
ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಟಿ ಪಾರ್ವತಿ ತಿರುವೋತ್ ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಬಾಲ್ಯದಲ್ಲಿ ನಡೆದ ಕೆಲವು ಕಹಿ ಘಟನೆಗಳ ಕುರಿತು ಹಂಚಿಕೊಂಡರು. “The Male Feminist” ಪಾಡ್‌ಕ್ಯಾಸ್ಟ್‌ನಲ್ಲಿ ಚಿಕ್ಕ ವಯಸ್ಸಿನಿಂದಲೇ ಅಪರಿಚಿತರಿಂದ ಕಿರುಕುಳಕ್ಕೊಳಗಾದ ಬಗ್ಗೆ ಪಾರ್ವತಿ ಸ್ಪಷ್ಟವಾಗಿ ಮಾತನಾಡಿದ್ದಾರೆ. ಈ ಘಟನೆಗಳು ಎಷ್ಟು ತೀವ್ರವಾಗಿದ್ದವೆಂದರೆ ಅವು ದೀರ್ಘಕಾಲದವರೆಗೆ ಅವರನ್ನು ಆಘಾತಗೊಳಿಸಿದವು. ಅಷ್ಟೇ ಅಲ್ಲ, ಯಾವುದೇ ಮಗುವೂ ಅಂತಹ ನೆನಪುಗಳೊಂದಿಗೆ ಬೆಳೆಯಬಾರದು ಎಂದು ಪಾರ್ವತಿ ತಿಳಿಸಿದ್ದಾರೆ.
ಬಾಲ್ಯದಲ್ಲಿ ತನ್ನ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿತ್ತು ಎಂದು ವಿವರಿಸಿರುವ ಪಾರ್ವತಿ ಕೆಲವೊಮ್ಮೆ"ತಾನು ಆಟೋರಿಕ್ಷಾ ಹತ್ತುತ್ತಿದ್ದಾಗ ಯಾರೋ ಚುಚ್ಚುತ್ತಿದ್ದರು. ಇದಾದ ನಂತರ ತನ್ನ ತಾಯಿಯನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ತಂದೆಯೊಂದಿಗೆ ಹಿಂತಿರುಗುತ್ತಿದ್ದಾಗ ಒಬ್ಬ ಅಪರಿಚಿತ ವ್ಯಕ್ತಿ ಎದೆಗೆ ಹೊಡೆದು ಓಡಿಹೋದ. ಅದು ಕೇವಲ ಸ್ಪರ್ಶವಲ್ಲ, ಬದಲಾಗಿ ಬಲವಾದ ಹೊಡೆತವಾಗಿದ್ದು, ನೋವಿನಿಂದ ಕೂಗಿದೆ" ಎಂದಿದ್ದಾರೆ.
ಆ ಸಮಯದಲ್ಲಿ ಪಾರ್ವತಿ ತುಂಬಾ ಚಿಕ್ಕ ವರಾಗಿದ್ದರು. ಹಾಗಾಗಿ ಏನು ನಡೆಯುತ್ತಿದೆ ಎಂದು ಸಹ ಅರ್ಥವಾಗುತ್ತಿರಲಿಲ್ಲ. ಆದರೆ ಒಮ್ಮೆ ನಡೆದ ಘಟನೆಯಂತೂ ನೋವು ಮತ್ತು ಭಯದಿಂದ ಕೂಡಿತ್ತು ಎಂದು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ ಪಾರ್ವತಿ. ಬೀದಿಯಲ್ಲಿ ನಡೆಯುವಾಗ ಪುರುಷರು ತಮ್ಮ ಖಾಸಗಿ ಭಾಗಗಳನ್ನು ಪ್ರದರ್ಶಿಸುತ್ತಿದ್ದರು. ಇದರಿಂದ ಬಹಳ ಕಿರುಕುಳ ಅನುಭವಿಸುತ್ತಿದ್ದೆ. ಆ ವಯಸ್ಸಿನಲ್ಲಿ, ಇದು ಎಷ್ಟು ತಪ್ಪು ಮತ್ತು ಅಪಾಯಕಾರಿ ಎಂದು ಅರ್ಥವಾಗಲಿಲ್ಲ, ಆದರೆ ನಂತರ ಈ ಘಟನೆಗಳು ತಮ್ಮ ದೇಹ ಮತ್ತು ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿದವು ಎಂದು ತುಂಬಾ ಭಾವುಕರಾಗಿದ್ದಾರೆ ಪಾರ್ವತಿ. "ನಾವು ಹುಟ್ಟುತ್ತೇವೆ. ನಂತರ ನಮ್ಮ ಶೋಷಣೆ ಪ್ರಾರಂಭವಾಗುತ್ತದೆ. ಚಿಕ್ಕ ಹುಡುಗಿಯರು ಇಷ್ಟು ಬೇಗ ಇಂತಹ ಜಗತ್ತನ್ನು ಎದುರಿಸಬೇಕಾಗುತ್ತದೆ" ಎಂದು ಕೇಳುವುದು ಹೃದಯವಿದ್ರಾವಕವಾಗಿದೆ ಎಂದಿದ್ದಾರೆ.
ಈ ಅನುಭವಗಳಾದ ನಂತರ ಅಮ್ಮ ನನಗೆ ಹೊರಗಿನ ಪ್ರಪಂಚದ ಬಗ್ಗೆ ಅತ್ಯಂತ ಜಾಗರೂಕರಾಗಿರಲು ಕಲಿಸಿದರು. ಬೀದಿಯಲ್ಲಿ ನಡೆಯುವುದು, ವಿಂಡೋ ಶಾಪಿಂಗ್ ಮಾಡುವುದನ್ನು ತಪ್ಪಿಸುವುದು, ಯಾವಾಗಲೂ ಪುರುಷರ ಕೈಗಳನ್ನು ನೋಡುತ್ತಿರಬೇಕು ಎಂಬುದರ ಬಗ್ಗೆ ವಿವರಿಸುತ್ತಿದ್ದರು. "ಒಬ್ಬ ತಾಯಿ ತನ್ನ ಮಗಳಿಗೆ ಇಂತಹ ವಿಷಯಗಳನ್ನು ಕಲಿಸಬೇಕಾಗಿರುವುದು ಎಷ್ಟು ನೋವಿನಿಂದ ಕೂಡಿರುತ್ತದೆ ಎಂದು ಊಹಿಸಿ. ಇದೆಲ್ಲವನ್ನೂ ಕೇಳಿದಾಗ ಮಹಿಳೆಯರ ಸುರಕ್ಷತೆ ಎಷ್ಟು ಮಹತ್ವದ್ದಾಗಿದೆ ಎಂದು ನನಗೆ ಅರಿವಾಗುತ್ತದೆ." ಎಂದಿದ್ದಾರೆ ಪಾರ್ವತಿ.
ಪಾರ್ವತಿ ಅವರು ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಜೊತೆ ಮಿಲನ, ಪೃಥ್ವಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಲಯಾಳಂ, ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ "ಟೇಕ್ ಆಫ್," "ಉಯಿರೆ," "ಕರಿಬ್ ಕರಿಬ್ ಸಿಂಗಲ್," "ಚಾರ್ಲಿ," "ಮರಿಯನ್," ಮತ್ತು "ಬೆಂಗಳೂರು ಡೇಸ್" ಸೇರಿವೆ.
ರಾಷ್ಟ್ರೀಯ ಪ್ರಶಸ್ತಿಯನ್ನೂ ಗೆದ್ದಿರುವ ಪಾರ್ವತಿ ಅವರು ಪ್ರಸ್ತುತ "ದಿ ಸ್ಟಾರ್ಮ್" ಎಂಬ ಹೊಸ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ. ಈ ಸರಣಿಯನ್ನು ಹೃತಿಕ್ ರೋಷನ್ ಅವರ ನಿರ್ಮಾಣ ಸಂಸ್ಥೆ HRX ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಅಜಿತ್‌ಪಾಲ್ ಸಿಂಗ್ ನಿರ್ದೇಶಿಸಿದ ಈ ಸರಣಿಯು ಮುಂಬೈನಲ್ಲಿ ನಡೆಯುವ ಥ್ರಿಲ್ಲರ್ ಸರಣಿಯಾಗಿದೆ. ಇದರಲ್ಲಿ ಅಲಯಾ ಎಫ್, ಸೃಷ್ಟಿ ಶ್ರೀವಾಸ್ತವ, ರಾಮ ಶರ್ಮಾ ಮತ್ತು ಸಬಾ ಆಜಾದ್ ಸೇರಿದಂತೆ ಇತರರು ನಟಿಸಿದ್ದಾರೆ. ಇದು ಪಾರ್ವತಿ ಅವರ ವೃತ್ತಿಜೀವನದಲ್ಲಿ ಹೊಸ ಮತ್ತು ಪ್ರಮುಖ ಯೋಜನೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.