ನಟ ದರ್ಶನ್‌ಗೆ ಮತ್ತೆ ಬೆನ್ನುನೋವು ಕಾಟ: ಜೈಲಿನಿಂದ ಹೊರಬರಲು ಜಾಮೀನು ಕಸರತ್ತಿಗೆ 'ಹಳೆಯ ವರಸೆ'?

Published : Oct 15, 2025, 12:02 PM IST
Actor Darshan Thoogudeepa

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ ಮತ್ತೆ ಬೆನ್ನುನೋವು ಮತ್ತು ಮೊಣಕೈ ನೋವು ಕಾಣಿಸಿಕೊಂಡಿದೆ. ವೈದ್ಯರು ಫಿಜಿಯೋಥೆರಪಿ ಸಲಹೆ ನೀಡಿದ್ದು, ಈ ಹಿಂದೆ ಇದೇ ರೀತಿ ಆರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದರಿಂದ, ಇದು ಮತ್ತೊಂದು ಜಾಮೀನು ತಂತ್ರವಿರಬಹುದು ಎನ್ನಲಾಗುತ್ತಿದೆೆ.

ಬೆಂಗಳೂರು (ಅ.15): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ ಅವರಿಗೆ ಬೆನ್ನುನೋವು ಮತ್ತೊಮ್ಮೆ ವಿಪರೀತವಾಗಿ ಕಾಡಲಾರಂಭಿಸಿದೆ. ಕಳೆದ ಒಂದು ವಾರದಿಂದ ಬೆನ್ನುನೋವಿನಿಂದ ನಟ ದರ್ಶನ್ ಬಳಲುತ್ತಿದ್ದು, ಇದರ ಜೊತೆಗೆ ಹಳೆಯ ಕಾರು ಅಪಘಾತದ ಗಾಯದ ಕಾರಣದಿಂದ ಮೊಣಕೈ ನೋವು ಕೂಡ ಉಲ್ಬಣಗೊಂಡಿದೆ ಎಂದು ವರದಿಯಾಗಿದೆ.

ದರ್ಶನ್ ಅವರ ಮನವಿಯ ಮೇರೆಗೆ ಸಿ.ವಿ. ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರು ಜೈಲಿಗೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ತಪಾಸಣೆಯ ನಂತರ, ದರ್ಶನ್ ಅವರಿಗೆ ವಾರಕ್ಕೆ ಕನಿಷ್ಠ ನಾಲ್ಕು ಬಾರಿ ಫಿಜಿಯೋಥೆರಪಿ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಬೆನ್ನುನೋವಿನ ಜೊತೆಗೆ, ಈ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಲಗೈ ಮೊಣಕೈಗೆ ಮತ್ತೆ ನೋವು ಕಾಣಿಸಿಕೊಂಡಿದೆ. ಪ್ರಸ್ತುತ ಜೈಲಿನಲ್ಲಿ ನೆಲದ ಮೇಲೆ ಮಲಗುತ್ತಿರುವುದರಿಂದ ಈ ನೋವು ಮರುಕಳಿಸಿದೆ ಎಂದು ದರ್ಶನ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿ.ವಿ. ರಾಮನ್ ಆಸ್ಪತ್ರೆಯ ವೈದ್ಯರು ಮೊಣಕೈ ಮತ್ತು ಎರಡು ಬೆರಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

ಹಳೆಯ ಜಾಮೀನು 'ಕಸರತ್ತು' ನೆನಪು!

ಆದರೆ, ನಟ ದರ್ಶನ್ ಅವರಿಗೆ ಈಗ ಬೆನ್ನುನೋವು ಮರುಕಳಿಸಿರುವುದು ಹಳೆಯ ಘಟನೆಯೊಂದನ್ನು ನೆನಪಿಸುತ್ತಿದೆ. ಈ ಹಿಂದೆ ಇದೇ ಕೇಸಿನಲ್ಲಿ ಬಳ್ಳಾರಿ ಜೈಲಿನಲ್ಲಿ ಇದ್ದಾಗಲೂ ದರ್ಶನ್ ಅವರು ಬೆನ್ನುನೋವು ವಿಪರೀತವಾಗಿದೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಮಧ್ಯಂತರ ಜಾಮೀನು ಪಡೆದು ಬೆಂಗಳೂರಿಗೆ ಬಂದಿದ್ದರು. ಆಗ ಐದು ವಾರಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದರೂ, ಯಾವುದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ. ಬಳಿಕ ಹೈಕೋರ್ಟ್‌ನಿಂದ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.

ಜಾಮೀನು ಪಡೆದ ನಂತರ ದರ್ಶನ್ ಅವರು ಯಾವುದೇ ಆರೋಗ್ಯ ಸಮಸ್ಯೆಯಿಲ್ಲದಂತೆ ಸುಮಾರು ತಿಂಗಳು ಜನಸಾಮಾನ್ಯರಂತೆ ಓಡಾಡಿಕೊಂಡಿದ್ದರು. ಸಿನಿಮಾ ಶೂಟಿಂಗ್‌ಗಳಲ್ಲಿ ಭಾಗಿಯಾಗಿ 'ಡೆವಿಲ್' ಸಿನಿಮಾದ ನಟನೆಯನ್ನು ಪೂರ್ಣಗೊಳಿಸಿದ್ದರು. ನಂತರ ಹೈಕೋರ್ಟ್‌ನಿಂದ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ ಕಾರಣ ದರ್ಶನ್ ಸೇರಿ ಪ್ರಮುಖ ಆರೋಪಿಗಳು ಪುನಃ ಜೈಲು ಸೇರಿದ್ದಾರೆ.

ಹಾಸಿಗೆ, ದಿಂಬು ಕೋರಿಕೆ - ಈಗ ವಿಪರೀತ ನೋವಿನ ದೂರು:

ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರು, ತಮಗೆ ಹಾಸಿಗೆ, ದಿಂಬು ಬೇಕು. ನೆಲದ ಮೇಲೆ ಸಾಮಾನ್ಯ ಕೈದಿಯಂತೆ ಮಲಗಲು ಆಗುತ್ತಿಲ್ಲ, ಬೆನ್ನು ನೋವು ಕಾಡುತ್ತಿದೆ ಎಂದು ಕೋರಿದ್ದರು. ಇದೀಗ ಬೆನ್ನುನೋವು ವಿಪರೀತವಾಗಿದೆ ಎಂದು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅದೇ 'ಹಳೆಯ ವರಸೆ'ಗೆ ಹೊಸ ವೈದ್ಯರಿಂದ ಚಿಕಿತ್ಸೆ ಪಡೆಯಲು ಮುಂದಾಗಿರುವ ದರ್ಶನ್ ಅವರು, ಇದೇ ಮಾರ್ಗವನ್ನು ಬಳಸಿಕೊಂಡು ಮತ್ತೆ ಚಿಕಿತ್ಸೆ ನೆಪದಲ್ಲಿ ಮಧ್ಯಂತರ ಜಾಮೀನು ಪಡೆಯಲು ಪ್ರಯತ್ನಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ನಟನ ಮುಂದಿನ ನಡೆ ಮತ್ತು ನ್ಯಾಯಾಲಯದ ನಿರ್ಧಾರದ ಮೇಲೆ ಎಲ್ಲರ ಗಮನ ನೆಟ್ಟಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!