
ಬೆಂಗಳೂರು(ಆ.12): ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಕೊಡುವಂತೆ ಚಿತ್ರರಂಗದ ಮನವಿ ಸ್ಪಂದಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಇನ್ನೊಂದು ತಿಂಗಳಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಚಿತ್ರರಂಗಕ್ಕೆ ಭರವಸೆ ನೀಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸಿಎಂ ಕಛೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಕನ್ನಡ ಚಿತ್ರರಂಗದ ನಿಯೋಗಕ್ಕೆ ಈ ಭರವಸೆ ನೀಡಿದ ಮುಖ್ಯಮಂತ್ರಿಗಳು ‘ನಮ್ಮ ಮುಂದೆ ಇರುವ ವರದಿ ಪ್ರಕಾರ ಸೆಪ್ಟೆಂಬರ್ ತಿಂಗಳವರೆಗೂ ಕೊರೋನಾ ಪ್ರಭಾವ ಇದ್ದೇ ಇರುತ್ತದೆ. ಹೀಗಾಗಿ ತಜ್ಞರ ಜತೆ ಮಾತುಕತೆ ಮಾಡಿ ಮುಂದಿನ ತಿಂಗಳ ಹೊತ್ತಿಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿ ಆದೇಶ ನೀಡುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
ಚಿತ್ರಮಂದಿರ ಆರಂಭಕ್ಕೆ ಫಿಲಂ ಚೇಂಬರ್ ಮನವಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್ ಎಂ ಸುರೇಶ್, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್ ಹಾಗೂ ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು, ಕೆ ಪಿ ಶ್ರೀಕಾಂತ್ ಮುಂತಾದವರು ಮುಖ್ಯಮಂತ್ರಿಗಳ ಭೇಟಿ ನಿಯೋಗದಲ್ಲಿ ಹಾಜರಿದ್ದರು.
ಜಿಎಸ್‌ಟಿ ಬರುವ ಮುನ್ನ ಜಾರಿಯಲ್ಲಿದ್ದ ವ್ಯಾಟ್ ಪಾವತಿ ಮಾಡುವ ಬಗ್ಗೆ ಮಾತನಾಡಿದ ಚಿತ್ರರಂಗದ ನಿಯೋಗ, 2010 ಹಾಗೂ 2011ರ ನಂತರ ರಾಜ್ಯ ಸರ್ಕಾರ ವ್ಯಾಟ್ ಮನ್ನಾ ಮಾಡಿತು. ಆದರೆ, 2001 ರಿಂದ 2010ರ ವರೆಗೂ ವ್ಯಾಟ್ ಕಟ್ಟಿಲ್ಲ ಎನ್ನುತ್ತಿದ್ದಾರೆ. ಈ ಸಂಕಷ್ಟದಲ್ಲಿ ಹಳೆ ವ್ಯಾಟ್ ಕಟ್ಟುವುದು ಅಸಾಧ್ಯ. ಇದನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಿಕೊಡುವಂತೆ ನಿಯೋಗ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಜತೆ ಚರ್ಚೆ ಮಾಡಿದ ನಂತರ ಮತ್ತೊಮ್ಮೆ ಚಿತ್ರರಂಗದ ನಿಯೋಗವನ್ನು ಭೇಟಿ ಮಾಡಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.