
ಚೆನ್ನೈ: ಕೆಲವು ನೋವುಗಳನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅಂತಹ ಆಳವಾದ ದುಃಖವನ್ನು ಮನುಷ್ಯ ಹೇಗೆ ಹೊತ್ತು ಬದುಕುತ್ತಾನೆ ಎಂಬುದನ್ನು ಊಹಿಸುವುದೂ ಕಷ್ಟ. ಕಾಲಿವುಡ್ನ ಖ್ಯಾತ ನಟ, ಸಂಗೀತ ನಿರ್ದೇಶಕ ವಿಜಯ್ ಆಂಟನಿ ಇತ್ತೀಚಿನ ದಿನಗಳಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದರೂ ಬರಿಗಾಲಿನಲ್ಲಿಯೇ ಕಾಣಿಸಿಕೊಳ್ಳುವುದನ್ನು ಅಭಿಮಾನಿಗಳು ಗಮನಿಸಿದ್ದರು. ಆದರೆ ನಿಜವಾದ ಕಾರಣ ಯಾರಿಗೂ ಗೊತ್ತಿರಲಿಲ್ಲ ಆದರೆ ಈಗ ಅವರ ಪತ್ನಿ ನಿರ್ಮಾಪಕಿ ಫಾತಿಮಾ ಚಪ್ಪಲಿ ಧರಿಸದೇ ಇರುವುದ ಹಿಂದಿರುವ ಹೃದಯವಿದ್ರಾವಕ ಕಾರಣವನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.
ವಿಜಯ್ ಆಂಟನಿ ನಟನೆಯ, ಮು ಮಾರನ್ ನಿರ್ದೇಶನದ ಮುಂಬರುವ ಚಿತ್ರ ‘ಅಪ್ಪಾ ಕುಟ್ಟಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಫಾತಿಮಾ, ತಮ್ಮ ಹಿರಿಯ ಮಗಳು ಮೀರಾಳ ಅಗಲಿಕೆಯ ನಂತರ ವಿಜಯ್ ಆಂಟನಿ ತೆಗೆದುಕೊಂಡ ಕಠಿಣ ವೈಯಕ್ತಿಕ ನಿರ್ಧಾರಗಳ ಬಗ್ಗೆ ಮಾತನಾಡುತ್ತಾ ಭಾವುಕರಾದರು.
ಮಗಳು ಮೀರಾಳ ನೆನಪುಗಳನ್ನು ಮೆಲುಕು ಹಾಕಿದ ಫಾತಿಮಾ, ವಿಜಯ್ ಆಂಟನಿ ಪಾದರಕ್ಷೆಗಳನ್ನು ಧರಿಸುವುದನ್ನು ಏಕೆ ನಿಲ್ಲಿಸಿದರು ಎಂಬ ಸತ್ಯ ಯಾರಿಗೂ ತಿಳಿದಿಲ್ಲ. ನಾನು ಇಂದು ಅದನ್ನು ಹೇಳುತ್ತೇನೆ. ಮಗಳು ಕಾಲೇಜಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ, ಆಕೆಗಾಗಿ ನಾನು ಅಮೆರಿಕ ಲಂಡನ್ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳಿಂದ ಸುಮಾರು 50 ರಿಂದ 100 ಜೋಡಿ ಶೂ ಮತ್ತು ಸ್ಯಾಂಡಲ್ಗಳನ್ನು ಖರೀದಿಸಿ ತಂದಿದ್ದೆ. ಆದರೆ, ಅವುಗಳಲ್ಲಿ ಒಂದನ್ನೂ ಧರಿಸದೆಯೇ ಮೀರಾ ನಮ್ಮನ್ನೆಲ್ಲಾ ಬಿಟ್ಟು ಹೋದಳು ಎಂದು ಕಣ್ಣೀರಾದರು.
ಮನೆಯಲ್ಲಿ ಮುಟ್ಟದೆ ಹಾಗೆಯೇ ಉಳಿದಿದ್ದ ಮಗಳ ಆ ಪಾದರಕ್ಷೆಗಳ ರಾಶಿಯನ್ನು ನೋಡಿದ ವಿಜಯ್ ಆಂಟನಿ ತೀವ್ರ ಆಘಾತಕ್ಕೆ ಒಳಗಾದರು. ಅಂದೇ ಅವರು ತಮ್ಮ ಜೀವನದುದ್ದಕ್ಕೂ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಲಂಡನ್, ಪ್ಯಾರಿಸ್, ಸಿಂಗಾಪುರ ಮತ್ತು ಮಲೇಷ್ಯಾದಲ್ಲಿ ಸಂಗೀತ ಕಚೇರಿಗಳನ್ನು ನಡೆಸುವಾಗ ವೇದಿಕೆಯ ನಿಯಮ ಹಾಗೂ ಉಡುಪಿಗೆ ಹೊಂದಿಕೆಯಾಗಲು ಬೇರೆ ದಾರಿಯಿಲ್ಲದೆ ಅವರು ಶೂ ಧರಿಸುತ್ತಾರೆ. ಆದರೆ ಕಾರ್ಯಕ್ರಮ ಮುಗಿದು ಹೊರಬಂದ ತಕ್ಷಣವೇ ಅವುಗಳನ್ನು ತೆಗೆದಿಡುತ್ತಾರೆ ಎಂದು ಫಾತಿಮಾ ವಿವರಿಸಿದ್ದಾರೆ.
ಪಾದರಕ್ಷೆ ಮಾತ್ರವಲ್ಲದೆ, ವಿಜಯ್ ಆಂಟನಿ ತಮ್ಮ ಬಳಿಯಿದ್ದ 'ರೋಲೆಕ್ಸ್' ಮತ್ತು 'ರಾಡೋ' ನಂತಹ ಅತ್ಯಂತ ದುಬಾರಿ ಬ್ರ್ಯಾಂಡ್ಗಳ ಕೈಗಡಿಯಾರಗಳನ್ನು ಸಹ ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಬದಲಾಗಿ, ಮೀರಾ ಕೊನೆಯದಾಗಿ ಧರಿಸುತ್ತಿದ್ದ ಸಾಮಾನ್ಯ ವಾಚ್ ಒಂದನ್ನೇ ಈಗಲೂ ತಮ್ಮ ಕೈಯಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ.
ಮೀರಾ ತುಂಬಾ ಇಷ್ಟಪಟ್ಟು ಕೇಳಿದ್ದರಿಂದ ನಾನು ಸುಮಾರು ₹3,500 ರಿಂದ ₹4,000 ಬೆಲೆಯ ಆ ವಾಚ್ ಅನ್ನು ಆಕೆಗೆ ಕೊಡಿಸಿದ್ದೆ. ಮಗಳು ನಮ್ಮನ್ನು ಅಗಲುವ ಮುನ್ನ ಅದೇ ವಾಚ್ ಧರಿಸಿದ್ದಳು. ಈಗ ವಿಜಯ್ ಆಂಟನಿ ತಮ್ಮೆಲ್ಲಾ ದುಬಾರಿ ವಾಚ್ಗಳನ್ನು ಪಕ್ಕಕ್ಕಿಟ್ಟು, ಮಗಳ ನೆನಪಿಗಾಗಿ ಆ ಒಂದು ವಾಚ್ ಅನ್ನು ಮಾತ್ರ ಸದಾ ಧರಿಸುತ್ತಾರೆ ಎಂದು ಫಾತಿಮಾ ಭಾವುಕರಾದರು.
16 ವರ್ಷದ ಮೀರಾ 2023ರಲ್ಲಿ ದುರಂತ ಅಂತ್ಯ ಕಂಡಿದ್ದು ಇಡೀ ಚಿತ್ರರಂಗ ಮತ್ತು ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿತ್ತು. ಮಗಳ ಮರಣದ ಬಳಿಕ ವಿಜಯ್ ಆಂಟನಿ, ನನ್ನ ಮಗಳು ನೋವು ಮತ್ತು ನಕಾರಾತ್ಮಕತೆಯಿಲ್ಲದ ಲೋಕಕ್ಕೆ ಹೋಗಿದ್ದಾಳೆ, ಆಕೆಯೊಂದಿಗೆ ನನ್ನ ಜೀವನವೂ ಹೋದಂತಾಗಿದೆ ಎಂದು ನೋವು ತೋಡಿಕೊಂಡಿದ್ದರು. ಇತ್ತೀಚೆಗೆ ‘ಶಕ್ತಿ ತಿರುಮಗನ್’ ಚಿತ್ರದ ಪ್ರಚಾರದ ವೇಳೆ ಪತ್ರಕರ್ತರೊಬ್ಬರ ಜೊತೆಗೆ ಮಾತನಾಡಿದ್ದ ವಿಜಯ್, ಮಗಳು ಮೀರಾ ನನ್ನಿಂದ ದೂರವಾಗಿದ್ದಾಳೆ ಎಂದು ನಾನು ಭಾವಿಸುವುದಿಲ್ಲ. ಆಕೆಯ ಉಪಸ್ಥಿತಿಯನ್ನು ನಾನು ಪ್ರತಿದಿನ ಅನುಭವಿಸುತ್ತೇನೆ ಮತ್ತು ಆಕೆಯೊಂದಿಗೆ ಮಾತನಾಡುತ್ತೇನೆ ಎಂದು ತಂದೆಯ ಅಗಾಧ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಸೆಪ್ಟೆಂಬರ್ 19, 2023 ರಂದು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಹಿರಿಯ ಮಗಳಾಗಿದ್ದ ಮೀರಾ ತನ್ನ ಕೋಣೆಯಲ್ಲಿ ಸಾವಿಗೆ ಶರಣಾಗಿದ್ದಳು. ಅವಳು ಹಾಗೆ ಮಾಡಿಕೊಳ್ಳಲು ಕಾರಣ ಏನೆಂದು ಈವರೆಗೆ ತಿಳಿದಿಲ್ಲ. ಪಿಯುಸಿಯಲ್ಲಿದ್ದ ಆಕೆ ಸಾವಿಗೆ ಕೆಲವು ತಿಂಗಳುಗಳ ಮೊದಲು ಮಾನಸಿಕ ಒತ್ತಡವನ್ನು ಅನುಭವಿಸಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಸಾವಿನ ಬಳಿಕ ಪತ್ರ ಸಿಕ್ಕಿದ್ದು, ಲವ್ ಯೂ ಆಲ್, ಮಿಸ್ ಯೂ ಆಲ್ ಎಂದು ಪತ್ರ ಬರೆದಿದ್ದು ಸಿಕ್ಕಿತ್ತು.
ವೈಯಕ್ತಿಕ ಬದುಕಿನ ನೋವಿನ ನಡುವೆಯೂ ಸಿನಿಮಾ ವೃತ್ತಿಯಲ್ಲಿ ಸಕ್ರಿಯರಾಗಿರುವ ವಿಜಯ್ ಆಂಟನಿ, ಇದೀಗ ‘ಅಪ್ಪಾ ಕುಟ್ಟಿ’ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ. ಮು ಮಾರನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರೀತಿ ಅಸ್ರಾನಿ ನಾಯಕಿಯಾಗಿ ನಟಿಸಿದ್ದು, ನವೆಂಬರ್ 20ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ವಿಶೇಷವೆಂದರೆ, ಚಿತ್ರವು ಬಿಡುಗಡೆಗೂ ಮುನ್ನವೇ ತನ್ನ ಬಂಡವಾಳವನ್ನು ಮರಳಿ ಪಡೆದು ಟೇಬಲ್ ಲಾಭ ಗಳಿಸಿದೆ. ಚಿತ್ರದ ಒಟಿಟಿ ,ಉಪಗ್ರಹ ಹಾಗೂ ಥಿಯೇಟ್ರಿಕಲ್ ಹಕ್ಕುಗಳು ಭರ್ಜರಿ ಬೆಲೆಗೆ ಮಾರಾಟವಾಗಿವೆ ಎಂದು ನಿರ್ದೇಶಕ ಮು ಮಾರನ್ ಮತ್ತು ವಿತರಕ ಧನಂಜಯನ್ ಖಚಿತಪಡಿಸಿದ್ದಾರೆ. ಚೆನ್ನೈ ಮತ್ತು ಊಟಿಯ ಸುಂದರ ತಾಣಗಳಲ್ಲಿ ಎರಡು ಹಂತಗಳಲ್ಲಿ ಕೇವಲ 45 ದಿನಗಳಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.