
ಮದುವೆ ಬೆನ್ನಲ್ಲೇ ವಿವಾದಕ್ಕೆ ಸಿಲುಕಿದ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್
ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ಬಳಿಕ ಆರಂಭದ ದಿನಗಳಲ್ಲಿ ಬೆಂಬಲವಾಗಿ ನಿಂತವರನ್ನು ಮರೆಯಬಾರದು ಎಂಬ ಮಾತಿದೆ. ಆದರೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಅವರ ಇತ್ತೀಚಿನ ನಡೆ ಇದೀಗ ಕಾಲಿವುಡ್ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ತಮ್ಮ ಸಂಗೀತ ಪಯಣದ 15 ವರ್ಷಗಳನ್ನು ಸಂಭ್ರಮದಿಂದ ನೆನಪಿಸಿಕೊಂಡಿರುವ ಅನಿರುದ್ಧ್, ವೃತ್ತಿಜೀವನಕ್ಕೆ ಮೊದಲ ಅವಕಾಶ ನೀಡಿದ ನಟ ಧನುಷ್ (Dhanush) ಅವರ ಹೆಸರನ್ನೇ ಪ್ರಸ್ತಾಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಧನುಷ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.
ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳನ್ನು ಪೂರೈಸಿರುವ ಅನಿರುದ್ಧ್, ಈ ವಿಶೇಷ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗಾಗಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದರು. ತಮ್ಮ ಆರಂಭದ ದಿನಗಳಿಂದ ಹಿಡಿದು ಇಂದಿನವರೆಗೆ ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿರುವ ಅವರು, ಸಂಗೀತ ಲೋಕದಲ್ಲಿ ಸಿಕ್ಕಿರುವ ಅವಕಾಶಗಳು, ಸಾಧನೆಗಳು ಹಾಗೂ ಅಭಿಮಾನಿಗಳ ಪ್ರೀತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.
ತಮಿಳು ಚಿತ್ರರಂಗ ಮಾತ್ರವಲ್ಲದೆ ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಕೆಲಸ ಮಾಡಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಬೃಹತ್ ಸ್ಟೇಡಿಯಂಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುವ ಅವಕಾಶ, ದೊಡ್ಡ ನಿರ್ದೇಶಕರು, ಸ್ಟಾರ್ ನಟರು ಮತ್ತು ನಿರ್ಮಾಪಕರ ಜೊತೆ ಕೆಲಸ ಮಾಡಿದ ಅನುಭವವನ್ನೂ ತಮ್ಮ ಬರಹದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ಈ ವರ್ಷದ ‘ಜೈಲರ್ 2’, ‘ಪ್ಯಾರಡೈಸ್’ ಸೇರಿದಂತೆ ತಮ್ಮ ಮುಂದಿನ ಕೆಲಸಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು.
ಆದರೆ ಈ ಸಂಭ್ರಮದ ಬರಹದಲ್ಲೊಂದು ಹೆಸರು ಕಾಣೆಯಾಗಿರುವುದೇ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅದುವೇ ನಟ ಧನುಷ್!
ಇಂದಿನ ದಿನಗಳಲ್ಲಿ ಅನಿರುದ್ಧ್ ಹೆಸರು ಕೇಳಿದ ತಕ್ಷಣವೇ ಅಭಿಮಾನಿಗಳಿಗೆ ಹಲವು ಸೂಪರ್ ಹಿಟ್ ಹಾಡುಗಳು ನೆನಪಾಗುತ್ತವೆ. ಆದರೆ ಅವರ ಸಂಗೀತ ಪಯಣದ ಮೊದಲ ಮೆಟ್ಟಿಲು ಯಾವುದು ಎಂಬುದನ್ನು ಮರೆಯುವಂತಿಲ್ಲ. ಸುಮಾರು 15 ವರ್ಷಗಳ ಹಿಂದೆ ಅನಿರುದ್ಧ್ ಅವರನ್ನು ಸಂಗೀತ ನಿರ್ದೇಶಕರಾಗಿ ಪರಿಚಯಿಸಿದ್ದು ನಟ ಧನುಷ್.
ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರ ‘3’ ಸಿನಿಮಾದ ಮೂಲಕ ಅನಿರುದ್ಧ್ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದ ‘ವೈ ದಿಸ್ ಕೊಲವೆರಿ ಡಿ’ ಹಾಡು ಬಿಡುಗಡೆಯಾದ ಬಳಿಕ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಭಾರಿ ಜನಪ್ರಿಯತೆ ಗಳಿಸಿತ್ತು. ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಒಂದೇ ಹಾಡಿನ ಮೂಲಕ ಅನಿರುದ್ಧ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ಇಷ್ಟೇ ಅಲ್ಲದೆ, ನಂತರ ಧನುಷ್ ಮತ್ತು ಅನಿರುದ್ಧ್ ಕಾಂಬಿನೇಷನ್ನಲ್ಲಿ ಮೂಡಿಬಂದ ‘ವೇಲೈ ಇಲ್ಲಾ ಪಟ್ಟಧಾರಿ’, ‘ಮಾರಿ’ ಸೇರಿದಂತೆ ಹಲವು ಸಿನಿಮಾಗಳ ಹಾಡುಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದವು. ಹೀಗಿರುವಾಗ ತಮ್ಮ ವೃತ್ತಿಜೀವನದ 15 ವರ್ಷಗಳ ಸಾಧನೆಯ ಪತ್ರದಲ್ಲಿ ಧನುಷ್ ಅವರನ್ನು ನೆನಪಿಸಿಕೊಳ್ಳದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
ಮದುವೆ ಆಮಂತ್ರಣವೂ ಧನುಷ್ಗೆ ತಲುಪಿರಲಿಲ್ಲವೇ?
ಈ ವಿವಾದಕ್ಕೆ ಮತ್ತೊಂದು ಪ್ರಮುಖ ಕಾರಣ ಅನಿರುದ್ಧ್ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದೆ. ನವೆಂಬರ್ 11ರಂದು ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರ ವಿವಾಹ ಸಮಾರಂಭ ನಡೆದಿತ್ತು. ಈ ಮದುವೆಗೆ ಧನುಷ್ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂಬ ಮಾತುಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈಗಾಗಲೇ ಇಬ್ಬರ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆಗಳಿರುವಾಗ ಮದುವೆಯ ಆಹ್ವಾನದ ವಿಚಾರವೂ ಮುನ್ನೆಲೆಗೆ ಬಂದಿರುವುದು ಅಭಿಮಾನಿಗಳ ಅನುಮಾನವನ್ನು ಹೆಚ್ಚಿಸಿದೆ. ವೈಯಕ್ತಿಕ ಕಾರಣಗಳಿಂದ ಇಬ್ಬರ ನಡುವೆ ಮನಸ್ತಾಪವಿದ್ದರೆ ಅದು ಅವರ ವಿಚಾರ. ಆದರೆ ವೃತ್ತಿಜೀವನದ ಆರಂಭದಲ್ಲಿ ಬೆಂಬಲ ನೀಡಿದ ವ್ಯಕ್ತಿಯನ್ನು ಕನಿಷ್ಠ ಸ್ಮರಿಸಬಹುದಿತ್ತು ಎಂಬುದು ಧನುಷ್ ಅಭಿಮಾನಿಗಳ ವಾದ.
ಐಶ್ವರ್ಯಾ ರಜನಿಕಾಂತ್ ಹಳೆಯ ವಿಡಿಯೋ ಮತ್ತೆ ವೈರಲ್!
ಇನ್ನೊಂದೆಡೆ, ಈ ವಿವಾದದ ನಡುವೆ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಅವರ ಹಳೆಯ ಸಂದರ್ಶನದ ವಿಡಿಯೋ ಕೂಡ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅನಿರುದ್ಧ್ ಅವರಿಗೆ ‘3’ ಸಿನಿಮಾದಲ್ಲಿ ಅವಕಾಶ ಸಿಗಲು ಧನುಷ್ ಅವರೇ ಪ್ರಮುಖ ಕಾರಣ ಎಂದು ಐಶ್ವರ್ಯಾ ಈ ಹಿಂದೆ ಹೇಳಿಕೊಂಡಿದ್ದರು.
ಅನಿರುದ್ಧ್ ಅವರ ಸಂಗೀತ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿದ್ದ ಧನುಷ್, ಅವರ ಸಾಮರ್ಥ್ಯದ ಮೇಲೆ ಅಪಾರ ವಿಶ್ವಾಸ ಹೊಂದಿದ್ದರು. ಅನಿರುದ್ಧ್ ಅವರ ಪೋಷಕರು ಆರಂಭದಲ್ಲಿ ಅವರನ್ನು ಪದವಿ ವ್ಯಾಸಂಗಕ್ಕಾಗಿ ಸಿಂಗಾಪುರಕ್ಕೆ ಕಳುಹಿಸಲು ಯೋಚಿಸಿದ್ದರು. ಆದರೆ ಸಂಗೀತ ಕ್ಷೇತ್ರದಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ನಂಬಿದ್ದ ಧನುಷ್, ಚಿತ್ರರಂಗದಲ್ಲಿ ಅವಕಾಶ ನೀಡುವಂತೆ ಪೋಷಕರ ಮನವೊಲಿಸುವ ಪ್ರಯತ್ನ ಮಾಡಿದ್ದರು ಎಂದು ಐಶ್ವರ್ಯಾ ವಿವರಿಸಿದ್ದರು.
ಅಷ್ಟೇ ಅಲ್ಲದೆ, ಅನಿರುದ್ಧ್ ಅವರಿಗೆ ಕೀಬೋರ್ಡ್ ಕೊಡಿಸಿ, ‘3’ ಸಿನಿಮಾದ ಸಂಗೀತ ನಿರ್ದೇಶನದ ಜವಾಬ್ದಾರಿ ನೀಡುವಂತೆ ಐಶ್ವರ್ಯಾ ಅವರಿಗೆ ಪ್ರೋತ್ಸಾಹಿಸಿದ್ದರು ಎನ್ನಲಾಗಿದೆ. ಈ ಮೂಲಕ ಅನಿರುದ್ಧ್ ಅವರ ವೃತ್ತಿಜೀವನಕ್ಕೆ ಆರಂಭಿಕ ವೇದಿಕೆ ಕಲ್ಪಿಸುವಲ್ಲಿ ಧನುಷ್ ಮಹತ್ವದ ಪಾತ್ರ ವಹಿಸಿದ್ದರು ಎಂಬುದು ಐಶ್ವರ್ಯಾ ಅವರ ಮಾತಿನ ಸಾರವಾಗಿತ್ತು.
ಅಭಿಮಾನಿಗಳ ನಡುವೆ ಪರ-ವಿರೋಧದ ಚರ್ಚೆ!
ಈ ಹಳೆಯ ವಿಡಿಯೋ ಮತ್ತೆ ಮುನ್ನೆಲೆಗೆ ಬರುತ್ತಿದ್ದಂತೆ ಅನಿರುದ್ಧ್ ವಿರುದ್ಧ ಟೀಕೆಗಳೂ ಹೆಚ್ಚಾಗಿವೆ. 15 ವರ್ಷಗಳ ಹಿಂದೆ ಅವಕಾಶ ನೀಡಿ ಬೆಂಬಲಿಸಿದ ಧನುಷ್ ಅವರನ್ನು ಇಂದು ನೆನಪಿಸಿಕೊಳ್ಳದಿರುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ, ಅನಿರುದ್ಧ್ ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದಲೇ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ತಮ್ಮ ಸಾಧನೆಯ ಪತ್ರದಲ್ಲಿ ಯಾರ ಹೆಸರನ್ನು ಉಲ್ಲೇಖಿಸಬೇಕು ಎಂಬುದು ಅವರ ವೈಯಕ್ತಿಕ ನಿರ್ಧಾರ ಎಂದು ಅವರ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಒಂದು ಕಾಲದಲ್ಲಿ ಧನುಷ್ ಮತ್ತು ಅನಿರುದ್ಧ್ ಆಪ್ತ ಸ್ನೇಹಿತರಾಗಿದ್ದರು. ಇವರಿಬ್ಬರ ಕಾಂಬಿನೇಷನ್ನಲ್ಲಿ ಹಲವು ಹಿಟ್ ಹಾಡುಗಳು ಮೂಡಿಬಂದಿದ್ದವು. ಆದರೆ ಈಗ ಇಬ್ಬರ ನಡುವೆ ನಿಜವಾಗಿಯೂ ಅಂತರ ಹೆಚ್ಚಾಗಿದೆಯೇ ಎಂಬ ಪ್ರಶ್ನೆ ಕಾಲಿವುಡ್ನಲ್ಲಿ ಕೇಳಿಬರುತ್ತಿದೆ.
ಒಟ್ಟಿನಲ್ಲಿ, ಸಂಗೀತ ನಿರ್ದೇಶಕರಾಗಿ 15 ವರ್ಷಗಳ ಸಂಭ್ರಮ ಆಚರಿಸಬೇಕಿದ್ದ ಅನಿರುದ್ಧ್ ಇದೀಗ ಹೊಸ ವಿವಾದದ ಕೇಂದ್ರವಾಗಿದ್ದಾರೆ. ಧನುಷ್ ಹೆಸರನ್ನು ಉಲ್ಲೇಖಿಸದಿರುವುದಕ್ಕೆ ಅವರು ಯಾವುದಾದರೂ ಕಾರಣ ನೀಡುತ್ತಾರೆಯೇ? ಮದುವೆಯ ಆಹ್ವಾನದ ವಿಚಾರದ ಬಗ್ಗೆಯೂ ಸ್ಪಷ್ಟನೆ ನೀಡುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಮುಂದಿನ ದಿನಗಳಲ್ಲಿ ಅನಿರುದ್ಧ್ ಅವರ ಪ್ರತಿಕ್ರಿಯೆ ಈ ಚರ್ಚೆಗೆ ಯಾವ ತಿರುವು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಆಸ್ಕರ್ ಅಂಗಳಕ್ಕೆ ಕಾಲಿಟ್ಟ 'ರಾಮಾಯಣ: ಭಾಗ 1'- ಯಶ್ ಸಿನಿಮಾಗೆ 99ನೇ ಅಕಾಡೆಮಿ ಪ್ರಶಸ್ತಿ ಮೇಲೆ ಕಣ್ಣು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.