಾವ್ಯ ಪ್ರಪಂಚವನ್ನು ಮಾನವೀಯ ಕಳಕಳಿಯ ಹೊಸ ಸೊಲ್ಲುಗಳಿಂದ ಜೀವಂತಗೊಳಿಸಿದ ಒಂದು ಬಹುರೂಪಿ ಚೈತನ್ಯದ ಪಯಣ. ಎಂದಿಗೂ ಮಾಯದ ದೇಶವಿಭಜನೆಯ ಗಾಯವನ್ನು ಎದೆಗೊತ್ತಿಕೊಂಡೇ, ಮನುಷ್ಯ ಸಂಬಂಧಗಳ ಬೆಚ್ಚನೆ ನಂಟಿನ ರೂಹುಗಳಿಗಾಗಿ ಪರಿತಪಿಸುತ್ತಾ ತನ್ನ ಕಲೆಯನ್ನು ಜೀವನಕಲೆಯಾಗಿ ಪರಿವರ್ತಿಸುತ್ತ ಬಂದ ಗುಲ್ಝಾರ್‌ರ ಪಯಣ ಘನವಾದದ್ದು. ಗುಲ್ಝಾರ್‌ರ ಆಯ್ದ ಕವಿತೆ, ಗೀತೆ, ಗಝಲ್ ಮತ್ತು ಚಿತ್ರಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿ ಧಾರವಾಡದ ಲಕ್ಷ್ಮೀಕಾಂತ ಇಟ್ನಾಳ್ ಅವರು ಎರಡು ಪುಸ್ತಕಗಳಲ್ಲಿ ಪ್ರಕಟಿಸಿದ್ದಾರೆ.
‘ಗುಲ್ಝಾರ್’ ಶಬ್ದದ ಅರ್ಥ ‘ಹೂತೋಟ’, ಉಪವನ. ಅಕ್ಷರಶಃ ಇದೊಂದು ನಾನಾ ನಮೂನೆಯ ಗಿಡ, ಮರ, ಬಳ್ಳಿ, ಎಳೆ ಬಿಸಿಲು, ಮಳೆ, ಮಂಜುಗಳ ನಿಬಿಡ ಉಪವನವೇ ಹೌದು. ಇಲ್ಲಿ ಪ್ರತೀ ಗಿಡ ತನ್ನದೇ ಆದ ಮೌನದಲ್ಲಿ ಕಂಪಿಸುತ್ತಿರುವಾಗಲೇ ಇತರ ಗಿಡಮರಗಳೊಂದಿಗೆ ಒಂದು ಸಂಯುಕ್ತವಾದ ಸಂವಾದದಲ್ಲಿ ಇರುವಂಥ ಭಾಸವಾಗುತ್ತದೆ. ನಾವು ಮಾತನಾಡತೊಡಗಿದರೆ ಅವು ಸ್ತಬ್ಧವಾಗಬಹುದು. ಅವುಗಳನ್ನು ಆಲಿಸುವುದರಲ್ಲೇ ನಮ್ಮ ಆರೋಗ್ಯ ಇದೆ, ರಸಿಕತೆಯ ರಹಸ್ಯವೂ ಇದೆ.
ನಾವಿದ್ದಲ್ಲಿಯೇ ಹಾದು ಹೋಯಿತು ಆಕಾಶ
ಸೃಷ್ಟಿಯಿಂದ ಸಂಪತ್ತೊಂದನ್ನು ಲೂಟಿ ಮಾಡಿಕೊಂಡು ಹೊರಟಿತ್ತದು..... -(ಖುಲ್ ಜಾ ಸಿಮ್ ಸಿಮ್)
ಕಾಡಿನಲ್ಲಿ ನದಿಯ ಕಂಠವು
ಮಾತಾಡಿ ಮಾತಾಡಿ ಬಿದ್ದುಹೋದಂತಿದೆ
ಈಗದರ ದನಿ ಭಾರವಾಗಿದೆ - (ಕಿತ್‌ನಾ ಲಂಬಾ ಹೋಗಾ..)
ಒಣ ರೆಂಬೆಗಳು ತಮ್ಮ ಬೆರಳುಗಳಿಗೆ
ಬೆಳ್ಳಗೆ ಹತ್ತಿ ಬಟ್ಟೆಯ ಬ್ಯಾಂಡೇಜನ್ನು ಕಟ್ಟಿಕೊಂಡಿದ್ದವು
ಈಗೆರಡು ತಿಂಗಳ ಹಿಂದಷ್ಟೆ ಶಿಶಿರವು ಅವನ್ನು ಸುಲಿದುಬಿಟ್ಟಿತ್ತು! -- (ಮನಾಲಿ)
ಅಕ್ಷರಗಳೆಲ್ಲ ಎಲೆಯುದುರಿದ ಒಣಟೊಂಗೆಯಂತಾಗಿವೆ -- (ಕಿತಾಬೇ)
ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಯ್ತೆಂದು ದೇಶಕ್ಕೇ ಜಿಯೋ ಕೊಟ್ಟ ಅಂಬಾನಿ!
ಕೀರ್ತಿನಾಥ ಕುರ್ತಕೋಟಿಯವರು ಹೇಳುವ ಕಾವ್ಯದಲ್ಲಿ ಆಗಬೇಕಾದ ‘ಪ್ರಕೃತಿಯ ಮಾನವೀಕರಣ’ಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆಗಳು ಬೇಕಿಲ್ಲ. ನಮ್ಮಲ್ಲಿ ‘ವರ್ಣನೆ’ಯೇ ಕಾವ್ಯ ಎಂಬ ತುಂಬಾ ಪ್ರಾಥಮಿಕ ಹಂತದ ಭಾವನೆ ಎಷ್ಟೋ ಕಾವ್ಯಾರ್ಥಿಗಳಲ್ಲಿ ಇನ್ನೂ ಇದೆ.
ಅಗೋ ಅಲ್ಲಿ ಬಹು ಎತ್ತರದ ದೇವದಾರು ಮರವಿತ್ತು ಮೊದಲು
ಅದು ಮೋಡಗಳನ್ನು ತನ್ನ ಎಲೆಗಳಿಗೆ ರುಮಾಲಿನಂತೆ ಸುತ್ತುತ್ತ
ಕೆಲವೊಮ್ಮೆ ಶಾಲಿನಂತೆ ಮೈತುಂಬ ಹೊದೆಯುತ್ತಿತ್ತು.
ಗಾಳಿಯನ್ನು ಬಾಹುಗಳಿಂದ ತಡೆಯುತ್ತ
ಅತ್ತಿತ್ತ ತೂಗುತ್ತ ಅದಕ್ಕೆ ಹೇಳುತ್ತಿತ್ತು
ಈ ಕಾಲುಗಳು ನೆಲೆಯೂರದಿದ್ದಲ್ಲಿ ನಿನ್ನೊಂದಿಗೆ ಬರುತ್ತಿದ್ದೆ.
ಬೀಟೆಯ ಕೊರಳಿಂದ ಇಂಪಾದ ಸಿಳ್ಳು ಹೊರಟಾಗೆಲ್ಲ
ಬಾನಾಡಿಗಳು ಕೊಂಬೆಯಲ್ಲಿ ಕೂತು ನಕಲು ಮಾಡಿ ನಗುತ್ತಿದ್ದವು -- (ಸಬ್ಝ್ ಲಮ್ಹೇ)
ಇದನ್ನು ಓದುವಾಗ ಕುವೆಂಪು ಅವರಿಗೆ ಮರದ ಮೇಲಿನ ಪುಟ್ಟ ಹಕ್ಕಿಯ ಉಲಿ, ಧ್ಯಾನಸ್ಥ ಮರದ ಮಂತ್ರೋದ್ಘಾರದಂತೆ ಕೇಳಿಸಿದ್ದು, ಕೆ.ವಿ. ತಿರುಮಲೇಶ್‌ಗೆ - ವಲಸೆ ಹಕ್ಕಿಗಳು ಬಂದಾಗ ಮರಗಳು ತಮ್ಮ ಮೌನ ಮುರಿದಂತೆ- ಕೇಳಿಸಿದ್ದು ನೆನಪಾಗುತ್ತದೆ.
ಸಿಪ್ಪೆ ಸುಲಿದಂತೆ ಸುಲಿದ ಬೆಟ್ಟವೊಂದು
ಬೀಳುತ್ತಿರುವ ಆ ಮರವನ್ನು
ತಡೆಯಲದೆಷ್ಟು ಪ್ರಯತ್ನ ಮಾಡಿತ್ತು
ಆದರೆ ಕೆಲ ಮನುಷ್ಯರು
ಬೆಟ್ಟದಿಂದ ಕಸಿದುಕೊಂಡು, ಹೆಗಲುಕೊಟ್ಟು
ಕಾಲುದಾರಿಯಲ್ಲಿ ಸಾಗಿಸಿಯೇಬಿಟ್ಟರು- ಕೊರೆವ ಕಾರಖಾನೆಗೆ. -- (ಕೊಹಸಾರ್)
ಹ್ಯಾಮ್ಲೀಸ್, ಕ್ಲೋವಿಯಾ.. ಅಂಬಾನಿಯ ರಿಲಯನ್ಸ್ ರಿಟೇಲ್‌ನ ಜನಪ್ರಿಯ ಬ್ರ್ಯಾಂಡ್‌ಗಳಿವು
ತಪ್ಪು ತಿಳುವಳಿಕೆಯಿಂದಾದ ಮನಸ್ತಾಪದ ಕಂದಕ, ಅದರ ದಾರುಣ ಮೌನ, ಅದನ್ನು ಸರಿಪಡಿಸಬೇಕೆಂಬ ಇಕ್ಕೆಲದ ಹತಾಶ ಹಂಬಲ-ಗುಲ್ಝಾರರ ಕವಿತೆಗಳ ಸ್ಥಾಯೀ ಭಾವವಾಗಿದೆ. ನಿಸರ್ಗ ಸಹಜವಾಗಿ ನಮಗೆ ಸಿಕ್ಕಿರುವ ಸಂಯುಕ್ತ ಸಹಬಾಳ್ವೆಯ ಸಮಾಧಾನವನ್ನು, ಮನುಷ್ಯ ತಾನೇ ಜಾತಿ, ಮತ, ಧರ್ಮಗಳ ನರಕ ಸೃಷ್ಟಿಸಿಕೊಂಡು, ನಾಶಮಾಡುತ್ತಿರುವ ಅತ್ಯಂತ ಉದ್ವಿಗ್ನ ಪರಿಸ್ಥಿತಿ-ಗುಲ್ಝಾರ್‌ರ ಸಾಲುಗಳಲ್ಲಿ ಅನುರಣಿಸುತ್ತದೆ.
ಆದರೆ ಈ ದುರ್ಬಲ ಗೋಡೆಯ ಆ ಬದಿಯಲ್ಲಿ
ಅದೇನದು! ನೀರವತೆ ನೆಲೆಗೊಂಡಿದೆಯಲ್ಲಾ
ಯಾರದು? ಆಚೆ ಅಂಗಳದಲ್ಲಿ ಮೌನವಾಗಿ
ಗೋಡೆಗೆ ಕಿವಿಯಾನಿಸಿ ಕುಳಿತಂತಿದೆಯಲ್ಲಾ! -- (ಖುದಾ 2)
ಮತ್ತೆ ಮತ್ತೊಂದು ಬೀದಿ
ಮತ್ತೊಂದು ಪೆಟ್ಟು
ಮತ್ತೊಂದು ದಲಿತ ಗಿಡ! -- (ಇನ್ ಜಂಗ್ಲೀ ಪೌಂಧೋಂಕಾ)
ನಿನ್ನೆ ರಾತ್ರಿ ಬೆಂಕಿಬಿದ್ದ ಆ ಗಲ್ಲಿಯೊಳಗ
‘ನಮ್ಮಂದಿ’ ಯಾರೂ ನೆಲೆಸಿರಲಿಲ್ಲ
ಶಾಲೆಯೊಂದು ಕಟ್ಟುವಾಗಲೇ ಸುಟ್ಟು ಬೂದಿಯಾಗಿದೆ
ನಮ್ಮ ಹುಡುಗರ್‍ಯಾರೂ ಹೆಸರು ಹಚ್ಚಿರಲಿಲ್ಲ. -- (ಥರ್ಡ್ ವರ್ಲ್ಡ್)
ನಾನು ಹಿಂದಿ, ಉರ್ದು ಕವಿತೆಗಳನ್ನು ಓದಿದ್ದು ತುಂಬಾ ಕಡಿಮೆ. ಆದರೆ ಓದಿದ ಅಲ್ಪಸ್ವಲ್ಪ ಕವಿತೆಗಳಿಂದಾಗಿ, ಹಿಂದಿ-ಉರ್ದು ಕಾವ್ಯದಲ್ಲಿ ಒಂದು ಬಗೆಯ ಹುಸಿ ರಮ್ಯತೆಯೇ ಜಾಸ್ತಿ. ‘ವಾಹ್ ವಾಹ್’ಕ್ಕಾಗಿ ಹೊಸೆದ, ದಿನನಿತ್ಯದ ಅನಿರ್ವಚನೀಯದಿಂದ ದೂರವಾದ ಚತುರೋಕ್ತಿಗಳೇ ಜಾಸ್ತಿ- ಎಂದು ನನ್ನ ಅಭಿಪ್ರಾಯವಿತ್ತು. ಆದರೆ ಮುಂಬಯಿಯ ನನ್ನ ನಿಡುಗಾಲದ ಬಂಧು ಮುಕುಂದ ಜೋಷಿಯ ಮೂಲಕ ಆಧುನಿಕ ಹಿಂದೀ ಕಾವ್ಯದ ಕೆಲ ಪುಟಗಳನ್ನು ಓದುವಂತಾಯಿತು. ನಿರ್ಮಲ ವರ್ಮಾ, ವಿಜಯಕುಮಾರ್, ಶ್ರೀವಾಸ್ತವ ಮುಂತಾದವರ ಒಕ್ಕಣಿಕೆ ಅತ್ಯಂತ ಆಧುನಿಕವೆಂದು ಮನವರಿಕೆಯಾಯಿತು. ಈ ಗುಲ್ಝಾರ್‌ರ ಕವಿತೆಗಳನ್ನು ಓದುತ್ತಾ ಈಗ ನನಗೆ, ಅವರ ಕುರಿತೂ ಕೂಡ ಇದ್ದ ಆ ಪೂರ್ವಗ್ರಹ ಕಡಿಮೆ ಆದಂತಾಗಿದೆ. ಏಕೆಂದರೆ ಇಲ್ಲಿ ರಮ್ಯತೆ ಅನ್ನುವುದು ಶೈಲಿಗೆ ಅಥವಾ ಆತ್ಮಲೋಲುಪತೆಗೆ ಸಂಬಂಧಿಸಿದ ಸಂಗತಿಯಾಗದೇ ಪಲಾಯನವಾದವೂ ಆಗದೆ.. ಸಮಾಜದ ಬಿರುಕುಗಳನ್ನು ತುಂಬಲು ಬೇಕಾದ ನಂಟಿನ ದಾಹವಾಗಿ ನಮ್ಮನ್ನು ಆವರಿಸುತ್ತದೆ. ಈ ನಂಟು ಕೇವಲ ಗಂಡು ಹೆಣ್ಣಿನ ನಂಟಾಗದೆ, ಬದುಕಿನ ಕುರಿತಾದ ನಂಟಾಗುತ್ತದೆ.
ಪುಟ ತಿರುವಿದಾಗೆಲ್ಲ ಎಂಥ ಸ್ವಾದವಿತ್ತು ನಾಲಿಗೆಗೆ -- (ಕಿತಾಬೆ)
ತಮ್ಮ ಧರ್ಮಕ್ಕಾಗಿ ಪ್ರತಿಯೊಬ್ಬರ ಕೈಲೂ ಕಲ್ಲುಗಳಿವೆ.
ದೇವರ ಜಾತಿಯನ್ನು ನಿಷ್ಕರ್ಷಿಸಲು ಬಂದಿದ್ದರು ಅವರೆಲ್ಲ! -- (ಫಸಾದ್ 1 )
ಬೆಂಕಿಗೆ ಕಾಡಿನ ಗಾಳಿ ಬಲು ಮೆಚ್ಚು ಆದರೂ
ಈಗ ಬಡವರ ಗುಡಿಸಲುಗಳಿಗೆ ಗಂಟುಬಿದ್ದಿದೆ
ಜನರ ಕೈಯಲ್ಲೀಗ ಬೆಂಕಿಯಿಲ್ಲ
ಬೆಂಕಿಯ ಬಾಹುಗಳಲ್ಲೀಗ ಕೆಲ ಜನರಿದ್ದಾರೆ! -- ಫಸಾದ್ 5
ಎದೆಯಲ್ಲಿ ಒಂದಿಷ್ಟು ನೋವನ್ನು ಸಂಭಾಳಿಸುತ್ತೇನೆ ಹೀಗೆ
ಆಭರಣಗಳ ಸಂಭಾಳಿಸುವ ಹಾಗೆ ಯಾರೋ -- (ಹಮ್ ಕೋ ಇಸ್ ಘರ್ ಮೇ)
ಏನಿದು ನೀಲಿ ಆಧಾರ್ ಕಾರ್ಡ್? ಇದನ್ನು ಯಾರಿಗಾಗಿ, ಹೇಗೆ ಮಾಡಿಸುವುದು?
ಈ ಸಾಲುಗಳ ಬೇಗುದಿ ಖಂಡಿತ ರಮ್ಯತೆಯಾಗಲು ಶಕ್ಯವಿಲ್ಲ. ಸರಹದ್ದಿನಾಚೆ ಬಿಟ್ಟು ಬಂದಿರುವ ಗಲ್ಲಿ, ಮನೆ, ಗೆಳೆಯರನ್ನು, ಬಂಧುಗಳನ್ನು ಹೇಗಾದರೂ ತಲುಪಬೇಕೆನ್ನುವ ತಹತಹ, ಅಂಥ ನರಕ ಮತ್ತೆ ಎಲ್ಲೂ ಎಂದೂ ಆಗಬಾರದು ಎನ್ನುವ ಪ್ರಾರ್ಥನೆ ಗುಲ್ಝಾರರ ಬರವಣಿಗೆಯ ಜೀವಾಳವಾಗಿದೆ. ಹೀಗಾಗಿ ಇವು, ಬರೆದ ತಾರೀಕಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ. ಜರೂರಿನದಾಗಿವೆ.
ಹೀಗೆ ತಾವು ಇಷ್ಟೊಂದು ಭಯ ಭಕ್ತಿಯಿಂದ ಆರಾಧಿಸುವ ಗುಲ್ಝಾರ್‌ರ 75 ಆಯ್ದ ಕವಿತೆಗಳ ಜೊತೆಗೆ ಲಕ್ಷ್ಮೀಕಾಂತ ಇಟ್ನಾಳರು ಒಂದು ಹೆಜ್ಜೆ ಮುಂದಿಟ್ಟು ಅವರ 51 ಆಯ್ದ ಹಾಡುಗಳನ್ನೂ ಹೆಚ್ಚು ಕಮ್ಮಿ ಆ ಹಾಡುಗಳ ಲಯದಲ್ಲಿ ಕನ್ನಡಕ್ಕೆ ತಂದಿದ್ದಾರೆ. ಹೊಸ ಹುಡುಗ, ಹುಡುಗಿಯರು ತನ್ನ ಸಂಗಾತಿಯನ್ನು ಇಂಪ್ರೆಸ್ ಮಾಡಲು ನಾನು ಗುಲ್ಝಾರ್‌ರ ಹಾಡುಗಳನ್ನು ಮಾತ್ರ ಇಷ್ಟಪಡುತ್ತೇನೆ - ಎಂದು ಹೇಳುವಷ್ಟರಮಟ್ಟಿಗೆ ಒಂದು ಹೊಸ ಮಾದರಿಯನ್ನು ಗುಲ್ಝಾರ್ ಹಾಡುಗಳು ಸೃಷ್ಟಿಸಿದವು. ಚೆಸ್ ಆಡುವವರು ಬಹು ಬುದ್ಧಿವಂತರು ಎನ್ನುವಂತೆ ಗುಲ್ಝಾರ್ ಹಾಡುಗಳನ್ನು ಕೇಳುವವರು ಅಭಿರುಚಿಯುಳ್ಳ, ಶಾಣ್ಯಾ ಜನ ಎನ್ನುವಷ್ಟು ದೇಶದ ಮನಸ್ಸನ್ನು ಪ್ರಭಾವಿಸಿದ ಹಾಡುಗಳು ಅವರವು. ಬಿಮಲ್ ರಾಯ್‌ರಿಂದ ಹಿಡಿದು ವಿಶಾಲ ಭಾರದ್ವಾಜ್ ತನಕ ವಿವಿಧ ಶೈಲಿಯ ಸುಮಾರು ನಾಲ್ಕು ತಲೆಮಾರಿನ ಚಿತ್ರಗಳಿಗೆ ಗುಲ್ಝಾರ್ ಬರೆದ ಹಾಡುಗಳು ಈ ಐವತ್ತು ವರುಷಗಳ ಹಿಂದೀ ಚಿತ್ರಗಳ ಸಾಕ್ಷಿ ಪ್ರಜ್ಞೆಯಂತೆ ಕೆಲಸ ಮಾಡಿದೆ. ಆ ಹಾಡಿನ ಹಂಗಿಲ್ಲದೆ ಗುಂಗಿಲ್ಲದೆ ನಮ್ಮ ಯಾವ ನೆನಪುಗಳೇ ಇಲ್ಲ.
ಇಂಥ ಹಾಡುಗಳನ್ನು, ಮೂಲದ ಲಯವಿನ್ಯಾಸವನ್ನು ಇಟ್ಟುಕೊಂಡೆ ಭಾಷಾಂತರಿಸುವುದು ರಾತ್ರಿ ಕಂಡ ಬಾವಿಯಲ್ಲಿ ಹಗಲೇ ಬೀಳುವ ಕೆಲಸ. ಏಕೆಂದರೆ ಪ್ರತಿ ಹಿಂದೀ ಹಾಡಿನ ಪ್ರೇಮಿಗೂ ಆ ಹಾಡಿನ ಒಕ್ಕಣಿಕೆ ಚಲನೆ, ಭಾವವಿನ್ಯಾಸ, ಅದರ ಇತರ ಮ್ಯೂಸಿಕ್ ಮತ್ತು ಆಲಾಪಗಳೊಂದಿಗೇ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಅನುವಾದ ಓದಲು ಆರಂಭಿಸಿದ್ದೇ, ಅದರ ರೆಕಾರ್ಡು ಮನಸ್ಸಲ್ಲಿ ಶುರುವಾಗಿಬಿಟ್ಟಿರುತ್ತದೆ. ಮಜಾ ಅಂದರೆ, ನನ್ನಂಥ ಹಿಂದಿ ಹಾಡಿನ ಪ್ರೇಮಿ ಕನ್ನಡಿಗರಿಗೆ ಮೂಲದ ಹಾಡಿನ, ಅದರಲ್ಲೂ ಗುಲ್ಝಾರ್‌ರ ಹಾಡಿನ ಹೆಚ್ಚಿನ ಸಾಲುಗಳು ಅರ್ಥವೇ ಆಗಿರಲಿಲ್ಲ. ಏಕೆಂದರೆ ಅವು ಅಷ್ಟು ಸಾಂದ್ರವಾದ, ಅಪರಿಚಿತವಾದ, ಆದರೆ ಕೇಳಲು ಇಂಪಾದ, ಪದಪುಂಜಗಳಿಂದ ತುಂಬಿರುತ್ತಿದ್ದವು. ದಿಲ್ ಢೂಂಢತಾ ಹೈ ಫಿರ್ ವಹಿ ಯಂಥ ಹಾಡುಗಳು ನನಗಂತೂ ಬೇಂದ್ರೆಯವರ ‘ಜೋಗಿ’ಯಷ್ಟೆ ಈಗಲೂ ತ್ರಾಸು ಕೊಡುವ ರಚನೆಗಳು. ಆರಂಭದ ಸಾಲುಗಳು ಅರ್ಥವಾದರೆ ಸಾಕು, ಇಡೀ ಹಾಡು ಅರ್ಥವಾದಂಥ ಹುಂಬ ಸಂತೋಷ. ‘ಯಾರಾ ಸಿಲಿ ಸಿಲಿ’ ಅಂದ್ರೆ ಏನು ಅಂತ ಈಗಲೂ ಗೊತ್ತಿಲ್ಲ. ಇದಕ್ಕೆಲ್ಲ ಒಂದು ದೊಡ್ಡ ಪರಿಹಾರವೆಂಬಂತೆ ಇಟ್ನಾಳ್, ಗುಲ್ಝಾರ್‌ರ ಎಲ್ಲಾ ಮಹತ್ವದ ಹಾಡುಗಳನ್ನು ಇಲ್ಲಿ ಭಾಷಾಂತರಿಸಿದ್ದಾರೆ ಮತ್ತು ಮೂಲದೊಂದಿಗೇ ಕೊಟ್ಟಿದ್ದಾರೆ. ಇದು ಗುಲ್ಝಾರ್ ಹಾಡುಗಳನ್ನು ಅರ್ಥಮಾಡಿಕೊಂಡು ಆಸ್ವಾದಿಸುವ ಒಂದು ವಿನೂತನ ಮತ್ತು ಅಮೂಲ್ಯ ಅವಕಾಶವಾಗಿದೆ. ‘ಬೋಲೆರೆ ಪಪಿಹರಾ’ ಕೇಳಿದವರೆಲ್ಲ ಅದು ಕೋಗಿಲೆಯನ್ನೇ ಉದ್ದೇಶಿಸಿದ ಹಾಡು ಅಂದುಕೊಂಡು ಬಿಟ್ಟಿರುತ್ತೇವೆ. ‘ಪಪಿಹಾ’ ಅಂದರೆ ಮಳೆಗೆ ಕಾಯುವ ಚಾತಕಪಕ್ಷಿ! ಎಂದು ನನಗೆ ಈ ಅನುವಾದದಿಂದ ತಿಳಿಯಿತು. ಹೀಗಾಗಿ ಪೂರ್ವಸ್ಮೃತಿಯೊಂದಿಗೆ ಈ ಹಾಡುಗಳ ಅನುವಾದವನ್ನು ಹೊಸದಾಗಿ ಓದುವುದೇ ಒಂದು ವಿಶೇಷವಾದ ಅನುಭವ.
ಹಾಥೋಂ ಸೆ ಛೂ ಕೆ ಇಸೆ ರಿಶ್ತೋಂ ಕಾ ಇಲ್ಜಾಮ್ ನ ದೋ
ಕರ ಸೋಕಿ ಅದಕೆ ಸಂಬಂಧದ ಕೋಳ ತೊಡಿಸದಿರು - (ಹಮ್ ನೆ ದೇಖಿ ಹೈ)
ಆಪ್ ಕೀ ಬದಮಾಶಿಯೋಂ ಕೆ ಯೆ ನಯೇ ಅಂದಾಜ ಹೈ
ಇದುವೆ ನಿನ್ನ ಕೀಟಲೆತನದಾ ಮುದ್ದು ಮಾದರಿಯಾಗಿದೆ - (ಆಪ್ ಕಿ ಆಂಖೋ ಮೇ)
ಥೋಡಾ ಸಾ ಹಸಾಕೆ, ॒ಥೋಡಾ ಸಾ ರುಲಾ ಕೆ
ತುಸು ಅಳು ಕಳಿಸಿ, ನಗು ಮರುಕಳಿಸಿ - (ಆನೇವಾಲಾ ಪಲ್)
ಆಬುದಾನಾ ಢೂಂಢತಾ ಹೈ ॒ಆಶಿಯಾನಾ ಢೂಂಢತಾ ಹೈ
ಹೊಟ್ಟೆಪಾಡನು ಹುಡುಕುತಿರುವ, ಪುಟ್ಟಗೂಡನು ಬಯಸುತಿರುವ -(ಏಕ್ ಅಕೇಲಾ ಇಸ್ ಶಹರ್ ಮೇ)
ಹೀಗೆ ನೋಡಲು ಸರಳ ಅನಿಸುವ ಸಾಲುಗಳ ಅನುವಾದ ಅಷ್ಟು ಸರಳವಲ್ಲ. ಆದರೂ ಇಟ್ನಾಳ ಆದಷ್ಟು ಮೂಲಕ್ಕೆ ನಿಷ್ಠರಾಗಿ ಅದನ್ನು ತುಂಬಾ ವಿಶ್ವಾಸದಿಂದಲೇ ನಿಭಾಯಿಸಿದ್ದಾರೆ. (ಬಡೀ ವಫಾಸೆ ನಿಭಾಯಿ ತುಮ್‌ನೆ ಹಮಾರಿ ಥೋಡಿಸಿ ಬೇವಫಾಯಿ!) ಹೀಗಾಗಿ ರಾಗ ಮಾಧುರ್ಯ ಮತ್ತು ಭಾಷೆಯ ಅಪರಿಚಿತತೆಯಿಂದಾಗಿ ನಮ್ಮಿಂದ ಮರೆಯಾಗಿದ್ದ ಗುಲ್ಝಾರ್‌ರ ಕಾವ್ಯ ವಿವರಗಳು ನಿಚ್ಚಳವಾಗಿ ನಮಗೆ ಕಾಣುವಂತಾಗಿದೆ.
ತೊರೆದೋಡಿ ಬಂದೆವು ಆ ಓಣಿ ಅಂಗಳ
ಅಲ್ಲಿ ಪದ ಪದಗಳಲ್ಲು ಪದುಮ ಅರಳುತಿತ್ತು
ನಕ್ಕರಲ್ಲಿ ಕೆನ್ನೆಗಳಲಿ, ಗುಳಿಯೊಂದು ಬೀಳುತಿತ್ತು
ನಿನ ಸೊಂಟ ಕಸುವಲ್ಲಿ, ನದಿಯೆ ತಾ ತಿರುಗುತಿತ್ತು
ನಿನ ನಗು ಕೇಳಿ ಕೇಳಿ ತೆನೆಯೆ ತಾ ಮಾಗುತಿತ್ತು
ನಿನ ಹಿಮ್ಮಡಿಯಿಂದ ಹುಡಿಬೆಳಕು ಹಾರುತಿತ್ತು --(ಚ್ಹೋಡ್ ಆಯೆ ಹಮ್)
ನೀನೆಲ್ಲಿ ತಿರುಗಿ ಮರೆಯಾದೆಯಲ್ಲೆ
ಆ ತಿರುವು ಇನ್ನೂ ನಿಂತಿರುವುದಲ್ಲೆ
ಈ ಕಾಲುಗಳಲಿ ಅರಿಯೆನೆಷ್ಟೋ
ಸುಳಿಗಳು ಸಿಲುಕಿ ನಿಂದಿರುವೆನಿಲ್ಲೆ - (ಹಝಾರ ರಾಹೇ..)
ಅಂಗ ಅಂಗದಲ್ಲಿ ಸುಡುತಿವೆ ನೋವಿನ ಕಿಡಿಗಳು
ಹೊಸಕಿದ ಹೂಗಂಧದಲಿ ಗುಂಪಾದ ಚಿಟ್ಟೆಗಳು
ಇರುಳೆಲ್ಲ ಮದರಂಗಿ, ಕಾಲಡಿಯಲಿ ಬಿಕ್ಕುತಿಹುದು
ಮಾಡಲೇನು, ಹೇಳಲ್ಹೇಗೆ, ಉರುಳದೇಕೆ ಇರುಳಿದು
ಎದೆವುರಿಯು, ಜೀವನಿಗಿಯು -(ಜಿಯಾ ಜಲೇ ಜಾನ್ ಜಲೇ ..)
ಹೂವಾಗುವಳು ಹೆಸರೆತ್ತಿದರವಳು
ಪರಿಮಳದಿಂದಲೆ ಕಾಣುವಳವಳು
ತಾಯತ ಮಾಡಿ ಧರಿಸುವೆನವಳ
ಪವಾಡದ ಥರ ದೊರಕಿದರವಳು - (ಚಲ್ ಛಂಯಾ ಛಂಯಾ)
ಯಾರೋ ಎಲ್ಲೋ ಇದ್ದರೆ ಚೆನ್ನ
ನನ್ನವರೆಂದು ಹೇಳಲು ಗೆಳೆಯಾ
ಹತ್ತಿರವಿರದಿರೆ ದೂರವೆ ಇರಲಿ
ಆದರೂ ಯಾರೋ ನನ್ನವರು -(ಕೋಯಿ ಹೋತಾ ಜಿಸ್ ಕೋ ಅಪನಾ)
ಒಡೆದು ಹೋದ ಬಳೆಗಳಿಂದ
ಸಿಂಗರಿಸಲೆ ಮುಂಗೈಗಳನು
ಕಳೆದು ಬಂದ ಓಣಿಗಳಲಿ
ಏನು ಮರೆತು ಬಂದಿಹೆನೊ -(ಯಾರಾ ಸೀಲಿ ಸೀಲಿ)
ಮಗಳ ಜೊತೆ ಶ್ರಿಯಾ ಶರಣ್ ಫೋಟೋ ಶೂಟ್; ನೀವು ಹಾಟೆಸ್ಟ್ ಮಮ್ಮಿ ಅನ್ನೋದ ಜನ!
ಅನುವಾದ ಅಂದರೆ ಅತ್ತರನ್ನು ಒಂದು ಬಾಟಲಿಯಿಂದ ಇನ್ನೊಂದು ಬಾಟಲಿಗೆ ವರ್ಗಾಯಿಸಿದ ಹಾಗೆ. ಚೂರು ಸುಗಂಧದ್ರವ್ಯ ಹಾರಿ ಹೋಗುವುದು ಅನಿವಾರ್ಯ. ಈ ಕಸುಬಿಗೆ ಒಂದು ಅಂತಸ್ಥವಾದ ನಿಸ್ವಾರ್ಥ ಬೇಕು. ಮೂಲದ ಕುರಿತು, ಕಾವ್ಯದ ಕುರಿತು ಅಪಾರವಾದ ಅನುರಕ್ತಿ ಬೇಕು. ಮತ್ತು ಪದೇ ಪದೇ ತಿದ್ದಿತೀಡಿ ಮೂಲದ ಆತ್ಮದ ಸನಿಹ ಸಾಗುವ ತಾಳ್ಮೆ ಬೇಕು. ಲಕ್ಷ್ಮೀಕಾಂತ ಇಟ್ನಾಳರ ಈ ಅವಳಿ (ಜೈಹೋ, ದಸ್ತಕ್) ಸಂಕಲನಗಳಲ್ಲಿ ಈ ಗುಣಗಳು ಪ್ರತಿಫಲಿಸುತ್ತಿವೆ. ಈ ಎರಡು ಪುಸ್ತಕಗಳಲ್ಲಿ ಮೂಲ ಪಠ್ಯವನ್ನು ಪಕ್ಕದಲೇ ಕೊಟ್ಟಿರುವುದು ಅವರ ಪ್ರಾಂಜಲತೆಗೆ ನಿದರ್ಶನವಾಗಿದೆ. ಇದು ಓದುಗರ ರಚನಾತ್ಮಕ ಸ್ಪಂದನಕ್ಕೆ ಪ್ರಚೋದನೆ ನೀಡುವಂತಿದೆ.
ಈ ‘ದಿನ-ರಾತ್ರಿ’ ಗಳು ಹೇಗೆ ಚದುರಿ ಬಿದ್ದಿವೆ ಎಂದರೆ
ಮುತ್ತಿನ ಹಾರವೊಂದು ಹರಿದು ಬಿದ್ದಂತೆ! -- (ತ್ರಿವೇಣಿ)
ಚದುರಿ ಬಿದ್ದಿರುವ ಎಲ್ಲರನ್ನೂ ಎಲ್ಲವನ್ನೂ ಅಂತಃಕರಣದ ಸೂತ್ರದಲ್ಲಿ ಮರಳಿ ಪೋಣಿಸುವ ಸೂತ್ರವೇ ಕಾವ್ಯ. ತಮ್ಮ ಬರವಣಿಗೆ, ವ್ಯಕ್ತಿತ್ವ, ಘನವಾದ ಮಾತು, ಚಿತ್ರಪಟಗಳ ಮೂಲಕ ಇಂಥದೊಂದು ಸೂತ್ರವನ್ನು ಕಲ್ಪಿಸುತ್ತಲೇ ಬಂದಿರುವ ನಮ್ಮೆಲ್ಲರ ಸಂವೇದನೆಯ ಮಹಾ ಪೋಷಕ ಗುಲ್ಝಾರ್‌ಸಾಬ್‌ಗೆ ನಮಸ್ಕಾರ.
(ಲಕ್ಷ್ಮಿಕಾಂತ ಇಟ್ನಾಳ ಅವರು ಕನ್ನಡಿಸಿರುವ Gulzaar ಅವರ ಆಯ್ದ ಕವಿತೆ ಮತ್ತು ಚಿತ್ರಗೀತೆಗಳ ಪುಸ್ತಕಗಳಿಗೆ ಬರೆದ ಮುನ್ನುಡಿಯ ಭಾಗಗಳು)