ಪುಷ್ಪ 2 ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್‌ಗೆ ಹೈದರಾಬಾದ್ ನ್ಯಾಯಾಲಯ ಜಾಮೀನು ನೀಡಿದೆ.
ಹೈದರಾಬಾದ್ (ಜ.3): ಪುಷ್ಪ 2 ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ 35 ವರ್ಷದ ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಮೃತಪಟ್ಟ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹೈದರಾಬಾದ್ ನ್ಯಾಯಾಲಯವು ನಟ ಅಲ್ಲು ಅರ್ಜುನ್‌ಗೆ ಜಾಮೀನು ನೀಡಿದೆ. ಜಾಮೀನು ಷರತ್ತುಗಳ ಭಾಗವಾಗಿ, ನಟ ನ್ಯಾಯಾಲಯಕ್ಕೆ ತಲಾ 50,000 ರೂ.ಗಳ ಎರಡು ಜಾಮೀನು ಬಾಂಡ್ ನೀಡುವಂತೆ ಆದೇಶಿಸಲಾಗಿದೆ. ನಾಲ್ಕು ವಾರಗಳ ತಾತ್ಕಾಲಿಕ ಜಾಮೀನಿನ ಮೇಲೆ ಇರುವ ನಟ ರೆಗ್ಯಲರ್ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲು ಅರ್ಜುನ್ ಅವರ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದರು. ಡಿಸೆಂಬರ್ 30 ರಂದು ಎರಡೂ ಕಡೆಯವರು ತಮ್ಮ ವಾದಗಳನ್ನು ಕೋರ್ಟ್ ಎದುರು ಮಂಡಿಸಿದ್ದರು. ಡಿ. 24 ರಂದು ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್‌ಗೆ ಸೂಚಿಸಿದ್ದರು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಟನಿಗೆ ಪೊಲೀಸರು ನೋಟಿಸ್ ನೀಡಿದ್ದರು. ಮೂರು ಗಂಟೆಗಳ ವಿಚಾರಣೆಯ ನಂತರ ನಟನನ್ನು ವಾಪಾಸ್ ಮನೆಗೆ ಬಿಡಲಾಗಿತ್ತು.
ಸಂಧ್ಯಾ ಥಿಯೇಟರ್‌ನಲ್ಲಿ ಆಗಿದ್ದೇನು: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2: ದಿ ರೂಲ್‌ನ ವಿಶೇಷ ಪ್ರದರ್ಶನವನ್ನು ಡಿಸೆಂಬರ್ 4, 2024 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆಸಲಾಯಿತು. ಆದರೆ, ಅಲ್ಲು ಅರ್ಜುನ್ ಆಗಮನಕ್ಕೂ ಮುನ್ನ ಚಿತ್ರಮಂದಿರದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಯಿತು, ಅಲ್ಲಿ ರೇವತಿ ಎಂಬ 35 ವರ್ಷದ ಮಹಿಳೆ ಮೃತಪಟ್ಟಿದ್ದರೆ, ಅವರ 8 ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣದಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಡಿಸೆಂಬರ್ 13 ರಂದು ಅಲ್ಲು ಅರ್ಜುನ್‌ರನ್ನ ಬಂಧಿಸಿದ್ದಲ್ಲದೆ, ಒಂದು ದಿನ ಅವರು ಜೈಲಿನಲ್ಲಿ ಕಳೆಯುವಂತೆ ಮಾಡಿದ್ದರು. ಮರುದಿನ ಬೆಳಿಗ್ಗೆ ಅವರನ್ನು ತಾತ್ಕಾಲಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಪುಷ್ಪ-2 ಸಿನಿಮಾ ಐದು ಕಡೆ ಅಟ್ಟರ್ ಪ್ಲಾಪ್ ಆಗಿದೆ; ಆದ್ರೂ ಬ್ಲಾಕ್ ಬಸ್ಟರ್ ಹೇಗೆ ಸಾಮಿ..
ಪರಿಹಾರ ಘೋಷಣೆ: ಅಲ್ಲು ಅರ್ಜುನ್ ಮತ್ತು ಪುಷ್ಪ 2 ನಿರ್ಮಾಪಕರು ಮಗುವಿನ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೈತ್ರಿ ಮೂವೀಸ್ ಮತ್ತು ಚಿತ್ರ ನಿರ್ಮಾಪಕ ಸುಕುಮಾರ್ ತಲಾ 50 ಲಕ್ಷ ರೂ. ನೀಡಿದ್ದರೆ, ಅಲ್ಲು ಅರ್ಜುನ್ 1 ಕೋಟಿ ರೂ. ನೀಡಿದ್ದಾರೆ. ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಮುಖ್ಯಸ್ಥ ಮತ್ತು ಚಲನಚಿತ್ರ ನಿರ್ಮಾಪಕ ದಿಲ್ ರಾಜು ಅವರು ಕುಟುಂಬಕ್ಕೆ ಪರಿಹಾರವನ್ನು ನೀಡಿದರು.
ಪುಷ್ಪ 2 ಸಿನಿಮಾ ₹1700 ಕೋಟಿ ಕಲೆಕ್ಷನ್‌ಗೆ ಕಾರಣ ರಿವೀಲ್ ಮಾಡಿದ: ಡಿಸಿಎಂ ಪವನ್ ಕಲ್ಯಾಣ್